ನವದೆಹಲಿ: ಲೋಕಸಭಾ ಚುನಾವಣೆಗೆ ಆಡಳಿತಾರೂಢ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಿದ್ದು, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ ಸಿಂಗ್ ಸೇರಿದಂತೆ 18 ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ 195 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಾಗಿದೆ. ಈ ಮೂಲಕ ಅಧಿಕೃತವಾಗಿ ಬಿಜೆಪಿ ಚುನಾವಣಾ ತಯಾರಿಗೆ ಶ್ರೀಕಾರ ಹಾಕಿದೆ.
ವಿಶೇಷವೆಂದರೆ ಪಟ್ಟಿಯಲ್ಲಿ ರಾಜೀವ್ ಚಂದ್ರಶೇಖರ್ ಸೇರಿ ಕೆಲವು ಮಾಜಿ ರಾಜ್ಯಸಭಾ ಸದಸ್ಯರ ಹೆಸರುಗಳಿದ್ದು, ಮೀನಾಕ್ಷಿ ಲೇಖಿ ಸೇರಿ ಕೆಲವು ಕೇಂದ್ರ ಸಚಿವರು ಹಾಗೂ ಹಾಲಿ ಸಂಸದರನ್ನು ಕೈಬಿಡಲಾಗಿದೆ.
ಶನಿವಾರ ಬಿಡುಗಡೆಯಾದ ಪಟ್ಟಿಯಲ್ಲಿ ಕರ್ನಾಟಕದ ಅಭ್ಯರ್ಥಿಗಳನ್ನು ಪ್ರಕಟಿಸಿಲ್ಲ. ಕರ್ನಾಟಕ ಸೇರಿ ಉಳಿದ ಕ್ಷೇತ್ರಗಳಿಗೆ ಮುಂದಿನ ಹಂತದಲ್ಲಿ ಟಿಕೆಟ್ ಪ್ರಕಟಿಸಲಾಗುವುದು ಎಂದು ಟಿಕೆಟ್ ಪ್ರಕಟಿಸಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿನೋದ್ ತಾವಡೆ ಹೇಳಿದ್ದಾರೆ.
34 ಹಾಲಿ ಕೇಂದ್ರ ಸಚಿವರಿಗೆ ಟಿಕೆಟ್: ಬಿಜೆಪಿ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಪ್ರಮುಖವಾಗಿ 34 ಕೇಂದ್ರ ಸಚಿವರ ಹೆಸರುಗಳನ್ನು ಘೋಷಣೆ ಮಾಡಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ವಾರಾಣಸಿಯಿಂದ ಸ್ಪರ್ಧಿಸಲಿದ್ದಾರೆ.
ಅಲ್ಲದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಗಾಂಧಿನಗರದಿಂದ ಸ್ಪರ್ಧೆ ಮಾಡಲಿದ್ದು, ಕರ್ನಾಟಕದಿಂದ ರಾಜ್ಯಸಭಾ ಸಚಿವರಾಗಿದ್ದ ಸಚಿವ ರಾಜೀವ್ ಚಂದ್ರಶೇಖರ್ ಅವರಿಗೆ ಇದೇ ಮೊದಲ ಬಾರಿಗೆ ತಿರುವನಂತಪುರ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ.
ಅಲ್ಲದೆ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ವಿದಿಶಾ ಕ್ಷೇತ್ರದಿಂದಲೂ, ತ್ರಿಪುರಾ ಮಾಜಿ ಮುಖ್ಯಮಂತ್ರಿ ಬಿಪ್ಲಬ್ ದೇವ್ ಅವರಿಗೂ ಸಹ ತ್ರಿಪುರಾ ಪಶ್ಚಿಮ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ.
ದಿವಂಗತ ನಾಯಕಿ ಸುಷ್ಮಾ ಸ್ವರಾಜ್ ಮಗಳಾದ ಬಾನ್ಸುರಿ ಸ್ವರಾಜ್ ಅವರಿಗೆ ನವದೆಹಲಿಯಲ್ಲಿ ಟಿಕೆಟ್ ನೀಡಲಾಗಿದೆ. ಜೊತೆಗೆ ಖ್ಯಾತ ಬಾಲಿವುಡ್ ನಟಿ ಹೇಮಾಮಾಲಿನಿಗೆ ಮಥುರಾ ಕ್ಷೇತ್ರದಿಂದ ಲೋಕಸಭಾ ಟಿಕೆಟ್ ನೀಡಲಾಗಿದೆ.
ಕಾಂಗ್ರೆಸ್‌ನ ಮಾಜಿ ಸಚಿವ ಎ.ಕೆ. ಆ್ಯಂಟನಿ ಮಗ ಅನಿಲ್ ಆ್ಯಂಟನಿಗೆ ಕೇರಳದ ಪಟ್ಟಣಂತಿಟ್ಟ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ. ಕೇರಳದ ಮಲಪ್ಪುರಂನಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿಯಿಂದ ಮುಸ್ಲಿಂ ಅಭ್ಯರ್ಥಿ ಡಾ. ಅಬ್ದುಲ್ ಸಲಾಂ ಅವರಿಗೆ ಟಿಕೆಟ್ ನೀಡಲಾಗಿದೆ.
ಯಾರು ಎಲ್ಲಿಂದ ಸ್ಪರ್ಧೆ?
ನರೇಂದ್ರ ಮೋದಿ ವಾರಾಣಸಿ (ಉತ್ತರ ಪ್ರದೇಶ)ಅಮಿತ್ ಶಾ ಗಾಂಧಿನಗರ (ಗುಜರಾತ್)ರಾಜನಾಥ್ ಸಿಂಗ್ ಲಖನೌ (ಉತ್ತರ ಪ್ರದೇಶ) ಸ್ಮೃತಿ ಇರಾನಿ ಅಮೇಠಿ (ಉತ್ತರ ಪ್ರದೇಶ)ರಾಜೀವ್ ಚಂದ್ರಶೇಖರ್ ತಿರುವನಂತಪುರ (ಕೇರಳ)ಹೇಮಾ ಮಾಲಿನಿ ಮಥುರಾ (ಉತ್ತರ ಪ್ರದೇಶ)ಓಂ ಬಿರ್ಲಾ ಕೋಟಾ (ರಾಜಸ್ಥಾನ)ಶಿವರಾಜ್ ಚೌಹಾಣ್ ವಿದಿಶಾ (ಮಧ್ಯಪ್ರದೇಶ)