ಕಾಂಗ್ರೆಸ್‌ನ 60 ಶಾಸಕರು ಬಿಜೆಪಿ ಸೇರಲು ಸಿದ್ಧ: ಬಸನಗೌಡ ಪಾಟೀಲ್‌ ಯತ್ನಾಳ್‌ ಹೊಸ ಬಾಂಬ್

ಸಾರಾಂಶ

ಈಗಲೂ 60 ಮಂದಿ ಕಾಂಗ್ರೆಸ್‌ ಶಾಸಕರು ಬಿಜೆಪಿಗೆ ಬರಲು ಸಿದ್ಧರಿದ್ದಾರೆ ಎಂದು ಬಿಜೆಪಿ ಬಂಡಾಯ ಗುಂಪಿನ ನಾಯಕ ಹಾಗೂ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹೊಸ ಬಾಂಬ್ ಸಿಡಿಸಿದ್ದಾರೆ.

ವಿಜಯಪುರ: ಈಗಲೂ 60 ಮಂದಿ ಕಾಂಗ್ರೆಸ್‌ ಶಾಸಕರು ಬಿಜೆಪಿಗೆ ಬರಲು ಸಿದ್ಧರಿದ್ದಾರೆ ಎಂದು ಬಿಜೆಪಿ ಬಂಡಾಯ ಗುಂಪಿನ ನಾಯಕ ಹಾಗೂ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹೊಸ ಬಾಂಬ್ ಸಿಡಿಸಿದ್ದಾರೆ. 

ಶನಿವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ದೇವರಾಣೆ ಮಾಡಿ ಹೇಳುತ್ತೇನೆ, ಕಾಂಗ್ರೆಸ್ ಶಾಸಕರು ಬರಬೇಕು ಎನ್ನುವ ಇಚ್ಛೆ ನಮಗೆ ಇಲ್ಲ ಎಂದರು. ಅವರು ಬಂದ್ರೆ ಬಿಜೆಪಿಯ ಸಿದ್ಧಾಂತ ಹಾಳಾಗುತ್ತವೆ. ಹಿಂದೂಗಳ ಮೇಲೆ ಅತ್ಯಾಚಾರವಾಗುತ್ತದೆ. ಲವ್ ಜಿಹಾದ್ ನಡೆಯುತ್ತದೆ. ಹಾಗಾಗಿ ಇದ್ಯಾವುದೂ ಬೇಡ ಎಂದು ಸುಮ್ಮನಿದ್ದೇವೆ ಎಂದು ಯತ್ನಾಳ ಹೇಳಿದರು. 

ಜನರು ಐದು ವರ್ಷ ಅಧಿಕಾರ ಕೊಟ್ಟಿದ್ದಾರೆ. ಯಾವುದೇ ಆಪರೇಷನ್ ಮಾಡಲು ನಾವು ಮುಂದಾಗಿಲ್ಲ ಎಂದು ಹೇಳಿದರು. ಸಿಎಂ ಅಧಿಕಾರ ಹಂಚಿಕೆ ಬಗ್ಗೆ ಸಿದ್ದರಾಮಯ್ಯ- ಡಿಕೆಶಿ ಮಧ್ಯ ಒಪ್ಪಂದ ಗೊಂದಲಗಳಿಂದ ರಾಜ್ಯ ಸರ್ಕಾರ ಕೆಲವೇ ದಿನಗಳಲ್ಲಿ ಪತನವಾಗುತ್ತದೆ ಎಂದು ಹೇಳಿದರು.

ಜೆಡಿಎಸ್‌, ಬಿಜೆಪಿಯಿಂದ 25 ಶಾಸಕರು ಕಾಂಗ್ರೆಸ್‌ಗೆ ಬರಲಿದ್ದಾರೆ: ಎಂ.ಬಿ.ಪಾ

 ಚಿತ್ರದುರ್ಗ : ಜೆಡಿಎಸ್, ಬಿಜೆಪಿಯಿಂದ ಕನಿಷ್ಠ 25 ಶಾಸಕರು ಸೂಕ್ತ ಸಂದರ್ಭದಲ್ಲಿ ಕಾಂಗ್ರೆಸ್ ಗೆ ಸೇರ್ಪಡೆಯಾಗಲಿದ್ದಾರೆ ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದರು. ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಜೆಡಿಎಸ್ ನಿಂದ ಒಂದು ದೊಡ್ಡ ಟೀಮ್ ಹೊರಗೆ ಬರಲಿಕ್ಕೆ ಸಿದ್ಧವಾಗಿದೆ ಎಂದರು.

60 ಕಾಂಗ್ರೆಸ್ ಶಾಸಕರನ್ನು ಬಿಜೆಪಿಗೆ ಕರೆ ತರಲಾಗುವುದು ಎಂಬ ಬಸನಗೌಡ ಪಾಟೀಲ್‌ ಯತ್ನಾಳ್ ಹೇಳಿಕೆಗೆ ತಿರುಗೇಟು ನೀಡಿ, 60 ಕಾಂಗ್ರೆಸ್ ಶಾಸಕರನ್ನು ಕರೆದುಕೊಂಡು ಹೋಗಲು ಅದೇನು ಹುಣಸೇ ತೊಕ್ಕಾ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ನ ಯಾವೊಬ್ಬ ಶಾಸಕರೂ ಬೇರೆ ಪಕ್ಷಕ್ಕೆ ಹೋಗುವ ಪ್ರಶ್ನೆಯೇ ಇಲ್ಲ. ಬಿಜೆಪಿಯ ಕೆಲ ಶಾಸಕರು ನಮ್ ಜೊತೆ ಗುರುತಿಸಿಕೊಂಡಿರುವುದನ್ನು ಜನರೇ ನೋಡಿದ್ದಾರೆ ಎಂದರು.

ಸಿದ್ದರಾಮಯ್ಯ ಯಾವಾಗ ಬೇಕಾದರೂ ರಾಜೀನಾಮೆ ಕೊಡಬಹುದು ಎಂಬ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿಕೆಗೆ ತಿರುಗೇಟು ನೀಡಿ, ಸಿದ್ದರಾಮಯ್ಯನವರ ವಿಚಾರ ಬಿಡಿ, ವಿಜಯೇಂದ್ರ ಅವರು ಪೂರ್ಣಾವಧಿ ಅಧ್ಯಕ್ಷರಾಗಿ ಇರ್ತಾರಾ ಎಂಬುದನ್ನು ಮೊದಲು ಹೇಳಿ ಎಂದರು.

ವಿಜಯೇಂದ್ರ ಅವರ ಕುರ್ಚಿಯ ನಾಲ್ಕು ಕಾಲುಗಳಲ್ಲಿ ಮೂರು ಹೋಗಿವೆ. ಒಂದೇ ಕಾಲಲ್ಲಿ ವಿಜಯೇಂದ್ರ ಅವರ ಕುರ್ಚಿ ನಿಂತಿದೆ. ನೀವು ಎಷ್ಟು ದಿನ‌ ರಾಜ್ಯಾಧ್ಯಕ್ಷರಾಗಿ ಇರ್ತೀರಿ ಮೊದಲು ಹೇಳಿ, ನಂತರ ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡೋಣ ಎಂದರು.

Share this article