ಬೆಂಗಳೂರು : ಧಾರ್ಮಿಕ ಬೋಧನೆಗಳನ್ನು ಆಧುನಿಕ ಶಿಕ್ಷಣದೊಂದಿಗೆ ಸಂಯೋಜಿಸಲು ಕೆಲಸ ಮಾಡಿದ್ದ ವಿಶ್ವೇಶತೀರ್ಥ ಸ್ವಾಮೀಜಿ ಹೆಸರಲ್ಲಿ ನಿರ್ಮಾಣವಾದ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆ ಶೇ.60ರಷ್ಟು ಹಾಸಿಗೆಗಳನ್ನು ಬಡವರಿಗೆ ಮೀಸಲಿಟ್ಟಿರುವುದು ಮಾದರಿಯ ಕಾರ್ಯ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದರು.
ಶುಕ್ರವಾರ ಮಾರತಹಳ್ಳಿಯಲ್ಲಿ ಶ್ರೀಕೃಷ್ಣಸೇವಾಶ್ರಮ ಟ್ರಸ್ಟ್ 2 ಎಕರೆ ಭೂಮಿಯಲ್ಲಿ ₹60 ಕೋಟಿ ವೆಚ್ಚದಲ್ಲಿ 150 ಹಾಸಿಗೆಗಳ ಶ್ರೀ ವಿಶ್ವೇಶತೀರ್ಥ ಸ್ಮಾರಕ ಆಸ್ಪತ್ರೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದ ಬಡ ಮತ್ತು ದೀನದಲಿತ ವರ್ಗಗಳನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಈ ಆಧುನಿಕ ಅಸ್ಪತ್ರೆ ನಿರ್ಮಾಣವಾಗಿದೆ. ಶ್ರೀ ಕೃಷ್ಣ ವೈದ್ಯಕೀಯ ಕೇಂದ್ರ, ಶ್ರೀ ಕೃಷ್ಣ ನೇತ್ರಾಲಯ, ದಂತ ಕೇಂದ್ರ ಮತ್ತು ಶ್ರೀ ವಿಶ್ವಪ್ರಸನ್ನತೀರ್ಥ ಸ್ಮಾರಕ ಚಿಕಿತ್ಸಾಲಯವನ್ನು ಸಂಸ್ಥೆಯಿಂದ ಸ್ಥಾಪಿಸಿರುವುದು ಶ್ಲಾಘನೀಯ ಎಂದರು.
ಪೇಜಾವರ ಮಠವು ಕರ್ನಾಟಕ ಮಾತ್ರವಲ್ಲ, ಭಾರತದ ಪ್ರಮುಖ ಮಠವಾಗಿದ್ದು, ಬೆಳಕಿನ ದೀಪವಾಗಿ ಕಾರ್ಯನಿರ್ವಹಿಸುತ್ತಿದೆ. ವಿಶ್ವೇಶತೀರ್ಥರ ನಾಯಕತ್ವದಲ್ಲಿ ಮಠವು ರಾಷ್ಟ್ರೀಯ ಏಕತೆಯನ್ನು ಉತ್ತೇಜಿಸುವಲ್ಲಿ, ಬಲವಂತದ ಮತಾಂತರವನ್ನು ತಡೆಗಟ್ಟುವಲ್ಲಿ, ರಾಮ ಮಂದಿರ ಚಳವಳಿಯನ್ನು ಬೆಂಬಲಿಸುತ್ತ ಸನಾತನ ಧರ್ಮದ ರಕ್ಷಣೆಗೆ ನಿಂತಿದೆ. ಸ್ವಾಮೀಜಿ ದಕ್ಷಿಣ ಭಾರತದಲ್ಲಿ ಹಿಂದೂ ಸಮಾಜವನ್ನು ಜಾತಿಗಳಾಗಿ ವಿಭಜಿಸುವುದನ್ನು ನಿಯಂತ್ರಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ ಎಂದರು.
ಕಳೆದ 10 ವರ್ಷಗಳಲ್ಲಿ ಜನರ ಆರೋಗ್ಯ ಮತ್ತು ಯೋಗಕ್ಷೇಮದ ಬಗ್ಗೆ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಹೆಚ್ಚಿನ ಗಮನ ಹರಿಸಿದೆ. ಸ್ವಚ್ಛ ಭಾರತ ಅಭಿಯಾನ, ಫಿಟ್ ಇಂಡಿಯಾ ಆಂದೋಲನ, ಪೌಷ್ಟಿಕ ಅಭಿಯಾನ, ಮಿಷನ್ ಇಂದ್ರಧನುಷ್, ಆಯುಷ್ಮಾನ್ ಭಾರತ್ ಜನರಿಗೆ ಹತ್ತರಿವಾಗಿವೆ. ಜಲ ಜೀವನ್ ಮಿಷನ್ ಪ್ರತಿ ಮನೆಗೂ ಫ್ಲೋರೈಡ್ ಮುಕ್ತ ನೀರನ್ನು ತಲುಪಿಸುತ್ತಿದೆ. ಆಯುಷ್ಮಾನ್ ಭಾರತ್ ಯೋಜನೆಯಡಿ ಪ್ರಧಾನಿ ಮೋದಿ 60 ಕೋಟಿ ಜನರಿಗೆ ₹ 5 ಲಕ್ಷ ಗಳವರೆಗೆ ಉಚಿತ ಚಿಕಿತ್ಸೆ ಒದಗಿಸಿದ್ದಾರೆ ಎಂದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಧಾರ್ಮಿಕ ಕ್ಷೇತ್ರದ ಜೊತೆಗೆ ಸಾಮಾಜಿಕ ಕ್ಷೇತ್ರದಲ್ಲೂ ವಿಶ್ವೇಶತೀರ್ಥ ಶ್ರೀಗಳ ಕೊಡುಗೆ ಅಪಾರ. ಅವರ ಸಂಕಲ್ಪಕ್ಕೆ ಸೇವೆಯಾಗಿ ನಾವು ಆಸ್ಪತ್ರೆ ನಿರ್ಮಾಣಕ್ಕೆ ಹೊರವಲಯದಲ್ಲಿ 2ಎಕರೆ ಜಾಗ ಹಾಗೂ ಆರಂಭಿಕ ₹10 ಕೋಟಿ ನೀಡಿದ್ದೆವು. ಸಂಸ್ಕೃತ ವಿವಿ ನವೀಕರಣಕ್ಕೆ ಸರ್ಕಾರದಿಂದ ₹25ಲಕ್ಷ, ಹಿಂದುಳಿದ ವಿದ್ಯಾರ್ಥಿನಿಯ ಹಾಸ್ಟೆಲ್‌ಗೆ ₹4.50ಕೋಟಿ, ವಿಶ್ವೇಶತೀರ್ಥ ಶ್ರೀಗಳ ಸ್ಮೃತಿವನ ನಿರ್ಮಾಣಕ್ಕೆ ₹2ಕೋಟಿ ನೀಡಿದ್ದೆವು. ಈಗಿನ ಶ್ರೀಗಳು ಹಿರಿಯರ ಸಂಕಲ್ಪದಂತೆ ಕಾರ್ಯನಿರ್ವಹಿಸುತ್ತಿದ್ದು, ಸಮಾಜಕ್ಕೆ ಮಾರ್ಗದರ್ಶನ ಮಾಡುತ್ತಿದ್ದಾರೆ ಎಂದರು.
ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮಾತನಾಡಿ, ದೇಶಭಕ್ತಿ ಬೇರೆಯಲ್ಲ ರಾಮಭಕ್ತಿ ಬೇರೆಯಲ್ಲ. ವಿಶ್ವೇಶತೀರ್ಥ ಶ್ರೀಗಳು ದೇಶಸೇವೆಯ ಮೂಲಕ ಭಗವಂತನ ಸೇವೆ ಮಾಡಿದ್ದರು. ಬೆಂಗಳೂರಲ್ಲಿ ಶ್ರೀಕೃಷ್ಣ ಸೇವಾಶ್ರಮ ಹೆಸರಿನಲ್ಲಿ ಆಸ್ಪತ್ರೆ ನಿರ್ಮಿಸಲಾಗಿತ್ತು. ಅವರ ಬಯಕೆಯಂತೆ ಮತ್ತೊಂದು ಆಸ್ಪತ್ರೆ ನಿರ್ಮಾಣವಾಗಿದೆ. ಹಿಂದಿನ ಬಿಜೆಪಿ ಸರ್ಕಾರ ಜಾಗ, ₹10 ಕೋಟಿ ಅನುದಾನ ನೀಡಿದ್ದರೆ, ಕಾಂಗ್ರೆಸ್ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿ ಕೂಡ ನೆರವು ನೀಡಿದ್ದಾರೆ ಎಂದು ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಸ್ಮರಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಮಾಜಿ ಸಚಿವ ಅರವಿಂದ ಲಿಂಬಾವಳಿ ಇದ್ದರು.