ಜನರ ದೂರು ಆಲಿಸಲು ಪ್ರಜಾಸೇವೆ ಖಾತೆ, ಅದಕ್ಕೊಬ್ಬರು ಪ್ರತ್ಯೇಕ ಮಂತ್ರಿ

Published : Jun 21, 2026, 08:53 AM IST
DK Shivakumar

ಸಾರಾಂಶ

ಸಾರ್ವಜನಿಕ ಕುಂದುಕೊರತೆ, ಅಹವಾಲುಗಳನ್ನು ಆಲಿಸಿ ತ್ವರಿತವಾಗಿ ಸ್ಪಂದಿಸಲು ‘ಪ್ರಜಾ ಸೇವೆ’ ಎಂಬ ಹೊಸ ಇಲಾಖೆಯನ್ನು ಸ್ಥಾಪಿಸಿ, ಅದಕ್ಕೊಬ್ಬ ಪ್ರತ್ಯೇಕ ಮಂತ್ರಿಯನ್ನೂ ನೇಮಿಸಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಮಾಡಲಾಗಿದೆ.

  ಬೆಂಗಳೂರು :  ಸಾರ್ವಜನಿಕ ಕುಂದುಕೊರತೆ, ಅಹವಾಲುಗಳನ್ನು ಆಲಿಸಿ ತ್ವರಿತವಾಗಿ ಸ್ಪಂದಿಸಲು ‘ಪ್ರಜಾ ಸೇವೆ’ ಎಂಬ ಹೊಸ ಇಲಾಖೆಯನ್ನು ಸ್ಥಾಪಿಸಿ, ಅದಕ್ಕೊಬ್ಬ ಪ್ರತ್ಯೇಕ ಮಂತ್ರಿಯನ್ನೂ ನೇಮಿಸಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಮಾಡಲಾಗಿದೆ.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಪ್ರಮಾಣವಚನ ಸ್ವೀಕರಿಸಿದ ಮರುದಿನವೇ ಸರ್ಕಾರದ ಎಲ್ಲ ಇಲಾಖೆಗಳ ಉನ್ನತ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಸಾರ್ವಜನಿಕ ಕುಂದು-ಕೊರತೆಗಳಿಗೆ ಸ್ಪಂದಿಸಲು ಹಾಗೂ ಅನಿವಾಸಿ ಭಾರತೀಯರ ಬೇಡಿಕೆಗಳಿಗೆ ಸ್ಪಂದಿಸಲು ಎರಡು ಪ್ರತ್ಯೇಕ ಸಚಿವಾಲಯ ಸ್ಥಾಪಿಸಲು ನಿರ್ಧಾರ ಮಾಡಿದ್ದರು. ಈ ಪೈಕಿ ಶನಿವಾರ ವಿಧಾನಸೌಧದಲ್ಲಿ ನಡೆದ ತಮ್ಮ ನೇತೃತ್ವದ 2ನೇ ಸಚಿವ ಸಂಪುಟ ಸಭೆಯಲ್ಲಿ ಜನಸಾಮಾನ್ಯರ ಅಹವಾಲುಗಳನ್ನು ಪರಿಹರಿಸಲು ‘ಪ್ರಜಾ ಸೇವೆ’ ಎಂಬ ಹೊಸ ಇಲಾಖೆ ತೆರೆಯಲು ಸಮ್ಮತಿ ದೊರಕಿದೆ. ಅನಿವಾಸಿ ಭಾರತೀಯ ವ್ಯವಹಾರಗಳ ಇಲಾಖೆ ರಚನೆ ವಿಷಯವೂ ಸಭೆಯ ಕಾರ್ಯಸೂಚಿಯಲ್ಲಿ ಇತ್ತಾದರೂ ಯಾವುದೇ ಚರ್ಚೆ, ನಿರ್ಧಾರ ಆಗಿಲ್ಲ.

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು ಸಂಪುಟ ಸಭೆ ಮುಂದೆ ತಂದ ವಿಷಯದಲ್ಲಿ ಈ ಇಲಾಖೆಯ ಹೆಸರನ್ನು ‘ಮುಖ್ಯಮಂತ್ರಿಗಳ ಜನಸ್ಪಂದನ ಮತ್ತು ಜನಹಿತ ಆಡಳಿತ’ ಇಲಾಖೆ ಎಂದು ಪ್ರಸ್ತಾಪಿಸಿತ್ತು. ಆದರೆ, ಸಭೆಯಲ್ಲಿ ಸುದೀರ್ಘ ಚರ್ಚೆ, ಸಚಿವರ ಸಲಹೆಗಳನ್ನು ಪಡೆದ ಬಳಿಕ ಅದನ್ನು ‘ಪ್ರಜಾ ಸೇವೆ’ ಇಲಾಖೆ ಎಂದು ನಾಮಕರಣ ಮಾಡಲು ತೀರ್ಮಾನಕ್ಕೆ ಬರಲಾಗಿದೆ.

ಒಬ್ಬರು ಸಚಿವರಿಗೆ ಹೊಣೆ:

ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಸಭೆಯ ನಿರ್ಧಾರಗಳನ್ನು ವಿವರಿಸಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು, ನಾನು, ನಮ್ಮ ಸಚಿವರು, ಶಾಸಕರು ಜನರ ಬಳಿಗೆ ಹೋದಾಗ ಸಾರ್ವಜನಿಕರಿಂದ ಅನೇಕ ಸಮಸ್ಯೆ, ಅಹವಾಲು, ಕುಂದು-ಕೊರತೆಗಳು ಬರುತ್ತಿರುತ್ತವೆ. ಅವು ಕಾನೂನಾತ್ಮಕವಾಗಿ ಇದ್ದರೆ ಆಯಾ ಇಲಾಖೆಗಳಲ್ಲೇ ಪರಿಹಾರವಾಗುತ್ತವೆ. ಕಾನೂನಾತ್ಮಕ, ತಾಂತ್ರಿಕ ಸಮಸ್ಯೆಗಳಿದ್ದರೆ ಅವು ನಮ್ಮ ವರೆಗೂ ಬರುತ್ತವೆ. ಅಂಥವುಗಳನ್ನು ಪರಿಶೀಲಿಸಿ ನೈಜ ಸಮಸ್ಯೆಗಳು ಕಂದುಬಂದಾಗ ನ್ಯಾಯ ಕೊಡಿಸಲು ಸಾಧ್ಯವಾ? ನಮ್ಮಿಂದ, ಅಧಿಕಾರಿಗಳಿಂದ ತಪ್ಪಿದ್ದರೆ ಅದನ್ನು ಪುನರ್‌ ಪರಿಶೀಲಿಸಿ ಪರಿಹಾರ ನೀಡಬಹುದಾಗಿರುತ್ತದೆ. ಇದಕ್ಕಾಗಿ ನಾವು ಇಂದಿನ ಸಭೆಯಲ್ಲಿ ‘ಪ್ರಜಾ ಸೇವೆ’ ಎಂಬ ಹೊಸ ಇಲಾಖೆ ಸ್ಥಾಪಿಸಿ, ಒಬ್ಬರು ಸಚಿವರಿಗೆ ಅದರ ಜವಾಬ್ದಾರಿ ವಹಿಸಲು ತೀರ್ಮಾನಿದ್ದೇವೆ. ಈ ಇಲಾಖೆಗೆ ಒಬ್ಬ ಐಎಎಸ್ ಅಧಿಕಾರಿಯನ್ನೂ ನೇಮಿಸುತ್ತೇವೆ. ಇತರೆ ಅಧಿಕಾರಿಗಳೂ ಇರುತ್ತಾರೆ ಎಂದರು.

ವಾರಕ್ಕೊಂದು ಕ್ಷೇತ್ರಕ್ಕೆ ಸಚಿವರ ಭೇಟಿ ಕಡ್ಡಾಯ:

ಸರ್ಕಾರದ ಎಲ್ಲಾ ಸಚಿವರು, ಜಿಲ್ಲಾ ಉಸ್ತುವಾರಿ ಮಂತ್ರಿಗಳು ಕಡ್ಡಾಯವಾಗಿ ವಾರಕ್ಕೊಂದು ವಿಧಾನಸಭಾ ಕ್ಷೇತ್ರದಂತೆ ಎಲ್ಲಾ 224 ಕ್ಷೇತ್ರಗಳಿಗೂ ಸ್ಥಳೀಯ ಶಾಸಕರೊಂದಿಗೆ ಭೇಟಿ ನೀಡಿ ಜನಸಂಪರ್ಕ ಅಥವಾ ಜನಸ್ಪಂದನ ಸಭೆ ನಡೆಸಬೇಕು. ಅಲ್ಲಿ ಸಾರ್ವಜನಿಕರ ಸಮಸ್ಯೆ, ಕುಂದುಕೊರತೆ ಆಲಿಸಿ ಅರ್ಜಿ ಸ್ವೀಕರಿಸಬೇಕು. ಕಾನೂನಾತ್ಮಕವಾಗಿ ಸ್ಥಳೀಯವಾಗಿ ಪರಿಹಾರವಾಗುವುದನ್ನು ತಮ್ಮ ಹಂತದಲ್ಲೇ ಪರಿಹರಿಸಬೇಕು. ಉಳಿದವುಗಳನ್ನು ‘ಪ್ರಜಾ ಸೇವೆ’ ಇಲಾಖೆಗೆ ತಲುಪಿಸಬೇಕು. ಮುಖ್ಯಮಂತ್ರಿ ಅವರಿಗೆ ಬರುವ ಅಹವಾಲುಗಳನ್ನೂ ಇಲ್ಲಿಗೆ ಕಳುಹಿಸಲಾಗುವುದು. ಅವೆಲ್ಲವನ್ನೂ ಈ ಇಲಾಖೆ ತ್ವರಿತವಾಗಿ ಪರಿಶೀಲಿಸಿ ಸಂಬಂಧಪಟ್ಟ ಇಲಾಖೆ ಸಚಿವರು, ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರ ಕಂಡುಹಿಡಿಯುವ ಕೆಲಸ ಮಾಡಬೇಕು. ಈ ವಿಚಾರದಲ್ಲಿ ಶಾಸಕರ ಜವಾಬ್ದಾರಿ ಏನೆಂದು ಮುಂದೆ ತಿಳಿಸಲಾಗುವುದು ಎಂದರು.

ಮಾಧ್ಯಮಗಳು ಬೆಳಕು ಚೆಲ್ಲುವ ಸಮಸ್ಯೆಗಳಿಗೂ ಸ್ಪಂದನೆ:

ಹೊಸ ಇಲಾಖೆಗಳ ಸಮಸ್ಯೆಗಳನ್ನೂ ಆಯಾ ಇಲಾಖೆಗಳ ಸಮನ್ವಯದೊಂದಿಗೆ ಪರಿಹರಿಸಲು ಅವಕಾಶ ಕಲ್ಪಿಸಲಾಗುತ್ತದೆಯಾ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ, ನಾವಾಗಲಿ, ನಮ್ಮ ಅಧಿಕಾರಿಗಳಾಗಲಿ ಸರ್ವಜ್ಞರಲ್ಲ. ಜನ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ ಅವುಗಳಿಗೆ ಸ್ಪಂದಿಸುವುದು ಬಹಳ ಮುಖ್ಯ. ಇದಕ್ಕಾಗಿ ಹೊಸ ಇಲಾಖೆ ತೆರೆಯುತ್ತಿದ್ದೇವೆ. ಮಾಧ್ಯಮಗಳೂ ಜನರ ಸಮಸ್ಯೆಗಳ ಬಗ್ಗೆ ತಮ್ಮ ವರದಿಗಳ ಮೂಲಕ ಬೆಳಕು ಚೆಲ್ಲುತ್ತವೆ. ಅದನ್ನೂ ಗಮನಿಸಿ ಹೊಸ ಇಲಾಖೆ ಪರಿಹಾರಕ್ಕೆ ಸ್ಪಂದಿಸಲಿದೆ. ಇದರಲ್ಲಿ ಇ-ಆಡಳಿತ, ಸಕಾಲ ಸೇರಿ ಯಾವ ಇಲಾಖೆಗಳ ಸಮಸ್ಯೆಗಳಿದ್ದರೂ ಪರಿಶೀಲಿಸಿ ಪರಿಹರಿಸುವ ಕೆಲಸ ಆಗುತ್ತದೆ ಎಂದರು.

ಪ್ರತ್ಯೇಕ ಖಾತೆ ಏಕೆ?

ಜನರಿಂದ ಸಚಿವರು, ಶಾಸಕರಿಗೆ ಅಹವಾಲು, ಕುಂದುಕೊರತೆಗಳು ಸಲ್ಲಿಕೆಯಾಗುತ್ತವೆ. ಅವರಿಂದ ಪರಿಹಾರವಾಗದ ಉಳಿದ ದೂರುಗಳನ್ನು ಪರಿಶೀಲಿಸಿ ಪರಿಹಾರ ನೀಡಲು ಹೊಸ ಇಲಾಖೆ ಸ್ಥಾಪನೆ. ಒಬ್ಬರು ಸಚಿವರ ಜತೆ ಒಬ್ಬ ಐಎಎಸ್‌ ಅಧಿಕಾರಿ, ಇತರೆ ಅಧಿಕಾರಿಗಳ ನಿಯೋಜನೆ.

ಕಾರ್ಯನಿರ್ವಹಣೆ ಹೇಗೆ?

1. ಸರ್ಕಾರದ ಎಲ್ಲ ಸಚಿವರು, ಉಸ್ತುವಾರಿ ಮಂತ್ರಿಗಳಿಂದ ವಾರಕ್ಕೊಂದು ವಿಧಾನಸಭಾ ಕ್ಷೇತ್ರದಲ್ಲಿ ಜನಸಂಪರ್ಕ ಸಭೆ

2. ಸಾರ್ವಜನಿಕರಿಂದ ಸಲ್ಲಿಕೆಯಾಗುವ ದೂರು, ಅಹವಾಲುಗಳನ್ನು ಸ್ವೀಕರಿಸಿ ಪರಿಹರಿಸಲು ಪ್ರಯತ್ನವನ್ನು ಮಾಡಬೇಕು

3. ಉಳಿದ ದೂರುಗಳನ್ನು ‘ಪ್ರಜಾ ಸೇವೆ’ಗೆ ತಲುಪಿಸಬೇಕು. ಮುಖ್ಯಮಂತ್ರಿಗೆ ಬರುವ ಅಹವಾಲುಗಳೂ ಅಲ್ಲಿಗೇ ರವಾನೆ

4. ಅವೆಲ್ಲವನ್ನೂ ಇಲಾಖೆ ತ್ವರಿತವಾಗಿ ಪರಿಶೀಲಿಸಿ ಸಂಬಂಧಪಟ್ಟ ಸಚಿವರು, ಅಧಿಕಾರಿಗಳ ಜತೆ ಚರ್ಚಿಸಿ ಹರಿಹರಿಸಬೇಕು

5. ಮಾಧ್ಯಮಗಳು ಜನರ ಸಮಸ್ಯೆಗಳ ಬಗ್ಗೆ ವರದಿ ಮಾಡಿದರೆ ಅದನ್ನೂ ಗಮನಿಸಿ ಪರಿಹಾರಕ್ಕೆ ಹೊಸ ಇಲಾಖೆ ಸ್ಪಂದಿಸಬೇಕು

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಪ್ರಧಾನ್‌ ರಾಜೀನಾಮೆಗೆ ಆಗ್ರಹಿಸಿ ದಿಲ್ಲಿಯಲ್ಲಿ ಜಿರಳೆ ಪಾರ್ಟಿ 2ನೇ ಪ್ರತಿಭಟನೆ
ಅನ್ಯ ಕೆಲಸಕ್ಕೆ ಹಿಂದು ದೇಗುಲಗಳ ಹಣ ಬಳಕೆಗೆ ವಿಜಯ್‌ ತಡೆ