ಬೆಂಗಳೂರು : ಮಹಿಳೆಯರು ಯಾವುದೇ ಒಂದು ನಿರ್ದಿಷ್ಟ ಕ್ಷೇತ್ರಕ್ಕೆ ಸೀಮಿತಗೊಳ್ಳದೆ, ಎಲ್ಲ ಕ್ಷೇತ್ರಗಳಲ್ಲೂ ತಮ್ಮದೇ ಛಾಪು ಮೂಡಿಸಿದ್ದಾರೆ. ಮಹಿಳೆ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಹಾಗೂ ರಾಜಕೀಯವಾಗಿಯೂ ಸಬಲರಾಗುತ್ತಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಗುರುವಾರ ಬೆಂಗಳೂರು ಪ್ರೆಸ್‌ಕ್ಲಬ್ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಹಾಗೂ ಕರ್ನಾಟಕ ಇನ್ಸ್‌ಸ್ಪೈರಿಂಗ್ ವುಮೆನ್ 2025 ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಮೊದಲು ಮನೆಯಿಂದ ಹೊರ ಹೋಗಲು ಕೂಡ ಯೋಚಿಸುತ್ತಿದ್ದ ಮಹಿಳೆಯರು ಇಂದು ಜಾಗತಿಕವಾಗಿ ಎಲ್ಲ ಕ್ಷೇತ್ರದಲ್ಲೂ ಸಾಧನೆಯ ಶಿಖರ ಏರುತ್ತಿದ್ದಾರೆ. ಮಹಿಳೆಯರು ಸ್ವತಂತ್ರವಾಗಿ ಸಾಧಿಸುವ ಶಕ್ತಿ ಇದೆ. ಆಕೆ ತನ್ನ ಆತ್ಮವಿಶ್ವಾಸದ ಶಕ್ತಿಯಿಂದಲೇ ಸಮಾಜದಲ್ಲಿ ಮುನ್ನಡೆಯುತ್ತಿದ್ದಾಳೆ ಎಂದು ಹೇಳಿದರು.
ಚಲನಚಿತ್ರ ನಟಿ ಮೇಘನಾ ಗಾಂವ್ಕರ್ ಮಾತನಾಡಿ, ಸಮಾಜದಲ್ಲಿ ಸಾಕಷ್ಟು ಹೆಣ್ಣುಮಕ್ಕಳು ಸ್ತ್ರೀವಾದಿಗಳಾಗಿದ್ದಾರೆ ನಿಜ. ಆದರೆ, ಇತ್ತೀಚೆಗೆ ತುಂಬಾ ಜನ ಪುರುಷರು ಕೂಡ ಸ್ತ್ರೀವಾದಿಗಳಾಗಿ ಬದಲಾಗುತ್ತಿದ್ದಾರೆ. ಮಹಿಳೆಯರನ್ನು ಸಮಾಜದ ಮುಖ್ಯವಾಹಿನಿಗೆ ಕರೆತಂದು ಅವರ ಸಾಧನೆಯನ್ನು ಗುರುತಿಸಿ ಗೌರವಿಸುವಂತ ಕೆಲಸಗಳನ್ನು ಮಾಡುತ್ತಿರುವುದು ಶ್ಲಾಘನೀಯ ಎಂದರು.
ಸಮಾರಂಭದಲ್ಲಿ ವೈದ್ಯಕೀಯ, ಆಡಳಿತ, ಕೃಷಿ, ಕ್ರೀಡೆ, ಸಮಾಜಸೇವೆ, ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 21 ಮಂದಿ ಸಾಧಕಿಯರಿಗೆ ಕರ್ನಾಟಕ ಇನ್ಸ್‌ಸ್ಪೈರಿಂಗ್ ವುಮೆನ್ 2025 ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪ್ರೆಸ್‌ಕ್ಲಬ್ ಅಧ್ಯಕ್ಷ ಆರ್.ಶ್ರೀಧರ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.