ಚಿಕ್ಕಬಳ್ಳಾಪುರ : ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟವಾದ ನಂತರ ರಾಜ್ಯದಲ್ಲಿ ಕಾಂಗ್ರೆಸ್‌ಗೆ ಗರ್ವಭಂಗ ಆಗುವುದು ಖಚಿತ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಸೋಮವಾರ ಜಿಲ್ಲಾ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದ ಆಗ್ನೇಯ ಶಿಕ್ಷಕರ ವಿಧಾನ ಪರಿಷತ್ತು ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ, ರೈತರು ಬದುಕಿದ್ದಾರೆ ಎಂಬುದನ್ನೇ ಸರ್ಕಾರ ಮರೆತಿದೆ ಎಂದರು.
ಮೈತ್ರಿ ಅಭ್ಯರ್ಥಿಗೆ ಬೆಂಬಲ ನೀಡಿ
ಸ್ವಾತಂತ್ರ್ಯ ಬಂದಾಗಿನಿಂದ 40 ವರ್ಷಗಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಾವಧಿಯಲ್ಲಿ ಮಾಡದ ಕೆಲಸ ಕೇವಲ 20 ತಿಂಗಳಲ್ಲಿ ಮಾಡಿದ್ದೇನೆ. ರಾಜ್ಯದಲ್ಲಿ 169 ಪ್ರಥಮದರ್ಜೆ ಕಾಲೇಜುಗಳಿದ್ದವು. ನಾನು ಹೊಸದಾಗಿ 189 ಪ್ರಥಮದರ್ಜೆ ಕಾಲೇಜುಗಳನ್ನು, 500 ಜೂನಿಯರ್ ಕಾಲೇಜುಗಳನ್ನು, 1400 ಹೈಸ್ಕೂಲ್ ಗಳನ್ನು ಪ್ರಾರಂಭ ಮಾಡಿದ್ದೇನೆ.
ಈ ದಾಖಲೆ ಈವರೆಗೆ ಯಾರೂ ಮಾಡಿಲ್ಲ. 54 ಸಾವಿರ ಕುಟುಂಬಗಳಿಗೆ ಉದ್ಯೋಗ ನೀಡಿದ್ದೇನೆ. ನಿಮ್ಮಲ್ಲಿ ಮನವಿ ಮಾಡುತ್ತೇನೆ. ಶಿಕ್ಷಣ ಮತ್ತು ಶಿಕ್ಷಕ ಬಂಧುಗಳಿಗೆ ನಾವು ನೀಡಿರುವ ಕೊಡುಗೆ ತಿಳಿಸಿ ಮೈತ್ರಿ ಅಭ್ಯರ್ಥಿಗೆ ಮತ ಹಾಕಿಸಿ, ಮತ್ತು ಶಿಕ್ಷಕ ಮತದಾರರು ಶಿಕ್ಷಕ ಸಮುದಾಯದ ಲೋಪಗಳನ್ನು ಸರಿಪಡಿಸಲು ವೈ.ಎ.ನಾಯಾಯಣಸ್ವಾಮಿಗೆ ಮತಹಾಕಿ ಎಂದರು.
ಪ್ರತಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಒಂದು ವರ್ಷದ ಆಡಳಿತಾವದಿಯಲ್ಲಿ 900 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕುಡಿಯುವ ನೀರು, ಬಿತ್ತನೆ ಬೀಜ, ರಸಗೊಬ್ಬರ ದೊರೆಯುತ್ತಿಲ್ಲ. ಖಜಾನೆ ಖಾಲಿಯಾಗಿದ್ದು, ಮುಂದಿನ ಎರಡು ತಿಂಗಳಲ್ಲಿ ಶಿಕ್ಷಕರ ವೇತನಕ್ಕೂ ಹಣ ಇರುವುದಿಲ್ಲ ಎಂದರು.
ಫಲಿತಾಂಶ ಬಳಿಕ ಗ್ಯಾರಂಟಿ ಸ್ಥಗಿತ
ಲೋಕಸಭಾ ಚುನಾವಣಾ ಫಲಿತಾಂಶದ ನಂತರ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ ನಿಂತು ಹೋಗಲಿದೆ. ಹಾಲಿನ ಪ್ರೋತ್ಸಾಹಧನ 800 ಕೋಟಿ ಕೊಟ್ಟಿಲ್ಲ. ಸಬ್ಸಿಡಿ ಕೊಟ್ಟಿಲ್ಲ, ವಿದ್ಯಾರ್ಥಿವೇತನ ಕೊಟ್ಟಿಲ್ಲ. ಒಂದು ವರ್ಷದಲ್ಲಿ ಒಂದು ರಸ್ತೆ, ಶಾಲೆ, ಆಸ್ಪತ್ರೆ ಮಂಜೂರು ಆಗಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ರೋಫ್ ಹಾಕುವುದು, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರೌಡಿಯಿಸಂಗೆ ಹೆದರಿ ಯಾವ ಶಾಸಕರೂ ಮುಖ್ಯಮಂತ್ರಿ ಭೇಟಿಗೆ ಹೋಗುತ್ತಿಲ್ಲ.ಕಾಂಗ್ರೆಸ್ ಅಭ್ಯರ್ಥಿಗೆ ಡಿಪಾಸಿಟ್ ಕೂಡ ಬರಲ್ಲ ಎಂಬುದು ಸತ್ಯ. ಬೆಂಗಳೂರು ತೆರಿಗೆ ಬೆಂಗಳೂರಿಗೆ ಎಂದು ಹೋರಾಟ ಮಾಡುತ್ತಿದ್ದೇವೆ.ಕಳ್ಳತನ ಮಾಡಿದ ಹಣ ದೆಹಲಿಗೆ ಕಳಿಸಲು ಸುರಂಗ ಮಾಡುತ್ತಾರಂತೆ ಎಂದು ವ್ಯಂಗ್ಯವಾಡಿದರು.
ಮಾಜಿ ಸಚಿವ ಡಾ.ಸಿಎನ್.ಆಶ್ವತ್ಥ ನಾರಾಯಣ ಮಾತನಾಡಿ, ಅಭ್ಯರ್ಥಿ ವೈ.ಎ.ನಾರಾಯಣಸ್ವಾಮಿ ಶಿಕ್ಷಕ ಸಮುದಾಯ ಸಮರ್ಥ ಪ್ರತಿನಿಧಿಯಾಗಿದ್ದಾರೆ. ಶಿಕ್ಷಕರ ಕ್ಷೇತ್ರ ಗೆಲ್ಲುವುದು ಬಹಳ ಮುಖ್ಯ. ಶಿಕ್ಷಣ ಮತ್ತು ಶಿಕ್ಷಕರಿಗೆ ಸಮಾಜದಲ್ಲಿ ಉತ್ತಮ ಸ್ಥಾನ ಇದೆ. ಸ್ವತಃ ಶಿಕ್ಷಕರಾಗಿ ಸೇವೆಸಲ್ಲಿಸಿರುವ ನಮ್ಮ ಅಭ್ಯರ್ಥಿ ಅತ್ಯಧಿಕ ಮತಗಳಿಂದ ಗೆಲ್ಲವುದು ಖಚಿತವಾಗಿದೆ. ಎರಡೂ ಪಕ್ಷಗಳ ನಿಷ್ಟಾವಂತ ಕಾರ್ಯಕರ್ತ ಬಂಧುಗಳು ಡಾ.ಕೆ.ಸುಧಾಕರ್ ಅವರನ್ನು ಬೆಂಬಲಿಸಿದಂತೆ ವೈ.ಎ.ನಾರಾಯಣಸ್ವಾಮಿ ಅವರನ್ನೂ ಬೆಂಬಲಿಸಬೇಕು ಎಂದು ಮನವಿ ಮಾಡಿದರು.18 ವರ್ಷಗಳಿಂದ ಶಿಕ್ಷಕರ ಸೇವೆ
ಮೈತ್ರಿ ಅಭ್ಯರ್ಥಿ ವೈ.ಎ.ನಾರಾಯಣಸ್ವಾಮಿ ಮಾತನಾಡಿ, ಮೂರನೇ ತಾರೀಖು ನಡೆಯುವ ಚುನಾವಣೆಯಲ್ಲಿ ತಮಗೆ ಪ್ರಥಮ ಪ್ರಾಶಸ್ತ್ಯದ ಮತ ಹಾಕುವ ಮೂಲಕ ಗೆಲ್ಲಿಸಬೇಕು ಎಂದು ಮನವಿ ಮಾಡಿದರು. ಚುನಾವಣೆಗೆ ಕೇವಲ 5 ದಿನ ಮಾತ್ರ ಬಾಕಿ ಇದೆ. ಜಿಲ್ಲೆಯಲ್ಲಿ 1500 ಶಿಕ್ಷಣ ಸಂಸ್ಥೆಗಳಿವೆ.18 ವರ್ಷಗಳಿಂದ ನಿರಂತರವಾಗಿ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂಧಿಸಿದ್ದೇನೆ ಎನ್ನುವ ವಿಶ್ವಾಸ ಇದೆ ಎಂದರು.ಈ ವೇಳೆ ಶಾಸಕರಾದ ಬಿ.ಎನ್.ರವಿಕುಮಾರ್,ಜಿ.ಕೆ.ವೆಂಕಟಶಿವಾರೆಡ್ಡಿ, ಎಂಎಲ್‌ಸಿ ನವೀನ್, ಮಾಜಿ ಶಾಸಕ ಎಂ.ರಾಜಣ್ಣ ,ಬಿಜೆಪಿ ಜಿಲ್ಲಾಧ್ಯಕ್ಷ ರಾಮಲಿಂಗಪ್ಪ,ಖಾದಿ ಮಂಡಳಿ ಮಾಜಿ ಅಧ್ಯಕ್ಷ ಕೆ.ವಿ.ನಾಗರಾಜ್, ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ,ನರಸಿಂಹಮೂರ್ತಿ, ಮುಕ್ತಮುನಿಯಪ್ಪ, ಕೆ.ಆರ್.ರೆಡ್ಡಿ.ಸದಾಶಿವರೆಡ್ಡಿ, ಗೋಪಿ,ಮಾಜಿ ಎಂಎಲ್‌ಸಿ ತೂಪಲ್ಲಿ ಚೌಡರೆಡ್ಡಿ,ಸೀಕಲ್ ರಾಮಚಂದ್ರಗೌಡ,ಪ್ರಭಾ ನಾರಾಯಣಗೌಡ, ನಾರಾಯಣಗೌಡ, ಮತ್ತಿತರರು ಇದ್ದರು.