ರಾಜಕೀಯದಲ್ಲಿ ಸಕ್ರಿಯ, ಚುನಾವಣೆಗೆ ಮಾತ್ರ ಸ್ಪರ್ಧಿಸುವುದಿಲ್ಲ: ಎಚ್‌.ವಿಶ್ವನಾಥ್

KannadaprabhaNewsNetwork |  
Published : May 08, 2026, 01:15 AM ISTUpdated : May 08, 2026, 05:05 AM IST
h vishwanath

ಸಾರಾಂಶ

ನಾನು ಈ ಹಿಂದೆ ಚುನಾವಣೆಗಳಲ್ಲಿ ಸ್ಪರ್ಧಿಸಿದಾಗ ಜನರೇ ಖರ್ಚಿಗೆ ಹಣ ನೀಡಿ ಆಶೀರ್ವದಿಸುತ್ತಿದ್ದರು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಕನಿಷ್ಠ 50 ಕೋಟಿ ರು. ಬೇಕು. ರಿಯಲ್‌ ಎಸ್ಟೇಟ್‌ ವ್ಯವಹಾರದಲ್ಲಿ ತೊಡಗಿದವರು ತಮ್ಮ ಜಮೀನು, ಮನೆ ಮಾರಿ ಸ್ಪರ್ಧಿಸಬಹುದು. ಆದರೆ, ನಮ್ಮಿಂದ ಅದು ಸಾಧ್ಯವಿಲ್ಲ.

  ಮೈಸೂರು :  ನಾನು ರಾಜಕೀಯ ಚಟುವಟಿಕೆಯಲ್ಲಿ ಸಕ್ರಿಯವಾಗಿರುತ್ತೇನೆ. ಆದರೆ, ಚುನಾವಣೆಗೆ ಮಾತ್ರ ಸ್ಪರ್ಧಿಸುವುದಿಲ್ಲ ಎಂದು ವಿಧಾನ ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ಘೋಷಿಸಿದರು.

ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಈ ಹಿಂದೆ ಚುನಾವಣೆಗಳಲ್ಲಿ ಸ್ಪರ್ಧಿಸಿದಾಗ ಜನರೇ ಖರ್ಚಿಗೆ ಹಣ ನೀಡಿ ಆಶೀರ್ವದಿಸುತ್ತಿದ್ದರು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಕನಿಷ್ಠ 50 ಕೋಟಿ ರು. ಬೇಕು. ರಿಯಲ್‌ ಎಸ್ಟೇಟ್‌ ವ್ಯವಹಾರದಲ್ಲಿ ತೊಡಗಿದವರು ತಮ್ಮ ಜಮೀನು, ಮನೆ ಮಾರಿ ಸ್ಪರ್ಧಿಸಬಹುದು. ಆದರೆ, ನಮ್ಮಿಂದ ಅದು ಸಾಧ್ಯವಿಲ್ಲ ಎಂದರು. 

ನನ್ನ ಬಳಿ ಒಂದು ಮನೆ ಮತ್ತು ಒಂದು ನಿವೇಶನ ಮಾತ್ರ ಇದೆ

ನನ್ನ ಬಳಿ ಒಂದು ಮನೆ ಮತ್ತು ಒಂದು ನಿವೇಶನ ಮಾತ್ರ ಇದೆ. ಹೀಗಿರುವಾಗ ಸ್ಪರ್ಧೆ ಹೇಗೆ ಸಾಧ್ಯ?. ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಚುನಾವಣೆ ಎದುರಿಸುವುದು ಸಾಮಾನ್ಯ ವ್ಯಕ್ತಿಗೆ ಅಸಾಧ್ಯ. ಈ ಹಿನ್ನೆಲೆಯಲ್ಲಿ ಮುಂದಿನ ಯಾವುದೇ ಚುನಾವಣೆಯಲ್ಲಿ ತಾವು ಸ್ಪರ್ಧಿಸುವುದಿಲ್ಲ. ಸಧ್ಯದ ಪರಿಸ್ಥಿತಿ ಗಮನಿಸಿದರೆ, ಚುನಾವಣೆಯಲ್ಲಿ ಸ್ಪರ್ಧಿಸಲು ಅಪಾರ ಹಣದ ಅವಶ್ಯಕತೆ ಇದೆ. ಅಷ್ಟು ದೊಡ್ಡ ಮೊತ್ತ ಖರ್ಚು ಮಾಡುವ ಶಕ್ತಿ ನನ್ನಲ್ಲಿಲ್ಲ. ಅಲ್ಲದೇ, ನನ್ನ ಮಕ್ಕಳು ಕೂಡ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಅವರು ತಮ್ಮ ಶಕ್ತಿ ಅನುಸಾರ ರಾಜಕೀಯದಲ್ಲಿ ಮುಂದುವರಿಯುತ್ತಾರೆ. ನಾನು ರಾಜಕೀಯ ಚಟುವಟಿಕೆಯಲ್ಲಿ ಸಕ್ರಿಯವಾಗಿರುತ್ತೇನೆ. ಆದರೆ, ಚುನಾವಣೆಗೆ ಮಾತ್ರ ಸ್ಪರ್ಧಿಸುವುದಿಲ್ಲ ಎಂದರು.

ರಾಜ್ಯ ಸರ್ಕಾರ ಹಿಂಪಡೆದಿರುವ ಕ್ರಮ  ಸರಿಯಲ್ಲ

ಹಿರಿಯ ಪೊಲೀಸ್ ಅಧಿಕಾರಿ ರಾಮಚಂದ್ರ ರಾವ್ ಅಮಾನತು ಆದೇಶವನ್ನು ರಾಜ್ಯ ಸರ್ಕಾರ ಹಿಂಪಡೆದಿರುವ ಕ್ರಮಕ್ಕೆ ಸರಿಯಲ್ಲ. ಹಿರಿಯ ಅಧಿಕಾರಿ ರಾಮಚಂದ್ರರಾವ್ ಅವರ ವಿರುದ್ಧ ಗಂಭೀರ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಸರ್ಕಾರ ಅವರನ್ನು ಅಮಾನತು ಮಾಡಿತ್ತು. ಇದೀಗ ಏಕಾಏಕಿ ಅವರ ಮೇಲಿನ ಅಮಾನತು ಆದೇಶ ಹಿಂಪಡೆದು ಕರ್ತವ್ಯಕ್ಕೆ ಮರು ನಿಯೋಜಿಸಿರುವುದು ಸರಿಯಲ್ಲ. ಸರ್ಕಾರದಲ್ಲಿ ನ್ಯಾಯಕ್ಕೆ ಬೆಲೆ ಇಲ್ಲದಂತಾಗಿದ್ದು, ಗೃಹ ಇಲಾಖೆಯನ್ನು ಪರಮೇಶ್ವರ್ ನಡೆಸುತ್ತಿದ್ದಾರೋ ಅಥವಾ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ನಡೆಸುತ್ತಿದ್ದಾರಾ? ಎಂಬ ಅನುಮಾನವಿದೆ. ರಾಮಚಂದ್ರ ರಾವ್ ಅವರ ಅಮಾನತು ಆದೇಶ ಹಿಂಪಡೆಯಲು ದೊಡ್ಡಮಟ್ಟದ ಕಿಕ್ ಬ್ಯಾಕ್ ಪಡೆದಿರುವ ಸಾಧ್ಯತೆ ಇದೆ ಎಂದು ದೂರಿದರು.

ಈ ಹಿಂದೆ ಕೇರಳ ಬಸ್‌ನಲ್ಲಿ ಸಿಕ್ಕಿದ್ದ 2 ಕೋಟಿ ಹಣವನ್ನು ಕೊಂಡೊಯ್ದು ಇನ್‌ ಸ್ಪೆಕ್ಟರ್‌ ವಿರುದ್ಧ ಪ್ರಕರಣ ದಾಖಲಿಸಿದ್ದ ರಾಮಚಂದ್ರರಾವ್. ಅವರ ಸಾಕು ಮಗಳು ರನ್ಯಾರಾವ್ ಚಿನ್ನ ಸಾಗಣೆ ಪ್ರಕರಣದಲ್ಲಿ ಸಿಕ್ಕಿಬಿದ್ದ ಪರಿಣಾಮ ರಾಮಚಂದ್ರ ರಾವ್ ಅವರನ್ನು ಅಮಾನತು ಮಾಡಲಾಗಿತ್ತು. ಅಲ್ಲದೇ, ಅವರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಕೂಡ ಕೇಳಿಬಂದಿತ್ತು. ನ್ಯಾಯ ಕೇಳಲು ಬಂದಿದ್ದ ಮಹಿಳೆಯ ಮೇಲೆ ರಾಮಚಂದ್ರ ರಾವ್ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. 

 ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾದ ವಿಡಿಯೋ ನನ್ನದಲ್ಲ ಎಂದು ವಾದಿಸಿದ್ದರು. ಆ ನಂತರ ವಿಧಿವಿಜ್ಞಾನ ಪ್ರಯೋಗಾಲಯ ನೀಡಿದ ವರದಿಯಲ್ಲಿ ಆ ವಿಡಿಯೋ ರಾಮಚಂದ್ರರಾವ್ ಅವರದ್ದೇ ಎಂಬುದು ಸಾಬೀತಾದ ಕಾರಣ ಅವರನ್ನು ಸರ್ಕಾರ ಅಮಾನತು ಮಾಡಿತ್ತು. ಇದೀಗ ಏಕಾಏಕಿ ಅವರ ಮೇಲಿನ ಅಮಾನತು ಆದೇಶ ಹಿಂಪಡೆದು ಮತ್ತೆ ಕರ್ತವ್ಯಕ್ಕೆ ನಿಯೋಜಿಸಿರುವುದು ಸರಿಯಲ್ಲ. ಈ ಸರ್ಕಾರದಲ್ಲಿ ನ್ಯಾಯಕ್ಕೆ ಬೆಲೆ ಇಲ್ಲದಂತಾಗಿದೆ ಎಂದು ಕಿಡಿಕಾರಿದ ಅವರು, ರಾಜ್ಯದಲ್ಲಿ ಯಾವ ಸೀಮೆಯ ಅಧಿಕಾರ ನಡೆಯುತ್ತಿದೆ ಎಂದು ಪ್ರಶ್ನಿಸಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಬಂಡಾಯ ಟಿಎಂಸಿಗರಿಂದ ಮಮತಾ ದೀದಿಗೆ ಕೊಕ್‌!
ಅಡ್ಡಮತದಾನ ಮಾಡಿದ 6-7 ಶಂಕಿತ ಶಾಸಕರ ಪಟ್ಟಿ ಇಂದು ವರಿಷ್ಠರಿಗೆ?