ಬೆಂಗಳೂರು : ದೇವನಹಳ್ಳಿ ಭೂ ಸ್ವಾಧೀನ ವಿರೋಧಿಸಿ ನಡೆಯುತ್ತಿರುವ ರೈತರ ಹೋರಾಟ ಒಡೆಯಲು ಸರ್ಕಾರ ಬ್ರಿಟಿಷ್ ಮಾದರಿ ಅನುಸರಿಸುತ್ತಿದೆ ಎಂದು ಹೋರಾಟದಲ್ಲಿ ಪಾಲ್ಗೊಂಡಿದ್ದ ನಟ ಪ್ರಕಾಶ್ ರಾಜ್ ಗಂಭೀರವಾಗಿ ಆಪಾದಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಮಂಗಳವಾರ ನಡೆಯುವ ಸಭೆಯಲ್ಲಿ ನೋಟಿಫಿಕೇಶನ್ ರದ್ದತಿಗೆ ಕಾನೂನು ತೊಡಕೇನು, ಅದನ್ನು ನಿವಾರಿಸಿಕೊಳ್ಳುವುದು ಹೇಗೆಂದು ತಿಳಿಸಬೇಕೇ ವಿನಃ ಪರಿಹಾರದ ಬಗ್ಗೆ ಮಾತನಾಡಬಾರದು ಎಂದೂ ಹೇಳಿದ್ದಾರೆ.
ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜು.4ರಂದು ಸಿದ್ದರಾಮಯ್ಯ ಅವರು ನಡೆಸಿದ ಸಭೆಯಲ್ಲಿ ತಾವು ರೈತಪರ, ಆದರೆ ಕಾನೂನು ತೊಡಕಿನ ಕುರಿತು ನಿರ್ಧಾರ ತೆಗೆದುಕೊಳ್ಳಲು ಜು.15ರ ತನಕ ಕಾಲಾವಕಾಶ ಕೇಳಿದರು. ಆದರೆ, ಬಳಿಕ ಸಚಿವ ಎಂ.ಬಿ.ಪಾಟೀಲ್ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸಮೇತ ದೆಹಲಿಯಲ್ಲಿ ಕೇಂದ್ರ ರಕ್ಷಣ ಸಚಿವ ರಾಜನಾಥ್ ಸಿಂಗ್‌ರನ್ನು ಭೇಟಿ ಮಾಡಿ, ಡಿಫೆನ್ಸ್ ಕಾರಿಡಾರ್ ಮತ್ತು ಏರೋಸ್ಪೇಸ್‌ಗೆ ಅನುಮತಿ ಕೇಳಿದ್ದಾರೆ.ಹಾಗೆ, ಕೆಲ ದಲ್ಲಾಳಿಗಳು ತಾವೂ ರೈತರು, ಭೂಮಿ ಕೊಡಲು ಸಿದ್ಧರಿದ್ದೇವೆ ಎಂದು ಹೇಳಿಕೊಂಡು ಬರುತ್ತಿದ್ದಾರೆ. ಎಕರೆಗೆ ₹3.50ಕೋಟಿ ನೀಡುವ ವಿಚಾರ ಚರ್ಚೆಯಲ್ಲಿದೆ. ಇದನ್ನೆಲ್ಲ ಗಮನಿಸಿದರೆ ಸರ್ಕಾರ ರೈತರಲ್ಲಿ ಒಡಕು ಮೂಡಿಸಲು 10 ದಿನ ಕಾಲಾವಕಾಶ ತೆಗೆದುಕೊಂಡಿತೇ ಎಂಬ ಅನುಮಾನ ಹುಟ್ಟಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಸರ್ಕಾರ ಅಧಿಸೂಚನೆ ಹಿಂಪಡೆವ ಬಗ್ಗೆ ಮಾತ್ರ ಮಾತನಾಡಬೇಕು. ಪರಿಹಾರದ ಕುರಿತಲ್ಲ. 2013ರ ಭೂಸ್ವಾಧೀನ ಕಾಯ್ದೆ ಪ್ರಕಾರ ಕೃಷಿ ಭೂಮಿ ಸ್ವಾಧೀನಕ್ಕೂ ಮುನ್ನ ಅದನ್ನು ಹಳದಿ ವಲಯವಾಗಿ ಪರಿವರ್ತಿಸಬೇಕು. ಸಚಿವ ಎಂ.ಬಿ.ಪಾಟೀಲ್ ಕೇವಲ ಪರಿಹಾರದ ಬಗ್ಗೆ ಮಾತನಾಡಿದ್ದಾರೆ. ಭೂಸ್ವಾದೀನದಿಂದ ಸಾಮಾಜಿಕ ಪರಿಣಾಮ, ಪುನರ್‌ವಸತಿ, ಆಹಾರ ಸುರಕ್ಷತೆ, ಪರಿಸರ ಮೇಲಿನ ಪರಿಣಾಮಗಳ ಬಗ್ಗೆ ಅಧ್ಯಯನ ನಡೆಯಬೇಕು. ಇದ್ಯಾವುದನ್ನೂ ಮಾಡದೆ ಸರ್ಕಾರ ಕೃಷಿ ಭೂಮಿ ಸ್ವಾಧೀನ ಮಾಡಿಕೊಳ್ಳಲು ಹೊರಟಿದೆಯೇ ಎಂದು ಪ್ರಕಾಶ್ ಪ್ರಶ್ನಿಸಿದರು.
ಸರ್ಕಾರ ತೆಗೆದುಕೊಳ್ಳುವ ನಿರ್ಧಾರದಿಂದ ಅದು ರೈತಪರವಾಗಿದೆಯೋ ಅಥವಾ ಕಾರ್ಪೊರೆಟ್ ಪರವಿದೆಯೋ ಎಂದು ತಿಳಿಯುತ್ತದೆ. ದೇವನಹಳ್ಳಿ ಹೋರಾಟದ ಹಿಂದೆ ರಾಷ್ಟ್ರಮಟ್ಟದ ರೈತ ಸಂಘಟನೆಗಳಿವೆ. ರೈತರ ಹೋರಾಟ ಒಡೆಯಲು ಹೊರಟ ಸರ್ಕಾರ, ಸಚಿವರ ಹಿಂದೆ ಯಾರಿದ್ದಾರೆ ಎಂದು ಸ್ಪಷ್ಟಪಡಿಸಬೇಕು ಎಂದು ಸವಾಲು ಹಾಕಿದರು.
ಸುದ್ದಿಗೋಷ್ಠಿಯಲ್ಲಿ ಎದ್ದೇಳು ಕರ್ನಾಟಕದ ಮುಖ್ಯಸ್ಥೆ ತಾರಾರಾವ್, ಯೂಸೂಫ್ ಕನ್ನಿ, ಎನ್.ವೆಂಕಟೇಶ್, ವೀರಸಂಗಯ್ಯ ಮತ್ತು ಕೆ. ಎಲ್.ಅಶೋಕ್ ಇದ್ದರು.