ಕರ್ನಾಟಕದಲ್ಲಿ ಎಫ್‌ಐಆರ್‌ ಬೆನ್ನಲ್ಲೇ - ಸಚಿವೆ ನಿರ್ಮಲಾ ರಾಜೀನಾಮೆಗೆ ಕೈ ನಾಯಕರ ಪಟ್ಟು

ಸಾರಾಂಶ

ಚುನಾವಣಾ ಬಾಂಡ್ ಹಗರಣದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ವಿರುದ್ಧ ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ ಅವರ ರಾಜೀನಾಮೆಗೆ ಕಾಂಗ್ರೆಸ್ ಆಗ್ರಹಿಸಿದೆ. ಈ ಯೋಜನೆಯನ್ನು 'ಸುಲಿಗೆ' ಎಂದು ಕರೆದ ಕಾಂಗ್ರೆಸ್, ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ಎಸ್‌ಐಟಿ ತನಿಖೆ ನಡೆಸಬೇಕೆಂದು ಒತ್ತಾಯಿಸಿದೆ.

  ನವದೆಹಲಿ : ಚುನಾವಣಾ ಬಾಂಡ್ ಹಗರಣದ ಸಂಬಂಧ ಬೆಂಗಳೂರಿನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ಪ್ರಕರಣ ದಾಖಲಾಗಿರುವ ಕಾರಣ ಅವರ ರಾಜೀನಾಮೆಗೆ ಕಾಂಗ್ರೆಸ್‌ (ಎಐಸಿಸಿ) ಆಗ್ರಹಿಸಿದೆ.

ಭಾನುವಾರ ಪಕ್ಷದ ವಕ್ತಾರ ಅಭಿಷೇಕ್ ಸಿಂಘ್ವಿ ಜತೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ‘ನಿರ್ಮಲಾ ಪ್ರಜಾಪ್ರಭುತ್ವ ದುರ್ಬಲಗೊಳಿಸಿದ್ದಾರೆ. ಹೀಗಾಗಿ ಅವರು ರಾಜೀನಾಮೆ ನೀಡಬೇಕು. ಇಡೀ ಎಲೆಕ್ಟೋರಲ್ ಬಾಂಡ್ ಯೋಜನೆ ಬಗ್ಗೆ ಎಸ್‌ಐಟಿ ಮೂಲಕ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯ ತನಿಖೆಗೆ ನಡೆಯಬೇಕು’ ಎಂದು ಒತ್ತಾಯಿಸಿದರು.

‘ಚುನಾವಣಾ ಬಾಂಡ್ ಮೂಲಕ ಬಿಜೆಪಿ 4 ಮಾರ್ಗದಲ್ಲಿ ಸುಲಿಗೆ ಮಾಡಿದೆ. ಅವು ಪ್ರಿಪೇಯ್ಡ್ ಲಂಚ, ಪೋಸ್ಟ್‌ಪೇಯ್ಡ್ ಲಂಚ, ಪೋಸ್ಟ್‌ರೇಯ್ಡ್‌ ಲಂಚ (ದಾಳಿಯ ನಂತರದ ಲಂಚ) ಮತ್ತು ನಕಲಿ ಕಂಪನಿ ಸೃಷ್ಟಿಸಿ ವಸೂಲಿ’ ಎಂದ ಜೈರಾಂ, ‘ಕೋರ್ಟ್ ಆದೇಶದ ಮೇರೆಗೆ ಎಫ್‌ಐಆರ್ ದಾಖಲಿಸಲಾಗಿದೆ. ಎಫ್‌ಐಆರ್‌ಗೂ ಕಾಂಗ್ರೆಸ್‌ಗೂ ಯಾವುದೇ ಸಂಬಂಧವಿಲ್ಲ’ ಎಂದರು.

ಅಭಿಷೇಕ್‌ ಸಿಂಘ್ವಿ ಮಾತನಾಡಿ, ‘ಹಣಕಾಸು ಸಚಿವರು ಈ ಸುಲಿಗೆಯನ್ನು ಸ್ವಂತವಾಗಿ ಮಾಡಲು ಸಾಧ್ಯವಿಲ್ಲ. ಯಾರು ನಂಬರ್ 1 ಮತ್ತು ನಂಬರ್ 2 ಎಂದು ನಮಗೆ ತಿಳಿದಿದೆ ಮತ್ತು ಇದನ್ನು ಯಾರ ನಿರ್ದೇಶನದ ಮೇರೆಗೆ ಮಾಡಲಾಗಿದೆ ಎಂಬುದೂ ತಿಳಿದಿದೆ’ ಎಂದರು.

‘ಮುಕ್ತ ಮತ್ತು ನ್ಯಾಯಸಮ್ಮತವಾದ ಚುನಾವಣೆಗೆ ಸೂಕ್ತ ವಾತಾವರಣ ಸೃಷ್ಟಿ ಆಗಬೇಕು. ಆದರೆ ಇಂದು ಇಂಥ ವಾತಾವರಣವಿಲ್ಲ. ಚುನಾವಣಾ ಬಾಂಡ್ ಎಂಬುದು ಸುಲಿಗೆವಾದಿ ಬಿಜೆಪಿ ಯೋಜನೆ’ ಎಂದು ವಾಗ್ದಾಳಿ ನಡೆಸಿದರು.

ಫೆಬ್ರವರಿಯಲ್ಲಿ ಸುಪ್ರೀಂ ಕೋರ್ಟ್ ಚುನಾವಣಾ ಬಾಂಡ್ ಯೋಜನೆಯನ್ನು ರದ್ದುಗೊಳಿಸಿತ್ತು, ಇದು ಸಂವಿಧಾನದ ಅಡಿಯಲ್ಲಿ ಮಾಹಿತಿ ಹಕ್ಕು ಮತ್ತು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಉಲ್ಲಂಘಿಸುತ್ತದೆ ಎಂದು ಹೇಳಿತ್ತು.

4 ರೀತಿ ಸುಲಿಗೆ

ಚುನಾವಣಾ ಬಾಂಡ್ ಮೂಲಕ ಬಿಜೆಪಿ 4 ಮಾರ್ಗದಲ್ಲಿ ಸುಲಿಗೆ ಮಾಡಿದೆ. ಅವು ಪ್ರಿಪೇಯ್ಡ್ ಲಂಚ, ಪೋಸ್ಟ್‌ಪೇಯ್ಡ್ ಲಂಚ, ಪೋಸ್ಟ್‌ರೇಯ್ಡ್‌ ಲಂಚ ಮತ್ತು ನಕಲಿ ಕಂಪನಿ ಸೃಷ್ಟಿಸಿ ವಸೂಲಿ. ಕೋರ್ಟ್ ಆದೇಶದ ಮೇರೆಗೆ ಈ ಬಗ್ಗೆ ಎಫ್‌ಐಆರ್ ದಾಖಲಿಸಲಾಗಿದೆ. ಎಫ್‌ಐಆರ್‌ಗೂ ಕಾಂಗ್ರೆಸ್‌ಗೂ ಯಾವುದೇ ಸಂಬಂಧವಿಲ್ಲ.

- ಜೈರಾಂ ರಮೇಶ್‌ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ

Share this article