ಸ್ಪಷ್ಟ ಉತ್ತರ ಸಿಗುವವರೆಗೂ ಧರಣಿ, ರೈತರ ಎಚ್ಚರಿಕೆ ಸರ್ಕಾರ,ಚೆಸ್ಕಾಂ,ಜಿಲ್ಲಾಡಳಿತದ ವಿರುದ್ಧ ಧಿಕ್ಕಾರದ ಘೋಷಣೆ ಕನ್ನಡಪ್ರಭ ವಾರ್ತೆ, ಚಾಮರಾಜನಗರ ಜಿಲ್ಲೆಯ ಕೃಷಿ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ನೀಡುವಲ್ಲಿ ವಿಫಲವಾಗಿರುವ ಚೆಸ್ಕಾಂ ಅಧಿಕಾರಿಗಳ ವಿರುದ್ಧ ಜಿಲ್ಲಾ ರೈತ ಸಂಘದ ಪದಾಧಿಕಾರಿಗಳು ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿ ನಿನ್ನೆಯಿಂದ ಆಹೋರಾತ್ರಿ ಧರಣಿ ಆರಂಭಿಸಿದ್ದು, 2ನೇ ದಿನವಾದ ಬುಧವಾರ ಸರ್ಕಾರ ಹಾಗೂ ಚೆಸ್ಕಾಂ ಹಾಗೂ ಜಿಲ್ಲಾಡಳಿತದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗುತ್ತಾ ಧರಣಿ ಮುಂದುವರಿಸಿದ್ದಾರೆ. ಈ ಸಂದರ್ಭದಲ್ಲಿ ರೈತ ನಾಯಕರಾದ ಮಹೇಶ್‌ಪ್ರಭು ಮಾತನಾಡಿ, ಜಿಲ್ಲೆಯ ಕೃಷಿ ಪಂಪ್‌ಸೆಟ್ ಗಳಿಗೆ ಕೇವಲ ಒಂದರಿಂದ 2 ಗಂಟೆ ಮಾತ್ರ ವಿದ್ಯುತ್ ಪೂರೈಕೆ ಆಗುತ್ತಿದ್ದು ಬೆಳೆಗಳಾದ ಕಬ್ಬು, ಬಾಳೆ, ತೆಂಗು, ಅರಿಶಿನ, ಮೆಕ್ಕೆಜೋಳ, ರಾಗಿ, ತರಕಾರಿ ಬೆಳೆಗಳು, ನೀರು ಹಾಯಿಸಲಾಗಿದೆ. ರೈತರು ಪರದಾಡುತ್ತಿದ್ದಾರೆ ಎಂದರು. ಅಧಿಕಾರಕ್ಕೆ ಬರುವ ಮುಂಚೆ ರೈತರ ಕೃಷಿ ಪಂಪ್‌ಸೆಟ್‌ಗಳಿಗೆ 10 ತ್ರೀಪೇಸ್ ವಿದ್ಯುತ್ ನೀಡಲಾಗುತ್ತದೆ ಎಂದು ಸುಳ್ಳು ಹೇಳಿ ಈಗ 1 ಗಂಟೆಯನ್ನು ಸರ್ಕಾರ ನೀಡುತ್ತಿಲ್ಲ, 7 ಗಂಟೆ ವಿದ್ಯುತ್ ಪೂರೈಕೆಗೆ ಆದೇಶವಿದ್ದರು ಚೆಸ್ಕಾಂನವರು 2 ಗಂಟೆ ವಿದ್ಯುತ್‌ನ್ನು ಸಮರ್ಪಕವಾಗಿ ನೀಡುತ್ತಿಲ್ಲ ಎಂದು ಆರೋಪಿಸಿದರು. ಜಿಲ್ಲೆಯ ಜನಪ್ರತಿನಿಧಿಗಳಂತೂ ಕಿಂಚಿತ್ತು ರೈತರ ಮತ್ತು ರೈತರ ಬೆಳೆಗಳ ಬಗ್ಗೆ ಗಮಹರಿಸುತ್ತಿಲ್ಲ, ಜಿಲ್ಲೆಯನ್ನು ಸಂಪೂರ್ಣ ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡುತ್ತಿಲ್ಲ, ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದ್ದಾರೆ ಎಂದರು. ಮಂಗಳವಾರ ಚೆಸ್ಕಾಂ ಎಂಡಿ ಬಂದು ರೈತರೊಂದಿಗೆ ನಡೆಸಿದ ಸಭೆಯಲ್ಲಿ ಯಾವುದೇ ಸ್ಪಷ್ಟ ಉತ್ತರ ನೀಡದೇ ಹೋಗಿದ್ದಾರೆ. ಸಮರ್ಪಕ ವಿದ್ಯುತ್ ಬಗ್ಗೆ ಸ್ಪಷ್ಟತೆ ಸಿಗುವವರೆಗೂ ನಮ್ಮ ಧರಣಿ ಮುಂದುವರಿಯುತ್ತದ ಎಂದರು. ಮುಖಂಡ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಮಾತನಾಡಿ ಜಿಲ್ಲೆಯ ಸುಮಾರು 75 ಸಾವಿರಕ್ಕೂ ಹೆಚ್ಚು ಕೃಷಿ ಪಂಪ್‌ಸೆಟ್‌ಗಳಲ್ಲಿ ಸುಮಾರು 3 ಲಕ್ಷಕ್ಕೂ ಹೆಚ್ಚು ಬೆಳೆ ಪ್ರದೇಶಕ್ಕೆ ಬೇಕಾದ ನೀರಿನ ಪ್ರಮಾಣದಲ್ಲಿ ತೊಂದರೆಯಾಗಿದೆ, ಅಸಮರ್ಪಕ ವಿದ್ಯುತ್ ಪೂರೈಕೆಯಿಂದಾಗಿ ನೀರಿಲ್ಲದೆ ಒಣಗುತ್ತಿವೆ ಎಂದರು. ಕೃಷಿ ಪಂಪ್‌ಸೆಟ್‌ಗಳಿಗೆ ೧೦ ಗಂಟೆ ಪೂರೈಸಬೇಕು ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳು ತಕ್ಷಣ ಈ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ, ಎಲ್ಲಾ ರೈತ ಸಂಘಟನೆಳು ಒಗ್ಗೂಡಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳುವುದರ ಜೊತೆಗೆ, ಜನಪ್ರತಿಧಿಗಳು ಭಾಗವಹಿಸು ಎಲ್ಲಾ ಕಾರ್ಯಕ್ರಮಗಳಿಗೂ ಬಹಿಷ್ಕರಿಸುವ ಜೊತೆಗೆ ಕಪ್ಪು ಬಾವುಟ ಪ್ರದರ್ಶಿಸುತ್ತೇವೆ ಎಂದರು. ಪ್ರತಿಭಟನೆಯಲ್ಲಿ ಹೊನ್ನೂರು ಪ್ರಕಾಶ್, ಮಹೇಶ್‌ಕುಮಾರ್, ಸಿದ್ದರಾಜು, ಬಸವಣ್ಣ ಸೇರಿದಂತೆ ನೂರಕ್ಕೂ ಹೆಚ್ಚು ರೈತರು ಭಾಗವಹಿಸಿದ್ದು, ಅಹೋರಾತ್ರಿ ಧರಣಿ ಮುಂದುವರಿದಿದೆ. ------ 11ಸಿಎಚ್‌ಎನ್51 ಜಿಲ್ಲೆಯ ಕೃಷಿ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ನೀಡುವಲ್ಲಿ ವಿಫಲವಾಗಿರುವ ಚೆಸ್ಕಾಂ ಅಧಿಕಾರಿಗಳ ವಿರುದ್ಧ ಜಿಲ್ಲಾ ರೈತ ಸಂಘದ ಪದಾಧಿಕಾರಿಗಳು ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿ ಆಹೋರಾತ್ರಿ ಧರಣಿ ನಡೆಸುತ್ತಿರುವುದು.