ಆಳಂದ 1 ಮತ ಡಿಲೀಟ್‌ಗೆ ₹80 ಬೆಲೆ!

KannadaprabhaNewsNetwork |  
Published : Oct 24, 2025, 02:00 AM ISTUpdated : Oct 24, 2025, 04:18 AM IST
ಮತ | Kannada Prabha

ಸಾರಾಂಶ

  ಆಳಂದ ಕ್ಷೇತ್ರದ ಮತಗಳವು ಪ್ರಕರಣಕ್ಕೆ ಇದೀಗ ಹೊಸ ತಿರುವು ಸಿಕ್ಕಿದೆ. ಕ್ಷೇತ್ರದಲ್ಲಿ ಮತ ಅಳಿಸಿ ಹಾಕುವ ಸಂಬಂಧ ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಸಲು ಕಲಬುರಗಿ ನಗರದ ಅಲ್ಪಸಂಖ್ಯಾತ ಸಮುದಾಯದ ಮುಖಂಡನೊಬ್ಬ ಕಾಲ್‌ ಸೆಂಟರ್ ತೆರೆದಿದ್ದು, ಪ್ರತಿ ಅರ್ಜಿಗೆ ಸೆಂಟರ್‌ನ ಸಿಬ್ಬಂದಿಗೆ 80 ರು. ಸಂದಾಯವಾಗಿದೆ 

 ಬೆಂಗಳೂರು :  ದೇಶಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿರುವ ಳಂದ ವಿಧಾನಸಭಾ ಕ್ಷೇತ್ರದ ಮತಗಳವು ಪ್ರಕರಣಕ್ಕೆ ಇದೀಗ ಹೊಸ ತಿರುವು ಸಿಕ್ಕಿದೆ. ಕ್ಷೇತ್ರದಲ್ಲಿ ಮತ ಅಳಿಸಿ ಹಾಕುವ ಸಂಬಂಧ ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಸಲು ಕಲಬುರಗಿ ನಗರದ ಅಲ್ಪಸಂಖ್ಯಾತ ಸಮುದಾಯದ ಮುಖಂಡನೊಬ್ಬ ಕಾಲ್‌ ಸೆಂಟರ್ ತೆರೆದಿದ್ದು, ಪ್ರತಿ ಅರ್ಜಿಗೆ ಸೆಂಟರ್‌ನ ಸಿಬ್ಬಂದಿಗೆ 80 ರು. ಸಂದಾಯವಾಗಿದೆ ಎಂಬುದು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಈ ಮತಕಳವು ಜಾಲದ ‘ಮಾಸ್ಟರ್ ಮೈಂಡ್’ ಎನ್ನಲಾದ, ಕಲಬುರಗಿ ನಗರದ ಮೊಹಮ್ಮದ್ ಅಶ್ಫಕ್‌ ಎಂಬಾತನೇ ಕಾಲ್‌ ಸೆಂಟರ್ ನಡೆಸಿದ್ದು, ಈ ಕೃತ್ಯ ಬೆಳಕಿಗೆ ಬಂದ ನಂತರ ದುಬೈಗೆ ಪರಾರಿಯಾಗಿದ್ದಾನೆ. ಆತನ ಪತ್ತೆಗೆ ಎಸ್‌ಐಟಿ ಇದೀಗ ಇಂಟರ್‌ಪೋಲ್‌ ನೆರವು ಕೇಳಲು ಮುಂದಾಗಿದೆ ಎನ್ನಲಾಗಿದೆ.

6,018 ಮತಗಳವು:

2022ರ ಡಿಸೆಂಬರ್ ಹಾಗೂ 2023ರ ಫೆಬ್ರವರಿ ತಿಂಗಳಲ್ಲಿ ಆಳಂದ ಕ್ಷೇತ್ರದ 6,018 ಮತಗಳ ರದ್ದತಿ ಕೋರಿ ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಕೆಯಾಗಿದ್ದವು. ಈ ಅರ್ಜಿಯನ್ನು ಸ್ಥಳೀಯರ ಹೆಸರಿನಲ್ಲಿ ಭರ್ತಿ ಮಾಡಿ ಕಾಲ್ ಸೆಂಟರ್‌ನ ಡೇಟಾ ಆಪರೇಟರ್‌ಗಳು ಸಲ್ಲಿಸಿದ್ದು, ಪ್ರತಿ ಅರ್ಜಿಗೆ 80 ರು. ನಂತೆ ಒಟ್ಟು ಅವರಿಗೆ 4.8 ಲಕ್ಷ ರು. ಹಣ ಪಾವತಿಯಾಗಿದೆ ಎನ್ನಲಾಗಿದೆ.

ಇನ್ನು ಮತ ರದ್ದತಿಗೆ ಸಲ್ಲಿಕೆಯಾಗಿದ್ದ 6 ಸಾವಿರ ಅರ್ಜಿಗಳ ಪೈಕಿ ಕೇವಲ 24 ಅರ್ಜಿಗಳಲ್ಲಿ ಮಾತ್ರ ಮೂಲ ಅರ್ಜಿದಾರರು ಪತ್ತೆಯಾಗಿದ್ದಾರೆ. ಆ ಮತದಾರರಿಗೆ ತಿಳಿಯದಂತೆ ಅವರ ಹೆಸರಲ್ಲಿ ಮತದಾರರ ಪಟ್ಟಿಯಿಂದ ಹೆಸರು ಕೈ ಬಿಡುವಂತೆ ಅಪರಿಚಿತರು ಅರ್ಜಿ ಸಲ್ಲಿಸಿದ್ದರು.

ಪ್ರಕರಣದ ತನಿಖೆಗಿಳಿದ ಎಸ್‌ಐಟಿ, ಮತ ಕಳವು ಜಾಲವನ್ನು ಶೋಧಿಸಿದಾಗ ಕಲಬುರಗಿ ನಗರದಲ್ಲಿ ಅಶ್ಫಕ್‌ ನಡೆಸುತ್ತಿದ್ದ ಕಾಲ್‌ ಸೆಂಟರ್‌ ಪತ್ತೆಯಾಗಿದೆ. ಇದೇ ಪ್ರಕರಣದಲ್ಲಿ ಮೊದಲು ತನಿಖೆ ನಡೆಸಿದ್ದ ಸಿಐಡಿ ಅಧಿಕಾರಿಗಳು, ಅಶ್ಫಕ್‌ನನ್ನು ವಿಚಾರಣೆ ನಡೆಸಿ ಕೆಲ ದಾಖಲೆ ಜಪ್ತಿ ಮಾಡಿದ್ದರು. ಆಗ ತಾನು ಕಾಲ್‌ಸೆಂಟರ್‌ನ ಡಿವೈಸ್‌ಗಳನ್ನು ತಂದು ಒಪ್ಪಿಸುವುದಾಗಿ ಹೇಳಿದ್ದ ಅಶ್ಫಕ್‌, ನಂತರ ದುಬೈಗೆ ಪರಾರಿಯಾಗಿದ್ದಾನೆ. ಈಗ ಆತನ ಪತ್ತೆಗೆ ಇಂಟರ್‌ಪೋಲ್‌ ಮೂಲಕ ಎಸ್‌ಐಟಿ ಬಲೆ ಬೀಸಿದೆ ಎಂದು ತಿಳಿದು ಬಂದಿದೆ.

ಸಹಚರರ ಜತೆ ಸಂಪರ್ಕ:

ಮತಕಳವು ಪ್ರಕರಣ ಸಂಬಂಧ ಅಕ್ರಂ ಸೇರಿ ನಾಲ್ವರ ಮನೆಗಳ ಮೇಲೆ ಎಸ್‌ಐಟಿ ದಾಳಿ ನಡೆಸಿತ್ತು. ಆಗ ಪತ್ತೆಯಾದ ಎಲೆಕ್ಟ್ರಾನಿಕ್ ಡಿವೈಸ್‌ಗಳನ್ನು ಪರಿಶೀಲಿಸಿದಾಗ ಅಶ್ಫಕ್‌ ಜತೆ ಆತನ ಸಹಚರರು ನಿಕಟ ಸಂಪರ್ಕದಲ್ಲಿರುವ ಸಂಗತಿ ಗೊತ್ತಾಗಿದೆ. ಆಗಲೇ ಕಲಬುರಗಿ ಭಾಗದಲ್ಲಿ ವಿಧಾನಸಭಾ ಚುನಾವಣೆ ವೇಳೆ ಮತಕಳ್ಳತನಕ್ಕೆ ಕಾಲ್ ಸೆಂಟರ್‌ ಅನ್ನು ಅಶ್ಫಕ್ ನಡೆಸುತ್ತಿದ್ದುದು ಬಯಲಾಗಿದೆ. ಈ ಸೆಂಟರ್ ಅನ್ನು ಅಶ್ಪಕ್ ಹಾಗೂ ಅಕ್ರಂ ನಿರ್ವಹಿಸುತ್ತಿದ್ದು, ಇನ್ನುಳಿದವರು ಡಾಟಾ ಆಪರೇಟರ್‌ಗಳಾಗಿ ಕೆಲಸ ಮಾಡುತ್ತಿದ್ದರು. ಅರ್ಜಿ ಸಲ್ಲಿಕೆಗೆ ಲ್ಯಾಪ್‌ಟಾಪ್‌ಗಳು ಬಳಕೆಯಾಗಿವೆ. ಅಲ್ಲದೆ ಆಳಂದ ಕ್ಷೇತ್ರದ ಮತ ರದ್ದತಿಗೆ ತಮಗೆ ಮತ ಹಾಕದವರ ಕುರಿತು ವಿವರವನ್ನು ಈ ಗ್ಯಾಂಗ್‌ಗೆ ರಾಜಕೀಯ ಮುಖಂಡರು ರವಾನಿಸಿದ್ದರು ಎಂದು ತಿಳಿದು ಬಂದಿದೆ. ಪರಾರಿಯಾಗಿರುವ ಅಶ್ಫಕ್‌ ತನ್ನ ಸಹಚರ ಮೊಹಮ್ಮದ್ ಅಕ್ರಂ ಸೇರಿ ಕೆಲವರ ಜತೆ ಇಂಟರ್ ನೆಟ್ ಕಾಲ್ ಮೂಲಕ ಅಶ್ಫಕ್ ಸಂಪರ್ಕದಲ್ಲಿದ್ದಾನೆ ಎನ್ನಲಾಗಿದೆ.

ಅಶ್ಫಕ್ ಗ್ಯಾಂಗ್‌ನಿಂದ ಲಭ್ಯವಾದ ಮಾಹಿತಿ ಆಧರಿಸಿಯೇ ಬಿಜೆಪಿಯ ಮಾಜಿ ಶಾಸಕ ಸುಭಾಷ್ ಗುತ್ತೇದಾರ್, ಅವರ ಮಕ್ಕಳಾದ ಸಂತೋಷ್ ಗುತ್ತೇದಾರ್, ಹರ್ಷಾನಂದ ಗುತ್ತೇದಾರ್ ಹಾಗೂ ಲೆಕ್ಕಪರಿಶೋಧಕ ಮಲ್ಲಿಕಾರ್ಜುನ ಮಹಂತಗೊಳ್ ಮನೆಗಳ ಮೇಲೆ ಎಸ್‌ಐಟಿ ದಾಳಿ ನಡೆಸಿತ್ತು. ಆಗ 7 ಲ್ಯಾಪ್‌ಟಾಪ್‌ಗಳು ಹಾಗೂ ಮೊಬೈಲ್‌ಗಳು ಜಪ್ತಿಯಾಗಿವೆ ಎಂದು ಮೂಲಗಳು ತಿಳಿಸಿವೆ.

 ಕೋಳಿ ಫಾರಂ ಕಾರ್ಮಿಕರು

ಮತ ರದ್ದತಿಗೆ ಅರ್ಜಿ ಸಲ್ಲಿಸಿದ್ದವರ ಪೈಕಿ 70 ಮೊಬೈಲ್ ನಂಬರ್‌ಗಳು ಸಿಕ್ಕಿವೆ. ಈ ಮೊಬೈಲ್ ನಂಬರ್‌ಗಳಿಗೆ ಕರೆ ಮಾಡಿದರೆ ಬಹುತೇಕರು ಕೋಳಿ ಫಾರಂ ಕೆಲಸಗಾರರಾಗಿದ್ದಾರೆ. ಅಲ್ಲದೆ ಇದರಲ್ಲಿ ಪೊಲೀಸ್ ಅಧಿಕಾರಿಯೊಬ್ಬರ ಸಂಬಂಧಿಕರೂ ಇದ್ದಾರೆ ಎಂದು ತಿಳಿದು ಬಂದಿದೆ.

ಕಲಬುರಗಿಯ ಮತ್ತೆರಡು ಕ್ಷೇತ್ರದಲ್ಲೂ ಮತಗಳವು?

ಬೆಂಗಳೂರು ಆಳಂದ ಮತಗಳವು ಯತ್ನ ಬಯಲಾದ ಬೆನ್ನಲ್ಲೇ ಅದೇ ಜಿಲ್ಲೆಯ ಮತ್ತೆರಡು ವಿಧಾನಸಭಾ ಕ್ಷೇತ್ರಗಳಲ್ಲೂ ಮತ ಅಳಿಸಿ ಹಾಕುವ ಪ್ರಯತ್ನ ನಡೆದಿತ್ತು ಎಂಬ ಅನುಮಾನ ವಿಶೇಷ ತನಿಖಾ ತಂಡದ (ಎಸ್ಐಟಿ) ತನಿಖೆಯಲ್ಲಿ ವ್ಯಕ್ತವಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಲಬುರಗಿ ಉತ್ತರ ಹಾಗೂ ದಕ್ಷಿಣ ಕ್ಷೇತ್ರಗಳಲ್ಲಿ ಮತ ಕಳವು ಯತ್ನ ಶಂಕೆ ಮೂಡಿದ್ದು, ಇದಕ್ಕೆ ಕೆಲ ದಾಖಲೆಗಳು ಆಳಂದ ಪ್ರಕರಣದ ತನಿಖೆ ವೇಳೆ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಈ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಹುರಿಯಾಳುಗಳು ಗೆಲುವು ಸಾಧಿಸಿದ್ದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

‘ಮುಂದಿನ ಸಿಎಂ ಯಾರು?’ ಎನ್ನುವ ಬಗ್ಗೆಯೂ ರಾಜ್ಯದಲ್ಲಿ ಬೆಟ್ಟಿಂಗ್‌ - ನಿಯಂತ್ರಿಸಿ'
ಕ್ರೈಂ ಹೆಚ್ಚಳಕ್ಕೆ ಸಿಬ್ಬಂದಿ ಕೊರತೆ ಕಾರಣ : ಡಾ.ಜಿ.ಪರಮೇಶ್ವರ್‌