ಪೋಷಕರು, ಸಂಬಂಧಿಕರಿಂದ ಕಾಲೇಜು ಬಳಿ ಪ್ರತಿಭಟನೆ । ಮೃತ ಗಜೇಂದ್ರ ಚಿಕ್ಕಬಳ್ಳಾಪುರ ಬಿಜಿಎಸ್ ಕಾಲೇಜಿನ ಡಿಪ್ಲೋಮಾ ವಿದ್ಯಾರ್ಥಿ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರಉಪನ್ಯಾಸಕನ ವಿರುದ್ಧ ವಿದ್ಯಾರ್ಥಿಯೊಬ್ಬ ಸೆಲ್ಫಿ ವೀಡಿಯೋ ಮೂಲಕ ಗಂಭೀರ ಆರೋಪ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದು, ಅಂತ್ಯ ಸಂಸ್ಕಾರದ ನಂತರ ಮೃತ ವಿದ್ಯಾರ್ಥಿ ಪೋಷಕರು ಮತ್ತು ಸಂಬಂಧಿಕರಿಂದ ಕಾಲೇಜು ಬಳಿ ಪ್ರತಿಭಟನೆ ನಡೆಸಿದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆಯಿತು.
ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಮಲ್ಲಹಳ್ಳಿ ಗ್ರಾಮದ ಲಲಿತಮ್ಮ ಮತ್ತು ದೇವರಾಜು ದಂಪತಿಯ ಪುತ್ರ ಗಜೇಂದ್ರ(18) ಆತ್ಮಹತ್ಯೆ ಮಾಡಿಕೊಂಡಿರುವ ಡಿಪ್ಲೋಮಾ ವಿದ್ಯಾರ್ಥಿ. ಈತ ಚಿಕ್ಕಬಳ್ಳಾಪುರ ನಗರ ಹೊರವಲಯದ ಬಿಜಿಎಸ್ ಖಾಸಗಿ ಕಾಲೇಜಿನಲ್ಲಿ ಡಿಪ್ಲೋಮಾ ಮೆಕ್ಯಾನಿಕಲ್ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದನು. ವಿದ್ಯಾರ್ಥಿ ಗಜೇಂದ್ರ ಉಪನ್ಯಾಸಕ ಮುಂಜುನಾಥ್ ವಿರುದ್ಧ ಕಿರುಕುಳದ ಆರೋಪ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಆರೋಪವೇನು?:
ಉಪನ್ಯಾಸಕ ಮಂಜುನಾಥ್ ವಿನಾಕಾರಣ ವೈಯಕ್ತಿಕವಾಗಿ ಕಿರುಕುಳ ಕೊಡುತ್ತಿದ್ದರು. ಅಲ್ಲದೇ ಪದೇ ಪದೇ ಹಲ್ಲೆ ಮಾಡುವುದು, ಅಸೈನ್ ಮೆಂಟ್ ಬುಕ್ ಹರಿದು ಹಾಕಿ ಉಳಿದ ವಿದ್ಯಾರ್ಥಿಗಳೆದುರು ಮರ್ಯಾದೆ ತೆಗೆದಿರುವುದಾಗಿ ಗಜೇಂದ್ರ ಸೆಲ್ಫೀ ವಿಡಿಯೋದಲ್ಲಿ ಆರೋಪಿಸಿದ್ದಾನೆ. ನನ್ನ ಸಾವಿಗೆ ಉಪನ್ಯಾಸಕ ಮಂಜುನಾಥ್ ಕಾರಣ. ಅವರು ನೀಡುವ ಮಾನಸಿಕ, ದೈಹಿಕ ಕಿರುಕುಳದಿಂದ ನನ್ನ ಮರ್ಯಾದೆ ಹೋಯಿತು. ಅದೇ ಕಾರಣಕ್ಕೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ವೀಡಿಯೋದಲ್ಲಿ ಗಜೇಂದ್ರ ತಿಳಿಸಿದ್ದಾನೆ.ಬುಧವಾರ ರಾತ್ರಿ ಒಂದು ವೀಡಿಯೋ ಹಾಗೂ ಗುರುವಾರ ಬೆಳಗ್ಗೆ ಮತ್ತೊಂದು ವೀಡಿಯೋ ಸೇರಿದಂತೆ ಎರಡು ವೀಡಿಯೋ ಮಾಡಿ ತನ್ನ ಸ್ನೇಹಿತರು ಮತ್ತಿತರರಿಗೆ ವಾಟ್ಸ್ಅಪ್ ಮೂಲಕ ಹರಿಬಿಟ್ಟು, ನಂತರ ಗಜೇಂದ್ರ ತನ್ನ ಮನೆಯ ಎದುರಿಗಿರುವ ಹಳೆಯ ಮನೆಯೊಂದರಲ್ಲಿ ನೇಣಿಗೆ ಶರಣಾಗಿದ್ದಾನೆ.
ಆದರೆ, ಶುಕ್ರವಾರ ಬೆಳಗ್ಗೆ ಗಜೇಂದ್ರ ಮೊಬೈಲ್ ಪರಿಶೀಲನೆ ಮಾಡಿದಾಗ ಸೆಲ್ಫಿ ವೀಡಿಯೋ ಪತ್ತೆಯಾಗಿದ್ದು, ಸಾವಿನ ಸತ್ಯ ಬಯಲಾಗಿದೆ. ವಿಚಾರ ತಿಳಿಯುತ್ತಿದ್ದಂತೆಯೇ ಗಜೇಂದ್ರ ಪೊಷಕರು, ಸಂಬಂಧಿಕರು ಹಾಗೂ ಸಹಪಾಠಿಗಳಿಂದ ಬಿಜಿಎಸ್ ಪಾಲಿಟೆಕ್ನಿಕ್ ಕಾಲೇಜಿಗೆ ಮುತ್ತಿಗೆ ಹಾಕಿ ಪ್ರತಿಭಟನಾ ಧರಣಿ ನಡೆಸಿ, ಉಪನ್ಯಾಸಕ ಮಂಜುನಾಥ್ ರನ್ನ ಕರೆಸುವಂತೆ ಆಗ್ರಹಿಸಿದರು. ಹಾಗೂ ಪಾಲಿಟೆಕ್ನಿಕ್ ಪ್ರಾಂಶುಪಾಲರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.ಈ ವೇಳೆ ಬಿಜಿಎಸ್ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಕೆಲ ಕಾಲ ಉದ್ವಿಗ್ನ ವಾತಾವರಣ ನಿರ್ಮಾಣಗೊಂಡಿತ್ತು. ಪರಿಸ್ಥಿತಿ ಕೈ ಮೀರುತ್ತಿರುವುದನ್ನು ಅರಿತ ಕಾಲೇಜು ಆಡಳಿತ ಮಂಡಳಿ ಪೋಲಿಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ನಂದಿಗಿರಿಧಾಮ ಪೋಲಿಸ್ ಠಾಣೆ, ಚಿಕ್ಕಬಳ್ಳಾಪುರ ನಗರ ಮತ್ತು ಗ್ರಾಮಾಂತರ ಠಾಣಾ ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರತಿಭಟನಾಕಾರರ ಮನವೊಲಿಸಲು ಯತ್ನಿಸಿದಾಗ, ಪೋಲಿಸರು ಮತ್ತು ಪ್ರತಿಭಟನಕಾರರ ನಡುವೆ ವಾಗ್ವಾದ ನಡೆಯಿತು.
ಕೊನೆಗೂ ಪೊಲೀಸರು ತನಿಖೆ ನಡೆಸುವುದಾಗಿ ಪ್ರತಿಭಟನಾಕಾರರ ಮನವೊಲಿಸುವಲ್ಲಿ ಸಫಲರಾಗಿದ್ದು, ಮೃತ ಗಜೇಂದ್ರನ ಪೋಷಕರು,ವಿದ್ಯಾರ್ಥಿಗಳು ಪ್ರತಿಭಟನೆಯನ್ನು ವಾಪಸು ಪಡೆದಿದ್ದಾರೆ.----
ಸಿಕೆಬಿ-2 ಮೃತ ವಿದ್ಯಾರ್ಥಿ ಗಜೇಂದ್ರಸಿಕೆಬಿ-3 ಉಪನ್ಯಾಸಕ ಮಂಜುನಾಥ್
ಸಿಕೆಬಿ-4 ಮೃತ ವಿದ್ಯಾರ್ಥಿ ಗಜೇಂದ್ರನ ಪೋಷಕರು, ಸಂಬಂಧಿಕರು ಹಾಗೂ ಸಹಪಾಠಿಗಳು ಬಿಜಿಎಸ್ ಪಾಲಿಟೆಕ್ನಿಕ್ ಕಾಲೇಜಿಗೆ ಮುತ್ತಿಗೆ ಹಾಕಿ ಪ್ರತಿಭಟನಾ ಧರಣಿ ನಡೆಸಿದರು.