ಕೋಲಾರ : ಕುತಂತ್ರ, ತಂತ್ರಗಾರಿಕೆಗಳ ನಡುವೆ ನೈತಿಕತೆಗೆ ಸೋಲಾಗಿದ್ದು, ಇದರಿಂದ ನಾನು ಕಂಗಾಲಾಗಿಲ್ಲ, ಆತ್ಮವಿಶ್ವಾಸ ವೃದ್ಧಿಯಾಗಿದ್ದು, ಶಿಕ್ಷಕರ ಸೇವೆಯನ್ನು ಮುಂದುವರೆಸಿಕೊಂಡು ಹೋಗುತ್ತೇನೆ, ನನಗೆ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ಸಲ್ಲಿಸುವುದಾಗಿ ವಿಧಾನಪರಿಷತ್ ಮಾಜಿ ಮುಖ್ಯ ಸಚೇತಕ ಡಾ.ವೈ.ಎ.ನಾರಾಯಣಸ್ವಾಮಿ ತಿಳಿಸಿದರು.ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿನ ಸೋಲಿನಿಂದ ನಾನು ಧೃತಿಗೆಟ್ಟಿಲ್ಲ, ಮೂರು ಅವಧಿ ವಿಧಾನಪರಿಷತ್ ಸದಸ್ಯನಾಗಿ ಒಂದು ಅವಧಿ ಶಾಸಕನಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ, ಯಾರಿಂದಲೂ ಲಂಚ ಪಡೆದಿಲ್ಲ ಎಂದು ಆತ್ಮವಿಶ್ವಾಸದಿಂದ ಹೇಳುತ್ತೇನೆ ಎಂದರು.ಕೋವಿಡ್ ವೇಳೆ ಶಿಕ್ಷಕರಿಗೆ ನೆರವು
ನನ್ನ ಅವಧಿಯಲ್ಲಿ ಶಿಕ್ಷಕರಿಗೆ ನೆರವಾಗಿದ್ದೇನೆ, ಕಷ್ಟದಲ್ಲಿರುವ, ರೋಗಕ್ಕೆ ತುತ್ತಾಗಿರುವವರಿಗೆ ನೆರವು ನೀಡಿದ್ದೇನೆ, ಕೋವಿಡ್ ಸಂದರ್ಭದಲ್ಲಿ ಖಾಸಗಿ ಶಾಲಾ ಶಿಕ್ಷಕರಿಗಾಗಿ ಅಂದು ಸಿಎಂ ಆಗಿದ್ದ ಯಡಿಯೂರಪ್ಪ ಅವರ ಮೇಲೆ ಒತ್ತಡ ವಿಶೇಷ ಕಾನೂನು ಮಾಡಿಸಿ ೧೦೦ ಕೋಟಿ ಬಿಡುಗಡೆ ಮಾಡಿ ತಲಾ ೫ ಸಾವಿರ ವಿತರಿಸಲು ಕ್ರಮವಹಿಸಿದ್ದೇನೆ ಎಂದು ಸ್ಮರಿಸಿದರು.ಸಾವಿರ ಶಾಲೆಗಳಿಗೆ ವಾಟರ್‌ಫಿಲ್ಟರ್ ಕೊಡಿಸಿದ್ದೇನೆ, ಶಿಕ್ಷಕರ ಸಮಸ್ಯೆಗಳಿಗೆ ಸದಾ ನೆರವಾಗಿದ್ದೇನೆ ಎಂದು ತಿಳಿಸಿ, ನನ್ನ ಸೋಲಿನಿಂದ ನಿರಾಸೆಯಾಗಿಲ್ಲ, ಇನ್ನೂ ಆತ್ಮವಿಶ್ವಾಸ ಹೆಚ್ಚಿದೆ, ಪಕ್ಷದ ಕಾರ್ಯಕರ್ತನಾಗಿ, ಶಿಕ್ಷಕರ ಸಮಸ್ಯೆಗಳ ನಿವಾರಣೆಗೆ ಹೋರಾಡುವ ಶಕ್ತಿ, ಅಧಿಕಾರಿಗಳ ಮೇಲೆಒತ್ತಡ ಹಾಕಿ ಕೆಲಸ ಮಾಡಿಸಿಕೊಡುವ ಶಕ್ತಿ ನನಗಿದೆ ಎಂದರು.ಶಿಕ್ಷಕರ ಕಷ್ಟಕ್ಕೆ ಧ್ವನಿಯಾಗುವೆ
ಕೆಲವೇ ದಿನಗಳಲ್ಲಿ ವೈಎಎನ್ ನಮ್ಮೊಂದಿಗೆ ಹೇಗಿದ್ದರೂ, ಹೊಸಬರು ಹೇಗಿರುತ್ತಾರೆ ಎಂಬ ಸತ್ಯದ ಅರಿವು ಆಗುತ್ತದೆ ಎಂದ ಅವರು, ಸದಾ ನನ್ನ ಜತೆಗಿದ್ದು, ರಾಜಕಾರಣದಲ್ಲಿ ಹಿರಿತನ ತಂದುಕೊಟ್ಟಿದ್ದೀರಿ, ಧ್ವನಿ ನೀಡಿದ್ದೀರಿ ನಿಮ್ಮ ಕಷ್ಟಗಳಿಗೆ ಸದಾ ನಿಮ್ಮೊಂದಿಗೆ ಇರುವೆ ಎಂದರು.ನನ್ನಿಂದ ಸಹಾಯ ಪಡೆದವರೂ ಸ್ಥಳೀಯವಾಗಿ ಅವರವರ ನಡುವಿನ ವಿರೋಧಗಳಿಂದ ದೂರವಾಗಿ ಕೆಲಸ ಮಾಡಿದ್ದಾರೆ, ನನ್ನ ವಿರೋಧಿಗಳಿಗೂ, ಹಿತಶತ್ರುಗಳಿಗೂ ದೇವರು ಒಳ್ಳೆಯದು ಮಾಡಲಿ, ರಾಜಕಾರಣ ನಿಂತ ನೀರಲ್ಲ, ಇನ್ನೂ ಅವಕಾಶಗಳಿವೆ, ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದರು.ಬಿಜೆಪಿ ಮುಖಂಡ ವಾಸುದೇವ್, ಕೂಡಾ ಮಾಜಿ ಅಧ್ಯಕ್ಷ ವಿಜಯಕುಮಾರ್, ವಕೀಲ ಮಾಗೇರಿ ನಾರಾಯಣಸ್ವಾಮಿ, ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕಿ ಅರುಣಮ್ಮ ಮತ್ತಿತರರಿದ್ದರು.