ಕರ್ನಾಟಕದ ಚುನಾಯಿತ ಸರ್ಕಾರವನ್ನು ಕಿತ್ತು ಬಿಜೆಪಿಯನ್ನು ಅಧಿಕಾರಕ್ಕೆ ತರುವ ಹುನ್ನಾರ : ಮಹದೇವಪ್ಪ ಕಿಡಿ

KannadaprabhaNewsNetwork | Updated : Aug 20 2024, 04:33 AM IST

ಸಾರಾಂಶ

ದೆಹಲಿಯ ಬಿಜೆಪಿ-ಜೆಡಿಎಸ್ ನಾಯಕರು ಕರ್ನಾಟಕದ ಚುನಾಯಿತ ಸರ್ಕಾರವನ್ನು ಕಿತ್ತು ಬಿಜೆಪಿಯನ್ನು ಅಧಿಕಾರಕ್ಕೆ ತರುವ ಹುನ್ನಾರ ನಡೆಸಿದ್ದಾರೆ ಎಂದು ಸಚಿವ ಡಾ.ಎಚ್.ಸಿ. ಮಹದೇವಪ್ಪ ಆರೋಪಿಸಿದ್ದಾರೆ. ರಾಜಭವನವು ರಾಜಕೀಯ ಅಂಗಳವಾಗಿದೆ ಎಂದು ಅವರು ಕಿಡಿಕಾರಿದರು.

  ಮೈಸೂರು ;  ದೆಹಲಿಯಲ್ಲಿ ಕುಳಿತ ಬಿಜೆಪಿ- ಜೆಡಿಎಸ್ ನಾಯಕರು ಯೋಜನೆ ರೂಪಿಸಿ ಚುನಾಯಿತ ಸರ್ಕಾರವನ್ನು ಕಿತ್ತು, ಬಿಜೆಪಿಯನ್ನು ಅಧಿಕಾರಕ್ಕೆ ತರುವ ಹುನ್ನಾರ ಮಾಡುತ್ತಿದ್ದಾರೆ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಕಿಡಿ ಕಾರಿದರು.

ನಗರದ ಗಾಂಧಿ ಚೌಕದಲ್ಲಿ ಸೋಮವಾರ ಕಾಂಗ್ರೆಸ್ ಆಯೋಜಿಸಿದ್ದ ರಾಜ್ಯಪಾಲ ಹಠಾವೋ-ಕರ್ನಾಟಕ ಬಚಾವೋ ಬೃಹತ್ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ಸಂವಿಧಾನದ ಚೌಕಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕಾದ ರಾಜಭವನ ಈಗ ರಾಜಕೀಯ ಅಂಗಳವಾಗಿದೆ ಎಂದು ಆರೋಪಿಸಿದರು.

ದೇಶದ ಹಲವು ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ಅಭಿವೃದ್ಧಿಯಲ್ಲಿ ಮುಂದಿದೆ. ದೇಶದ ಸಂವಿಧಾನ ಜನರ ಮೂಲಭೂತ ಹಕ್ಕು, ಸ್ವಾಭಿಮಾನ, ಬದುಕುವ ಹಕ್ಕನ್ನು ನೀಡಿದೆ. ಸಂವಿಧಾನದ ಮೌಲ್ಯವನ್ನು ಹೇಳಲಾಗಿದೆ. ಜನರ ಆಶೀರ್ವಾದದಿಂದ ಅಧಿಕಾರಕ್ಕೆ ಬಂದ ಸರ್ಕಾರಗಳು ಜನಪರ ಕೆಲಸ ಮಾಡುವಂತೆ ಸೂಚಿಸುತ್ತದೆ. ಆದರೆ, ಕೇಂದ್ರ ಸರ್ಕಾರ ಸಂವಿಧಾನ ನಾಶಮಾಡುವ ಕೆಲಸ ಮಾಡುತ್ತಿದೆ ಎಂದು ಅವರು ದೂರಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ತನಿಖೆ ನಡೆಸಲು ರಾಜ್ಯಪಾಲರು ಅನುಮತಿ ನೀಡಿದ್ದಾರೆ. ಚುನಾಯಿತ ಸರ್ಕಾರವು ಬಿಜೆಪಿ ಜೊತೆ ಇಲ್ಲದಿದ್ದರೆ ಕಿತ್ತು ಹಾಕುವ ಕೆಲಸ ಮಾಡಲಾಗುತ್ತಿದೆ. ಬಿಜೆಪಿಯು ಎಂದಿಗೂ ಜನರ ಬೆಂಬಲದಿಂದ ಅಧಿಕಾರಕ್ಕೆ ಬಾರದೆ ವಾಮಮಾರ್ಗ, ಅಪರೇಷನ್ ಕಮಲ ಮೂಲಕ ಆಡಳಿತಕ್ಕೆ ಬಂದಿದೆ ಎಂದು ಟೀಕಿಸಿದರು.

ಸಂವಿಧಾನದ ಮೇಲೆ ಬಿಜೆಪಿ ನಾಯಕರಿಗೆ ನಂಬಿಕೆ ಇಲ್ಲ. ರಾಜಭವನ ಬಳಸಿಕೊಂಡು ಜನರ ಬೆಂಬಲದಿಂದ ಅಧಿಕಾರಕ್ಕೆ ಬಂದಿರುವ ಸರ್ಕಾರವನ್ನು ಕೆಡವಲು ಜಂಟಿಯಾಗಿ ಹೋರಾಡುತ್ತಿದ್ದಾರೆ. ದಲಿತ ವ್ಯಕ್ತಿ ಹರಾಜಿನಲ್ಲಿ ಖರೀದಿಸಿದ ಭೂಮಿಯನ್ನು ಮಾರಾಟ ಮಾಡಿದರೂ ದಲಿತರ ಜಮೀನು ಮಾರಾಟ ಎಂದು ಹೇಳುತ್ತಿದ್ದಾರೆ. ಅನುಮತಿ ಇಲ್ಲದೆ ಭೂಮಿ ಸ್ವಾಧೀನಪಡಿಸಿಕೊಂಡು ನಿವೇಶನ ರಚಿಸಿದ್ದರಿಂದ ತಪ್ಪೊಪ್ಪಿಗೆ ಪತ್ರ ಕೊಟ್ಟು ಸರಿಪಡಿಸಲು ಬದಲಿ ನಿವೇಶನ ಕೊಡಲಾಗಿದೆಯೇ ಹೊರತು ಪ್ರಭಾವ ಬಳಸಿಲ್ಲ ಎಂದು ಅವರು ಸ್ಪಷ್ಪಪಡಿಸಿದರು.

ಕೇಂದ್ರ ಸಚಿವರಾದ ಎಚ್.ಡಿ. ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ ಅವರು ಹತ್ತು ತಿಂಗಳಲ್ಲಿ ಕರ್ನಾಟಕದಲ್ಲಿ ಹೊಸ ಸರ್ಕಾರ ಬರುತ್ತದೆ ಎನ್ನುವ ಮಾತು ಹೇಳಿರುವುದನ್ನು ನೋಡಿದರೆ ನಿಮಗೆ ಬಹುಮತ ಎಲ್ಲಿದೆ ಎನ್ನುವುದನ್ನು ಜನರ ಎದುರು ಹೇಳಬೇಕು. ರಾಜ್ಯಪಾಲರು ಕೊಟ್ಟಿರುವ ಅನುಮತಿ ಕೇಂದ್ರ ಸರ್ಕಾರದ ಮಾರ್ಗಸೂಚಿಗೆ ವಿರುದ್ಧವಾಗಿದೆ. ಯಾವುದೇ ಸಂಸ್ಥೆಯಿಂದ ತನಿಖೆಗೆ ಒಳಪಡದೆ ಅಥವಾ ಅನುಮತಿ ಕೇಳದಿದ್ದರೂ ಖಾಸಗಿ ವ್ಯಕ್ತಿಯ ದೂರಿನ ಮೇಲೆ ಅನುಮತಿ ನೀಡಿದ್ದು ಸರಿಯಲ್ಲ ಎಂದರು.

ಸಂವಿಧಾನದ ಬಾಹಿರ ನಿಲುವು ಕೈಗೊಂಡ ರಾಜ್ಯಪಾಲರನ್ನು ಕರ್ನಾಟಕದಿಂದ ಕೂಡಲೇ ಹಿಂದಕ್ಕೆ ಕರೆಯಿಸಿಕೊಳ್ಳಬೇಕು. ರಾಜ್ಯಪಾಲರ ಎದುರು ಅನೇಕರ ದೂರುಗಳಿದ್ದರೂ ಅನುಮತಿ ಕೊಟ್ಟಿಲ್ಲ. ಸಾರ್ವಜನಿಕ ಜೀವನದಲ್ಲಿ ಪ್ರಾಮಾಣಿಕ ರಾಜಕಾರಣ ವಾಡುತ್ತಿರುವ ಸಿಎಂ ಸಿದ್ದರಾಮಯ್ಯ ಅವರನ್ನು ಮುಗಿಸಲು ಯತ್ನಿಸಲಾಗುತ್ತಿದೆ. ದಲಿತರ ಬಗ್ಗೆ ಕಾಳಜಿ ತೋರುತ್ತಿರುವ ಬಿಜೆಪಿ ನಾಯಕರು ಆಡಳಿತದಲ್ಲಿ ಇದ್ದಾಗ ಅನುದಾನ ಕಡಿತ ಮಾಡಿದ್ದು ಯಾಕೆ? ಪಿಟಿಸಿ ಕಾಯ್ದೆಯನ್ನು ರದ್ದುಪಡಿಸಿದ್ದು ಯಾಕೆ? ಎಸ್ಇಪಿ, ಟಿಎಸ್ಪಿ ಯೋಜನೆ ಯಾಕೆ ಜಾರಿಗೆ ತರಲಿಲ್ಲ ಎಂದು ಪ್ರಶ್ನಿಸಿದರು.

ರಾಜ್ಯಪಾಲರು ದಬ್ಬಾಳಿಕೆ ಮಾಡುತ್ತಿರುವುದು ಕಂಡು ಬಂದಿದೆ. ಬಿಜೆಪಿ- ಜೆಡಿಎಸ್, ಕೇಂದ್ರ ಸರ್ಕಾರ ಮತ್ತು ಆರ್ಎಸ್ಎಸ್ ಸರ್ಕಾರವನ್ನು ಕೆಡವಲು ಹುನ್ನಾರ ನಡೆಸಿವೆ. ಸುಳ್ಳನ್ನು ನೂರು ಬಾರಿ ಹೇಳಿಕೊಂಡು ಅದನ್ನು ಸತ್ಯವನ್ನಾಗಿಸುವ ಪ್ರಯತ್ನವನ್ನು ಹಿಮ್ಮೆಟ್ಟಿಸಿ ಬಿಜೆಪಿ ನಾಯಕರ ನಿಜಬಣ್ಣ ಬಯಲು ಮಾಡುವುದಾಗಿ ಎಂದು ಎಚ್ಚರಿಸಿದರು.

Share this article