ಲೋಕಸಭೆ ಸ್ಪರ್ಧೆಗೆ ಎಚ್‌.ಡಿ.ದೇವೇಗೌಡರ ಕುಟುಂಬಕ್ಕೆ ಮೊರೆ..!

KannadaprabhaNewsNetwork |  
Published : Jan 24, 2024, 02:00 AM ISTUpdated : Jan 24, 2024, 12:10 PM IST
Devegowda

ಸಾರಾಂಶ

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸುವಂತೆ ಸ್ಥಳೀಯ ಜೆಡಿಎಸ್‌ ನಾಯಕರು ದೇವೇಗೌಡರ ಕುಟುಂಬಕ್ಕೆ ಮೊರೆ ಹೋಗಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸುವಂತೆ ಸ್ಥಳೀಯ ಜೆಡಿಎಸ್‌ ನಾಯಕರು ದೇವೇಗೌಡರ ಕುಟುಂಬಕ್ಕೆ ಮೊರೆ ಹೋಗಿದ್ದಾರೆ.

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಮೂವರಲ್ಲಿ ಒಬ್ಬರು ಮಂಡ್ಯ ಕ್ಷೇತ್ರದಿಂದ ಅಖಾಡ ಪ್ರವೇಶಿಸುವಂತೆ ಜ.19ರಂದು ಜೆಡಿಎಸ್‌ ಅಧ್ಯಕ್ಷ ಡಿ.ರಮೇಶ್‌ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಹಾಲಿ ಶಾಸಕ, ಮಾಜಿ ಶಾಸಕರು ಸಭೆ ಸೇರಿ ಸರ್ವಾನುಮತದ ನಿರ್ಣಯ ಕೈಗೊಂಡು ಸಹಿ ಹಾಕಿ ವರಿಷ್ಠರಿಗೆ ರವಾನಿಸಿದ್ದಾರೆ.

2023ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ ಜಿಲ್ಲೆಯ ಆರು ಕ್ಷೇತ್ರಗಳಲ್ಲಿ ಸೋತು, ಒಂದು ಕ್ಷೇತ್ರದಲ್ಲಷ್ಟೇ ಗೆಲುವು ಸಾಧಿಸಿದೆ. ಆರು ಕ್ಷೇತ್ರಗಳಲ್ಲಿ ಪ್ರಾಬಲ್ಯ ಹೊಂದಿರುವ ಕಾಂಗ್ರೆಸ್‌ ಪಕ್ಷವನ್ನು ಸಮರ್ಥವಾಗಿ ಎದುರಿಸಲಾಗದೆ ಸ್ಥಳೀಯರನ್ನು ಕಣಕ್ಕಿಳಿಸಲು ಹೆದರಿ ವರಿಷ್ಠರನ್ನು ಆಹ್ವಾನಿಸುತ್ತಿದ್ದಾರೆಂಬ ಬಗ್ಗೆ ಸಾರ್ವಜನಿಕವಾಗಿ ಚರ್ಚೆಯಾಗುತ್ತಿದೆ.

ಲೋಕಸಭೆ ಚುನಾವಣಾ ಅಖಾಡ ಪ್ರವೇಶಕ್ಕೆ ಮಾಜಿ ಸಚಿವರಾದ ಸಿ.ಎಸ್‌.ಪುಟ್ಟರಾಜು, ಡಿ.ಸಿ.ತಮ್ಮಣ್ಣ ಅವರು ಉತ್ಸುಕರಾಗಿದ್ದರೂ ಕೆಲವರು ಬಲವಂತವಾಗಿ ಗೌಡರ ಕುಟುಂಬದವರನ್ನು ಜಿಲ್ಲೆಗೆ ಕರೆತರುವ ಪ್ರಯತ್ನ ಮಾಡುತ್ತಿದ್ದಾರೆ. ಸ್ಥಳೀಯವಾಗಿ ಜೆಡಿಎಸ್‌ ದುರ್ಬಲವಾಗಿದೆಯೇ ಎಂಬ ಅನುಮಾನಗಳು ಜನಮಾನಸದಲ್ಲಿ ಮೂಡಲಾರಂಭಿಸಿವೆ.

ಗೌಡರ ಕುಟುಂಬದವರು ಅಖಾಡ ಪ್ರವೇಶಿಸುವರೆಂಬ ಭಯವನ್ನು ಕೊನೆಯವರೆಗೂ ಜೀವಂತವಾಗಿರಿಸಿ, ಕಾಂಗ್ರೆಸ್‌ ಪಾಳಯದಿಂದ ಪ್ರಬಲ ಅಭ್ಯರ್ಥಿ ಕಣಕ್ಕಿಳಿಯದಂತೆ ಮಾಡುವುದು ಹಾಗೂ ಕಾಂಗ್ರೆಸ್‌ನ್ನು ದಿಕ್ಕುತಪ್ಪಿಸುವುದಕ್ಕೆ ಸ್ಥಳೀಯ ಜೆಡಿಎಸ್‌ ನಾಯಕರು ರೂಪಿಸಿರುವ ತಂತ್ರಗಾರಿಕೆ ಇದರ ಹಿಂದೆ ಇರಬಹುದೆಂಬ ಸಂಶಯವೂ ಕಾಡುತ್ತಿದೆ.

ಗೌಡರ ಕುಟುಂಬದವರು ಜಿಲ್ಲೆಯನ್ನು ಪ್ರತಿನಿಧಿಸುವುದು ಜೆಡಿಎಸ್‌ನ ಕೆಲವು ನಾಯಕರಿಗೆ ಇಷ್ಟವಿಲ್ಲದಿದ್ದರೂ ಬಲವಂತವಾಗಿ ಒಪ್ಪಿಕೊಳ್ಳುವ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಜೊತೆಗೆ ಕುಮಾರಸ್ವಾಮಿ ಕೂಡ ಮಂಡ್ಯದಿಂದ ಸ್ಪರ್ಧಿಸುವ ಸಂಬಂಧ ಸಣ್ಣ ಸುಳಿವನ್ನೂ ಈವರೆಗೆ ನೀಡಿಲ್ಲ. 

ಇದರ ನಡುವೆಯೂ ಸ್ಥಳೀಯ ಜೆಡಿಎಸ್‌ನ ಕೆಲವರು ಗೌಡರ ಕುಟುಂಬದವರನ್ನು ಅಖಾಡಕ್ಕಿಳಿಸುವ ಪ್ರಯತ್ನವನ್ನು ಕೈಬಿಡದೆ ನಿರಂತರವಾಗಿ ಮುಂದುವರೆಸುತ್ತಲೇ ಇದ್ದಾರೆ. ಇದರ ಹಿಂದಿನ ಗುಟ್ಟೇನು ಎನ್ನುವುದು ಕುತೂಹಲಕ್ಕೂ ಕಾರಣವಾಗಿದೆ.

ಕಳೆದ ಲೋಕಸಭಾ ಚುನಾವಣೆ ಸಮಯದಲ್ಲಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದುಕೊಂಡು ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಜೆಡಿಎಸ್‌ ಪ್ರಾಬಲ್ಯ ಹೊಂದಿದ್ದರೂ ಪುತ್ರ ನಿಖಿಲ್‌ನನ್ನು ಗೆಲ್ಲಿಸಿಕೊಳ್ಳಲಾಗಲಿಲ್ಲ. 

ಈಗ ಒಂದೇ ಒಂದು ಕ್ಷೇತ್ರದಲ್ಲಿ ಜೆಡಿಎಸ್‌ ಇಟ್ಟುಕೊಂಡು ಮಂಡ್ಯ ಕ್ಷೇತ್ರದಿಂದ ಅಖಾಡ ಪ್ರವೇಶಿಸುವುದಕ್ಕೆ ಗೌಡರ ಕುಟುಂಬದವರು ಧೈರ್ಯ ಮಾಡುವರೇ ಎನ್ನುವುದು ಪ್ರಶ್ನೆಯಾಗಿದೆ.

PREV

Recommended Stories

ರಾಹುಲ್‌ ವಿರುದ್ಧ 5ಕ್ಕೆ ಬಿಜೆಪಿ ಧರಣಿ : ಬಿವೈವಿ
ಸಂಘರ್ಷ ಬಿಟ್ಟು ಒಳಮೀಸಲು ಜಾರಿ : ಪರಂ ನೇತೃತ್ವದ ಸಭೆ