ದೆಹಲಿ ಕೋರ್ಟ್‌ನಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಖುದ್ದು ವಾದ!

KannadaprabhaNewsNetwork |  
Published : Mar 29, 2024, 12:45 AM ISTUpdated : Mar 29, 2024, 02:27 PM IST
ಅರವಿಂದ್‌ ಕೇಜ್ರಿವಾಲ್‌ | Kannada Prabha

ಸಾರಾಂಶ

ದಿಲ್ಲಿ ಮದ್ಯ ಲೈಸೆನ್ಸ್‌ ಹಂಚಿಕೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ(ಇ.ಡಿ.)ದಿಂದ ಬಂಧಿತರಾಗಿರುವ ದೆಹಲಿ ಮುಖ್ಯಮಂತ್ರಿ ಹಾಗೂ ಆಪ್ ನೇತಾರ ಅರವಿಂದ್‌ ಕೇಜ್ರಿವಾಲ್‌ ಗುರುವಾರ ನ್ಯಾಯಾಲಯದಲ್ಲಿ ಖುದ್ದು ವಾದ ಮಂಡಿಸಿದ್ದು, ‘ಈ ಹಗರಣ ಕೇವಲ ಇ.ಡಿ. ಹಾಗೂ ಬಿಜೆಪಿ ಸೃಷ್ಟಿಯಾಗಿದೆ.

ನವದೆಹಲಿ: ದಿಲ್ಲಿ ಮದ್ಯ ಲೈಸೆನ್ಸ್‌ ಹಂಚಿಕೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ(ಇ.ಡಿ.)ದಿಂದ ಬಂಧಿತರಾಗಿರುವ ದೆಹಲಿ ಮುಖ್ಯಮಂತ್ರಿ ಹಾಗೂ ಆಪ್ ನೇತಾರ ಅರವಿಂದ್‌ ಕೇಜ್ರಿವಾಲ್‌ ಗುರುವಾರ ನ್ಯಾಯಾಲಯದಲ್ಲಿ ಖುದ್ದು ವಾದ ಮಂಡಿಸಿದ್ದು, ‘ಈ ಹಗರಣ ಕೇವಲ ಇ.ಡಿ. ಹಾಗೂ ಬಿಜೆಪಿ ಸೃಷ್ಟಿಯಾಗಿದೆ. ಪ್ರಕರಣದಲ್ಲಿ ಬಿಜೆಪಿ ಭಾಗಿಯಾಗಿರುವುದಕ್ಕೆ ನನ್ನ ಬಳಿ ಸಾಕ್ಷಿ ಇದೆ’ ಎಂದು ನೇರಾನೇರ ಸ್ಫೋಟಕ ಆರೋಪ ಮಾಡಿದ್ದಾರೆ.

ಇದರ ನಡುವೆ, ಕೇಜ್ರಿವಾಲ್‌ ಅವರ ಇ.ಡಿ. ಕಸ್ಟಡಿಯನ್ನು ಕೋರ್ಟ್‌ ಏ.1ರ ವರೆಗೆ ವಿಸ್ತರಿಸಿದೆ. ಹೀಗಾಗಿ ಬಂಧಮುಕ್ತರಾಗುವ ಅವರ ಆಸೆಗೆ ತಣ್ಣೀರೆರಚಿದಂತಾಗಿದೆ.

ಕೇಜ್ರಿ ಖುದ್ದು ಪ್ರಖರ ವಾದ: ಇ.ಡಿ. ಕಸ್ಟಡಿ ಅಂತ್ಯವಾದ ನಿಮಿತ್ತ ಕೋರ್ಟಿಗೆ ಹಾಜರಾಗಿದ್ದ ಕೇಜ್ರಿವಾಲ್‌ಗೆ ರೌಸ್‌ ಅವೆನ್ಯೂ ಕೋರ್ಟ್‌ ಕೆಲವು ನಿಮಿಷ ಕಾಲ ಖುದ್ದು ವಾದ ಮಂಡನೆಗೆ ಅವಕಾಶ ನೀಡಿತು. ಈ ವೇಳೆ ಮಾತನಾಡಿದ ಕೇಜ್ರಿವಾಲ್‌, ‘ಜಾರಿ ನಿರ್ದೇಶನಾಲಯವು ಆಧಾರರಹಿತವಾಗಿ ನನ್ನನ್ನು ಬಂಧಿಸಿದೆ. 

ಈ ಪ್ರಕರಣಕ್ಕೆ ಬಿಜೆಪಿ ನಂಟಿದೆ ಎಂಬುದಕ್ಕೆ ನನ್ನ ಬಳಿ ಸಾಕ್ಷ್ಯ ಇದೆ. ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿರುವ ಶರತ್‌ಚಂದ್ರ ರೆಡ್ಡಿಯವರಿಂದ ಬಿಜೆಪಿ 55 ಕೋಟಿ ರು.ಗಳನ್ನು ಚುನಾವಣಾ ಬಾಂಡ್‌ ಮೂಲಕ ಪಡೆದುಕೊಂಡಿದೆ. 

ಈ ಮೂಲಕ ಇದು ಬಿಜೆಪಿಯೇ ಜಾರಿ ನಿರ್ದೇಶನಾಲಯ ಮೂಲಕ ಸೃಷ್ಟಿಸಿದ ಹಗರಣ ಎಂಬುದು ಸಾಬೀತಾಗಿದೆ’ ಎಂದು ಆರೋಪಿಸಿದರು. 

ಸಾಕ್ಷ್ಯ ಇಲ್ಲದೆ ಬಂಧನ: ಜಾರಿ ನಿರ್ದೇಶನಾಲಯವು ನನ್ನನ್ನು ಕೇವಲ 4 ಸಾಕ್ಷಿಗಳ ಹೇಳಿಕೆ ಆಧಾರದಲ್ಲಿ ಬಂಧಿಸಿದೆ. ಆದರೆ ಇ.ಡಿ. ಸಲ್ಲಿಸಿರುವ 25 ಸಾವಿರ ಪುಟಗಳ ಚಾರ್ಜ್‌ಶೀಟ್‌ ಹಾಗೂ ಸಿಬಿಐ ಸಲ್ಲಿಸಿದ 31 ಸಾವಿರ ಪುಟಗಳ ಚಾರ್ಚ್‌ಶೀಟ್‌ ಓದಿದ್ದೇನೆ. 

ಈ ಕಾಗದ ಪತ್ರಗಳಲ್ಲಿ ಸಿ. ಅರವಿಂದ ಎಂಬುವರ ಹೆಸರಿದೆ (ಮಾಜಿ ಡಿಸಿಎಂ ಮನೀಶ್‌ ಸಿಸೋಡಿಯಾ ಅವರ ಅಧೀನದ ಅಧಿಕಾರಿ). ಎಲ್ಲೂ ಅರವಿಂದ ಕೇಜ್ರಿವಾಲ್‌ ಎಂಬ ಹೆಸರಲ್ಲ’ ಎಂದರು.

‘ಅಲ್ಲದೆ, ಮದ್ಯ ಲೈಸೆನ್ಸ್‌ ಹಂಚಿಕೆಯಲ್ಲಿನ 100 ಕೋಟಿ ರು. ಅಕ್ರಮದ ಆರೋಪದ ಕುರಿತು ಸೂಕ್ತ ಮಾಹಿತಿಯೇ ಇಲ್ಲ. ಎಲ್ಲೂ ಕೂಟ ಈವರೆಗೂ ಈ 100 ಕೋಟಿ ರು. ಲಂಚದ ಹಣದ ಪೈಕಿ ನಯಾಪೈಸೆ ಕೂಡ ಸಿಕ್ಕಿಲ್ಲ. ಈ ಮೂಲಕ ದುರುದ್ದೇಶಪೂರಿತವಾಗಿ ನನ್ನನ್ನು ಬಂಧಿಸಿದೆ’ ಎಂಬುದು ಸಾಬೀತಾಗಿದೆ ಎಂದು ತಿಳಿಸಿದರು.

 2 ಉದ್ದೇಶಕ್ಕಾಗಿ ಬಂಧನ: ‘ಇ.ಡಿ. ನನ್ನನ್ನು ಎರಡು ಉದ್ದೇಶಗಳೊಂದಿಗೆ ಬಂಧಿಸಿದೆ. ಮೊದಲಿಗೆ ನನ್ನ ಬಂಧನದ ಮೂಲಕ ಆಪ್‌ ಪಕ್ಷವನ್ನು ದುರ್ಬಲಗೊಳಿಸುವುದು. 

ಮತ್ತೊಂದು ಬಿಜೆಪಿಯ ಸುಲಿಗೆ ದಂಧೆಗೆ ನಮ್ಮನ್ನು ದಾಳವಾಗಿ ಬಳಸಿಕೊಳ್ಳಲು ಪ್ರಯತ್ನಿಸುವ ಸಲುವಾಗಿ’ ಎಂದು ಕೇಜ್ರಿವಾಲ್‌ ನ್ಯಾಯಾಲಯದಲ್ಲಿ ವಾದ ಮಂಡಿಸಿದರು. ಎಷ್ಟು ಬೇಕಾದಷ್ಟು ದಿನ ಇ.ಡಿ. ನನ್ನನ್ನು ಬಂಧಿಸಿ ಇಟ್ಟುಕೊಳ್ಳಲಿ ಎಂದರು.

PREV

Recommended Stories

ಕೆರೆಗಳ ಬಫರ್ ವಲಯ ಕಡಿತ ವಿರೋಧಿಸಿ ರಾಜ್ಯಪಾಲರಿಗೆ ಮನವಿ
ಡಿಸಿಎಂ ಮಧ್ಯರಾತ್ರಿ ಸಿಟಿರೌಂಡ್ಸ್‌ : ನಗರದಲ್ಲಿ ರಸ್ತೆ ಗುಂಡಿ ಮುಚ್ಚುವ ಕಾಮಗಾರಿ ಪರಿಶೀಲಿಸಿದ ಡಿ.ಕೆ.ಶಿವಕುಮಾರ್‌