ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಮೇಲಿನ ಚರ್ಚೆ ವೇಳೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಿಜೆಪಿಯ ಡಾ.ಸಿ.ಎನ್.ಅಶ್ವತ್ಥನಾರಾಯಣ ನಡುವೆ ಕೆಲ ಕಾಲ ಪಿತಾಮಹ ಜಟಾಪಟಿ ನಡೆಯಿತು.
ಕನ್ನಡಪ್ರಭ ವಾರ್ತೆ ವಿಧಾನಸಭೆ
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಮೇಲಿನ ಚರ್ಚೆ ವೇಳೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬಿಜೆಪಿ ಸದಸ್ಯ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರನ್ನು ‘ನೀನು ಲೂಟಿಕೋರರ ಪಿತಾಮಹ’ ಎಂದು ವಾಕ್ಪ್ರಹಾರ ನಡೆಸಿದ್ದು ಮಂಗಳವಾರ ಸದನದಲ್ಲಿ ಆಡಳಿ ಮತ್ತು ಪ್ರತಿಪಕ್ಷಗಳ ನಡುವೆ ಕೆಲ ಕಾಲ ಭಾರೀ ಜಟಾಪಟಿ, ಕೋಲಾಹಲ ಸೃಷ್ಟಿಸಿತು. ವಿಧಾನಸಭೆಯಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಮೇಲಿನ ಚರ್ಚೆ ಮುಂದುವರೆಸಿದ ವಿಪಕ್ಷ ನಾಯಕ ಆರ್.ಅಶೋಕ್, ಹಣಕಾಸು ಇಲಾಖೆಯೂ ಈ ಹಗರಣದಲ್ಲಿ ಶಾಮೀಲಾಗಿದೆ. ಆದರೆ, ಈ ವಿಷಯ ಮಾತನಾಡುವಾಗ ಆ ಇಲಾಖೆಯ ಒಬ್ಬ ಅಧಿಕಾರಿಗಳು ಇಲ್ಲ, ಮುಖ್ಯಮಂತ್ರಿಗೂ ಸದನದಲ್ಲಿ ಹಾಜರಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ತಕ್ಷಣ ಏಕಾಏಕಿ ಮಧ್ಯಪ್ರವೇಶಿಸಿದ ಅಶ್ವತ್ಥನಾರಾಯಣ್ ಈ ಹಗರಣದಲ್ಲಿ ಮುಖ್ಯಮಂತ್ರಿಯವರ ಮೇಲೆಯೇ ನೇರ ಆರೋಪವಿದೆ. ಹಾಗಾಗಿ ಪ್ರತಿಪಕ್ಷ ನಾಯಕರು ಮಾತನಾಡುವಾಗ ಮುಖ್ಯಮಂತ್ರಿ ಸದನಕ್ಕೆ ಬರಲಿ ಎಂದು ಆಗ್ರಹಿಸಿದರು.ಇದು ಕಾಂಗ್ರೆಸ್ ಸದಸ್ಯರನ್ನು ಕೆರಳಿ ಕೆಂಡವಾಗಿಸಿತು. ಸಚಿವರಾದ ಡಾ.ಜಿ.ಪರಮೇಶ್ವರ್, ಕೆ.ಜೆ.ಜಾರ್ಜ್, ಪ್ರಿಯಾಂಕ್ ಖರ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಸಿಟ್ಟಿಗೆದ್ದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ‘ಮುಖ್ಯಮಂತ್ರಿಯವರ ಮೇಲೆ ಇವರು ಹೇಗೆ ಆರೋಪ ಮಾಡುತ್ತಾರೆ. ನೀನೇ ಹಗರಣಗಳ, ಲೂಟಿಕೋರರ ಪಿತಾಮಹ. ಅಧಿಕಾರದಲ್ಲಿದ್ದಾಗ ಮಾಡಬಾರದ್ದು ಮಾಡಿದ್ದಕ್ಕೆ ನಿಮ್ಮನ್ನು ಜನ ಅಲ್ಲಿ (ಪ್ರತಿಪಕ್ಷದಲ್ಲಿ) ಕೂರಿಸಿ, ನಮ್ಮನ್ನು ಇಲ್ಲಿ (ಆಡಳಿತ ಪಕ್ಷದಲ್ಲಿ) ಕೂರಿಸಿದ್ದಾರೆ ಎಂದು ಕಿಡಿ ಕಾರಿದರು. ಇದಕ್ಕೆ ಪ್ರತಿದಾಳಿ ಮಾಡಿದ ಅಶ್ವತ್ಥನಾರಾಯಣ, ಹಿಟ್ ಅಂಡ್ ರನ್ ಮಾಡೋದಲ್ಲ, ನನ್ನ ವಿರುದ್ಧದ ಆರೋಪಗಳೇನು ಸದನಕ್ಕೆ ತಿಳಿಸಿ. ಇಲ್ಲವೇ, ಕ್ಷಮೆ ಕೇಳಿ. ಇಲ್ಲ ಕಡತದಿಂದ ಈ ಪದ ತೆಗೆಯಬೇಕು ಎಂದು ಆಗ್ರಹಿಸಿದರು. ಈ ವೇಳೆ, ಸದನದಲ್ಲಿ ಪರಸ್ಪರ ವಾಗ್ವಾದ, ಗದ್ದಲ, ಕೋಲಾಹಲ ಸೃಷ್ಟಿಯಾಯಿತು. ಪರಿಸ್ಥಿತಿ ತಿಳಿಗೊಳಿಸಲು ಸಭಾಧ್ಯಕ್ಷರ ಸ್ಥಾನದಲ್ಲಿದ್ದ ಉಪಸಭಾಧ್ಯಕ್ಷರು ಪೀಠದಿಂದ ಎದ್ದು ನಿಂತರೂ ಸದನ ತಹಬದಿಗೆ ಬರಲಿಲ್ಲ. ಅಷ್ಟೊತ್ತಿಗೆ ಪೀಠಕ್ಕೆ ಆಗಮಿಸಿದ ಸ್ಪೀಕರ್ ಯು.ಟಿ.ಖಾದರ್ 10 ನಿಮಿಷ ಕಲಾಪ ಮುಂದೂಡಿದರು. ಬಳಿಕ ಸ್ಪೀಕರ್ ಕಚೇರಿಯಲ್ಲಿ ನಡೆದ ಸಂಧಾನ ಸಭೆಯ ಬಳಿಕ ಸದನ ಸಮಾವೇಶಗೊಂಡಾಗ ‘ಲೂಟಿಕೋರರ, ಹಗರಣಗಳ ಪಿತಾಮಹ’ ಪದವನ್ನು ಸ್ಪೀಕರ್ ಕಡತದಿಂದ ತೆಗೆಸಿದ್ದರಿಂದ ಗದ್ದಲ ಶಮನವಾಗಿ ಕಲಾಪ ಮುಂದುವರೆಯಿತು.
ಬಿಜೆಪಿಯ ಸುನಿಲ್‌ಕುಮಾರ್, ದಲಿತರ ಹಣ ಲೂಟಿ ಮಾಡಿರುವುದನ್ನು ಸಮರ್ಥಿಸಿಕೊಳ್ಳುವ ನಿಮಗೆ ನಾಚಿಕೆಗೆ ಆಗಬೇಕು. ಸದನದ ನಮ್ಮ ಒಬ್ಬ ಸದಸ್ಯರ ವಿರುದ್ಧ ನೋಟಿಸ್ ನೀಡದೆ ಹೇಗೆ ಆಪಾದನೆ ಮಾಡುತ್ತೀರಿ ಎಂದು ಪ್ರಶ್ನಿಸಿದರು. ಅದಕ್ಕೆ, ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ವಿರುದ್ಧ ಅವರು ಹೇಗೆ(ಅಶ್ವತ್ಥನಾರಾಯಣ) ಆಪಾದನೆ ಮಾಡುತ್ತಾರೆ. ನೋಟಿಸ್ ಕೊಟ್ಟಿದ್ದಿರಾ? ಎಂದು ಕಿಡಿಕಾರಿದರು.
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.