ಸಂಸದ ಮುನಿಸ್ವಾಮಿಗೆ ಟಿಕೆಟ್‌ ತಪ್ಪಿಸಲು ಲಾಭಿ

KannadaprabhaNewsNetwork | Updated : Jan 19 2024, 12:59 PM IST

ಸಾರಾಂಶ

ಮೂಲ ಬಿಜೆಪಿಯ ಅತೃಪ್ತರ ಗುಂಪೊಂದು ಬುಧವಾರ ೪೦ಕ್ಕೂ ಹೆಚ್ಚು ವಿವಿಧ ಮಂಚೂಣಿ ಘಟಕದ ಮುಖಂಡರು ನಗರದ ಖಾಸಗಿ ಸ್ಥಳದಲ್ಲಿ ಸಭೆ ನಡೆಸಿ ಯಾವುದೇ ಕಾರಣಕ್ಕೂ ಸಂಸದ ಎಸ್.ಮುನಿಸ್ವಾಮಿಗೆ ಟಿಕೆಟ್ ನೀಡದ್ದಂತೆ ಹೈಕಮಾಂಡ್‌ಗೆ ಒತ್ತಡ ಹೇರಲು ತೀರ್ಮಾನಿಸಿದ್ದಾ ಎನ್ನಲಾಗಿದೆ

ಕನ್ನಡಪ್ರಭ ವಾರ್ತೆ ಕೋಲಾರ

ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಲೇಬೇಕೆಂದು ಬಿಜೆಪಿ ಹೋರಾಟ ನಡೆಸುತ್ತಿದೆ, ಕಳೆದ ವಿಧಾಸಭೆ ಚುನಾವಣೆಯಲ್ಲಿ ಅನುಭವಿಸಿದ ಮುಖಭಂಗ ತಪ್ಪಿಸಿಕೊಳ್ಳಲು ರಾಜ್ಯದಲ್ಲಿ ಈ ಬಾರಿ ಬಿಜೆಪಿ ಜೆಡಿಎಸ್‌ನೊಂದಿಗೆ ಮೈತ್ರಿಗೆ ಮುಂದಾಗಿದೆ.

 ಆದರೆ ಕೋಲಾರ ಕ್ಷೇತ್ರ ಟಿಕೆಟ್‌ ಜೆಡಿಎಸ್ ಅಥವಾ ಬಿಜೆಪಿ ಯಾರ ಪಾಲಾಗುತ್ತದೆ ಎಂಬುದು ವರಿಷ್ಠರಿಗೆ ಬಿಟ್ಟ ತೀರ್ಮಾನ. ಆದರೆ ಈ ಮಧ್ಯೆ ಕ್ಷೇತ್ರದ ಹಾಲಿ ಬಿಜೆಪಿ ಸಂಸದರಿಗೆ ಟಿಕೆಟ್ ನೀಡಬಾರದು ಎಂಬ ಕೂಗು ಪಕ್ಷದೊಳಗೆ ವ್ಯಕ್ತವಾಗುತ್ತಿದೆ.

ಹೈಕಮಾಂಡ್ ಮೇಲೆ ಒತ್ತಡ: ಮೂಲ ಬಿಜೆಪಿಯ ಅತೃಪ್ತರ ಗುಂಪೊಂದು ಬುಧವಾರ ೪೦ಕ್ಕೂ ಹೆಚ್ಚು ವಿವಿಧ ಮಂಚೂಣಿ ಘಟಕದ ಮುಖಂಡರನ್ನೊಳಗೊಂಡು ನಗರದ ಖಾಸಗಿ ಸ್ಥಳದಲ್ಲಿ ಸಭೆ ನಡೆಸಿ ಯಾವುದೇ ಕಾರಣಕ್ಕೂ ಸಂಸದ ಎಸ್.ಮುನಿಸ್ವಾಮಿಗೆ ಟಿಕೆಟ್ ನೀಡದ್ದಂತೆ ಹೈಕಮಾಂಡ್‌ಗೆ ಒತ್ತಡ ಹೇರಲು ತೀರ್ಮಾನಿಸಿದ್ದಾರೆಂದು ತಿಳಿದುಬಂದಿದೆ.

ಮಂಗಳವಾರ ಬಿಜೆಪಿಯಿಂದ ಬಲವರ್ಧನೆಗಾಗಿ ಭೀಮ ಸಮಾವೇಶ ಏರ್ಪಡಿಸಲಾಗಿತ್ತು, ಇದರ ಬೆನ್ನ ಹಿಂದೆಯೇ ಬಿಜೆಪಿ ಅತೃಪ್ತರ ಮಂಚೂಣಿ ಘಟಕದ ನಾಯಕರು ಸಭೆ ಸೇರಿ ಮುನಿಸ್ವಾಮಿಗೆ ಈ ಬಾರಿ ನಡೆಯುವ ಲೋಕಸಭಾ ಚುನಾವಣೆಯ ಟಿಕೆಟ್ ತಪ್ಪಿಸಬೇಕೆಂಬ ಲಾಭಿ ಆರಂಭಿಸಿದ್ದಾರೆ.

ಕಾರ್ಯಕರ್ತರ ಕಡೆಗಣನೆ:  ಕಳೆದ ೫ ವರ್ಷದಲ್ಲಿ ಮುನಿಸ್ವಾಮಿ ಕಾರ್ಯಕರ್ತರನ್ನು ಸರಿಯಾಗಿ ನಡೆಸಿಕೊಂಡಿಲ್ಲ, ಇದರಿಂದ ಮೂಲ ಬಿಜೆಪಿಗರಲ್ಲಿ ಗುಂಪುಗಾರಿಕೆ ಆಗುವಂತೆ ಮಾಡಿದ್ದಾರೆ.

 ಕೆಲವರಿಗೆ ಮಾತ್ರ ಮಣೆ ಹಾಕುತ್ತಿದ್ದು, ಈಗಾಗಲೇ ಪಕ್ಷ ಪಾತಾಳಕ್ಕೆ ಕುಸಿಯುವಂತಾಗಿದೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಬಿಜೆಪಿ ನೆಲಕಚ್ಚಲು ಇದೇ ಕಾರಣ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ.

ಮಾಲೂರು, ಕೆಜಿಎಫ್ ಎರಡು ಬಣಗಳು ಸೃಷ್ಟಿಯಾಗುವಂತೆ ಆಯಿತು, ಕೆಜಿಎಫ್‌ನಲ್ಲಿ ಎರಡು ಬಣಗಳು ಸೃಷ್ಟಿಯಾಗುವಂತಾಗಿದೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ರಾಷ್ಟ್ರೀಯ ನಾಯಕರನ್ನು ನೋಡಿ ಮತ ಹಾಕುವ ಮತದಾರರಿದ್ದಾರೆ.

ಈ ಬಾರಿ ಮೋದಿರನ್ನು ಮತ್ತೊಮ್ಮೆ ಪ್ರಧಾನಿಯಾಗಿ ನೋಡಲು ಮತದಾರರು ಕಾಯುತ್ತಿದ್ದಾರೆ, ಆದ್ದರಿಂದ ಕೋಲಾರ ಕ್ಷೇತ್ರವನ್ನು ಮತ್ತೊಮ್ಮೆ ಬಿಜೆಪಿಯಲ್ಲೇ ಉಳಿಸಿಕೊಳ್ಳಬೇಕಾದರೆ ಹೊಸ ಅಭ್ಯರ್ಥಿಗೆ ಟಿಕೆಟ್ ನೀಡಬೇಕು ಎಂದು ಹೈಕಮಾಂಡ್ ಮೇಲೆ ತರಲು ಸಭೆ ತೀರ್ಮಾನಿಸಿದ್ದಾಗಿ ತಿಳಿದುಬಂದಿದೆ.

ಬಿಜೆಪಿಯಿಂದ ಲೋಕಸಭೆ ಚುನಾವಣೆಗೆ ಸಿದ್ಧತೆ ನಡೆದಿದ್ದು, ಈಗಾಗಲೇ ಹೈಕಮಾಂಡ್ ನಾಯಕರು ಹಲವು ಸುತ್ತಿನ ಚರ್ಚೆ ನಡೆಸಿದ್ದಾರೆ, ಅಂತೆಯೇ ಬುಧವಾರ ರಾತ್ರಿ ಸಭೆ ನಡೆಸಿದ್ದು, ರಾಜ್ಯದ ೧೦ ಕ್ಷೇತ್ರಗಳಿಗೆ ಅಭ್ಯರ್ಥಿ ಆಯ್ಕೆಗೆ ಸಿದ್ಧವಾಗಿದೆ.

ಪಟ್ಟಿಯಲ್ಲಿ ಕೋಲಾರ ಕ್ಷೇತ್ರಕ್ಕೆ ಸಂಸದ ಎಸ್.ಮುನಿಸ್ವಾಮಿ ಹೆಸರು ಇದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅತೃಪ್ತ ಬಿಜೆಪಿ ಮಂಚೂಣಿ ಘಟಕದ ನಾಯಕರ ಸಭೆ ನಡೆಸಿದ್ದಾಗಿ ಮೂಲಗಳು ತಿಳಿಸಿವೆ.

ಅಭ್ಯರ್ಥಿ ಶಿಫಾರಸಿಗೆ ಸಿದ್ಧತೆ: ಬರುವ ಮೂರ್‍ನಾಲ್ಕು ದಿನಗಳಲ್ಲಿ ಬಿಜೆಪಿಯಿಂದ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಹೈಕಮಾಂಡ್‌ಗೆ ತಿಳಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದು ಹೆಸರು ಹೇಳಲು ಇಚ್ಚಿಸದ ಮೂಲ ಬಿಜೆಪಿ ಕಾರ್ಯಕರ್ತರೊಬ್ಬರು ಮಾಹಿತಿ ನೀಡಿದ್ದಾರೆ.

ಕೋಲಾರ ಜಿಲ್ಲೆಯ ಬಿಜೆಪಿ ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ, ಸಣ್ಣಪುಟ್ಟ ಭಿನ್ನಾಪ್ರಾಯಗಳು ಸಹಜ, ಮುನಿಸ್ವಾಮಿ ಹಾಲಿ ಸಂಸದರಾಗಿದ್ದು, ಅತೃಪ್ತರು ಎಂಬುದೇ ಇಲ್ಲ, ಅತೃಪ್ತ ಕಾರ್ಯಕರ್ತರು ಸಭೆ ನಡೆಸಿರುವುದು ನನ್ನ ಗಮನಕ್ಕೆ ಬಂದಿಲ್ಲ. 

ಬಿಜೆಪಿ ಮೊದಲಿನಿಂದಲೂ ಶಿಸ್ತಿಗೆ ಬದ್ಧವಾದ ಪಕ್ಷ. ಅದನ್ನು ಪಕ್ಷದ ಎಲ್ಲರೂ ಪಾಲನೆ ಮಾಡಬೇಕು. ಇಲ್ಲಿ ಪಕ್ಷ ದೊಡ್ಡದು, ವ್ಯಕ್ತಿಯಲ್ಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್ ಹೇಳಿದರು.

Share this article