....ರಾಮನಗರ ಜಿಲ್ಲೆ ಬೆಂಗಳೂರಿಗೆ ಸೇರ್ಪಡೆ

KannadaprabhaNewsNetwork | Published : Oct 25, 2023 1:15 AM

ಸಾರಾಂಶ

ಕನಕಪುರ ಬೆಂಗಳೂರು ಸೇರುತ್ತದೆ, ಯಾರೂ ಭೂಮಿ ಮಾರಬೇಡಿ । ರಾಮನಗರ ಎಂದು ಹೇಳಿ ಮೂಲೆಗೆ ಸೇರಿಸಬೇಡಿ, ನಾವೆಲ್ಲರೂ ಬೆಂಗಳೂರಿನವರು
ಕನ್ನಡಪ್ರಭ ವಾರ್ತೆ ಕನಕಪುರ, ರಾಮನಗರ ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ವಿಭಜನೆಯಾಗಿ ರಾಮನಗರ ಜಿಲ್ಲೆ ರಚನೆಯಾದ ಕುರಿತು ಮೊದಲಿನಿಂದಲೂ ಅಸಮಾಧಾನ ವ್ಯಕ್ತಪಡಿಸುತ್ತಲೇ ಬಂದಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಇದೀಗ ನಾವೆಲ್ಲರು ರಾಮನಗರ ಜಿಲ್ಲೆಯವರಲ್ಲ, ಬೆಂಗಳೂರು ಜಿಲ್ಲೆಯವರು ಎಂದು ಹೇಳುವ ಮೂಲಕ ಹೊಸ ವಿವಾದಕ್ಕೆ ನಾಂದಿ ಹಾಡಿದ್ದಾರೆ. ಕನಕಪುರ ತಾಲೂಕಿನ ಶಿವನಹಳ್ಳಿಯ ವೀರಭದ್ರೇಶ್ವರ ಸ್ವಾಮಿ ದೇಗುಲದ ಜೀರ್ಣೋದ್ಧಾರದ ಭೂಮಿ ಪೂಜೆ ಮತ್ತು ಶಿಲಾಪೂಜೆ ನೆರವೇರಿಸಿದ ಅವರು, ಕನಕಪುರದವರು ರಾಮನಗರ ಜಿಲ್ಲೆಯವರಲ್ಲ, ಬೆಂಗಳೂರು ಜಿಲ್ಲೆಯವರು. ರಾಮನಗರ ಎಂದು ಹೇಳಿ ಮೂಲೆಗೆ ಸೇರಿಸಬೇಡಿ, ಕೆಲವರು ಹೆಸರಿಗೆ ಹೆಸರು ಮಾಡಿದ್ದಾರೆ. ಆದರೆ, ನಾವೆಲ್ಲರೂ ಬೆಂಗಳೂರಿನವರು. ಕನಕಪುರ ಬೆಂಗಳೂರು ಸೇರುತ್ತದೆ, ಬೆಂಗಳೂರಿಗರಿಗೆ ನಿಮ್ಮ ಭೂಮಿ ಮಾರಾಟ ಮಾಡಬೇಡಿ ಎಂದರು. ಶಿವನಹಳ್ಳಿ ಗ್ರಾಮ ಹೆದ್ದಾರಿಯ ಪಕ್ಕದಲ್ಲಿದೆ. ಯಾವುದೇ ಕಾರಣಕ್ಕೂ ಭೂಮಿಯನ್ನು ಬೆಂಗಳೂರಿಗರಿಗೆ ಮಾರಾಟ ಮಾಡಬೇಡಿ. ಕೆಎಂಎಫ್ ಡೇರಿ ಇದೆ. ಕನಕಪುರ ಪಟ್ಟಣವಾಗಿ ಇಲ್ಲಿಯ ತನಕ ಬೆಳೆಯಲಿದೆ. ಆದ್ದರಿಂದ, ಎಲ್ಲರಲ್ಲಿ ಮನವಿ ಮಾಡುತ್ತೇನೆ ಭೂಮಿ ಮಾರಾಟ ಮಾಡಬೇಡಿ. ನಿಮ್ಮ ಜೇಬಿಗೆ ನಾನು ನೇರವಾಗಿ ದುಡ್ಡು ಹಾಕಲು, ಮನೆ ಕಟ್ಟಿಸಿಕೊಡಲು ಆಗುವುದಿಲ್ಲ, ನಿಮ್ಮ ಆಸ್ತಿ ಮೌಲ್ಯಗಳನ್ನ ಹತ್ತು ಪಟ್ಟು ಹೆಚ್ಚು ಮಾಡುವ ಶಕ್ತಿ ದೇವರು ನೀಡಿದ್ದಾನೆ. ನಿಮ್ಮ ಮಕ್ಕಳು, ಮೊಮ್ಮಕ್ಕಳಿಗೆ ವಿದ್ಯೆ ನೀಡಬಹುದು ಅಷ್ಟೇ. ನಾವೆಲ್ಲರು ರಾಮನಗರ ಜಿಲ್ಲೆಯವರಲ್ಲ, ಬೆಂಗಳೂರು ಜಿಲ್ಲೆಯವರು ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಿ ಎಂದು ಪುನರುಚ್ಚರಿಸಿದರು. ಒಂದಲ್ಲ ಒಂದು ದಿನ ಇಲ್ಲಿನ ಗ್ರಾಮಗಳು ಬೆಂಗಳೂರು ಆಗೇ ಆಗುತ್ತವೆ. ಪ್ರತಿ ಅಡಿ ಲೆಕ್ಕದಲ್ಲಿ ಬೆಲೆ ಕಟ್ಟಲಾಗುತ್ತದೆ. ಆದ ಕಾರಣ ನನ್ನ ಮಾತನ್ನು ನೆನಪಿನಲ್ಲಿ ಇಟ್ಟುಕೊಳ್ಳಿ, ಕನಕಪುರ ಜಿಲ್ಲಾ ಕೇಂದ್ರ ಮಾಡುವ ಕುರಿತು ಸಾರ್ವಜನಿಕವಾಗಿ ಚರ್ಚೆ ಮಾಡಲು ಹೋಗುವುದಿಲ್ಲ ಎಂದು ಹೇಳಿದರು. ಇದೇ ವೇಳೆ ವೇದಿಕೆ ಮೇಲಿದ್ದವರ ಪ್ರಶ್ನೆಗೂ ಉತ್ತರಿಸಿದ ಅವರು, ನಾನೇನು ಸುಮ್ಮನೆ ಕುಳಿತಿಲ್ಲ. ಅದನ್ನು ಮಾಡುತ್ತೇನೆ. ವಿಜಯ ದಶಮಿಯಂದು ಹೇಳುತ್ತಿದ್ದೀನಿ. ದೇವರ ಸನ್ನಿಧಿಯಲ್ಲಿ ಹೇಳುತ್ತಿದ್ದೇನೆ ಎಂದು ಭರವಸೆ ನೀಡುವ ಮೂಲಕ ರಾಮನಗರ ಜಿಲ್ಲೆ ಮರು ನಾಮಕರಣದ ಬಗ್ಗೆ ಸುಳಿವು ನೀಡಿದರು. ವೀರಭದ್ರ ದೇವಸ್ಥಾನ ಉಳಿಸಲು ಸಾಕಷ್ಟು ಪ್ರಯತ್ನ ಮಾಡಲಾಯಿತು. ಸಂಸದ ಡಿ.ಕೆ.ಸುರೇಶ್‌ ಅವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಬಳಿ ಮಾತನಾಡಿದರು, ಯೋಜನಾ ನಕ್ಷೆ ಬದಲಾಯಿಸಲು ಆಗಲಿಲ್ಲ. ಈಗ ಆ ದೇವರ ಅನುಗ್ರಹದಿಂದ ಹೊಸ ದೇವಸ್ಥಾನ ನಿರ್ಮಾಣವಾಗುತ್ತಿದೆ ಎಂದರು. ಕನಕಪುರ ತಾಲೂಕಿನಲ್ಲಿ ಸುಮಾರು 300ಕ್ಕೂ ಹೆಚ್ಚು ದೇವಸ್ಥಾನಗಳಿಗೆ ಹೊಸ ರೂಪ ಕೊಟ್ಟಿದ್ದೇವೆ. ನಾವು ಈ ಕ್ಷೇತ್ರದ ಪ್ರತಿನಿಧಿಯಾದ ಮೇಲೆ ಎಷ್ಟು ದೇವಾಲಯ ಜೀರ್ಣೋದ್ಧಾರ ಮಾಡಿರುವ ಕುರಿತು ಪುಸ್ತಕವನ್ನೇ ಬರೆಯಬಹುದು ಎಂದು ಹೇಳಿದರು. ಪ್ರಸ್ತುತ ವೀರಭದ್ರನ ದೇವಸ್ಥಾನಕ್ಕೆ ಎಷ್ಟು ಸಹಾಯ ಮಾಡುತ್ತೇನೆ ಎಂದು ಸಾರ್ವಜನಿಕವಾಗಿ ಹೇಳುವುದಿಲ್ಲ. ನಂತರ ಅದನ್ನೇ ಒಂದು ದೊಡ್ಡ ಸುದ್ದಿ ಮಾಡುತ್ತಾರೆ. ನಮಗೆ ವಿಚಾರ, ಆಚಾರ ಮುಖ್ಯ. ಪ್ರಚಾರವಲ್ಲ ಎಂದು ತಿಳಿಸಿದರು. ಉಪಮುಖ್ಯಮಂತ್ರಿ ಸ್ಥಾನ ಬೆಂಗಳೂರಿಗೆ ಸೀಮಿತಿ. ಇದು ನನ್ನ ಊರಿನ ಕೆಲಸ. ನಮ್ಮ ಕ್ಷೇತ್ರದ ಯಾವುದೇ ಕೆಲಸ ಇದ್ದರು ನಾವು ಹಿಂಜರಿಯುವುದಿಲ್ಲ, ಆದ ಕಾರಣ ಮೈಸೂರಿನಲ್ಲಿ ಪ್ರಮುಖ ಕೆಲಸವಿದ್ದರೂ ನಾನು, ನಮ್ಮ ಕ್ಷೇತ್ರಕ್ಕೆ ಬಂದಿದ್ದೇನೆ. 8ನೇ ಬಾರಿ ಗೆದ್ದ ನಂತರ ಮೊದಲ ಬಾರಿಗೆ ಧಾರ್ಮಿಕ ಕೆಲಸಕ್ಕೆ ಬಂದಿದ್ದೇನೆ. ಹೆಚ್ಚು ಕೆಲಸ ಮಾಡುವ ಶಕ್ತಿ ಆ ದೇವರು ನೀಡಲಿ ಎಂದರು. ಕಬ್ಬಾಳಮ್ಮನ ದೇವಸ್ಥಾನ ಜೀರ್ಣೋದ್ಧಾರ ಮಾಡುವ ವೇಳೆ, ಒಂದಷ್ಟು ಜನದೇವಿಯನ್ನು ಮುಟ್ಟಬೇಡ, ಸುಟ್ಟು ಹೋಗುವೆ ಎಂದರು. ನಂತರ, ನಾನು ನೊಣವಿನಕೆರೆ ಸ್ವಾಮೀಜಿ ಬಳಿ ಈ ವಿಚಾರ ಪ್ರಸ್ತಾಪ ಮಾಡಿದಾಗ, ಒಬ್ಬರ ಹೆಸರು ಸೂಚಿಸಿ ಇವರ ಕಡೆಯಿಂದ ನೆರವೇರಿಸಿ ಭಿನ್ನ ಮಾಡು ಎಂದರು. ಈಗ ಅದ್ಭುತವಾದ ದೇವಸ್ಥಾನ ನಿರ್ಮಾಣವಾಗಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು. ಮಾಜಿ ಸಚಿವ ಪಿ ಜಿ ಆರ್ ಸಿಂಧ್ಯ, ದೇಗುಲ ಮಠದ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿಗಳು, ತುಮಕೂರು ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿಗಳು, ದೇಗುಲಮಠದ ಕಿರಿಯ ಶ್ರೀ ಚನ್ನಬಸವ ಸ್ವಾಮೀಜಿ, ಉದ್ಯಮಿ ಬಿ.ಎಂ. ಜಯಶಂಕರ್, ಮುಖಂಡ ವಿಶ್ವನಾಥ್ ಮತ್ತಿತರರು ಉಪಸ್ಥಿತರಿದ್ದರು. ಫೋಟೊ...... 24ಕೆಆರ್ ಎಂಎನ್‌ 2.ಜೆಪಿಜಿ ಕನಕಪುರ ತಾಲೂಕಿನ ಶಿವನಹಳ್ಳಿಯ ವೀರಭದ್ರೇಶ್ವರ ಸ್ವಾಮಿ ದೇಗುಲದ ಜೀರ್ಣೋದ್ದಾರಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭೂಮಿ ಪೂಜೆ ನೆರವೇರಿಸಿದರು.

Share this article