ಕನ್ನಡಪರ ಸಂಘಟನೆಗಳು ನೀಡಿದ್ದ ಕರ್ನಾಟಕ ಬಂದ್‌ಗೆ ಸ್ಪಂದಿಸದ ಬೆಂಗಳೂರು : ನೀರಸ ಪ್ರತಿಕ್ರಿಯೆ ವ್ಯಕ್ತ

KannadaprabhaNewsNetwork | Updated : Mar 23 2025, 04:33 AM IST

ಸಾರಾಂಶ

ಮರಾಠಿಗರ ಕನ್ನಡ ವಿರೋಧಿ ನೀತಿ, ಎಂಇಎಸ್‌ ನಿಷೇಧ, ಮಹದಾಯಿ, ಮೇಕೆದಾಟು ಜಲಯೋಜನೆ ಜಾರಿಗೆ ಆಗ್ರಹಿಸಿ ಹಾಗೂ ಕನ್ನಡಿಗರ ಮೇಲೆ ಪರಭಾಷಿಕರ ದಬ್ಬಾಳಿಕೆ ಖಂಡಿಸಿ ಕನ್ನಡಪರ ಸಂಘಟನೆಗಳು ನೀಡಿದ್ದ ಕರ್ನಾಟಕ ಬಂದ್‌ ಕರೆಗೆ ರಾಜಧಾನಿ ಬೆಂಗಳೂರಿನಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.  

 ಬೆಂಗಳೂರು :  ಮರಾಠಿಗರ ಕನ್ನಡ ವಿರೋಧಿ ನೀತಿ, ಎಂಇಎಸ್‌ ನಿಷೇಧ, ಮಹದಾಯಿ, ಮೇಕೆದಾಟು ಜಲಯೋಜನೆ ಜಾರಿಗೆ ಆಗ್ರಹಿಸಿ ಹಾಗೂ ಕನ್ನಡಿಗರ ಮೇಲೆ ಪರಭಾಷಿಕರ ದಬ್ಬಾಳಿಕೆ ಖಂಡಿಸಿ ಕನ್ನಡಪರ ಸಂಘಟನೆಗಳು ನೀಡಿದ್ದ ಕರ್ನಾಟಕ ಬಂದ್‌ ಕರೆಗೆ ರಾಜಧಾನಿ ಬೆಂಗಳೂರಿನಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಆದರೆ ಅನೇಕ ಕಡೆ ವಿವಿಧ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು.

ಬಂದ್‌ಗೆ ಅನೇಕ ಸಂಘಟನೆಗಳು ನೈತಿಕ ಬೆಂಬಲ ವ್ಯಕ್ತಪಡಿಸಿದ್ದು, ಕೆಲವು ಸಂಘಟನೆಗಳು ಬಂದ್‌ನಿಂದ ದೂರ ಇಳಿದ ಪರಿಣಾಮ ಪ್ರಮುಖ ಮಾರುಕಟ್ಟೆ ಸೇರಿದಂತೆ ವಾಹನ ಸಂಚಾರ, ವಿವಿಧ ವಾಣಿಜ್ಯ ವಹಿವಾಟುಗಳು, ಹೋಟೆಲ್‌ಗಳ ಸೇವೆಯಲ್ಲಿ ವ್ಯತ್ಯಯ ಕಂಡು ಬರಲಿಲ್ಲ. ಹೆಚ್ಚಿನ ಪೊಲೀಸ್‌ ಬಂದೋಬಸ್ತ್‌ ವ್ಯವಸ್ಥೆ ಮಾಡಿದ್ದರಿಂದ ಯಾವುದೇ ಅಹಿತಕರ ಘಟನೆಗಳು ನಡೆಯಲಿಲ್ಲ. ಮೆಟ್ರೋ ರೈಲು ಸಂಚಾರಕ್ಕೆ ತಡೆ ಒಡ್ಡದಿರಲಿ ಎಂಬ ಕಾರಣಕ್ಕೆ ಮೆಜೆಸ್ಟಿಕ್‌ ಮೆಟ್ರೋ ನಿಲ್ದಾಣ ಸಮೀಪ ಕೆಎಸ್‌ಆರ್‌ಪಿ ತುಕಡಿಯೊಂದನ್ನು ನಿಯೋಜಿಸಲಾಗಿತ್ತು.

ಚಿಕ್ಕಪೇಟೆ, ಬಳೆಪೇಟೆ ಸೇರಿದಂತೆ ಗಾಂಧಿನಗರದ ಕೆಲವೆಡೆ ಬೆಳಗ್ಗೆ ಅಂಗಡಿ ಮುಂಗಟ್ಟುಗಳು ಮುಚ್ಚಿದ ಸ್ಥಿತಿಯಲ್ಲಿ ಕಂಡುಬಂದವಾದರೂ ಮಧ್ಯಾಹ್ನದ ಹೊತ್ತಿಗೆ ವಹಿವಾಟುನಲ್ಲಿ ತೊಡಗಿಕೊಂಡಿದ್ದವು.

ಮೈಸೂರು ಬ್ಯಾಂಕ್‌ ವೃತ್ತದಲ್ಲಿ 100ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿತ್ತು. ಸದಾ ವಾಹನ ಮತ್ತು ಜನ ದಟ್ಟಣೆಯಿಂದ ಕೂಡಿರುತ್ತಿದ್ದ ಬೆಂಗಳೂರಿನ ಕೇಂದ್ರ ವಾಣಿಜ್ಯ ಪ್ರದೇಶ ಜನ ಸಂಚಾರ ವಿರಳವಾಗಿತ್ತು. ಕೆಲ ಆಟೋ ಚಾಲಕರು ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸಿ, ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದ ದೃಶ್ಯ ಕಂಡುಬಂತು. 

ವಿಮಾನ ನಿಲ್ದಾಣ ಭರ್ತಿ:

ಬಂದ್‌ ಹಿನ್ನೆಲೆಯಲ್ಲಿ ಕ್ಯಾಬ್‌ ಸೇವೆಯಲ್ಲಿ ವ್ಯತ್ಯಯವಾಗಲಿದೆ ಎಂದು ಪ್ರಯಾಣಿಕರು ಮಧ್ಯಾಹ್ನದ ವಿಮಾನಗಳಿಗೆ ತೆರಳಲು ಬೆಳಗ್ಗೆಯೇ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಇದರಿಂದ ಬೆಳಗ್ಗೆಯೇ ವಿಮಾನ ನಿಲ್ದಾಣ ತುಂಬಿ ಹೋಗಿತ್ತು. ಆದರೆ ಬಂದ್‌ ಹೆಚ್ಚು ಪರಿಣಾಮ ಉಂಟು ಮಾಡದಿರುವುದು ಗಮನಕ್ಕೆ ಬಂದ ನಂತರ ಏರ್‌ಪೋರ್ಟ್‌ ಕ್ಯಾಬ್‌ ಸಂಚಾರ ಎಂದಿನಂತೆ ಆರಂಭಗೊಂಡಿತು.

 ಮೆಟ್ರೋ ನಿಲ್ದಾಣ ಮುತ್ತಿಗೆ ಯತ್ನ

ಕನ್ನಡಪರ ಸಂಘಟನೆಗಳ ಕಾರ್ಯಕರ್ತರು, ರಾಜಾಜಿನಗರ ಮೆಟ್ರೋ ನಿಲ್ದಾಣಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ಸ್ಥಳದಲ್ಲಿ ನಿಯೋಜನೆಗೊಂಡಿದ್ದ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು, ಸ್ವಾತಂತ್ರ‍್ಯ ಉದ್ಯಾನಕ್ಕೆ ಕರೆದೊಯ್ದ ಘಟನೆ ನಡೆಯಿತು.

ಸರ್ಕಾರದ ವಿರುದ್ಧ ಘೋಷಣೆ

ಮೇಖ್ರಿ ಸರ್ಕಲ್‌, ಗಾಂಧಿನಗರ, ಚಾಮರಾಜಪೇಟೆ, ರಾಜಾಜಿನಗರ, ಯಶವಂತಪುರ, ಮಡಿವಾಳ, ಬೊಮ್ಮನಹಳ್ಳಿ ಸೇರಿದಂತೆ ಇತರ ಕಡೆಗಳಲ್ಲಿ ಕನ್ನಡಪರ ಹೋರಾಟಗಾರರು ಗುಂಪಾಗಿ ಕೆಲವೊತ್ತು ಪ್ರತಿಭಟನೆಗೆ ಇಳಿದಿದ್ದ ದೃಶ್ಯಕಂಡುಬಂತು.

ಇನ್ನು ಕೆಲವೆಡೆ ವಾಟಾಳ್‌ ನಾಗರಾಜ್‌ ಸೇರಿದಂತೆ ಇತರೆ ಹೋರಾಟಗಾರರನ್ನು ಪೊಲೀಸರು ಬಂಧಿಸಿದ್ದನ್ನು ಖಂಡಿಸಿ ಪ್ರತಿಭಟನಾಕಾರರ ಆಕ್ರೋಶ ವ್ಯಕ್ತಪಡಿಸಿದರು. ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಕನ್ನಡಪರ ಹೋರಾಟಗಾರರನ್ನು ಪೊಲೀಸ್‌ರು ಬಂಧಿಸಿದ್ದು ಸರಿಯಲ್ಲ. ರಾಜ್ಯ ಸರ್ಕಾರ ಪೊಲೀಸರನ್ನು ಬಳಸಿಕೊಂಡು ಹೋರಾಟವನ್ನು ಹತ್ತಿಕ್ಕಿದೆ ಎಂದು ಆಪಾದಿಸಿದ ಪ್ರತಿಭಟನಾಕಾರರು ಸರ್ಕಾರ ವಿರುದ್ಧ ಘೋಷಣೆ ಕೂಗಿದರು.

Share this article