ಆ.3ರಿಂದ ಬೆಂಗಳೂರು ಇಂಡಿಯಾ ನ್ಯಾನೋ ಸಮಾವೇಶ: ಪ್ರಿಯಾಂಕ್ ಖರ್ಗೆ

KannadaprabhaNewsNetwork |  
Published : Jul 26, 2026, 02:00 AM ISTUpdated : Jul 26, 2026, 04:46 AM IST
Nano

ಸಾರಾಂಶ

ನ್ಯಾನೋ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ದೇಶದ ಅತಿದೊಡ್ಡ ಅಂತರಾಷ್ಟ್ರೀಯ ಸಮ್ಮೇಳನವಾಗಿರುವ ‘ಬೆಂಗಳೂರು ಇಂಡಿಯಾ ನ್ಯಾನೋ ಸಮಾವೇಶ’ ಆಗಸ್ಟ್‌ 3 ರಿಂದ 5 ದಿನಗಳವರೆಗೆ ನಗರದ ದಿ ಲಲಿತ್‌ ಅಶೋಕ್‌ ಹೋಟೆಲ್‌ನಲ್ಲಿ ನಡೆಯಲಿದೆ ಎಂದು ಐಟಿ, ಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ.

  ಬೆಂಗಳೂರು :  ನ್ಯಾನೋ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ದೇಶದ ಅತಿದೊಡ್ಡ ಅಂತರಾಷ್ಟ್ರೀಯ ಸಮ್ಮೇಳನವಾಗಿರುವ ‘ಬೆಂಗಳೂರು ಇಂಡಿಯಾ ನ್ಯಾನೋ ಸಮಾವೇಶ’ ಆಗಸ್ಟ್‌ 3 ರಿಂದ 5 ದಿನಗಳವರೆಗೆ ನಗರದ ದಿ ಲಲಿತ್‌ ಅಶೋಕ್‌ ಹೋಟೆಲ್‌ನಲ್ಲಿ ನಡೆಯಲಿದೆ ಎಂದು ಐಟಿ, ಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, 14ನೇ ಆವೃತ್ತಿಯ ಸಮಾವೇಶವು ನ್ಯಾನೋ ತಂತ್ರಜ್ಞಾನ ಆಧಾರಿತ ಆವಿಷ್ಕಾರಗಳ ವಾಣಿಜ್ಯೀಕರಣಕ್ಕೆ ವೇಗ ನೀಡಲು ಸಹಕಾರಿ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆಯ ಬೆಂಗಳೂರು ಪ್ರಮುಖ ಕೇಂದ್ರವಾಗಿ ಬೆಳೆದಿದೆ. ಇಂತಹ ಬೆಂಗಳೂರಿನಲ್ಲಿ ನಡೆಯುತ್ತಿರುವ ಸಮಾವೇಶದಲ್ಲಿ ದೇಶ ವಿದೇಶಗಳ ಖ್ಯಾತ ವಿಜ್ಞಾನಿಗಳು, ಕೈಗಾರಿಕಾ ವಲಯದ ಪ್ರಮುಖರು, ನವೋದ್ಯಮ ಸಂಸ್ಥೆಗಳು, ಹೂಡಿಕೆದಾರರು, ನೀತಿ ನಿರೂಪಕರು ಹಾಗೂ ತಂತ್ರಜ್ಞಾನ ಕ್ಷೇತ್ರದ ಪರಿಣಿತರು ಒಂದೇ ವೇದಿಕೆಯಡಿ ಚಿಂತನ–ಮಂಥನ ನಡೆಸಲಿದ್ದಾರೆ ಎಂದು ಪ್ರಿಯಾಂಕ್ ಮಾಹಿತಿ ನೀಡಿದರು.

ಆಗಸ್ಟ್ 3ರಂದು ವಿಶೇಷ ಕಾರ್ಯಾಗಾರಕ್ಕೆ ಚಾಲನೆ ದೊರೆಯಲಿದೆ. ಈ ದಿನ ನ್ಯಾನೋ ತಯಾರಿಕೆ, ನ್ಯಾನೋ ವಿಶ್ಲೇಷಣೆ ಹಾಗೂ ಜೈವಿಕ ವಿಜ್ಞಾನದಲ್ಲಿ ನ್ಯಾನೋ ತಂತ್ರಜ್ಞಾನದ ಬಳಕೆ ಕುರಿತು ತಜ್ಞರ ಮಾರ್ಗದರ್ಶನದಲ್ಲಿ ಪ್ರಾಯೋಗಿಕ ತರಬೇತಿ ಕಾರ್ಯಾಗಾರಗಳು ನಡೆಯಲಿವೆ.

ಆಗಸ್ಟ್ 4 ಮತ್ತು 5ರಂದು ಮುಖ್ಯ ಸಮ್ಮೇಳನ ನಡೆಯಲಿದ್ದು, ನ್ಯಾನೋ ತಂತ್ರಜ್ಞಾನದ ಸಂಶೋಧನೆ ಹಾಗೂ ವಾಣಿಜ್ಯೀಕರಣದ ಅತ್ಯಂತ ಭರವಸೆಯ ಮೂರು ಪ್ರಮುಖ ಕ್ಷೇತ್ರಗಳಾದ ಸೆಮಿಕಂಡಕ್ಟರ್, ಕೃಷಿ ಮತ್ತು ಆರೋಗ್ಯ ಮತ್ತು ಇಂಧನ ಮತ್ತು ಪರಿಸರ ಕ್ಷೇತ್ರಗಳಲ್ಲಿ ನ್ಯಾನೋ ತಂತ್ರಜ್ಞಾನ ಎಂಬ ವಿಷಯಗಳ ಮೇಲೆ ವಿಶೇಷ ಗಮನ ಹರಿಸಲಾಗುತ್ತದೆ ಎಂದು ಪ್ರಿಯಾಂಕ್‌ ಹೇಳಿದರು.

ಸಮಾವೇಶದಲ್ಲಿ 26ಕ್ಕೂ ಹೆಚ್ಚು ಸಭೆಗಳು, 200ಕ್ಕೂ ಹೆಚ್ಚು ವೈಜ್ಞಾನಿಕ ಸಂಶೋಧನಾ ಪ್ರಬಂಧಗಳ ಮಂಡನೆ, 50ಕ್ಕೂ ಹೆಚ್ಚು ಪ್ರದರ್ಶನ ಮಳಿಗೆ, 80ಕ್ಕೂ ಹೆಚ್ಚು ವಿಷಯತಜ್ಞರ ಭಾಷಣ, 10ಕ್ಕೂ ಹೆಚ್ಚು ದೇಶಗಳ 1,000ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ನ್ಯಾನೋ ಸ್ಪಾರ್ಕ್ಸ್ ಸ್ಟಾರ್ಟ್‌ಅಪ್ ಪಿಚ್ಚಿಂಗ್:

ಹೂಡಿಕೆದಾರರನ್ನು ಭೇಟಿ ಮಾಡುವ, ಕೈಗಾರಿಕಾ ವಲಯದ ಪ್ರಮುಖರೊಂದಿಗೆ ಸಂಪರ್ಕ ಬೆಳೆಸುವ ಹಾಗೂ ವಾಣಿಜ್ಯೀಕರಣ, ಸಹಭಾಗಿತ್ವದ ಅವಕಾಶಗಳನ್ನು ಅನ್ವೇಷಿಸುವ ಅವಕಾಶವನ್ನು ಸಮಾವೇಶ ಸೃಷ್ಟಿಸಲಿದೆ ಎಂದು ಐಟಿ ಬಿಟಿ ಇಲಾಖೆ ಕಾರ್ಯದರ್ಶಿ ಡಾ.ಎನ್‌. ಮಂಜುಳಾ ತಿಳಿಸಿದರು.

ನ್ಯಾನೋ ನಾವೀನ್ಯತೆ ಪ್ರಶಸ್ತಿ:

ಭರವಸೆಯ ನವೋದ್ಯಮಗಳು ಹಾಗೂ ನ್ಯಾನೋ ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸತನದ ಕೊಡುಗೆ ನೀಡುತ್ತಿರುವ ಸಾಧಕರನ್ನು ಗೌರವಿ ನ್ಯಾನೋ ನಾವೀನ್ಯತೆ ಪ್ರಶಸ್ತಿ ನೀಡಲಾಗುವುದು ಎಂದು ಮಂಜುಳಾ ತಿಳಿಸಿದರು.

ಜತೆಗೆ ಯುವಕರಿಗಾಗಿ ನ್ಯಾನೋ ಕಾರ್ಯಕ್ರಮ, ನ್ಯಾನೋ ತಂತ್ರಜ್ಞಾನ ರಸಪ್ರಶ್ನೆ, ಸಂಶೋಧನಾ ಪ್ರಬಂಧ ಮಂಡನೆಯಂತಹ ಹಲವು ಅವಕಾಶ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ವೆಬ್‌ಸೈಟ್‌ ಮಾಹಿತಿ

‘ನ್ಯಾನೋ ತಂತ್ರಜ್ಞಾನದ ಮುಂದಿನ ಗಡಿ: ಕೃತಕ ಬುದ್ಧಿಮತ್ತೆ ಮತ್ತು ಅದರಾಚೆಗೆ – ಪರಿಕಲ್ಪನೆ, ಸಮನ್ವಯ, ವಾಣಿಜ್ಯೀಕರಣ’ ಎಂಬ ಧ್ಯೇಯವ್ಯಾಕ್ಯದ ಅಡಿ ನಡೆಯುತ್ತಿರುವ ಸಮಾವೇಶದಲ್ಲಿ ಸೆಮಿಕಂಡಕ್ಟರ್, ಕೃಷಿ ಮತ್ತು ಆರೋಗ್ಯ ಹಾಗೂ ಇಂಧನ ಮತ್ತು ಪರಿಸರ ಕ್ಷೇತ್ರಗಳ ಬಗ್ಗೆ ಆದ್ಯತೆ ನೀಡಲಾಗುವುದು. ಸಮಾವೇಶದ ಕುರಿತ ಮಾಹಿತಿಗೆ www.bengaluruindianano.in ವೆಬ್‌ಸೈಟ್‌ಗೆ ಭೇಟಿ ನೀಡಬಹುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಮಂಡ್ಯ ಜಿಲ್ಲಾ ಕಾಂಗ್ರೆಸ್‌ಗೆ ಕುಮಾರ್ ಕೊಪ್ಪ ಹೊಸ ಸಾರಥಿ
ಮೋದಿ ರಾಜಕೀಯ ಜೀವನಕ್ಕೆ 25 ವರ್ಷ: 1 ತಿಂಗಳು ಸಂಭ್ರಮ