ಪಟನಾ : ಎರಡೆರಡು ಮತದಾರ ಗುರುತಿನ ಚೀಟಿ ಹೊಂದಿದ ಆರೋಪ ಹೊತ್ತಿರುವ ಬಿಹಾರ ಆರ್‌ಜೆಡಿ ನಾಯಕ ತೇಜಸ್ವಿಯಾದವ್ ಅವರು, ಇದೀಗ ಬಿಹಾರದ ಉಪಮುಖ್ಯಮಂತ್ರಿ ವಿಜಯ್ ಕುಮಾರ್ ಸಿನ್ಹಾ ವಿರುದ್ಧ 2 ವೋಟರ್ ಐಡಿ ಕಾರ್ಡ್ ಹೊಂದಿರುವ ಆರೋಪ ಮಾಡಿದ್ದು, ಈ ಸಂಬಂಧ ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಈ ಆರೋಪಕ್ಕೆ ತಿರುಗೇಟು ನೀಡಿರುವ ಸಿನ್ಹಾ, ನಾನು ಈಗಾಗಲೇ ಚುನಾವಣಾ ಆಯೋಗಕ್ಕೆ ಹಿಂದಿನ ವಿಳಾಸದಲ್ಲಿರುವ ವೋಟರ್ ಐಡಿ ರದ್ದತಿಗೆ ಅರ್ಜಿ ಸಲ್ಲಿಸಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಇದಕ್ಕೂ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ತೇಜಸ್ವಿ ಯಾದವ್, ಸಿನ್ಹಾ ಅವರು ಲಖಿಸರೈ ಮತ್ತು ಬಂಕೀಪುರ ಎರಡೂ ವಿಧಾನಸಭಾ ಕ್ಷೇತ್ರದಲ್ಲಿ ವೋಟರ್ ಐಡಿ ಹೊಂದಿದ್ದಾರೆ. ವೋಟರ್ ಐಡಿಯ ವಿಶೇಷ ಪರಿಷ್ಕರಣೆಯ ನಂತರವೂ ಈ ರೀತಿ ಆಗಿದೆ. ಇದಕ್ಕೆ ಸಿನ್ಹಾ ಅಥವಾ ಚುನಾವಣಾ ಆಯೋಗವೇ ಹೊಣೆ. ಸಿನ್ಹಾ ಇದಕ್ಕಾಗಿ ಯಾವಾಗ ತಮ್ಮ ಹುದ್ದೆಗೆ ರಾಜೀನಾಮೆ ಕೊಡುತ್ತಾರೆಂದು ಪ್ರಶ್ನಿಸಿದರು.
ಸಿನ್ಹಾ ಸ್ಪಷ್ಟನೆ:
‘ನಾನು ಈಗಾಗಲೇ ಬಂಕೀಪುರ ಕ್ಷೇತ್ರದಲ್ಲಿರುವ ಮತದಾರರ ಗುರುತಿನ ಚೀಟಿ ರದ್ದತಿಗೆ ಅರ್ಜಿ ಸಲ್ಲಿಸಿದ್ದೇನೆ. ನಾನು ಹಿಂದೆ ಆ ಕ್ಷೇತ್ರದಲ್ಲೇ ನೆಲೆಸಿದ್ದೆ. ಈಗ ಲಕ್ಷಿಸರೈ ಕ್ಷೇತ್ರದ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಿದ್ದೇನೆ’ ಎಂದು ಸ್ಪಷ್ಟನೆ ನೀಡಿರುವ ಸಿನ್ಹಾ, ‘ತಪ್ಪು ಮಾಡುವುದೇನಿದ್ದರೂ ಜಂಗಲ್ ರಾಜ್‌ನ ರಾಜನೇ ಹೊರತು ನಾವಲ್ಲ’ ಎಂದು ತಿರುಗೇಟು ನೀಡಿದ್ದಾರೆ.
ಪೂರ್ವಸೂಚನೆ ಇಲ್ಲದೇ ಮತದಾರರ ಹೆಸರು ಅಳಿಸಲ್ಲ: ಚುನಾವಣಾ ಆಯೋಗ
ನವದೆಹಲಿ : ಬಿಹಾರದಲ್ಲಿ ಕರಡು ಮತದಾರರ ಪಟ್ಟಿಯಿಂದ ಯಾವುದೇ ಮತದಾರರ ಹೆಸರನ್ನು ಪೂರ್ವ ಸೂಚನೆ ನೀಡದೆ ಅಳಿಸುವುದಿಲ್ಲ. ಅಳಿಸುವ ಮುನ್ನ ವಿಚಾರಣೆಗೆ ಅವಕಾಶ ನೀಡಲಾಗುತ್ತದೆ ಹಾಗೂ ಸಕಾರಣ ನೀಡಿ ಅಳಿಸಲಾಗುತ್ತದೆ ಎಂದು ಚುನಾವಣಾ ಆಯೋಗ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.ಬಿಹಾರದಲ್ಲಿ ಬಹುನಿರೀಕ್ಷಿತ ಕರಡು ಮತದಾರರ ಪಟ್ಟಿಯನ್ನು ಇತ್ತೀಚೆಗೆ ಆಯೋಗ ಬಿಡುಗಡೆ ಮಾಡಿತ್ತು.
ಈ ಪಟ್ಟಿಯಲ್ಲಿ 7.24 ಕೋಟಿ ಮತದಾರರು ಇದ್ದಾರೆ. ಆದರೆ 65 ಲಕ್ಷಕ್ಕೂ ಹೆಚ್ಚು ಹೆಸರುಗಳು ಪಟ್ಟಿಯಿಂದ ಹೊರಬಿದ್ದಿದ್ದು, ಹೆಚ್ಚಿನ ವ್ಯಕ್ತಿಗಳು ಸಾವನ್ನಪ್ಪಿದ್ದಾರೆ ಅಥವಾ ಅನ್ಯ ರಾಜ್ಯಕ್ಕೆ ವಲಸೆ ಹೋಗಿದ್ದಾರೆ ಎಂದು ತಿಳಿಸಿದೆ.ಆದರೆ ಮತದಾರ ಪಟ್ಟಿ ಪರಿಷ್ಕರಣೆಯು ಬಿಜೆಪಿ ವಿರೋಧಿ ಮತದಾರರನ್ನು ಅಳಿಸುವ ಹುನ್ನಾರ ಎಂದು ವಿಪಕ್ಷಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿವೆ. ಹೀಗಾಗಿ ಕೋರ್ಟ್‌ಗೆ ಆಯೋಗ ಈ ಸ್ಪಷ್ಟನೆ ನೀಡಿದೆ.