ಗುಜರಾತ್‌ ಹ್ಯಾಟ್ರಿಕ್‌ ಕ್ಲೀನ್‌ಸ್ವೀಪ್‌ಗೆ ಬಿಜೆಪಿ ಗುರಿ

KannadaprabhaNewsNetwork | Updated : Apr 05 2024, 04:39 AM IST

ಸಾರಾಂಶ

ಬಿಜೆಪಿಯ ಪರಮೋಚ್ಚ ನಾಯಕರಾಗಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಶಾ ಅವರ ತವರು ರಾಜ್ಯದಲ್ಲಿ ಬಿಜೆಪಿ ಈ ಬಾರಿಯೂ 26ಕ್ಕೆ 26 ಸ್ಥಾನಗಳನ್ನೂ ಗೆಲ್ಲಲಿದೆಯಾ ಎಂಬುದು ಸದ್ಯದ ಕುತೂಹಲ.

ಅಹಮದಾಬಾದ್‌: ಬಿಜೆಪಿಯ ಪರಮೋಚ್ಚ ನಾಯಕರಾಗಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಶಾ ಅವರ ತವರು ರಾಜ್ಯದಲ್ಲಿ ಬಿಜೆಪಿ ಈ ಬಾರಿಯೂ 26ಕ್ಕೆ 26 ಸ್ಥಾನಗಳನ್ನೂ ಗೆಲ್ಲಲಿದೆಯಾ ಎಂಬುದು ಸದ್ಯದ ಕುತೂಹಲ.

2014ರಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿ ಅಭ್ಯರ್ಥಿಯಾದ ಬಳಿಕ ನಡೆದ ಚುನಾವಣೆಯಲ್ಲಿ ಬಿಜೆಪಿ ಎಲ್ಲ 26 ಸ್ಥಾನಗಳನ್ನೂ ಬುಟ್ಟಿಗೆ ಹಾಕಿಕೊಂಡಿತ್ತು. 2019ರಲ್ಲೂ ಸಂಪೂರ್ಣ ಸ್ಥಾನಗಳಲ್ಲಿ ಸರಾಸರಿ 3 ಲಕ್ಷ ಮತಗಳ ಅಂತರದೊಂದಿಗೆ ಗೆದ್ದಿತ್ತು. ಇದೀಗ ಸತತ ಮೂರನೇ ಬಾರಿಯೂ ಗೆಲ್ಲುವ ಅದಮ್ಯ ವಿಶ್ವಾಸದಲ್ಲಿ ಬಿಜೆಪಿ ಇದೆ. ಅಲ್ಲದೆ, ಈ ಸಲ ಪ್ರತಿ ಅಭ್ಯರ್ಥಿ 5 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಬೇಕು ಎಂಬ ಮಹಾನ್‌ ಗುರಿಯನ್ನೂ ಕೂಡ ನೀಡಿದೆ.

2009ರ ಲೋಕಸಭೆ ಚುನಾವಣೆಯಲ್ಲಿ 11 ಸ್ಥಾನಗಳನ್ನು ಗೆದ್ದು ಬೀಗಿದ್ದ ಕಾಂಗ್ರೆಸ್‌ಗೆ ಆ ನಂತರ ನಡೆದ ಲೋಕಸಭೆ ಚುನಾವಣೆಗಳಲ್ಲಿ ಖಾತೆ ತೆರೆಯಲೂ ಆಗಿಲ್ಲ. 2022ರ ವಿಧಾನಸಭೆ ಚುನಾವಣೆಯಲ್ಲಿ 182 ಸದಸ್ಯ ಬಲ ಗುಜರಾತ್ ವಿಧಾನಸಭೆಯಲ್ಲಿ 156 ಸ್ಥಾನ ಗೆದ್ದು ಬೀಗಿದ್ದ ಬಿಜೆಪಿ, ಅದೇ ಓಟ ಮುಂದುವರಿಯಲಿದೆ ಎಂಬ ನಂಬಿಕೆಯನ್ನು ಹೊಂದಿದೆ. ಆದರೆ ಆಮ್‌ ಆದ್ಮಿ ಪಕ್ಷ ಮತ ವಿಭಜನೆ ಮಾಡಿ, ಕೇವಲ 5 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತಲ್ಲದೆ, ತಾನು ಗೆಲ್ಲಲಿರುವ ಸ್ಥಾನಗಳಿಗೂ ಕಲ್ಲು ಹಾಕಿತು ಎಂಬ ದೂರನ್ನು ಹೊತ್ತಿದ್ದ ಕಾಂಗ್ರೆಸ್‌ ಇದೀಗ ಆಪ್‌ ಜತೆಯೇ ‘ಇಂಡಿಯಾ’ ಹೆಸರಲ್ಲಿ ಮೈತ್ರಿ ಮಾಡಿಕೊಂಡಿದೆ. 24 ಕ್ಷೇತ್ರಗಳಲ್ಲಿ ಕಾಂಗ್ರೆಸ್‌, 2ರಲ್ಲಿ ಆಪ್‌ ಸ್ಪರ್ಧೆ ಮಾಡಿವೆ.

ಗಮನಾರ್ಹ ಎಂದರೆ, ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್- ಆಪ್‌ ಗಳಿಸಿರುವ ಶೇಕಡಾವಾರು ಮತಗಳನ್ನು ಒಗ್ಗೂಡಿಸಿದರೆ ಶೇ.40.2ರಷ್ಟಾಗುತ್ತದೆ. ಅಂದರೆ ಬಿಜೆಪಿ ಗಳಿಸಿದ ಶೇ.52.50ರಷ್ಟು ಮತಗಳಿಗಿಂತ ಕಡಿಮೆ. ಆದರೆ, ಆಗ ಮತ ವಿಭಜನೆಯಾಗಿತ್ತು. ಈಗ ಬಿಜೆಪಿ ವಿರೋಧಿ ಮತಗಳು ಒಗ್ಗೂಡುತ್ತವೆ ಎಂಬ ನಂಬಿಕೆ ಇಂಡಿಯಾ ಪಾಳೆಯದಲ್ಲಿದೆ.

ನಿರುದ್ಯೋಗ, ಹಣದುಬ್ಬರ, ಆರೋಗ್ಯ ಸೌಲಭ್ಯಗಳ ಕೊರತೆ ಈ ಚುನಾವಣೆಯಲ್ಲಿ ಸದ್ದು ಮಾಡುತ್ತಿದೆ. 25ಕ್ಕೂ ಅಧಿಕ ವರ್ಷಗಳಿಂದ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿರುವುದರಿಂದ ಆಡಳಿತ ವಿರೋಧಿ ಅಲೆಯೂ ಇದೆ ಎಂದು ಇಂಡಿಯಾ ಬಿಂಬಿಸುತ್ತಿದೆ. ಆದರೆ ಗುಜರಾತ್‌ ಮೂಲದ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗುತ್ತಾರೆ ಎಂಬ ವಿಷಯ ಅದೆಲ್ಲವನ್ನೂ ಗೌಣವಾಗಿಸಿಬಿಡಬಹುದು ಎಂಬ ಲೆಕ್ಕಾಚಾರವಿದೆ.

ಪ್ರಮುಖರು, ಕ್ಷೇತ್ರಗಳು: ಅಮಿತ್‌ ಶಾ (ಗಾಂಧಿನಗರ), ಮನ್ಸುಖ್‌ಮಾಂಡವೀಯ (ಪೋರ್‌ಬಂದರ್), ಪುರಷೋತ್ತಮ ರೂಪಾಲ (ರಾಜಕೋಟ್‌), ಸಿ.ಆರ್‌.ಪಾಟೀಲ್‌ (ನವಸಾರಿ).

ಗೆಲುವಿನ ಲೆಕ್ಕಾಚಾರ ಹೇಗೆ?: ಚುನಾವಣೆಗೂ ಮುನ್ನವೇ ಕಾಂಗ್ರೆಸ್‌ನಿಂದ ಕೆಲವು ನಾಯಕರು ಹೊರಹೋಗಿದ್ದಾರೆ. ಆಮ್‌ ಆದ್ಮಿ ಪಕ್ಷ ತನ್ನ ಇಬ್ಬರು ಶಾಸಕರನ್ನೇ ಕಣಕ್ಕಿಳಿಸಿ ಅದೃಷ್ಟ ಪರೀಕ್ಷೆಗೆ ಇಳಿದಿದೆ. 26ಕ್ಕೆ 26 ಸ್ಥಾನಗಳನ್ನೂ ಬಿಜೆಪಿ ಗೆಲ್ಲದಂತೆ ನೋಡಿಕೊಳ್ಳುವುದರ, ಜತೆಗೆ ಹೆಚ್ಚು ಸ್ಥಾನ ಗೆಲ್ಲುವ ತಂತ್ರವನ್ನು ಇಂಡಿಯಾ ಮಾಡುತ್ತಿದೆ. ಕಾಂಗ್ರೆಸ್‌ ಒಂದು ಸ್ಥಾನ ಗೆದ್ದರೂ 10 ವರ್ಷ ಬಳಿಕ ಖಾತೆ ತೆರೆದಂತಾಗುತ್ತದೆ. ಆಪ್‌ ಒಂದು ಸ್ಥಾನ ಗೆದ್ದರೆ ಮೊದಲ ಬಾರಿಗೆ ಗುಜರಾತಿನಲ್ಲಿ ಅಕೌಂಟ್‌ ಓಪನ್‌ ಮಾಡಿದಂತಾಗುತ್ತದೆ. ಬಿಜೆಪಿ ಎಲ್ಲ ಸ್ಥಾನಗಳನ್ನು ಗೆದ್ದರೆ ಹ್ಯಾಟ್ರಿಕ್‌ ಜಯಭೇರಿ ಬಾರಿಸಿದ ದಾಖಲೆಯನ್ನು ಸ್ಥಾಪಿಸುತ್ತದೆ. ಎಲ್ಲ ಚುನಾವಣೆಪೂರ್ವ ಸಮೀಕ್ಷೆಗಳು ಗುಜರಾತಿನಲ್ಲಿ ಬಿಜೆಪಿ ಸತತ ಮೂರನೇ ಬಾರಿಗೆ 26 ಸ್ಥಾನಗಳಲ್ಲೂ ಗೆಲ್ಲಲಿದೆ ಎಂದು ಭವಿಷ್ಯ ನುಡಿದಿವೆ.

ಮೇ 7ರಂದು ಒಂದು ಹಂತದ ಚುನಾವಣೆ ನಡೆಯಲಿದ್ದು, ಜೂ.2ರಂದು ಫಲಿತಾಂಶ ಪ್ರಕಟವಾಗಲಿದೆ. ಆಗ ಯಾವ ದಾಖಲೆ ಸ್ಥಾಪನೆಯಾಗಲಿದೆ ಎಂಬುದು ಸ್ಪಷ್ಟವಾಗಲಿದೆ.

Share this article