ರಾಜಕೀಯ ಎನ್ನುವುದು ಚದುರಂಗದಾಟ ಎಂದು ಕೆಲವರು ಭಾವಿಸಿದ್ದಾರೆ. ಇಂದಿರಾಗಾಂಧಿ ಅವರು ಈ ರೀತಿಯ ರಾಜಕೀಯ ಮಾಡಲಿಲ್ಲ. ಯಾವುದೇ ಭಯ ಇಲ್ಲದೇ ಸಮಾಜದ ಹುಳುಕು, ತಾರತಮ್ಯ, ಅನ್ಯಾಯವನ್ನು ಜನರಿಗೆ ತಿಳಿಸಬೇಕು. ಅನ್ಯಾಯದ ಬಗ್ಗೆ ಪ್ರಶ್ನಿಸಿದರೆ ನಮ್ಮ ಮೇಲೆ ದಾಳಿ, ದೌರ್ಜನ್ಯ ಆಗಬಹುದು.
ಮಂಡ್ಯ : ಬಿಜೆಪಿ ಬಿ-ಟೀಂ ಜೆಡಿಎಸ್ ಎಂದು ನಾವು ಎಂದೋ ಹೇಳಿದ್ದ ಮಾತು ಈಗ ಸತ್ಯವಾಗಿದೆ. ಅಂದು ಒಪ್ಪಿಕೊಳ್ಳುವುದಕ್ಕೆ ಸಿದ್ಧವಾಗಿಲ್ಲದಿದ್ದ ಜೆಡಿಎಸ್ ಈಗ ಬಿಜೆಪಿಯನ್ನೇ ಅಪ್ಪಿಕೊಂಡಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿ ಕುಟುಕಿದರು.
ಮಂಡ್ಯ ವಿಶ್ವವಿದ್ಯಾಲಯದ ಆವರಣದಲ್ಲಿ ಬುಧವಾರ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ಆಯೋಜಿಸಿದ್ದ ಪ್ರಜಾಧ್ವನಿ-2 ಹಾಗೂ ಮಂಡ್ಯ ಕ್ಷೇತ್ರದ ಲೋಕಸಭೆ ಅಭ್ಯರ್ಥಿ ಸ್ಟಾರ್ ಚಂದ್ರುಪರ ಪ್ರಚಾರಸಭೆಯಲ್ಲಿ ಮಾತನಾಡಿದರು. 2018ರ ಚುನಾವಣಾ ಸಂದರ್ಭದಲ್ಲೇ ಜೆಡಿಎಸ್ ಬಿಜೆಪಿ ಜೊತೆ ಸೇರಿಕೊಂಡಿತ್ತು. ಅದನ್ನು ತಿಳಿದೇ ನಾವು ಬಿಜೆಪಿಯ ಬಿ-ಟೀಂ ಜೆಡಿಎಸ್ ಎಂದಿದ್ದೆವು. ಅದರಂತೆ ಈಗ ಎ-ಟೀಂ ಜತೆಗೆ ಬಿ-ಟೀಂ ಸೇರಿಕೊಂಡು ಮಜವಾಗಿರುವುದನ್ನು ನೋಡುತ್ತಿದ್ದೇವೆ. ಪರಸ್ಪರ ಒಬ್ಬರಿಗೊಬ್ಬರು ಸಹಾಯ ಮಾಡಲು ನಮ್ಮ ಮುಂದೆ ಬಂದಿದ್ದಾರೆ ಎಂದು ಜೆಡಿಎಸ್-ಬಿಜೆಪಿಯನ್ನು ಅಣಕಿಸಿದರು.
ರಾಜಕೀಯ ಎನ್ನುವುದು ಚದುರಂಗದಾಟ ಎಂದು ಕೆಲವರು ಭಾವಿಸಿದ್ದಾರೆ. ಸಾಕಷ್ಟು ಲೆಕ್ಕಾಚಾರ ಹೆಣೆಯಬೇಕು ಎಂದುಕೊಂಡಿದ್ದಾರೆ. ಆದರೆ, ಇಂದಿರಾಗಾಂಧಿ ಅವರು ಈ ರೀತಿಯ ರಾಜಕೀಯ ಮಾಡಲಿಲ್ಲ. ಯಾವುದೇ
ಭಯ ಇಲ್ಲದೇ ಸಮಾಜದ ಹುಳುಕು, ತಾರತಮ್ಯ, ಅನ್ಯಾಯವನ್ನು ಜನರಿಗೆ ತಿಳಿಸಬೇಕು. ಅನ್ಯಾಯದ ಬಗ್ಗೆ ಪ್ರಶ್ನಿಸಿದರೆ ನಮ್ಮ ಮೇಲೆ ದಾಳಿ, ದೌರ್ಜನ್ಯ ಆಗಬಹುದು. ಎಷ್ಟೇ ಹೀಯಾಳಿಕೆ, ದಾಳಿ, ಹಲ್ಲೆ ಆದರೂ ಇಟ್ಟ ಹೆಜ್ಜೆಯನ್ನು ಹಿಂದಕ್ಕಿಡಬಾರದು ಎಂದಿದ್ದಾಗಿ ತಿಳಿಸಿದರು.
ದೇಶದ 25 ಉದ್ಯಮಿಗಳ ಒಟ್ಟು ಆಸ್ತಿ ದೇಶದ 72 ಕೋಟಿಗಳ ಜನರ ಆಸ್ತಿಗೆ ಸಮವಾಗಿದೆ. ಆ ಉದ್ಯಮಿಗಳ ಬಳಿ ಅಪಾರ ಹಣ, ಸೌಕರ್ಯ, ಸಂಪನ್ಮೂಲವಿದೆ. ಅಂಥವರ ಸಾಲಮನ್ನಾ ಮಾಡೋ ಅಗತ್ಯ ಇತ್ತಾ. ಅದಾನಿ ಕೇಳಿದ ಯಾವುದೇ ಜಾಗವನ್ನಾದರೂ ತಕ್ಷಣವೇ ಕೇಂದ್ರ ರೈತರಿಂದ ಕಿತ್ತು ಕೊಡುತ್ತೆ. ಮುಂಬೈ ಏರ್‌ಪೋರ್ಟ್ ಕೇಳಿದರೂ ಮೋದಿ ಕೊಡಬಲ್ಲರು. ಐಟಿ, ಇಡಿ ಮೂಲಕ ಬೆದರಿಸಿ ಆ ಏರ್‌ಪೋರ್ಟ್ ಕೊಡಿಸುತ್ತಾರೆ ಎಂದು ಟೀಕಿಸಿದರು.
ದೇಶವನ್ನು ಕೇವಲ ಒಂದು ವರ್ಗದ ಜನರು ಮುನ್ನಡೆಸುತ್ತಿದ್ದಾರೆ. ಶೇ. 95 ರಷ್ಟು ಜನರು ದನಿ ಇಲ್ಲದೇ ಬದುಕುತ್ತಾ ಇದ್ದಾರೆ. ಇಂತಹ ಗಂಭೀರ ವಿಚಾರಗಳ ಮೇಲೆ ಬೆಳಕು ಚೆಲ್ಲಬೇಕು. ಜನರಿಗೆ ಅರಿವು ಮೂಡಿಸಬೇಕಿದೆ ಎಂದರು.