ಅನುದಾನ ಜಟಾಪಟಿ : ಕಾಂಗ್ರೆಸ್‌ ಶಾಸಕರಿಗೆ ₹50 ಕೋಟಿ - ವಿಪಕ್ಷ ಶಾಸಕರಿಗೆ 25 ಲಕ್ಷ ಅನುದಾನ

KannadaprabhaNewsNetwork |  
Published : Jul 20, 2025, 01:15 AM ISTUpdated : Jul 20, 2025, 06:46 AM IST
ವಿಧಾನಸೌಧ | Kannada Prabha

ಸಾರಾಂಶ

 ರಾಜ್ಯ ಸರ್ಕಾರ ಕಾಂಗ್ರೆಸ್‌ ಶಾಸಕರಿಗೆ ತಲಾ ₹50 ಕೋಟಿ ಅನುದಾನ ನೀಡಿ, ವಿಪಕ್ಷ ಶಾಸಕರಿಗೆ ಕೇವಲ 25 ಲಕ್ಷ ಅನುದಾನ ನೀಡಿರುವ ವಿಷಯ ಸರ್ಕಾರ ಮತ್ತು ವಿಪಕ್ಷಗಳ ನಡುವೆ ತೀವ್ರ ಜಟಾಪಟಿಗೆ ಕಾರಣವಾಗಿದೆ

 ಬೆಂಗಳೂರು :  ರಾಜ್ಯ ಸರ್ಕಾರ ಕಾಂಗ್ರೆಸ್‌ ಶಾಸಕರಿಗೆ ತಲಾ ₹50 ಕೋಟಿ ಅನುದಾನ ನೀಡಿ, ವಿಪಕ್ಷ ಶಾಸಕರಿಗೆ ಕೇವಲ 25 ಲಕ್ಷ ಅನುದಾನ ನೀಡಿರುವ ವಿಷಯ ಸರ್ಕಾರ ಮತ್ತು ವಿಪಕ್ಷಗಳ ನಡುವೆ ತೀವ್ರ ಜಟಾಪಟಿಗೆ ಕಾರಣವಾಗಿದೆ. ಅನುದಾನ ಹಂಚಿಕೆಯಲ್ಲಿ ಸರ್ಕಾರ ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಎನ್ನುವಂತೆ ನಡೆದುಕೊಂಡಿದೆ. ಇದರ ವಿರುದ್ಧ ತೀವ್ರ ಹೋರಾಟ ನಡೆಸುವುದಾಗಿ ವಿಪಕ್ಷಗಳು ಎಚ್ಚರಿಸಿದ್ದರೆ, ಇದು ಹಿಂದಿನ ಸರ್ಕಾರವೇ ಹಾಕಿಕೊಟ್ಟ ಸಂಪ್ರದಾಯ ಎಂದು ಗೃಹ ಸಚಿವ ಪರಮೇಶ್ವರ್‌ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.

ಕಲಬುರಗಿಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ‘ಸಿಎಂ ಸಿದ್ದರಾಮಯ್ಯ ಅವರು ತಮ್ಮ ಕುರ್ಚಿ ಉಳಿಸಿಕೊಳ್ಳಲು ಕಾಂಗ್ರೆಸ್‌ ಶಾಸಕರಿಗೆ ₹50 ಕೋಟಿ ಅನುದಾನದ ಕಪಟ ನಾಟಕವಾಡುತ್ತಿದ್ದಾರೆ ಆರೋಪಿಸಿದ್ದಾರೆ. ಸಿದ್ದರಾಮಯ್ಯ ಅವರು ಈ ವಿಚಾರದಲ್ಲಿ ಬಹಳ ಕೃಪೆ ತೋರಿಸಿದ್ದಾರೆ. ಕಳೆದ ಎರಡೂವರೆ ವರ್ಷದಿಂದ ತಮ್ಮ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳಿಗೆ ಮುಖ್ಯಮಂತ್ರಿ ಬಿಡಿಗಾಸು ನೀಡುತ್ತಿಲ್ಲ ಅಂತ ಸಿದ್ದರಾಮಯ್ಯ ಅವರ ಮೇಲೆ ಕಾಂಗ್ರೆಸ್‌ ಶಾಸಕರೇ ಅಸಮಾಧಾನ ಹೊರಹಾಕಿದ್ದಾರೆ. ಇದೀಗ ಸಿದ್ದರಾಮಯ್ಯ ಅವರು ತಮ್ಮ ಸಿಎಂ ಕುರ್ಚಿ ಉಳಿಸಿಕೊಳ್ಳಲು ಅನುದಾನದ ಕಪಟ ನಾಟಕ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

₹50 ಕೋಟಿ ಬಿಡುಗಡೆಯ ಬಗ್ಗೆ ಸಿಎಂ ಏನೋ ಮಾತನಾಡಿದ್ದಾರೆ, ಆದರೆ ಯಾವಾಗ ಬಿಡುಗಡೆ ಆಗುತ್ತೆ? ಯಾವಾಗ ಶಾಸಕರ ಕೈ ಸೇರುತ್ತೆ ಎನ್ನುವುದು ಯಕ್ಷಪ್ರಶ್ನೆಯಾಗಿದೆ. ಆಡಳಿತ ಪಕ್ಷದ ಶಾಸಕರ ಕಣ್ಣಿಗೆ ಬೆಣ್ಣೆ, ನಮ್ಮ ಪಕ್ಷದ ಶಾಸಕರ ಕಣ್ಣಿಗೆ ಸುಣ್ಣ ಹಚ್ಚೋದು ನಿರಂತರವಾಗಿ ನಡೆಸಿಕೊಂಡು ಬಂದಿದ್ದಾರೆಂದು ತಿವಿದರು.

ಹೋರಾಟದ ಎಚ್ಚರಿಕೆ:

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಸಿ.ಬಿ.ಸುರೇಶ್‌ ಬಾಬು, ರಾಜ್ಯ ಕಾಂಗ್ರೆಸ್‌ ಸರ್ಕಾರವು ಮಳೆಗಾಲದ ವಿಧಾನಮಂಡಲ ಅಧಿವೇಶನ ಆರಂಭಕ್ಕೂ ಮುನ್ನ ಎಲ್ಲಾ ಪಕ್ಷಗಳ ಶಾಸಕರಿಗೂ ಸಮಾನ ಅನುದಾನ ಹಂಚಿಕೆ ಮಾಡಬೇಕು. ಇಲ್ಲವಾದರೆ, ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.

ಜೊತೆಗೆ, ನಾಲ್ಕು ಲಕ್ಷ ಕೋಟಿ ರು.ಗೂ ಮೀರಿದ ಬಜೆಟ್‌ ಮಂಡಿಸಿದ್ದು, ಅಭಿವೃದ್ಧಿಗೆ ಏಕೆ ಹಣ ಕೊಡುತ್ತಿಲ್ಲ? ಕೇಂದ್ರದ ವರಿಷ್ಠರಿಗೆ ಕಪ್ಪಕಾಣಿಕೆ ನೀಡಲು ಸರ್ಕಾರವು ಕಾಂಗ್ರೆಸ್‌ ಶಾಸಕರಿಗೆ ₹50 ಕೋಟಿ ವಿಶೇಷ ಅನುದಾನ ಮಂಜೂರಾತಿಗೆ ಮುಂದಾಗಿದೆಯೇ ಎಂಬ ಅನುಮಾನ ಮೂಡುತ್ತಿದೆ. ಕಾಂಗ್ರೆಸ್‌ ಕಚೇರಿಯಿಂದ ಶಾಸಕರಿಗೆ ಅನುದಾನ ಕೊಡುತ್ತಿಲ್ಲ. ಇದು ಸರ್ಕಾರದ ಹಣ, ಇದರಲ್ಲಿ ತಾರತಮ್ಯ ಏಕೆ ಎಂದು ಪ್ರಶ್ನಿಸಿದ ಅವರು, ಯೋಜನೆಗಳಿಗೆ ಹಣ ಹೊಂದಿಸಲು ಅಬಕಾರಿ ತೆರಿಗೆ ಹೆಚ್ಚಿಸಿದ್ದಾರೆ ಎಂದು ಕಿಡಿಕಾರಿದರು.

ಖಂಡನೀಯ:

ರಾಜ್ಯ ಕಾಂಗ್ರೆಸ್‌ ಸರ್ಕಾರವು ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡುತ್ತಿರುವುದು ಖಂಡನೀಯ. ಎಐಸಿಸಿ ಪ್ರಧಾನ ಕಾರ್ಯದರ್ಶಿ, ಸೂಪರ್‌ ಸಿಎಂ ರಣದೀಪ್‌ ಸಿಂಗ್‌ ಸುರ್ಜೆವಾಲ ಹೇಳಿದ ಬಳಿಕ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕಾಂಗ್ರೆಸ್‌ ಶಾಸಕರಿಗೆ ತಲಾ ₹50 ಕೋಟಿ ವಿಶೇಷ ಅನುದಾನ ನೀಡುವುದಾಗಿ ಪತ್ರ ಬರೆದಿದ್ದಾರೆ. ಆದರೆ, ವಿರೋಧ ಪಕ್ಷಗಳ ಶಾಸಕರಿಗೆ ಯಾವುದೇ ಅನುದಾನ ನೀಡುತ್ತಿಲ್ಲ ಎಂದು ಕಿಡಿಕಾರಿದರು.

ಕಾಂಗ್ರೆಸ್‌ ಶಾಸಕರಿಗೆ ಲೋಕೋಪಯೋಗಿ ಇಲಾಖೆಯಿಂದ ₹37.50 ಕೋಟಿ ಹಾಗೂ ಇತರ ಇಲಾಖೆಗಳಿಂದ ₹12.50 ಕೋಟಿ ಅನುದಾನ ಹಂಚಿಕೆ ಮಾಡಿದ್ದಾರೆ. ವಿರೋಧಪಕ್ಷಗಳ ಶಾಸಕರಿಗೆ ಯಾವುದೇ ಅನುದಾನ ನೀಡಿಲ್ಲ. ಇದು ಖಂಡನೀಯ. ಈ ವಿಚಾರವನ್ನು ಮುಂದಿನ ವಿಧಾಸಭೆ ಅಧಿವೇಶನದಲ್ಲಿ ಪ್ರಶ್ನಿಸುತ್ತೇವೆ ಎಂದರು.

ಆಡಳಿತ ಪಕ್ಷದ ಶಾಸಕರೇ ರಾಜ್ಯದಲ್ಲಿ ಅಭಿವೃದ್ಧಿಯಾಗುತ್ತಿಲ್ಲ. ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಕೊಡುತ್ತಿಲ್ಲ ಎಂದು ಧ್ವನಿ ಎತ್ತಿದ್ದಾರೆ. ಇದರ ಬೆನ್ನಲ್ಲೇ ಎಲ್ಲಾ ಶಾಸಕರಿಗೂ ತಲಾ ₹10 ಕೋಟಿ ಅನುದಾನ ನೀಡುವುದಾಗಿ ಘೋಷಿಸಲಾಗಿದೆ. ಆದರೆ, ಅಧಿಕಾರಿಗಳು ಆಡಳಿತ ಪಕ್ಷದ ಶಾಸಕರಿಗೆ ಮೊದಲು ಅನುದಾನ ನೀಡಿ ಬಳಿಕ ವಿರೋಧ ಪಕ್ಷದ ಶಾಸಕರಿಗೆ ನೀಡುವುದಾಗಿ ಹೇಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಿಂದಿನ ಸರ್ಕಾರ ಶುರುಮಾಡಿದ್ದ ಸಂಪ್ರದಾಯಕಾಂಗ್ರೆಸ್‌ ಶಾಸಕರಿಗೆ 50 ಕೋಟಿ ರು. ಬಿಡುಗಡೆ ಮಾಡುವುದಾಗಿ ಹೇಳಿರುವ ಮುಖ್ಯಮಂತ್ರಿಗಳು ವಿರೋಧ ಪಕ್ಷದ ಶಾಸಕರಿಗೆ ಅನುದಾನ ಬಿಡುಗಡೆ ಮಾಡಲ್ಲ ಅಂತೇನಾದರೂ ಹೇಳಿದ್ದಾರೆಯೇ? ಹಾಗೆ ನೋಡಿದರೆ ಇಂಥ ಸಂಪ್ರದಾಯ ಶುರು ಮಾಡಿದ್ದೇ ಹಿಂದಿನ ಸರ್ಕಾರ. ಆಗ ಅವರ ಪಕ್ಷದ ಶಾಸಕರಿಗೆ ತಲಾ 50 ಕೋಟಿ ರು. ಅನುದಾನ ಬಿಡುಗಡೆ ಮಾಡಿದ್ದರೆ, ಕಾಂಗ್ರೆಸ್ ಶಾಸಕರಿಗೆ 25 ಅಥವಾ 20 ಕೋಟಿ ರು. ಬಿಡುಗಡೆ ಮಾಡಲಾಗಿತ್ತು. ನಮ್ಮ ಸರ್ಕಾರ ದ್ವೇಷದ ರಾಜಕಾರಣ ಮಾಡಲ್ಲ.

ಪರಮೇಶ್ವರ್‌, ಗೃಹ ಸಚಿವ

PREV
Read more Articles on

Latest Stories

ಆಧುನಿಕ ರಾಜಕಾರಣದ ಭೀಷ್ಮ ಮಲ್ಲಿಕಾರ್ಜುನ ಖರ್ಗೆ
ನಮ್ಮ ಗ್ಯಾರಂಟಿ ಯೋಜನೆ ದೇಶಕ್ಕೇ ಮಾದರಿ - ಟೀಕಿಸಿದ್ದ ಬಿಜೆಪಿಯೇ ಕಾಪಿ ಮಾಡಿದೆ : ಡಿಸಿಎಂ ಡಿಕೆಶಿ
ವಾಣಿಜ್ಯ ತೆರಿಗೆ ಇಲಾಖೆ ನೋಟಿಸ್‌ : ವ್ಯಾಪಾರಿಗಳ ನೆರವಿಗೆ ಬಿಜೆಪಿ ಸಹಾಯವಾಣಿ