ಇಂದು ಮದ್ದೂರಿಗೆ ಬಿಜೆಪಿ ನಿಯೋಗ : ಸ್ಥಿತಿ ಪರಾಮರ್ಶೆ

KannadaprabhaNewsNetwork |  
Published : Sep 10, 2025, 02:04 AM IST
ಬಿಜೆಪಿ | Kannada Prabha

ಸಾರಾಂಶ

ಗಣೇಶ ವಿಸರ್ಜನೆ ವೇಳೆ ಗಲಭೆ ನಡೆದ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ನಾಯಕರ ನಿಯೋಗವು ಬುಧವಾರ ಮಂಡ್ಯ ಜಿಲ್ಲೆ ಮದ್ದೂರಿಗೆ ಭೇಟಿ ನೀಡಿ ಪರಿಸ್ಥಿತಿಯ ಪರಾಮರ್ಶೆ ನಡೆಸಲಿದೆ.

  ಬೆಂಗಳೂರು :  ಗಣೇಶ ವಿಸರ್ಜನೆ ವೇಳೆ ಗಲಭೆ ನಡೆದ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ನಾಯಕರ ನಿಯೋಗವು ಬುಧವಾರ ಮಂಡ್ಯ ಜಿಲ್ಲೆ ಮದ್ದೂರಿಗೆ ಭೇಟಿ ನೀಡಿ ಪರಿಸ್ಥಿತಿಯ ಪರಾಮರ್ಶೆ ನಡೆಸಲಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಮಂಡಲದ ಉಭಯ ಸದನಗಳ ಪ್ರತಿಪಕ್ಷಗಳ ನಾಯಕರಾದ ಆರ್‌.ಅಶೋಕ್‌, ಛಲವಾದಿ ನಾರಾಯಣಸ್ವಾಮಿ, ಶಾಸಕರಾದ ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಸಿ.ಟಿ.ರವಿ, ಎಸ್‌.ಆರ್‌.ವಿಶ್ವನಾಥ್‌, ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ ಮತ್ತಿತರರು ನಿಯೋಗದಲ್ಲಿ ಇರಲಿದ್ದಾರೆ. ಬೆಳಗ್ಗೆ 10.30ಕ್ಕೆ ಮದ್ದೂರಿನ ಐಬಿ ಸರ್ಕಲ್‌ನಿಂದ ನಿಯೋಗವು ಘಟನಾ ಸ್ಥಳಕ್ಕೆ ತೆರಳಲಿದೆ.

ಪೊಲೀಸ್ ವೈಫಲ್ಯ:

ಈ ಬಗ್ಗೆ ಮಂಗಳವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ, ಮದ್ದೂರಿನ ಘಟನೆಯಲ್ಲಿ ಪೊಲೀಸ್ ಇಲಾಖೆಯ ಸಂಪೂರ್ಣ ವೈಫಲ್ಯ ಎದ್ದು ಕಾಣುತ್ತಿದೆ. ಮುಖ್ಯಮಂತ್ರಿಗಳು, ಗೃಹ ಸಚಿವರು ತಮ್ಮ ಧೋರಣೆ ಸರಿಪಡಿಸಿಕೊಳ್ಳದಿದ್ದರೆ ಖಂಡಿತವಾಗಿ ರಾಜ್ಯದಲ್ಲಿ ಕಾನೂನು-ಸುವ್ಯವಸ್ಥೆ ಹದಗೆಡಲಿದೆ. ಇದಕ್ಕೆ ರಾಜ್ಯ ಸರ್ಕಾರವೇ ಹೊಣೆ ಹೊರಬೇಕಾಗುತ್ತದೆ ಎಂದು ಎಚ್ಚರಿಸಿದರು.

ಗಣಪತಿ ಮೆರವಣಿಗೆಯಲ್ಲಿ ಕೇಸರಿ ಶಾಲು ಹಾಕಿ ಡ್ಯಾನ್ಸ್ ಮಾಡಿದ ಪಿಎಸ್ಐ ಒಬ್ಬರನ್ನು ಅಮಾನತು ಮಾಡುವ ಮಾಹಿತಿ ನನಗೆ ಬಂದಿದೆ. ನಾವೇನು ಪಾಕಿಸ್ತಾನದಲ್ಲಿದ್ದೇವಾ? ನಮ್ಮ ರಾಜ್ಯದಲ್ಲಿ ಇಂದು ಏನಾಗುತ್ತಿದೆ, ದಿನನಿತ್ಯ ಪರಿಸ್ಥಿತಿ ಹದಗೆಡುತ್ತಿದೆ. ಕಾನೂನು ಸುವ್ಯವಸ್ಥೆ ಮುರಿದುಬಿದ್ದಿದೆ; ಕಾಂಗ್ರೆಸ್ ಸರ್ಕಾರಕ್ಕೆ ಯಾಕೆ ಇಂಥ ದುರ್ಬುದ್ಧಿ ಬಂದಿದೆ. ಕಾಂಗ್ರೆಸ್ ಸರ್ಕಾರಕ್ಕೆ ಹಿಂದೂಗಳು ಏನು ಅನ್ಯಾಯ ಮಾಡಿದ್ದಾರೆ ಎಂದು ಖಾರವಾಗಿ ಪ್ರಶ್ನಿಸಿದರು.

ಮುಖ್ಯಮಂತ್ರಿಗಳು ತಮ್ಮ ಸುತ್ತ ಅಯೋಗ್ಯರನ್ನೇ ಇಟ್ಟುಕೊಂಡಂತಿದೆ. ಹಿಂದೂಗಳ ಮೇಲೆ ಕಲ್ಲೆಸೆತ, ಹಲ್ಲೆ ನಡೆಯುತ್ತಿದೆ. ಗಣಪತಿ ಮಹೋತ್ಸವವನ್ನೂ ಹಿಂದೂಗಳು ವಿಜೃಂಭಣೆಯಿಂದ ಆಚರಿಸಲು ಸಾಧ್ಯವಾಗುತ್ತಿಲ್ಲ. ಕಾಂಗ್ರೆಸ್ ಸರ್ಕಾರದ ಅಲ್ಪಸಂಖ್ಯಾತರ ಓಲೈಕೆ ರಾಜಕಾರಣ ಕಳೆದ ಎರಡೂವರೆ ವರ್ಷಗಳಿಂದ ನಿರಂತರವಾಗಿ ನಡೆಯುತ್ತಾ ಬಂದಿದೆ ಎಂದು ಹರಿಹಾಯ್ದರು.

PREV
Read more Articles on

Recommended Stories

ಸ್ಪೀಕರ್ ವಿರುದ್ಧ ಹೊರಟ್ಟಿ ಸಿಟ್ಟು : ಅಸಮಾಧಾನಕ್ಕೆ ಪತ್ರದಲ್ಲಿ ಖಾದರ್‌ ಸ್ಪಷ್ಟನೆ
ಮುಂದೇಕೆ, ಈಗ್ಲೆ ಮುಸ್ಲಿಂ ಆಗ್ಬಿಡಿ : ಬಿಜೆಪಿಗರ ಕಿಡಿ