;Resize=(412,232))
ಬೆಂಗಳೂರು : ವಿಧಾನಪರಿಷತ್ ಚುನಾವಣೆಯಲ್ಲಿ ನಡೆದ ಶಾಸಕರ ಅಡ್ಡಮತದಾನ ಬಿಜೆಪಿ ಪಾಳೆಯದಲ್ಲಿ ಕೋಲಾಹಲವನ್ನೇ ಸೃಷ್ಟಿಸಿದೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು, ಅಡ್ಡಮತದಾನದ ಸತ್ಯಾಸತ್ಯತೆ ಮತ್ತು ವಾಸ್ತವ ತಿಳಿಯಲು ಮೂವರು ಮುಖಂಡರನ್ನು ಒಳಗೊಂಡ ತಂಡವೊಂದನ್ನು ರಚಿಸಿದ್ದು, ಈ ತಿಂಗಳ 25ರೊಳಗಾಗಿ ಸಮಗ್ರ ವರದಿ ನೀಡುವಂತೆ ಸೂಚಿಸಿದ್ದಾರೆ.
ಪರಿಷತ್ ಸದಸ್ಯರೂ ಆಗಿರುವ ಮಾಜಿ ಸಚಿವ ಸಿ.ಟಿ.ರವಿ, ಮಾಜಿ ಸಚಿವ ಎನ್.ಮಹೇಶ್ ಮತ್ತು ಶಾಸಕ ಮಹೇಶ್ ಟೆಂಗಿನಕಾಯಿ ಅವರು ತಂಡದಲ್ಲಿದ್ದಾರೆ. ಇದರ ಬೆನ್ನಲ್ಲೇ ತಂಡದ ಸದಸ್ಯರು ಮಾಹಿತಿ ಕಲೆಹಾಕುವ ಕೆಲಸ ಆರಂಭಿಸಿದ್ದಾರೆ.
‘ಜೂ.18ರ ಗುರುವಾರ ನಡೆದ ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ ಶಾಸಕರಿಂದ ಅಡ್ಡಮತದಾನವಾಗಿರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಇದರ ಸತ್ಯಾಸತ್ಯತೆ ಮತ್ತು ವಾಸ್ತವ ತಿಳಿಯಲು ಪ್ರಮುಖರನ್ನು ಒಳಗೊಂಡ ತಂಡ ರಚಿಸಲಾಗಿದೆ. ಈ ವಿಷಯಕ್ಕೆ ಸಂಬಂಧಪಟ್ಟಂತೆ ಜೂ.25 ರೊಳಗೆ ಸಮಗ್ರ ವರದಿ ನೀಡಲು ಸೂಚಿಸಲಾಗಿದೆ’ ಎಂದು ಪ್ರಕಟಣೆ ಮೂಲಕ ತಿಳಿಸಲಾಗಿದೆ.
ಗುರುವಾರ ಸಂಜೆ ಪರಿಷತ್ ಚುನಾವಣೆ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ರಾಜ್ಯ ಬಿಜೆಪಿಯಲ್ಲಿ ಸಂಚಲನ ಮೂಡಿತು. ಅತ್ತ ದೆಹಲಿಯಲ್ಲೂ ವರಿಷ್ಠರು ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿ ಅಸಮಾಧಾನ ಹೊರಹಾಕಿದರು.
ಶುಕ್ರವಾರ ಬೆಳಗ್ಗೆಯಿಂದಲೇ ರಾಜ್ಯ ನಾಯಕರು ಅಡ್ಡಮತದಾನ ಮಾಡಿದವರು ಯಾರು ಎಂಬುದನ್ನು ತಿಳಿದುಕೊಳ್ಳುವ ಪ್ರಯತ್ನ ತೀವ್ರಗೊಳಿಸಿದರೂ ರಹಸ್ಯ ಮತದಾನವಾಗಿದ್ದರಿಂದ ಇಂಥವರೇ ಎಂದು ಬೆರಳು ತೋರುವುದಕ್ಕೆ ಸಾಧ್ಯವಾಗುವ ಸನ್ನಿವೇಶ ಇಲ್ಲ. ಹೀಗಾಗಿ, ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಶಾಸಕಾಂಗ ಪಕ್ಷದ ನಾಯಕ ಆರ್.ಅಶೋಕ್ ಅವರೊಂದಿಗೆ ಚರ್ಚಿಸಿ ಅಡ್ಡಮತದಾನದ ಸತ್ಯಾಸತ್ಯತೆ ಮತ್ತು ವಾಸ್ತವ ತಿಳಿಯುವ ಉದ್ದೇಶದಿಂದ ತಂಡವೊಂದನ್ನು ರಚಿಸಿ ಗಡುವು ನೀಡಿದರು.
ಇದೇ ವೇಳೆ ಅಡ್ಡಮತದಾನ ಮಾಡಿದ ಶಾಸಕರು ಇಂಥವರು ಎಂಬ ವದಂತಿಗಳು ಪ್ರಸಾರವಾಗತೊಡಗಿದ ಬೆನ್ನಲ್ಲೇ ಆ ಶಾಸಕರು ಸುದ್ದಿಗಾರರೊಂದಿಗೆ ಮಾತನಾಡಿ ಸ್ಪಷ್ಟನೆ ನೀಡಿದರು. ಜತೆಗೆ ವಿಜಯೇಂದ್ರ ಹಾಗೂ ಅಶೋಕ್ ಅವರನ್ನು ಭೇಟಿ ಮಾಡಿ ತಾವು ಅಡ್ಡಮತದಾನ ಮಾಡಿಲ್ಲ ಎಂದು ತಿಳಿಸಿದರು.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ, ವಿಧಾನಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದವರು ಎಂಬುದಾಗಿ ಕೆಲವರ ಹೆಸರುಗಳನ್ನು ತೇಲಿಬಿಡುವ ಮೂಲಕ ಬಿಜೆಪಿಯಲ್ಲಿ ಬೆಂಕಿ ಹಚ್ಚುವ ಕುತಂತ್ರವನ್ನು ಕಾಂಗ್ರೆಸ್ಸಿವರು ಮಾಡುತ್ತಿದ್ದಾರೆ. ನಾವು ಕಾಂಗ್ರೆಸ್ಸಿನ ಈ ಕುತಂತ್ರಕ್ಕೆ ತಲೆಕೆಡಿಸಿಕೊಳ್ಳಲ್ಲ. ಅಡ್ಡ ಮತದಾನ ಮಾಡಿದವರ ಪತ್ತೆಗೆ ಸಮಿತಿ ರಚಿಸಲಾಗಿದೆ. ಯಾರು ಅಡ್ಡ ಮತದಾನ ಮಾಡಿದ್ದಾರೆ ಎಂಬುದು ಮೂರ್ನಾಲ್ಕು ದಿನದಲ್ಲಿ ತಿಳಿಯಲಿದೆ ಎಂದು ಹೇಳಿದರು.
ಮೀರ್ ಸಾದಿಕ್‌ಗಳ ವಿರುದ್ಧ ಖಂಡಿತವಾಗಿಯೂ ಶಿಸ್ತು ಕ್ರಮ
ಬಿಜೆಪಿಯಿಂದ ನಾಲ್ಕೈದು ಅಡ್ಡ ಮತದಾನ ಆಗಿದೆ. ಇದನ್ನು ಪಕ್ಷ ಗಂಭೀರವಾಗಿ ಪರಿಗಣಿಸಿದೆ. ಮೀರ್ ಸಾದಿಕ್‌ಗಳು ಯಾರು ಎಂಬ ಬಗ್ಗೆ ಮಾಹಿತಿ ಇದೆ. ಅವರ ವಿರುದ್ಧ ಖಂಡಿತ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಅಡ್ಡ ಮತದಾನದಿಂದ ಅಪಮಾನ ಆಗಿದೆ. ಇದನ್ನೆಲ್ಲ ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುತ್ತೇವೆ.
- ಬಿ.ವೈ. ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ