ಬೆಂಗಳೂರು : ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಗೆ ಬಲಿಯಾದವರಿಗೆ ಶನಿವಾರ ಸಂಜೆ ಲಾಲ್ ಬಾಗ್ ಪಶ್ಚಿಮ ದ್ವಾರದಿಂದ ರಾಮಕೃಷ್ಣ ಆಶ್ರಮದ ವರೆಗೆ ಪಂಜಿನ ಮೆರವಣಿಗೆ ನಡೆಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಬಸವನಗುಡಿ ಮತ್ತು ಚಿಕ್ಕಪೇಟೆ ಬಿಜೆಪಿ ಮಂಡಲ ಹಾಗೂ ಫೌಂಡೇಶನ್ ಇಂಡಿಯಾ ಸಹಯೋಗದಲ್ಲಿ ನಡೆದ ಈ ಪಂಜಿನ ಮೆರವಣಿಗೆಯಲ್ಲಿ ಸಂಸದ ತೇಜಸ್ವಿ ಸೂರ್ಯ, ಶಾಸಕರಾದ ಸಿ.ಕೆ.ರಾಮಮೂರ್ತಿ, ರವಿ ಸುಬ್ರಮಣ್ಯ ಸೇರಿದಂತೆ ಬಿಜೆಪಿ ಮುಖಂಡರು, ವೃದ್ಧರು, ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ ಭಾರೀ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಂಡಿದ್ದರು.
ಪಂಜಿನ ಮೆರವಣಿಗೆ ವೇಳೆ ಭಾರತ್ವದ ಧ್ವಜ, ಭಿತ್ತಿ ಪತ್ರ ಹಿಡಿದು ಅಮಾಯಕರ ಸಾವಿಗೆ ನ್ಯಾಯ ಸಿಗಬೇಕು. ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ ಮಾಡುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.
ಈ ವೇಳೆ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ, ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿ ಖಂಡಿಸಿ ಪಂಜಿನ ಮೆರವಣಿಗೆ ಮಾಡುತ್ತಿದ್ದೇವೆ. ಈಗಾಗಲೇ ಕೇಂದ್ರ ಸರ್ಕಾರ ರಾಜತಾಂತ್ರಿಕ ಕ್ರಮಗಳನ್ನು ಕೈಗೊಂಡಿದೆ. ತಕ್ಕ ಪಾಠ ಕಲಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ. ಈ ಭರವಸೆ ಈಡೇರುವ ಭರವಸೆ ಇದೆ ಎಂದರು.
ಕಾಂಗ್ರೆಸ್ ಈಗಲಾದರೂ ದೇಶ ಜಗೆಗೆ ನಿಲ್ಲಲಿ: ತೇಜಸ್ವಿ ಸೂರ್ಯ
ಕೇಂದ್ರ ಸರ್ಕಾರದ ಜತೆಗೆ ಇಡೀ ದೇಶವೇ ಇದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕೇಂದ್ರ ಸರ್ಕಾರಕ್ಕೆ ಪಾಠ ಮಾಡುವ ಅವಶ್ಯಕತೆ ಇಲ್ಲ. ಅವರ ಪಕ್ಷದ ದಲಿತ ಸಮುದಾಯದ ಶಾಸಕರ ಮನೆಗೆ ಬೆಂಕಿ ಹಾಕಿದಾಗ ಮತ್ತು ಪೊಲೀಸ್ ಠಾಣೆಗೆ ಬೆಂಕಿ ಹಾಕಿದಾಗ ಅವರ ಜೊತೆಗೆ ಕಾಂಗ್ರೆಸ್ ನಿಲ್ಲಲಿಲ್ಲ. ಕಾಂಗ್ರೆಸ್ ಪಕ್ಷ ಈಗಲಾದರೂ ದೇಶದ ಜತೆಗೆ ನಿಲ್ಲಲ್ಲಿ. ಮುಸ್ಲಿಂರ ಬೇರು ಬೆಳೆಯಲು ಈ ಕಾಂಗ್ರೆಸ್ ಕಾರಣ. ಈಗಲೂ ದೇಶದ ಜತೆಗೆ ನಿಲ್ಲಲಿಲ್ಲ ಎಂದರೆ, ಇತಿಹಾಸದಲ್ಲಿ ಜನರು ಕಾಂಗ್ರೆಸ್ ಪಕ್ಷವನ್ನು ಬಹಳ ಕೆಟ್ಟದಾಗಿ ನೆನಪಿಟ್ಟುಕೊಳ್ಳುತ್ತಾರೆ ಎಂದು ತೇಜಸ್ವಿ ಸೂರ್ಯ ಹೇಳಿದರು.
ಪಾಕಿಸ್ತಾನ ಧ್ವಜ ಸುಟ್ಟು ಆಕ್ರೋಶ:
ಪಂಜಿನ ಮೆರವಣಿಗೆ ವೇಳೆ ಕೆಲ ಪ್ರತಿಭಟನಾಕಾರರು ಪಾಕಿಸ್ತಾನದ ಧ್ವಜವನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಧ್ಯ ಪ್ರವೇಶಿಸಿದ ಪೊಲೀಸರು, ಪಾಕಿಸ್ಥಾನ ಧ್ವಜ ಸುಡಲು ಅನುಮತಿ ಇದೆಯೇ ಎಂದು ಕೇಳಿದರು. ಏಕೆ ಅನುಮತಿ ಪಡೆಯಬೇಕು ಎಂದು ಪ್ರತಿಭಟನಾಕಾರರು ಪೊಲೀಸರನ್ನು ಮರು ಪ್ರಶ್ನಿಸಿದರು. ಈ ವೇಳೆ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಕೆಲ ಕಾಲ ವಾಗ್ವಾದ ನಡೆಯಿತು. ನಂತರ ಪಾಕಿಸ್ತಾನ ಧ್ವಜಕ್ಕೆ ಹಚ್ಚಿದ ಬೆಂಕಿಯನ್ನು ಪೊಲೀಸರು ನಂದಿಸಿದರು.