ಎಲ್ಲ ವರ್ಗಗಳ ಅಭಿವೃದ್ಧಿಗೆ ಸಿಎಂ ವಿಶೇಷ ಆದ್ಯತೆ - ಬಿಜೆಪಿ ಈ ದೇಶಕ್ಕೆ ಶಾಪ : ಸಚಿವ ಮಧು ಬಂಗಾರಪ್ಪ

ಸಾರಾಂಶ

ಒಟ್ಟಾರೆಯಾಗಿ ರಾಜ್ಯದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಬಜೆಟ್‌ ಮಂಡಿಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.

  ಶಿವಮೊಗ್ಗ : ಈ ಬಾರಿಯ ಬಜೆಟ್‌ನಲ್ಲಿ ಸಿದ್ದರಾಮಯ್ಯನವರು ಶಿಕ್ಷಣ ಇಲಾಖೆಗೆ ಹೆಚ್ಚಿನ ಒತ್ತು ನೀಡಿ 45 ಸಾವಿರ ಕೋಟಿ ರು.ನೀಡಿದ್ದಾರೆ. ಇದೇ ರೀತಿ ಎಲ್ಲ ವರ್ಗಗಳ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಿದ್ದಾರೆ. ಒಟ್ಟಾರೆಯಾಗಿ ರಾಜ್ಯದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಬಜೆಟ್‌ ಮಂಡಿಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಮುಸ್ಲಿಂ ಬಜೆಟ್‌ ಎಂಬ ಬಿಜೆಪಿ ಆರೋಪಕ್ಕೆ ತೀಕ್ಷ್ಣಣವಾಗಿ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರಿಗೆ ಧರ್ಮ, ಜಾತಿ ರಾಜಕಾರಣ ಮಾಡುವುದನ್ನು ಬಿಟ್ಟು ಬೇರೇನೂ ಗೊತ್ತಿಲ್ಲ. ಅಭಿವೃದ್ಧಿಯನ್ನು ಬದಿಗೊತ್ತಿ ಧಾರ್ಮಿಕ ಭಾವನೆಯನ್ನು ಕೆರಳಿಸಿ ಸಮಾಜ ಒಡೆಯುತ್ತಿದ್ದಾರೆ ಎಂದು ಟೀಕಿಸಿದರು.

ಮುಸ್ಲಿಮರಲ್ಲಿ ಬಡವರು ಇಲ್ಲವೇ?. ಬಡವರಿಗೆ ನೆರವು ನೀಡಬಾರದಾ?. ನಿಜವಾಗಿಯೂ ಬಿಜೆಪಿ ಈ ದೇಶಕ್ಕೆ ಶಾಪ. ಗೋಮಾತೆಯ ಹೆಸರು ಹೇಳುವುದು, ಧಾರ್ಮಿಕ ಭಾವನೆಯನ್ನು ಕೆರಳಿಸುವುದು ಇವರ ಕೆಲಸ. ಅತಿ ಹೆಚ್ಚು ಜಿಎಸ್‌ಟಿ ಸಂಗ್ರಹಿಸುವ ಈ ರಾಜ್ಯದ ಅಭಿವೃದ್ಧಿ ಯಾವ ಮಟ್ಟದಲ್ಲಿದೆ ಎಂಬುದನ್ನು ಬಜೆಟ್‌ ಹೇಳಿದೆ. ಇನ್ನಷ್ಟು ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಕೆಲಸ ಮಾಡುತ್ತಿದ್ದು, ಈ ಅಭಿವೃದ್ಧಿಗೆ ಬಳಸಿದ ಹಣದ ಕುರಿತು ಬಿಜೆಪಿ ಸುಳ್ಳು ಆರೋಪ ಮಾಡುತ್ತಿದೆ ಎಂದರು.

ಸಿದ್ದರಾಮಯ್ಯ ಬಜೆಟ್‌ ದೇಶಕ್ಕೆ

ಮಾದರಿ: ಡಿಕೆಶಿ ಸಮರ್ಥನೆ 

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೇಶಕ್ಕೆ ಮಾದರಿಯಾಗುವ ಬಜೆಟ್‌ ಮಂಡಿಸಿದ್ದು, ಅದನ್ನು ಸಹಿಸಲಾಗದೆ ಬಿಜೆಪಿಯವರು ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಸದಾಶಿವ ನಗರದ ತಮ್ಮ ನಿವಾಸದ ಬಳಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ ಬಜೆಟ್‌ ಉತ್ತಮವಾಗಿದ್ದು, ಅದನ್ನು ಸಹಿಸಲಾಗದೆ ಸುಳ್ಳು ಹೇಳುತ್ತಿದ್ದಾರೆ. ಅದನ್ನು ಬಿಟ್ಟರೆ ಇನ್ನೇನು ಮಾಡಲು ಸಾಧ್ಯ? ಬಜೆಟ್‌ ಅನ್ನು ಅವರು ಕಣ್ಣಾರೆ ಓದಿದ್ದು, ಕಿವಿಯಾರೆ ಕೇಳಿದ್ದಾರೆ. ಅವರು ತಮ್ಮ ಬಾಯಲ್ಲಿ ಇನ್ನೇನು ಹೇಳಲು ಸಾಧ್ಯ? ಹೀಗಾಗಿ ಅವರು ಆರೋಪ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

ಸಿದ್ದರಾಮಯ್ಯ ಅವರು ಐತಿಹಾಸಿಕ ಹಾಗೂ ದೇಶಕ್ಕೇ ಮಾದರಿ ಬಜೆಟ್‌ ನೀಡಿದ್ದಾರೆ. ಮುಂದೆ ಬೇರೆ ರಾಜ್ಯಗಳೂ ನಮ್ಮ ಬಜೆಟ್‌ ಪಾಲನೆ ಮಾಡಲಿವೆ. ನಮ್ಮ ಬಜೆಟ್‌ ಸಮಾಜದ ಎಲ್ಲ ವರ್ಗದವರಿಗೂ ಯೋಜನೆಗಳನ್ನು ನೀಡಿದೆ. ಉತ್ತಮ ಬಜೆಟ್‌ ಮಂಡಿಸಿರುವ ಮುಖ್ಯಮಂತ್ರಿ ಅವರಿಗೆ ಹಾಗೂ ಸಹಕರಿಸಿದ ಸಹೋದ್ಯೋಗಿಗಳಿಗೆ ಧನ್ಯವಾದ ತಿಳಿಸುತ್ತೇನೆ ಎಂದರು.ಇನ್ನು ಕಲಬುರಗಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರು ಮಂಡಿಸಿದ ಬಜೆಟ್ ಸಮತೋಲಿತ ಆಗಿದೆ, ಸರ್ವ ಧರ್ಮದ ಒಳಿತನ್ನು ಒಳಗೊಂಡಿದೆ ಎಂದು ಪ್ರತಿಪಾದಿಸಿದರು. ಕೇಂದ್ರ ಮಂತ್ರಿ ಜೋಶಿ ಸೇರಿದಂತೆ ಬಿಜೆಪಿಯವರಿಗೆ ಬರೀ ಹಿಂದೂ ಬೇಕು, ನಮಗೆ ಹಿಂದೂ, ಮುಸ್ಲಿಂ, ಬ್ರಾಹ್ಮಣ, ಲಿಂಗಾಯತ ಎಲ್ಲರೂ ಬೇಕು. ನಾವು ಅರ್ಚಕರಿಗೆ ವೇತನ ಹೆಚ್ಚಿಸಿದ್ದೇವೆ. ಬಿಜೆಪಿ ಇದನ್ನು ಹೇಳಲಿ ನೋಡೋಣ. ಎಲ್ಲವನ್ನೂ ಕಾಮಾಲೆ ಕಣ್ಣಲ್ಲೇ ನೋಡೋದು ಸರಿಯಲ್ಲ, ಎಲ್ಲರನ್ನು ಒಳಗೊಂಡ ಬಜೆಟ್‌ ಇದಾಗಿದೆ. ಈ ಬಜೆಟ್‌ ದೂರಗಾಮಿ ಪ್ರಗತಿಗೆ ಭದ್ರ ಬುನಾದಿ ಹಾಕಿದೆ ಎಂದರು.

Share this article