ಬಿಜೆಪಿಯವರು ಇ.ಡಿ, ಸಿಬಿಐ, ಐಟಿ ಸಂಸ್ಥೆಗಳನ್ನು ಗುರಾಣಿಯಂತೆ ಬಳಸಿ ಕಾಂಗ್ರೆಸ್ ಅನ್ನು ಹಣಿಯುವ ಯತ್ನಕ್ಕೆ ಮುಂದಾಗಿದ್ದಾರೆ. ಆದರೆ, ಬಿಜೆಪಿಯ ಈ ಕುತಂತ್ರಕ್ಕೆ ನಾವು ಜಗ್ಗೋದಿಲ್ಲ, ಬಗ್ಗೋದಿಲ್ಲ ಎಂದು ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆ ಕಿಡಿ ಕಾರಿದ್ದಾರೆ.
ಕಲಬುರಗಿ : ಬಿಜೆಪಿಯವರು ಇ.ಡಿ, ಸಿಬಿಐ, ಐಟಿ ಸಂಸ್ಥೆಗಳನ್ನು ಗುರಾಣಿಯಂತೆ ಬಳಸಿ ಕಾಂಗ್ರೆಸ್ ಅನ್ನು ಹಣಿಯುವ ಯತ್ನಕ್ಕೆ ಮುಂದಾಗಿದ್ದಾರೆ. ಆದರೆ, ಬಿಜೆಪಿಯ ಈ ಕುತಂತ್ರಕ್ಕೆ ನಾವು ಜಗ್ಗೋದಿಲ್ಲ, ಬಗ್ಗೋದಿಲ್ಲ ಎಂದು ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆ ಕಿಡಿ ಕಾರಿದ್ದಾರೆ.
ನಗರದಲ್ಲಿ ಬುಧವಾರ ನಡೆದ ಉದ್ಯೋಗ ಮೇಳದಲ್ಲಿ ಅವರು ಮಾತನಾಡಿದರು. ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ವಿಚಾರದಲ್ಲಿ ಇ.ಡಿಯವರು ಸೋನಿಯಾ ಗಾಂಧಿ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿರುವ ಪ್ರಕರಣ ಪ್ರಸ್ತಾಪಿಸಿ ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕಿದ ಖರ್ಗೆ, ಕಾಂಗ್ರೆಸ್ ಹಣಿಯಲು ಬಿಜೆಪಿಯವರು ಇ.ಡಿ (ಜಾರಿ ನಿರ್ದೇಶನಾಲಯ), ಸಿಬಿಐ (ಕೇಂದ್ರೀಯ ತನಿಖಾ ದಳ), ಐಟಿ (ಆದಾಯ ತೆರಿಗೆ ಇಲಾಖೆ)ಸಂಸ್ಥೆಗಳನ್ನು ಗುರಾಣಿಯಂತೆ ಬಳಸಿಕೊಳ್ಳುತ್ತಿದ್ದಾರೆ. ಆದರೆ, ಬಿಜೆಪಿಯ ಈ ಕುತಂತ್ರಕ್ಕೆ ನಾವು ಜಗ್ಗೋದಿಲ್ಲ, ಬಗ್ಗೋದಿಲ್ಲ. ನ್ಯಾಷನಲ್ ಹೆರಾಲ್ಡ್ ಸೇರಿದಂತೆ 3 ಪತ್ರಿಕೆಗಳನ್ನು 1937ರಲ್ಲಿ ನೆಹರೂ ಅವರು ಸ್ಥಾಪಿಸಿ ಜನರು ಸ್ವಾತಂತ್ರ ಸಂಗ್ರಾಮದಲ್ಲಿ ಭಾಗವಹಿಸುವಂತೆ ಪ್ರೇರೇಪಿಸಲು ಪ್ರಯತ್ನಿಸಿದ್ದರು. ಅಂತಹ ಪತ್ರಿಕೆಯ ಮೇಲೆ ಇ.ಡಿ ದಾಳಿ ನಡೆಸಿ ಸೋನಿಯಾ ಮೇಲೆ ಕೇಸ್ ದಾಖಲಿಸಲಾಗಿದೆ. ಬಿಜೆಪಿಯವರಿಗೆ ಈ ವಿಷಯದಲ್ಲಿ ನಾಚಿಕೆಯಾಗಬೇಕು ಎಂದು ಖರ್ಗೆ ಮಾತಿನಲ್ಲೇ ತಿವಿದರು.
ಸಂಘ ಪರಿವಾರದವರ ಪತ್ರಿಕೆಯಾಗಿರುವ ಆರ್ಗನೈಸರ್, ದೇಶದ ಜನರ ಒಗ್ಗಟ್ಟು ಕೆಡಿಸುವ ಕೆಲಸ ಮಾಡುತ್ತಿದೆ. ಅದರ ವಿರುದ್ಧ ಯಾಕೆ ಯಾವುದೇ ಕ್ರಮವಿಲ್ಲ?. ದೇಶಭಕ್ತಿಗೆ ಸ್ಫೂರ್ತಿಯಾಗಿದ್ದ ನ್ಯಾಷನಲ್ ಹೆರಾಲ್ಡ್ ಮೇಲೇಕೆ ಕೇಸ್?. ನೀವೇನು ಅದಕ್ಕೆ ಚಂದಾ ಕೊಟ್ಟಿದ್ದೀರಾ?. ನಿಮ್ಮದೇನು ಗಂಟು ಹೋಗುತ್ತದೆ? ಎಂದು ಅವರು ಕಿಡಿಕಾರಿದರು.
ಇತ್ತೀಚಿನ ದಿನಗಳಲ್ಲಿ ಆರ್ಗನೈಸರ್ ಪತ್ರಿಕೆಯಲ್ಲಿ ಬಂದಿರುವ ಲೇಖನವನ್ನು ಖರ್ಗೆ ಪ್ರಸ್ತಾಪಿಸಿದರು. ಈಗ ವಕ್ಫ್ ಆಗಿದೆ. ಮುಂದೆ ಕ್ರಿಶ್ಚಿಯನ್ ಸಮುದಾಯದ ಬಳಿ ಇರುವ 7 ಕೋಟಿ ಹೆಕ್ಟೇರ್ ಜಮೀನಿನ ಸರದಿ ಎಂದು ಆರ್ಗನೈಜರ್ ಬರೆದಿತ್ತು. ಬಳಿಕ, ಆ ಮಾತನ್ನು ವಾಪಸ್ ಪಡೆದುಕೊಂಡಿತ್ತು. ಈ ಬಗ್ಗೆ ನನ್ನ ಬಳಿ ಸಾಕ್ಷ್ಯ ಇದೆ. ದೇಶದ ಐಕ್ಯತೆ ಒಡೆಯುವ ಆರೆಸ್ಸೆಸ್ ಪತ್ರಿಕೆ ಬಗ್ಗೆ ಮೌನ ಯಾಕೆ ಎಂದು ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಗಾಂಧಿ ಕುಟುಂಬದಲ್ಲಿ ದೇಶಕ್ಕಾಗಿ ಇಬ್ಬರ ಪ್ರಾಣ ಹೋಗಿದೆ. ಆ ಕುಟುಂಬ ಅಷ್ಟಾದರೂ ಹೆದರದೆ ದೇಶಸೇವೆಗೆ ಬದ್ಧವಾಗಿದೆ. ತ್ಯಾಗ-ಬಲಿದಾನದ ಪ್ರತೀಕವಾಗಿರುವ ಗಾಂಧಿ ಕುಟುಂಬ ನಿಮ್ಮ ಐಟಿ, ಇಡಿ, ಸಿಬಿಐಯಂತಹ ಪೊಳ್ಳು ದಾಳಿಗಳಿಗೆ ಹೆದರೋದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.