ಡಿವಿಎಸ್‌ ಮನೆಯಲ್ಲಿ ಬಿಜೆಪಿ ಹಿರಿಯರ ಸಭೆ - ಬೊಮ್ಮಾಯಿ, ಅಶೋಕ್‌, ಅಶ್ವತ್ಥ್‌, ಸಿ.ಟಿ. ರವಿ ಭಾಗಿ

Published : Jan 23, 2025, 05:20 AM IST
DV Sadananda Gowda

ಸಾರಾಂಶ

ಪಕ್ಷದ ಜಿಲ್ಲಾ ಘಟಕಗಳ ಅಧ್ಯಕ್ಷರ ನೇಮಕಕ್ಕೆ ಸಂಬಂಧಿಸಿದಂತೆ ಬಿಜೆಪಿಯ ಹಿರಿಯ ನಾಯಕರು ಬುಧವಾರ ರಾತ್ರಿ ಪ್ರತ್ಯೇಕವಾಗಿ ಸಭೆ ನಡೆಸಿದ್ದು ಕುತೂಹಲ ಮೂಡಿಸಿದೆ.

ಬೆಂಗಳೂರು : ಪಕ್ಷದ ಜಿಲ್ಲಾ ಘಟಕಗಳ ಅಧ್ಯಕ್ಷರ ನೇಮಕಕ್ಕೆ ಸಂಬಂಧಿಸಿದಂತೆ ಬಿಜೆಪಿಯ ಹಿರಿಯ ನಾಯಕರು ಬುಧವಾರ ರಾತ್ರಿ ಪ್ರತ್ಯೇಕವಾಗಿ ಸಭೆ ನಡೆಸಿದ್ದು ಕುತೂಹಲ ಮೂಡಿಸಿದೆ.

ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಡಿ.ವಿ.ಸದಾನಂದಗೌಡ, ಮಾಜಿ ಉಪಮುಖ್ಯಮಂತ್ರಿಗಳಾದ ಆರ್‌.ಅಶೋಕ್‌, ಡಾ.ಸಿ.ಎನ್‌.ಅಶ್ವತ್ಥನಾರಾಯಣ ಹಾಗೂ ಮಾಜಿ ಸಚಿವ ಸಿ.ಟಿ.ರವಿ ಅವರು ಸದಾನಂದಗೌಡರ ನಿವಾಸದಲ್ಲಿ ಸಭೆ ಸೇರಿ ಚರ್ಚೆ ನಡೆಸಿದರು.

ಕಳೆದ ಬಾರಿ ಜಿಲ್ಲಾಧ್ಯಕ್ಷರ ನೇಮಕಕ್ಕೆ ಸಂಬಂಧಿಸಿದಂತೆ ಪಕ್ಷದ ಹಿರಿಯ ನಾಯಕರಲ್ಲಿ ಅಸಮಾಧಾನ ಹೊಗೆಯಾಡಿತ್ತು. ಹೀಗಾಗಿ, ಈ ಬಾರಿ ಅಂಥ ಬಿಕ್ಕಟ್ಟು ಉದ್ಭವಿಸಬಾರದು ಎಂಬ ಉದ್ದೇಶದಿಂದ ಹಿರಿಯ ನಾಯಕರು ಈಗ ಸಭೆ ಸೇರಿ ಸಮಾಲೋಚಿಸಿದರು ಎನ್ನಲಾಗಿದೆ.

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಸವರಾಜ ಬೊಮ್ಮಾಯಿ, ಪಕ್ಷದಲ್ಲಿ ಸಂಘಟನಾ ಪರ್ವ ಹಾಗೂ ಚುನಾವಣಾ ಪರ್ವ ನಡೆಯುತ್ತಿವೆ. ಅವೆರಡನ್ನು ಸಮನ್ವಯಗೊಳಿಸಿ ಮೊದಲ ಹಂತದಲ್ಲಿ ಆಗುವ ಪ್ರಕ್ರಿಯೆ ಬಗ್ಗೆ ಜಿಲ್ಲಾ ನಾಯಕರ ಜೊತೆ ಸಹಮತದ ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳಲು ನಾವು ಸಭೆ ನಡೆಸಿದೆವು ಎಂದು ಹೇಳಿದರು.

ಮಂಡಲ ಹಾಗೂ ಜಿಲ್ಲಾ ಮಟ್ಟದ ಅಧ್ಯಕ್ಷರ ನೇಮಕ ಕುರಿತು ಈಗಾಗಲೇ ಜಿಲ್ಲಾ ಮಟ್ಟದ ನಾಯಕರೊಂದಿಗೆ ಭೇಟಿ ಮಾಡಿ ಒಂದು ಹಂತದ ಚರ್ಚೆ ಮಾಡಿ ಬಂದಿದ್ದಾರೆ. ಅದರ ಮುಂದುವರೆದ ಭಾಗವಾಗಿ ನಾವು ಎಲ್ಲ ಜಿಲ್ಲಾ ನಾಯಕರ ಜೊತೆ ಚರ್ಚೆ ಮಾಡುವ ಸಲುವಾಗಿ ನಾವು ಸೇರಿದ್ದೆವು ಎಂದು ತಿಳಿಸಿದರು.

ಇನ್ನೊಂದು ರಾಜ್ಯದಲ್ಲಿ ಬಿಜೆಪಿಯನ್ನು ಶಕ್ತಿಯುತವಾಗಿ ಕಟ್ಟಲು ನಾವು ಬದ್ದರಾಗಿರುವವರು, ನಾವು ಬಿಜೆಪಿ ಪರವಾಗಿರುವವರು, ಬಿಜೆಪಿಯನ್ನ ಶಕ್ತಿಯುತವಾಗಿ ಕಟ್ಟುವ ಸಲುವಾಗಿ ಒಗ್ಗಟ್ಟಿನಿಂದ ಸಾಗುತ್ತೇವೆ. ಎಲ್ಲರನ್ನ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಲಾಗುವುದು. ಕೋರ್ ಕಮಿಟಿಯಲ್ಲಿ ಯಾರಿಗೂ ಯಾರೂ ವಾರ್ನಿಂಗ್ ಮಾಡಿಲ್ಲ, ಹಲವು ವಿಚಾರಗಳು ಸೌಹರ್ದಯುತವಾಗಿ ಚರ್ಚೆ ಆಗಿದೆ. ಎಲ್ಲವನ್ನು ಬಗೆಹರಿಸಲಾಗುವುದು ಎಂದು ಹೇಳಿದರು.

ಸದಾನಂದಗೌಡ ಮಾತನಾಡಿ, ರಾಷ್ಟ್ರೀಯ ಮುಖಂಡರಾದ ಅಗರ್ವಾಲ್‌, ರಾಧಾ ಕೃಷ್ಣ, ಸುಧಾಕರ್ ರೆಡ್ಡಿ ಅವರು ಮಂಗಳವಾರ ಕೋರ್‌ ಕಮಿಟಿ ಸಭೆ ನಡೆಸಿ ಬೆಂಗಳೂರಿನ ಮೂರು ಸಂಘಟನಾತ್ಮಕ ಜಿಲ್ಲೆಗೆ ಅಧ್ಯಕ್ಷರನ್ನು ನೇಮಿಸಲು ಪ್ರತ್ಯೇಕ ಸಭೆ ನಡೆಸಿ ಎಲ್ಲರೂ ಸಹಮತದಿಂದ ಹೆಸರುಗಳನ್ನು ಅಂತಿಮಗೊಳಿಸಿ ಎಂದು ಸೂಚಿಸಿದ್ದರು. ಆದ್ದರಿಂದ ಚರ್ಚೆ ನಡೆಸಿದ್ದು ಗುರುವಾರ ವರಿಷ್ಠರಿಗೆ ವರದಿ ಕಳುಹಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.

ಅಶೋಕ್ ಮಾತನಾಡಿ, ಸಭೆಯಲ್ಲಿ ಯಾವುದೇ ರಾಜಕೀಯ ಚರ್ಚೆ ನಡೆಸಿಲ್ಲ. ಒಮ್ಮತದಿಂದ ಜಿಲ್ಲಾಧ್ಯಕ್ಷರ ಆಯ್ಕೆ ನಡೆಯಬೇಕು ಎಂದು ರಾಜ್ಯ ಉಸ್ತುವಾರಿಗಳು ಸೂಚನೆ ನೀಡಿ ಎರಡು ದಿನದಲ್ಲಿ ಪಟ್ಟಿ ನೀಡುವಂತೆ ಹೇಳಿದ್ದರು. ಆದ್ದರಿಂದ ಚರ್ಚೆ ನಡೆಸಿದೆವು ಎಂದು ಸ್ಪಷ್ಟಪಡಿಸಿದರು.

PREV

Recommended Stories

ರಾಹುಲ್‌ ವಿರುದ್ಧ 5ಕ್ಕೆ ಬಿಜೆಪಿ ಧರಣಿ : ಬಿವೈವಿ
ಸಂಘರ್ಷ ಬಿಟ್ಟು ಒಳಮೀಸಲು ಜಾರಿ : ಪರಂ ನೇತೃತ್ವದ ಸಭೆ