ನಾಳೆಯಿಂದ ಬಿಜೆಪಿ ಪಾದಯಾತ್ರೆ : 10 ದಿನ, 175 ಕಿ.ಮೀ. ದೂರ ಕಾಲ್ನಡಿಗೆ

Published : Aug 31, 2026, 07:03 AM IST
Vijayendra

ಸಾರಾಂಶ

ರಾಜ್ಯ ಕಾಂಗ್ರೆಸ್‌ ಸರ್ಕಾರದ ಆಡಳಿತ ವೈಫಲ್ಯ ಅನುಭವಿಸಿದೆ ಎಂದು ಆರೋಪಿಸಿ ರಾಜ್ಯ ಬಿಜೆಪಿ, ರಾಯಚೂರು ಜಿಲ್ಲೆ ಲಿಂಗಸುಗೂರಿನಿಂದ ಬಳ್ಳಾರಿವರೆಗೆ ಮಂಗಳವಾರದಿಂದ ಪಾದಯಾತ್ರೆ ನಡೆಸಲಿದೆ.

 ರಾಮಕೃಷ್ಣ ದಾಸರಿ

ರಾಯಚೂರು : ವಾಲ್ಮೀಕಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಸಚಿವ ಸ್ಥಾನಕ್ಕೆ ನಾಗೇಂದ್ರ ರಾಜೀನಾಮೆ ನೀಡಿದ್ದರೂ ದುರ್ಬಳಕೆ ಆದ ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ಹಣ ವಾಪಸ್ ಆ ನಿಗಮಕ್ಕೆ ಜಮೆ ಆಗಬೇಕು ಎಂದು ಅಗ್ರಹಿಸಿ ಹಾಗೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನೇತೃತ್ವದ ರಾಜ್ಯ ಕಾಂಗ್ರೆಸ್‌ ಸರ್ಕಾರದ ಆಡಳಿತ ವೈಫಲ್ಯ ಅನುಭವಿಸಿದೆ ಎಂದು ಆರೋಪಿಸಿ ರಾಜ್ಯ ಬಿಜೆಪಿ, ರಾಯಚೂರು ಜಿಲ್ಲೆ ಲಿಂಗಸುಗೂರಿನಿಂದ ಬಳ್ಳಾರಿವರೆಗೆ ಮಂಗಳವಾರದಿಂದ ಪಾದಯಾತ್ರೆ ನಡೆಸಲಿದೆ. ಅದಕ್ಕಾಗಿ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಸಭೆಯ ವಿಪಕ್ಷ ನಾಯಕ ಆರ್.ಅಶೋಕ, ವಿಧಾನ ಪರಿಷತ್‌ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಸೇರಿದಂತೆ ಪಕ್ಷದ ಕೇಂದ್ರ ಸಚಿವರು, ಸಂಸದರು, ಶಾಸಕರು, ವಿವಿಧ ಮೋರ್ಚಾಗಳ ಪ್ರಮುಖ ಮುಖಂಡರು, ನಾಯಕರು ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ.

ರಾಯಚೂರು ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳು ಸೇರಿದಂತೆ ಕಲ್ಯಾಣ ಕರ್ನಾಟಕ ಪ್ರದೇಶದ ಜಿಲ್ಲೆಗಳಿಂದ ಪ್ರತಿ ಕ್ಷೇತ್ರದಿಂದ ಸಾವಿರಾರು ಜನ ಪಕ್ಷದ ಹಾಲಿ-ಮಾಜಿ ಜನಪ್ರತಿನಿಧಿಗಳು, ಹಿರಿಯ-ಕಿರಿಯ ಮುಖಂಡರು, ನಾನಾ ಮೋರ್ಚಾಗಳ ಸದಸ್ಯರು, ಕಾರ್ಯಕರ್ತರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

175 ಕಿ.ಮೀ. ಪಾದಯಾತ್ರೆ:

ಮಂಗಳವಾರ ಬೆಳಗ್ಗೆ ಲಿಂಗಸುಗೂರು ಪಟ್ಟಣದ ಬೈಪಾಸ್‌ ರಸ್ತೆ ಬಳಿಯ ಖಾಸಗಿ ಲೇಔಟ್‌ನಿಂದ ಪಾದಯಾತ್ರೆ ಆರಂಭವಾಗಲಿದ್ದು, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪಾದಯಾತ್ರೆಗೆ ಚಾಲನೆ ನೀಡಲಿದ್ದಾರೆ. ಬಳಿಕ, ಆರಂಭವಾಗುವ ಪಾದಯಾತ್ರೆ 10 ದಿನಗಳ ಕಾಲ 175 ಕಿ.ಮೀ. ಕ್ರಮಿಸಿ ಸೆ.10ಕ್ಕೆ ಬಳ್ಳಾರಿ ತಲುಪಲಿದೆ. ಲಿಂಗಸುಗೂರು, ಮಸ್ಕಿ, ಸಿಂಧನೂರು, ಕಾರಟಗಿ, ಗಂಗಾವತಿ, ಕಂಪ್ಲಿ, ಕುಡತಿನಿ ಮಾರ್ಗವಾಗಿ ಪಾದಯಾತ್ರೆ ಬಳ್ಳಾರಿ ತಲುಪಲಿದೆ.

ರಾಜ್ಯದ ಬರಗಾಲ ನಿರ್ವಹಣೆಯಲ್ಲಿ ಡಿಕೆಶಿ ಸರ್ಕಾರದ ವೈಫಲ್ಯ, ಕೆಪಿಎಸ್ಸಿ ಅಕ್ರಮ, ಗೃಹಲಕ್ಷ್ಮೀ ಹಣದ ದುರ್ಬಳಕೆ ಸೇರಿದಂತೆ ಸರ್ಕಾರದ ಹಲವು ವೈಫಲ್ಯಗಳನ್ನು ಮುಂದಿಟ್ಟುಕೊಂಡು ಪಾದಯಾತ್ರೆಯನ್ನು ನಡೆಸಲಾಗುತ್ತಿದೆ.

ಸಕಲ ಸಿದ್ಧತೆ

ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಬಿಜೆಪಿ ಕೈಗೊಂಡಿರುವ ಪಾದಯಾತ್ರೆ ಲಿಂಗಸುಗೂರಿನಿಂದ ಆರಂಭಗೊಳ್ಳುತ್ತಿದ್ದು, ಅಗತ್ಯವಾದ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. 10 ದಿನಗಳ ಪಾದಯಾತ್ರೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿ ಪಕ್ಷದ ಕೇಂದ್ರ ಮತ್ತು ರಾಜ್ಯದ ಅನೇಕ ನಾಯಕರು ಭಾಗವಹಿಸಲಿದ್ದಾರೆ.

- ಮಾನಪ್ಪ ಡಿ.ವಜ್ಜಲ್‌, ಬಿಜೆಪಿ ಶಾಸಕ, ಲಿಂಗಸುಗೂರು

ದುರ್ಬಳಕೆ ಆದ ವಾಲ್ಮೀಕಿ ಅಭಿವೃದ್ಧಿ ನಿಗಮದ 185 ಕೋಟಿ ಹಣ ವಾಪಸ್ ಆ ನಿಗಮಕ್ಕೆ ಜಮೆ ಆಗಬೇಕು. ಕೊಪ್ಪಳ ಭಾಗದಲ್ಲಿ ಹೊಸಪೇಟೆ ಸಮಾನಾಂತರ ಜಲಾಶಯ ವಿಚಾರ ನೀರಿನಲ್ಲಿ ಹೋಮವಾಗಿದೆ. ಅದನ್ನು ಜಾರಿಗೊಳಿಸಬೇಕು. ನೀಡಿದ್ದ ಭರವಸೆಯಂತೆ 2.5 ಲಕ್ಷ ಯುವಜನರಿಗೆ ಉದ್ಯೋಗ ಕೊಡಿ. ಎಸ್ಇಪಿ, ಟಿಎಸ್ಪಿ, ಮೀಸಲಾತಿ, ಬರಗಾಲ, ಉತ್ತರ ಕರ್ನಾಟಕದ ಅಭಿವೃದ್ಧಿ ಆಗದೇ ಇರುವುದು ಇವೆಲ್ಲ ವಿಚಾರಗಳನ್ನು ಮುಂದಿಟ್ಟು ಸೆ.1ರಿಂದ ಪಾದಯಾತ್ರೆ ನಡೆಸಲಾಗುತ್ತಿದೆ ಎಂದು ವಿವರಿಸಿದರು.

ಪಾದಯಾತ್ರೆ ಹಾದಿ

ಲಿಂಗಸುಗೂರು

ಮಸ್ಕಿ

ಸಿಂಧನೂರು

ಕಾರಟಗಿ

ಗಂಗಾವತಿ

ಕಂಪ್ಲಿ

ಕುಡತಿನಿ

ಬಳ್ಳಾರಿ

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

5 ವಿಧಾನ ಪರಿಷತ್‌, 2 ಸಂಪುಟ ಹೆಸರು ಫೈನಲ್‌ಗೆ ಕಸರತ್ತು- ನಟ ರವಿಚಂದ್ರನ್‌ಗೆ ಎಮ್ಮೆಲ್ಸಿ ಸ್ಥಾನ?
ನನಗೀಗ 80, ಎಷ್ಟು ವರ್ಷ ಬದುಕಿರ್‍ತೀನೋ ? - ಮುಂದಿನ ಎಲೆಕ್ಷನ್‌ಗೆ ನಾನು ಸ್ಪರ್ಧಿಸಲ್ಲ : ಸಿದ್ದು