ಕೋಲಾರ : ಪೆಟ್ರೋಲ್ ದರಗಳನ್ನು ಏರಿಕೆ ಮಾಡುವ ಮೂಲಕ ಬಡಜನರ ಕಿಸೆಗೆ ಕೈ ಹಾಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಜೂ.17ರಂದು ಸೋಮವಾರ ನಗರದ ಡೂಂಲೈಟ್ ವೃತ್ತದಲ್ಲಿ ಮಧ್ಯಾಹ್ನ ೧೨ ಗಂಟೆಗೆ ಪ್ರತಿಭಟನೆ ನಡೆಸಲಿದೆ ಎಂದು ಎಂದು ಪಕ್ಷದ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್ ತಿಳಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇಂಧನ ದರ ಹೆಚ್ಚಳದಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಾರಣವಾಗಲಿದ್ದು, ಕೂಡಲೇ ಪೆಟ್ರೋಲ್, ಡೀಸೆಲ್ ದರ ಇಳಿಸುವಂತೆ ಅವರು ಒತ್ತಾಯಿಸಿದರು.
ಗ್ಯಾರಂಟಿಗಾಗಿ ಹಣ ಸಂಗ್ರಹ
ಕಾಂಗ್ರೆಸ್ ರಾಜ್ಯದಲ್ಲಿ ಆಡಳಿತವಹಿಸಿಕೊಂಡು ಒಂದು ವರ್ಷ ಒಂದು ತಿಂಗಳಾಗಿದ್ದರೂ ಯಾವುದೇ ಅಭಿವೃದ್ದಿ ಕೆಲಸ ಮಾಡಿಲ್ಲ. ಚುನಾವಣೆಗೆ ಮುನ್ನ ನೀಡಿದ್ದ ೫ ಗ್ಯಾರಂಟಿಗಳನ್ನು ಈಡೇರಿಸಲು ಪ್ರತಿ ಮಾಹೆ ರಾಜ್ಯದ ಸಂಪನ್ಮೂಲ ಸುಮಾರು ೫೦ ಸಾವಿರ ಕೋಟಿ ರು.ಗಳನ್ನು ಗ್ಯಾರಂಟಿಗಳಿಗೆ ಸುರಿಯುತ್ತಿದ್ದಾರೆ. ದರಗಳನ್ನು ಏರಿಕೆ ಮಾಡಿ ಅದೇ ಹಣವನ್ನು ಗ್ಯಾರಂಟಿಗಳಿಗೆ ನೀಡುವುದನ್ನು ದೊಡ್ಡ ಸಾಧನೆಯೇ ಎಂದು ಪ್ರಶ್ನಿಸಿದರು.ರಾಜ್ಯದ ಲೋಕಸಭಾ ಚುನಾವಣೆಯಲ್ಲಿ ಗ್ಯಾರಂಟಿಗಳಿಂದ ಬಹುಮತದ ಕನಸು ನುಚ್ಚುನೂರಾಗಿದೆ. ಇದು ಮತದಾರರು ಅಭಿವೃದ್ಧಿಯ ಪರವಾಗಿದ್ದಾರೆಯೇ ಹೊರತಾಗಿ ಗ್ಯಾರಂಟಿಗಳ ಪರ ಇಲ್ಲ ಎಂಬುವುದನ್ನು ಸಾಬೀತುಪಡಿಸಿದ್ದಾರೆ. ಈಗ ಗ್ಯಾರಂಟಿ ಯೋಜನೆಗಳನ್ನು ಮುಂದಿಟ್ಟುಕೊಂಡು ರಾಜ್ಯವನ್ನು ಲೂಟಿ ಮಾಡಲು ಮುಂದಾಗಿದ್ದಾರೆ. ವಿದ್ಯುತ್ ದರ, ನೊಂದಣಿ ದರ, ದಿನಬಳಕೆಯ ವಸ್ತುಗಳ ದರ, ಸಾರಿಗೆ ದರ, ಮುದ್ರಣ ದರ ಸೇರಿದಂತೆ ಪೆಟ್ರೋಲ್ ಹಾಗೂ ವಿದ್ಯುತ್ ದರಗಳನ್ನು ಏರಿಕೆ ಮಾಡಿರುವುದು ಜನರಿಗೆ ಹೊರೆಯಾಗಿದೆ ಎಂದರು.
ಜನ ವಿರೋಧಿ ಆಡಳಿತ
ಸಾಮಾನ್ಯ ಜನರು ಕಾಂಗ್ರೆಸ್ ಆಡಳಿತದಲ್ಲಿ ಜೀವನ ನಿರ್ವಹಣೆ ಮಾಡುವುದು ದುಬಾರಿಯಾಗಿದೆ. ಗ್ಯಾರಂಟಿಗಳು ಶ್ರೀಮಂತರಿಗೂ ಅನ್ವಯವಾಗುತ್ತಿದೆ. ತೈಲ ದರದ ತೆರಿಗೆ ಏರಿಕೆ ಮಾಡಿರುವುದು ದಿನ ಬಳಿಕೆ ವಸ್ತುಗಳ ಮೇಲೆ ಪರಿಣಾಮ ಬೀರಲಿದೆ. ಇದು ಬಡ ಜನರ ವಿರೋಧಿ ಆಡಳಿತವಾಗಿದೆ. ಕೂಡಲೇ ರಾಜ್ಯ ಕಾಂಗ್ರೆಸ್ ಸರ್ಕಾರ ಹೆಚ್ಚಿಸಿರುವ ತೈಲ ದರ ಹಿಂಪಡೆಯದಿದ್ದರೆ ಹೋರಾಟ ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.
ಬಿಜೆಪಿ ಮುಖಂಡರಾದ ಎಸ್.ಬಿ.ಮುನಿವೆಂಕಟಪ್ಪ, ಓಂಶಕ್ತಿ ಚಲಪತಿ, ಬಿ.ವಿ.ಮಹೇಶ್, ಪ್ರವೀಣ್ ಗೌಡ, ಶಿಳ್ಳಂಗೆರೆ ಮಹೇಶ್, ಸಾ.ಮಾ.ಬಾಬು, ನಾಮಾಲ್ ಮಂಜು, ಹರೀಶ್ ಇದ್ದರು.