ವಾಲ್ಮೀಕಿ ನಿಗಮ ಹಗರಣ - ನೈತಿಕತೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆವರೆಗೂ ಪ್ರತಿಭಟನೆ :ಬಿಜೆಪಿ

KannadaprabhaNewsNetwork |  
Published : Jul 19, 2024, 12:56 AM ISTUpdated : Jul 19, 2024, 04:44 AM IST
Protest | Kannada Prabha

ಸಾರಾಂಶ

ವಾಲ್ಮೀಕಿ ನಿಗಮ ಹಗರಣ ಹಿನ್ನೆಲೆಯಲ್ಲಿ ನೈತಿಕತೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು. ಅಲ್ಲಿವರೆಗೆ ನಿರಂತರವಾಗಿ ಹೋರಾಟ ನಡೆಸಲಾಗುವುದು ಎಂದು ಬಿಜೆಪಿ ಎಚ್ಚರಿಕೆ ನೀಡಿದೆ.

  ಬೆಂಗಳೂರು :   ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಬಹುಕೋಟಿ ಹಗರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ನೀಡಿದ ಉತ್ತರ ವಿರೋಧಿಸಿ ಪ್ರತಿಪಕ್ಷ ಬಿಜೆಪಿಯ ಶಾಸಕರು ವಿಧಾನಸಭೆಯ ಪೂರ್ವದ್ವಾರದ ಮುಂದೆ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಹರಿಹಾಯ್ದರು.

ನಿಗಮದ ಅಧಿಕಾರಿ ಚಂದ್ರಶೇಖರ್‌ ಡೆತ್‌ನೋಟ್‌ನಲ್ಲಿ ಸಚಿವರ, ಅಧ್ಯಕ್ಷರ ಒತ್ತಡ ಮೇರೆಗೆ ಎಂದು ಉಲ್ಲೇಖಿಸಿದರೂ ಎಸ್‌ಐಟಿಯ ಎಫ್‌ಐಆರ್‌ನಲ್ಲಿ ಅವರ ಹೆಸರು ಉಲ್ಲೇಖ ಮಾಡಿಲ್ಲ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿತು.

ಗುರುವಾರ ಕಲಾಪ ಮುಂದೂಡಿಕೆಯಾದ ಬಳಿಕ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ಸದಸ್ಯರು ಸರ್ಕಾರ ವಿರುದ್ಧ ಘೋಷಣೆ ಕೂಗುತ್ತಲೇ ಸದನದ ಪೂರ್ವದ್ವಾರಕ್ಕೆ ಆಗಮಿಸಿದರು. ಹಗರಣ ಹಿನ್ನೆಲೆಯಲ್ಲಿ ನೈತಿಕತೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು. ಅಲ್ಲಿವರೆಗೆ ನಿರಂತರವಾಗಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ನಂತರ ಪ್ರತಿಪಕ್ಷ ನಾಯಕರ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅಶೋಕ್‌, ಅಧೀವೇಶನ ನಡೆಯುವ ವೇಳೆ ಸದನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡೆತ್‌ನೋಟ್‌ನಲ್ಲಿನ ಅಂಶಗಳನ್ನು ಕೈಬಿಟ್ಟು ಕೇವಲ ಅಧಿಕಾರಿಗಳ ವಿರುದ್ಧದ ಎಫ್‌ಐಆರ್‌ ಅನ್ನು ಓದಿದ್ದಾರೆ. ಡೆತ್‌ನೋಟ್‌ನಲ್ಲಿ ಸಚಿವರ ಒತ್ತಡವಿದ್ದರೂ ನಿಗಮದ ಅಧ್ಯಕ್ಷರು ಮೌನವಾಗಿದ್ದರು ಎಂಬ ಅಂಶ ಉಲ್ಲೇಖವಾಗಿದೆ. ಇದನ್ನು ಎಫ್‌ಐಆರ್‌ನಲ್ಲಿ ನಮೂದಿಸಿಲ್ಲ. ಈ ಮೂಲಕ ಮಾಜಿ ಸಚಿವ ನಾಗೇಂದ್ರ ಮತ್ತು ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್‌ ಅವರನ್ನು ರಕ್ಷಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಸದನದ ದಾಖಲೆಗೆ ಹೋಗಬಾರದು ಎಂದು ಕುತಂತ್ರ ಮಾಡಿ ಸದನವನ್ನು ತಪ್ಪು ದಾರಿಗೆ ಎಳೆದಿದ್ದಾರೆ. ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ಮಾಡುತ್ತಿದ್ದಾರೆ. ಎಸ್‌ಐಟಿ 40 ದಿನವಾದರೂ ವಿಚಾರಣೆಗೆ ನೊಟೀಸ್ ನೀಡುವುದಿಲ್ಲ. ಪ್ರಕರಣದಲ್ಲಿ ಇಡಿ ಪ್ರವೇಶಿಸುತ್ತಿದ್ದಂತೆ ನೊಟೀಸ್‌ ನೀಡಿದೆ. ತನಿಖೆ ಕೈಗೊಂಡಿರುವ ಎಸ್‌ಐಟಿ ಸುರ್ಜೇವಾಲಾ, ಸಿದ್ದರಾಂಯ್ಯ ಇನ್ವೆಸ್ಟಿಗೇಷನ್‌ ಟೀಮ್‌ (ಎಸ್‌ಎಸ್‌ಐಟಿ) ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಾಗೇಂದ್ರ ಅವರನ್ನು ಯಾವ ಕಾರಣಕ್ಕಾಗಿ ಬಂಧಿಸಲಾಗಿದೆ ಎಂಬುದನ್ನು ಇ.ಡಿ. ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಲೋಕಸಭೆ ಚುನಾವಣೆ ವೇಳೆ ಮತದಾರರಿಗೆ ಮದ್ಯ ಹಂಚಿಕೆ ಮಾಡಲು ಹಣ ಬಳಕೆ ಮಾಡಲಾಗಿದೆ. ಅವರ ಬೆಂಬಲಿಗರ ಖಾತೆಗೆ ಹಣ ವರ್ಗಾವಣೆಯಾಗಿರುವುದು ಸ್ಪಷ್ಟವಾಗಿ ತಿಳಿಸಿದೆ. ಆದರೂ ಮುಖ್ಯಮಂತ್ರಿಗಳು ಹಗರಣ ಬಗ್ಗೆ ಹೆಚ್ಚಾಗಿ ಉಲ್ಲೇಖ ಮಾಡಿಲ್ಲ. ಐದು ನಿಮಿಷ ಮಾತ್ರ ವಾಲ್ಮೀಕಿ ಅಭಿವೃದ್ಧಿ ನಿಗಮದ ಕುರಿತು ಮಾತನಾಡಿ, ಉಳಿದದ್ದು ಸಂವಿಧಾನ, ಅಂಬೇಡ್ಕರ್‌ ಕುರಿತು ಹೇಳಿಕೆ ನೀಡಿದ್ದಾರೆ. ಮುಖ್ಯಮಂತ್ರಿಗಳಿಗೆ ನೈತಿಕತೆ ಇಲ್ಲ. ಪ್ರತಿಪಕ್ಷಗಳಿಗೆ ಪ್ರತಿಭಟನೆಯೊಂದೇ ಬ್ರಹ್ಮಾಸ್ತ್ರ ಇದ್ದು, ಅದನ್ನು ಬಳಸಿ ಲೂಟಿಯಾಗಿರು ಹಣ ವಾಪಸ್ ಆಗುವವರೆಗೆ ಹೋರಾಟ ನಡೆಸುತ್ತೇವೆ ಎಂದರು.

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮಾತನಾಡಿ, ವಿಧಾನಸಭೆ ಚುನಾವಣೆ ಸಮಯದಲ್ಲಿಯೇ ಕಾಂಗ್ರೆಸ್‌ನ ಬಣ್ಣದ ಬಗ್ಗೆ ತಿಳಿಸಲಾಗಿತ್ತು. ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಬಂದರೆ ಅವರ ಹೈಕಮಾಂಡ್‌ನ ಎಟಿಎಂ ಆಗಿ ಪರಿವರ್ತನೆಯಾಗಲಿದೆ. ಹೈಕಮಾಡ್‌ ಹೊಟ್ಟೆ ತುಂಬಿಸಲು ರಾಜ್ಯದ ಬೊಕ್ಕಸಕ್ಕೆ ಕೈ ಹಾಕಲಾಗುತ್ತದೆ ಎಂದು ತಿಳಿಸಲಾಗಿತ್ತು. ಅದೇ ರೀತಿ ಆಗಿದೆ. ಎಸ್‌ಸಿ/ಎಸ್‌ಟಿ ಬಗ್ಗೆ ಭಾಷಣ ಮಾಡುವ ಸಿದ್ದರಾಮಯ್ಯ ನೈತಿಕತೆ ಉಳಿಸಿಕೊಂಡಿಲ್ಲ ಎಂದು ಹೇಳಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ