ತಮ್ಮ ಅಸ್ತಿತ್ವ ಸಾಬೀತುಪಡಿಸಲು ಕೆಲದಿನಗಳ ಕಾಲ ಸುಮ್ಮನಾಗಿದ್ದ ಭಿನ್ನಮತೀಯ ಮುಖಂಡರ ಸಭೆ ಇಂದು : ಕುತೂಹಲ

ಸಾರಾಂಶ

ಕೆಲದಿನಗಳ ಕಾಲ ಸುಮ್ಮನಾಗಿದ್ದ ಬಿಜೆಪಿ ಭಿನ್ನಮತೀಯ ಮುಖಂಡರು ಗುರುವಾರ ಮತ್ತೆ ಸಭೆ ನಡೆಸುವ ಮೂಲಕ ತಮ್ಮ ಅಸ್ತಿತ್ವ ಸಾಬೀತುಪಡಿಸಲು ಮುಂದಾಗಿದ್ದಾರೆ.

ಬೆಂಗಳೂರು : ಕೆಲದಿನಗಳ ಕಾಲ ಸುಮ್ಮನಾಗಿದ್ದ ಬಿಜೆಪಿ ಭಿನ್ನಮತೀಯ ಮುಖಂಡರು ಗುರುವಾರ ಮತ್ತೆ ಸಭೆ ನಡೆಸುವ ಮೂಲಕ ತಮ್ಮ ಅಸ್ತಿತ್ವ ಸಾಬೀತುಪಡಿಸಲು ಮುಂದಾಗಿದ್ದಾರೆ.

ಭಿನ್ನಮತೀಯ ಮುಖಂಡರ ಬಣದ ನಾಯಕರೂ ಆಗಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ತಮಗೆ ಪಕ್ಷದ ಕೇಂದ್ರ ಶಿಸ್ತು ಸಮಿತಿ ಶೋಕಾಸ್ ನೊಟೀಸ್ ನೀಡಿದ ಬಳಿಕ ಮೌನಕ್ಕೆ ಶರಣಾಗಿದ್ದರು. ಆದರೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಪದೇ ಪದೆ ತಾವೇ ರಾಜ್ಯಾಧ್ಯಕ್ಷರಾಗಿ ಮುಂದುವರೆಯುವ ವಿಶ್ವಾಸ ವ್ಯಕ್ತಪಡಿಸುತ್ತಿರುವುದರಿಂದ ವಿಚಲಿತರಾದ ಭಿನ್ನರು ಮತ್ತೆ ಸಭೆ ಸೇರಿ ಮುಂದಿನ ಚಟುವಟಿಕೆ ಬಗ್ಗೆ ಚರ್ಚಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಗುರುವಾರ ಮಾಜಿ ಸಚಿವ ಕುಮಾರ್ ಬಂಗಾರಪ್ಪ ನಿವಾಸದಲ್ಲಿ ಸಭೆ ನಡೆಯುವ ಸಾಧ್ಯತೆಯಿದ್ದು, ಬಳಿಕ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮುಖಂಡರು ಮಾತನಾಡುವ ನಿರೀಕ್ಷೆಯಿದೆ. ಈ ಮೂಲಕ ತಾವು ನಿಷ್ಕ್ರಿಯರಾಗಿಲ್ಲ ಎಂಬ ಸಂದೇಶ ರವಾನಿಸಲು ಉದ್ದೇಶಿಸಿದ್ದಾರೆ ಎನ್ನಲಾಗಿದೆ.

ಯಾವುದೇ ಕಾರಣಕ್ಕೂ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮುಂದುವರೆಸಬಾರದು ಎಂಬ ಪಟ್ಟು ಹಿಡಿದಿರುವ ಯತ್ನಾಳ್ ಬಣದ ಮುಖಂಡರು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಬೇಕು ಎಂಬ ಬೇಡಿಕೆಯನ್ನು ಮತ್ತೊಮ್ಮೆ ಮುಂದಿಡುವ ಸಾಧ್ಯತೆಯಿದೆ.

Share this article