ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬದಲಾವಣೆ ಆಗಬೇಕು ಎಂಬ ಹೋರಾಟ ಮುಂದುವರೆಸಲು ನಿರ್ಧರಿಸಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಣದ ಮುಖಂಡರು, ಯತ್ನಾಳ್ ಅವರ ಉಚ್ಚಾಟನೆಯನ್ನು ಹಿಂಪಡೆಯುವಂತೆ ಪಕ್ಷದ ವರಿಷ್ಠರ ಮೇಲೆ ಒತ್ತಡ ಹೇರಲು ತೀರ್ಮಾನಿಸಿದ್ದಾರೆ.
ಬೆಂಗಳೂರು : ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬದಲಾವಣೆ ಆಗಬೇಕು ಎಂಬ ಹೋರಾಟ ಮುಂದುವರೆಸಲು ನಿರ್ಧರಿಸಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಣದ ಮುಖಂಡರು, ಯತ್ನಾಳ್ ಅವರ ಉಚ್ಚಾಟನೆಯನ್ನು ಹಿಂಪಡೆಯುವಂತೆ ಪಕ್ಷದ ವರಿಷ್ಠರ ಮೇಲೆ ಒತ್ತಡ ಹೇರಲು ತೀರ್ಮಾನಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಸಭೆ ಸೇರಿದ ಮುಖಂಡರು ಯತ್ನಾಳ್ ಅವರು ಏಕಾಂಗಿಯಲ್ಲ ಎಂಬ ಸಂದೇಶ ರವಾನಿಸುವ ಯತ್ನ ಮಾಡಿದರು. ಸಭೆಯಲ್ಲಿ ಯತ್ನಾಳ್ ಬಣದ ಮುಖಂಡರಾದ ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪ, ಅರವಿಂದ ಲಿಂಬಾವಳಿ, ಬಿ.ಪಿ.ಹರೀಶ್, ಜಿ.ಎಂ.ಸಿದ್ದೇಶ್ವರ, ಪ್ರತಾಪ್ ಸಿಂಹ, ಎನ್.ಆರ್.ಸಂತೋಷ್ ಮತ್ತಿತರರು ಉಪಸ್ಥಿತರಿದ್ದರು.
ಯತ್ನಾಳ್ ಅವರನ್ನು ಉಚ್ಚಾಟಿಸಿರುವ ಕ್ರಮ ಸರಿಪಡಿಸುವ ಬಗ್ಗೆಯೇ ಸಭೆಯಲ್ಲಿ ಹೆಚ್ಚು ಚರ್ಚೆಯಾಗಿದ್ದು, ಈ ಕ್ರಮದಿಂದ ಯಾವುದೇ ಕಾರಣಕ್ಕೂ ಗುಂಪಿನ ಒಗ್ಗಟ್ಟಿಗೆ ಧಕ್ಕೆ ಉಂಟಾಗಬಾರದು ಎಂಬ ನಿಲುವಿಗೆ ಮುಖಂಡರು ಬಂದಿದ್ದಾರೆ ಎನ್ನಲಾಗಿದೆ.
ಎಲ್ಲ ಮುಖಂಡರೂ ಯತ್ನಾಳ್ ಪರವಾಗಿ ಬಲವಾಗಿ ನಿಲ್ಲಬೇಕು. ವಿಜಯೇಂದ್ರ ಮತ್ತು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪಕ್ಷದಲ್ಲಿನ ಲಿಂಗಾಯತ ನಾಯಕರನ್ನು ಮುಗಿಸುತ್ತಿರುವ ಬಗ್ಗೆ ಸಮುದಾಯಕ್ಕೆ ತಿಳಿಸಬೇಕು ಎಂಬ ಬಗ್ಗೆಯೂ ಸಭೆಯಲ್ಲಿ ಪ್ರಸ್ತಾಪವಾಗಿದೆ.
ಹಿಂದೆ ಸರಿಯಲ್ಲ-ಕುಮಾರ್ ಬಂಗಾರಪ್ಪ:
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಕುಮಾರ್ ಬಂಗಾರಪ್ಪ, ಪಕ್ಷದ ರಾಜ್ಯ ಘಟಕದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದಾಗಿ ವರಿಷ್ಠರಿಗೆ ದೂರು ನೀಡಲಾಗಿತ್ತು. ಆದರೂ ಈ ಉಚ್ಚಾಟನೆಯ ಘಟನೆ ನಡೆದಿದೆ. ಉಚ್ಚಾಟನೆ ವಾಪಸ್ ಪಡೆಯಬೇಕು. ಪಕ್ಷ ತನ್ನ ನಿರ್ಧಾರವನ್ನು ಪರಿಶೀಲನೆ ಮಾಡಬೇಕು ಎಂದು ಆಗ್ರಹಿಸಿದರು.
ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆ ನಾವು ಹೋರಾಟ ಮುಂದುವರೆಸುತ್ತೇವೆ. ಯಾವುದೇ ಕಾರಣಕ್ಕೂ ಇದರಿಂದ ಹಿಂದೆ ಸರಿಯಲ್ಲ ಎಂದೂ ಸ್ಪಷ್ಟವಾಗಿ ತಿಳಿಸಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ನಾವು ಯಾವುದೇ ಕಾರಣಕ್ಕೂ ಪಕ್ಷ ತೊರೆಯುವ ಅಥವಾ ಹೊಸ ಪಕ್ಷ ಮಾಡುವ ಉದ್ದೇಶ ಇಟ್ಟುಕೊಂಡಿಲ್ಲ. ಪಕ್ಷವನ್ನು ಪೂರ್ಣ ಪ್ರಮಾಣದಲ್ಲಿ ಸಂಘಟನೆ ಮಾಡಬೇಕು. 2028ರ ಚುನಾವಣೆಯಲ್ಲಿ ಬಿಜೆಪಿ ಪೂರ್ಣ ಪ್ರಮಾಣದಲ್ಲಿ ಗೆಲುವು ಸಾಧಿಸಬೇಕು ಎಂಬ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ ಎಂದರು.
ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಚಾಟಿಸಿರುವುದು ರಾಜ್ಯದ ಅನೇಕ ಹಿಂದು ಸಂಘಟನೆಗಳ ಕಾರ್ಯಕರ್ತರಿಗೆ, ಅಭಿಮಾನಿಗಳಿಗೆ, ಪಕ್ಷದ ಕಾರ್ಯಕರ್ತರಿಗೆ ಹಾಗೂ ನಮಗೆಲ್ಲ ತುಂಬಾ ಬೇಸರ, ನೋವು ತಂದಿದೆ. ಹಾಗಂತ ವರಿಷ್ಠರ ನಿರ್ಧಾರವನ್ನು ಪ್ರಶ್ನಿಸುವುದಾಗಲಿ, ಅದಕ್ಕೆ ವಿರುದ್ಧವಾಗಿ ನಡೆದುಕೊಳ್ಳುವ ಕೆಲಸ ಮಾಡಲ್ಲ. ಇದರ ಬಗ್ಗೆ ಸಾಕಷ್ಟು ಚರ್ಚೆ ಮಾಡಿದ್ದೇವೆ ಎಂದು ಮಾಹಿತಿ ನೀಡಿದರು.
ನಮಗೆ ಹಿನ್ನಡೆ ಆಗಿರುವುದು ನಿಜ. ತಪ್ಪು ಗ್ರಹಿಕೆಯಿಂದ ಯತ್ನಾಳ್ ಅವರ ಉಚ್ಚಾಟನೆ ಆಗಿದೆ. ಹಾಗೇ ನೋಡಿದರೆ ಶಾಸಕ ಎಸ್.ಟಿ.ಸೋಮಶೇಖರ್ ಸೋಮಶೇಖರ್ ಅವರನ್ನು ಉಚ್ಚಾಟನೆ ಮಾಡಬೇಕಾಗಿತ್ತು.
ಯತ್ನಾಳ್ ಬಾಯಿಗೆ ಕಡಿವಾಣ ಹಾಕಬೇಕಿತ್ತು
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಪಕ್ಷದ ಕೆಲ ನಾಯಕರನ್ನು ಟೀಕಿಸುವ ಭರದಲ್ಲಿ ಬಳಸಿದ ಪದಗಳ ಬಗ್ಗೆ ಸಭೆಯಲ್ಲಿ ಸೂಕ್ಷ್ಮವಾಗಿ ಪ್ರಸ್ತಾಪವಾಗಿದೆ. ಹೇಳಬೇಕಾದುದನ್ನು ಸೂಚ್ಯವಾಗಿ ಹೇಳಬಹುದಿತ್ತು. ಆದರೆ, ಹಾಗೆ ಮಾಡದೆ ಕಟುವಾದ ಹಾಗೂ ಲೇವಡಿ ರೀತಿಯ ಪದಗಳನ್ನು ಬಳಸಿರುವುದು ಸರಿಯಲ್ಲ. ವಿಶೇಷವಾಗಿ ಯಡಿಯೂರಪ್ಪ ಅವರ ಹಿರಿತನ ಗಮನಿಸಿ ಹೇಳಿಕೆ ನೀಡಬೇಕಿತ್ತು. ಪಕ್ಷದ ವರಿಷ್ಠರು ಇದನ್ನು ಗಂಭೀರವಾಗಿ ಪರಿಗಣಿಸಿರಬಹುದು ಎಂಬ ಚರ್ಚೆ ಸಭೆಯಲ್ಲಿ ನಡೆದಿದೆ ಎನ್ನಲಾಗಿದೆ.
ಇದಕ್ಕೆ ಪೂರಕ ಎಂಬಂತೆ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರ್ ಬಂಗಾರಪ್ಪ, ಯತ್ನಾಳ್ ಅವರಿಂದ ವೈಯಕ್ತಿಕವಾಗಿ ತಪ್ಪು ಆಗಿದ್ದರೆ ಅದನ್ನು ತಿದ್ದಿಕೊಂಡು ಹೋಗುತ್ತೇವೆ ಎಂದು ಸಮಜಾಯಿಷಿ ನೀಡಿದರು.
- ಉಚ್ಚಾಟನೆ ಬಳಿಕ ಕಲಬುರಗಿ ಜಿಲ್ಲೆಯ ಚಿಂಚೋಳಿಯಲ್ಲಿರುವ ತಮ್ಮ ಕಾರ್ಖಾನೆಯಲ್ಲಿ ತಂಗಿದ್ದ ಯತ್ನಾಳ್
- ಶುಕ್ರವಾರ ಬೆಂಗಳೂರಿಗೆ. ಜಾರಕಿಹೊಳಿ, ಕುಮಾರ್ ಬಂಗಾರಪ್ಪ, ಲಿಂಬಾವಳಿ ಸೇರಿ ತಮ್ಮ ತಂಡದ ಜತೆ ಸಭೆ
- ಉಚ್ಚಾಟನೆಯನ್ನು ಹಿಂಪಡೆಯುವಂತೆ ಪಕ್ಷದ ವರಿಷ್ಠರ ಮೇಲೆ ಒತ್ತಡ ಹೇರಲು ಬಿಜೆಪಿ ಭಿನ್ನರ ತಂಡ ನಿರ್ಧಾರ
- ಇದೇ ವೇಳೆ ವಿಜಯೇಂದ್ರ ಬದಲಾವಣೆ ಆಗಬೇಕು ಎಂಬ ಹೋರಾಟ ಮುಂದುವರಿಸಲು ಕೂಡ ತೀರ್ಮಾನ
- ಯಾವುದೇ ಕಾರಣಕ್ಕೂ ಗುಂಪಿನ ಒಗ್ಗಟ್ಟಿಗೆ ಧಕ್ಕೆಯಾಗದಂತೆ ನೋಡಿಕೊಳ್ಳುವ ನಿಲುವಿಗೆ ಬಂದ ಮುಖಂಡರು
ನಮಗೆ ಹಿನ್ನಡೆ ಆಗಿರುವುದು ನಿಜ
ನಮಗೆ ಹಿನ್ನಡೆ ಆಗಿರುವುದು ನಿಜ. ತಪ್ಪು ಗ್ರಹಿಕೆಯಿಂದ ಯತ್ನಾಳ್ ಅವರ ಉಚ್ಚಾಟನೆ ಆಗಿದೆ. ಹಾಗೇ ನೋಡಿದರೆ ಶಾಸಕ ಎಸ್.ಟಿ.ಸೋಮಶೇಖರ್ ಸೋಮಶೇಖರ್ ಅವರನ್ನು ಉಚ್ಚಾಟನೆ ಮಾಡಬೇಕಾಗಿತ್ತು. ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆ ನಾವು ಹೋರಾಟ ಮುಂದುವರೆಸುತ್ತೇವೆ. ಯಾವುದೇ ಕಾರಣಕ್ಕೂ ಇದರಿಂದ ಹಿಂದೆ ಸರಿಯಲ್ಲ.
- ಕುಮಾರ್ ಬಂಗಾರಪ್ಪ, ಮಾಜಿ ಸಚಿವ