ಪಾಕ್‌ ಗೌರವಿಸಿ: ಅಯ್ಯರ್‌ ಹಳೆಯ ವಿಡಿಯೋ ವೈರಲ್‌

KannadaprabhaNewsNetwork | Updated : May 11 2024, 05:00 AM IST

ಸಾರಾಂಶ

ಲೋಕಸಭೆ ಚುನಾವಣೆ ನಡೆಯುತ್ತಿರುವಾಗ ಒಂದಾದ ಮೇಲೊಂದು ವಿವಾದದಲ್ಲಿ ಸಿಲುಕುತ್ತಿರುವ ಕಾಂಗ್ರೆಸ್‌ ಪಕ್ಷ ಇದೀಗ ಇನ್ನೊಂದು ಮುಜುಗರಕ್ಕೊಳಗಾಗಿದ್ದು, ಪಕ್ಷದ ಹಿರಿಯ ನಾಯಕ ಮಣಿಶಂಕರ್‌ ಅಯ್ಯರ್‌ ಪಾಕಿಸ್ತಾನವನ್ನು ಹೊಗಳುವ ಹಳೆಯ ವಿಡಿಯೋವೊಂದು ಈಗ ಬಯಲಿಗೆ ಬಂದು ವೈರಲ್‌ ಆಗಿದೆ.  

ನವದೆಹಲಿ: ಲೋಕಸಭೆ ಚುನಾವಣೆ ನಡೆಯುತ್ತಿರುವಾಗ ಒಂದಾದ ಮೇಲೊಂದು ವಿವಾದದಲ್ಲಿ ಸಿಲುಕುತ್ತಿರುವ ಕಾಂಗ್ರೆಸ್‌ ಪಕ್ಷ ಇದೀಗ ಇನ್ನೊಂದು ಮುಜುಗರಕ್ಕೊಳಗಾಗಿದ್ದು, ಪಕ್ಷದ ಹಿರಿಯ ನಾಯಕ ಮಣಿಶಂಕರ್‌ ಅಯ್ಯರ್‌ ಪಾಕಿಸ್ತಾನವನ್ನು ಹೊಗಳುವ ಹಳೆಯ ವಿಡಿಯೋವೊಂದು ಈಗ ಬಯಲಿಗೆ ಬಂದು ವೈರಲ್‌ ಆಗಿದೆ. ಈ ಮೂಲಕ ಅಯ್ಯರ್‌ ಆಕ್ರೋಶಕ್ಕೆ ಕಾರಣರಾಗಿದ್ದಾರೆ.

‘ಭಾರತವು ಪಾಕಿಸ್ತಾನವನ್ನು ಗೌರವಿಸಬೇಕು. ಏಕೆಂದರೆ ಅದರ ಬಳಿ ಅಣು ಬಾಂಬ್‌ ಇದೆ! ನಾವು ಅವರಿಗೆ ಗೌರವ ನೀಡದಿದ್ದರೆ ಅವರು ಭಾರತದ ಮೇಲೆ ಅಣು ಬಾಂಬ್‌ ದಾಳಿ ನಡೆಸುವ ಬಗ್ಗೆ ಯೋಚಿಸಬಹುದು’ ಎಂದು ಅಯ್ಯರ್‌ ಹೇಳಿದ್ದು ವಿಡಿಯೋದಲ್ಲಿ ದಾಖಲಾಗಿದೆ.

ಇದಕ್ಕೆ ಬಿಜೆಪಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದು, ‘ಮಣಿಶಂಕರ್‌ ಹೇಳಿಕೆ ಕಾಂಗ್ರೆಸ್‌ ಪಕ್ಷದ ಸಿದ್ಧಾಂತವನ್ನು ಎತ್ತಿ ತೋರಿಸಿದೆ’ ಎಂದು ಹೇಳಿದೆ. ಸ್ವತಃ ಕಾಂಗ್ರೆಸ್‌ ಕೂಡ ಈ ಹೇಳಿಕೆಯನ್ನು ನಾವು ಒಪ್ಪುವುದಿಲ್ಲ ಎಂದು ಪ್ರತಿಕ್ರಿಯಿಸಿದೆ.

ರಾಹುಲ್‌ ಗಾಂಧಿಯನ್ನು ಕಾಂಗ್ರೆಸ್‌ ಪಕ್ಷ ಇತ್ತೀಚೆಗೆ ಹೊಗಳಿರುವುದು, ಪಕ್ಷದ ನಾಯಕ ಸ್ಯಾಮ್‌ ಪಿತ್ರೋಡಾ ದಕ್ಷಿಣ ಭಾರತೀಯರನ್ನು ಆಫ್ರಿಕನ್ನರಿಗೆ ಹೋಲಿಸಿ ವಿವಾದ ಸೃಷ್ಟಿಸಿರುವುದು ಕಾಂಗ್ರೆಸ್‌ ಪಕ್ಷಕ್ಕೆ ನುಂಗಲಾಗದ ತುತ್ತಾಗಿ ಪರಿಣಮಿಸಿರುವಾಗಲೇ ಮಣಿಶಂಕರ್‌ ಅಯ್ಯರ್‌ ಹೇಳಿಕೆ ಪಕ್ಷವನ್ನು ಇನ್ನಷ್ಟು ಇಕ್ಕಟ್ಟಿಗೆ ಸಿಲುಕಿಸಿದೆ.

2014ರ ಲೋಕಸಭೆ ಚುನಾವಣೆಯಲ್ಲೂ ಅಯ್ಯರ್‌ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಚಿಕ್ಕಂದಿನಲ್ಲಿ ಚಹಾ ಮಾರುತ್ತಿದ್ದುದನ್ನು ವ್ಯಂಗ್ಯ ಮಾಡಿ ಕಾಂಗ್ರೆಸ್‌ ಸೋಲಿಗೆ ಪರೋಕ್ಷ ಕಾರಣರಾಗಿದ್ದರು.

ಮಣಿಶಂಕರ್‌ ಅಯ್ಯರ್‌ ಹೇಳಿದ್ದು:  ವೈರಲ್‌ ಆಗಿರುವ ಸಂದರ್ಶನದ ತುಣುಕಿನಲ್ಲಿ ಮಣಿಶಂಕರ್‌ ಅಯ್ಯರ್‌, ‘ನಾವು ಪಾಕಿಸ್ತಾನವನ್ನು ಗೌರವಿಸಬೇಕು. ಆ ದೇಶದ ಜೊತೆಗೆ ಮಾತನಾಡಬೇಕು. ಅದರ ಬದಲು ನಾವು ಮಿಲಿಟರಿ ಬಲ ಪ್ರದರ್ಶನ ಮಾಡುತ್ತಿದ್ದೇವೆ. ಇದು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತಿದೆ. ಅವರ ಬಳಿ ಆಟಂ ಬಾಂಬ್‌ಗಳಿವೆ. ಅಲ್ಲಿರುವ ಯಾರೋ ಒಬ್ಬ ಹುಚ್ಚ ಭಾರತದ ಮೇಲೆ ಬಾಂಬ್‌ ಹಾಕಲು ನಿರ್ಧರಿಸಿದರೆ ಏನಾಗುತ್ತದೆ? ನಮ್ಮಲ್ಲೂ ಅಣು ಬಾಂಬ್‌ ಇದೆ. ಆದರೆ ಅಲ್ಲಿನ ಹುಚ್ಚ ಲಾಹೋರ್‌ ಮೇಲೆ ಬಾಂಬ್‌ ಹಾಕಲು ನಿರ್ಧರಿಸಿದರೆ ಅದರ ವಿಕಿರಣ ಅಮೃತಸರವನ್ನು ತಲುಪಲು ಕೇವಲ 8 ಸೆಕೆಂಡ್‌ ಸಾಕು’ ಎಂದು ಹೇಳಿದ್ದಾರೆ.

ಬಿಜೆಪಿ ತೀವ್ರ ಆಕ್ರೋಶ:  ಮಣಿಶಂಕರ್‌ ಅಯ್ಯರ್‌ ಹೇಳಿಕೆ ಕಾಂಗ್ರೆಸ್‌ ಪಕ್ಷದ ಸಿದ್ಧಾಂತವನ್ನು ತೋರಿಸುತ್ತದೆ ಎಂದು ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಈ ಕುರಿತು ಟ್ವೀಟ್‌ ಮಾಡಿರುವ ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌, ‘ಈ ಚುನಾವಣೆಯಲ್ಲಿ ರಾಹುಲ್‌ ಗಾಂಧಿಯ ಕಾಂಗ್ರೆಸ್‌ ಸಿದ್ಧಾಂತ ಸಂಪೂರ್ಣ ಅನಾವರಣಗೊಂಡಿದೆ. ಅವರಿಗೆ ಪಾಕಿಸ್ತಾನ ಬೆಂಬಲ ನೀಡುತ್ತದೆ. ಇವರು ಸಿಯಾಚಿನ್‌ ಬಿಟ್ಟುಕೊಡುವ ಬಗ್ಗೆ ಮಾತನಾಡುತ್ತಾರೆ. ಜನರನ್ನು ವಿಭಜಿಸುವುದು, ಸುಳ್ಳು ಹೇಳುವುದು, ದ್ವೇಷ ಹರಡುವುದು, ನಕಲಿ ಗ್ಯಾರಂಟಿಗಳನ್ನು ನೀಡಿ ಬಡವರನ್ನು ದಾರಿತಪ್ಪಿಸುವುದು ಇವೇ ಕಾಂಗ್ರೆಸ್‌ನ ಕೆಲಸಗಳಾಗಿವೆ’ ಎಂದು ಕಿಡಿಕಾರಿದ್ದಾರೆ.

ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ನಾಯಕರು ಪಾಕಿಸ್ತಾನದೊಳಗೆ ನುಗ್ಗಿ ಭಯೋತ್ಪಾದಕರನ್ನು ಕೊಲ್ಲುವ ಎಚ್ಚರಿಕೆ ನೀಡಿದ ಬೆನ್ನಲ್ಲೇ ಈ ವಿಡಿಯೋ ಬೆಳಕಿಗೆ ಬಂದಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಮಣಿ ಹೇಳಿಕೆಗೆ ಕಾಂಗ್ರೆಸ್‌ ವಿರೋಧ:  ‘ಮಣಿಶಂಕರ್‌ ಅಯ್ಯರ್‌ ಹೇಳಿಕೆಯನ್ನು ನಾವು ಒಪ್ಪುವುದಿಲ್ಲ. ಆದರೆ ನರೇಂದ್ರ ಮೋದಿಯವರ ಎಡವಟ್ಟುಗಳನ್ನು ಮುಚ್ಚಿಹಾಕಲು ಬಿಜೆಪಿಯವರು ಈ ಹಳೆಯ ವಿಡಿಯೋ ತೆಗೆದು ಪೋಸ್ಟ್‌ ಮಾಡಿದ್ದಾರೆ’ ಎಂದು ಕಾಂಗ್ರೆಸ್‌ನ ಮಾಧ್ಯಮ ವಿಭಾಗದ ಮುಖ್ಯಸ್ಥ ಪವನ್‌ ಖೇರಾ ಹೇಳಿದ್ದಾರೆ. ಜೊತೆಗೆ ಅವರು ಇತ್ತೀಚೆಗೆ ವಿದೇಶಾಂಗ ಸಚಿವ ಜೈಶಂಕರ್‌ ಅವರು ಚೀನಾಕ್ಕೆ ಭಾರತ ಹೆದರಿದೆ ಎಂಬರ್ಥದಲ್ಲಿ ಮಾತನಾಡಿದ್ದಾರೆ ಎಂದು ಇನ್ನೊಂದು ವಿಡಿಯೋ ಪೋಸ್ಟ್‌ ಮಾಡಿದ್ದಾರೆ.

ಇದು ಹಳೆ ವಿಡಿಯೋ-ಮಣಿ:  ತಮ್ಮ ವಿಡಿಯೋ ವೈರಲ್‌ ಆಗಿರುವುದಕ್ಕೆ ಪ್ರತಿಕ್ರಿಯಿಸಿರುವ ಮಣಿಶಂಕರ್‌ ಅಯ್ಯರ್‌, ‘ಇದು ಹಳೆಯ ವಿಡಿಯೋ. ಬಿಜೆಪಿಗೆ ಲೋಕಸಭಾ ಚುನಾವಣೆಯಲ್ಲಿ ಹಿನ್ನಡೆ ಆಗುತ್ತಿರುವುದರಿಂದ ಇದನ್ನು ಪೋಸ್ಟ್‌ ಮಾಡಿ ವಿವಾದ ಸೃಷ್ಟಿಸಲು ನೋಡಿದ್ದಾರೆ. ನಾನು ಈ ವಿಡಿಯೋದಲ್ಲಿ ಸ್ವೆಟರ್‌ ಧರಿಸಿದ್ದೇನೆ. ಅಂದರೆ ಇದು ಹಲವು ತಿಂಗಳ ಹಿಂದಿನ ಚಳಿಗಾಲದ ವಿಡಿಯೋ ಎಂಬುದು ತಿಳಿಯುತ್ತದೆ’ ಎಂದು ಸ್ಪಷ್ಟನೆ ನೀಡಿದ್ದಾರೆ.

Share this article