ಮುಡಾ ಹಗರಣ ಪ್ರಮುಖ ಅಸ್ತ್ರವನ್ನಾಗಿಸಿಕೊಂಡು ಸಿದ್ದರಾಮಯ್ಯ ತಲೆದಂಡಕ್ಕೆ ದೋಸ್ತಿಗಳ ಪಣ

KannadaprabhaNewsNetwork | Updated : Aug 11 2024, 04:11 AM IST

ಸಾರಾಂಶ

ಮುಡಾ ಹಗರಣವನ್ನು ಪ್ರಮುಖ ಅಸ್ತ್ರವನ್ನಾಗಿಸಿಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಪದತ್ಯಾಗಕ್ಕೆ ಆಗ್ರಹಿಸಿ ಎಂಟು ದಿನಗಳ ಕಾಲ ಬಿಜೆಪಿ ಮತ್ತು ಜೆಡಿಎಸ್ ನಡೆಸಿದ ‘ಮೈಸೂರು ಚಲೋ’ ಪಾದಯಾತ್ರೆಗೆ ಬೃಹತ್‌ ಸಮಾವೇಶದೊಂದಿಗೆ ತೆರೆ 

 ಮೈಸೂರು : ಮುಡಾ ಹಗರಣವನ್ನು ಪ್ರಮುಖ ಅಸ್ತ್ರವನ್ನಾಗಿಸಿಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಪದತ್ಯಾಗಕ್ಕೆ ಆಗ್ರಹಿಸಿ ಎಂಟು ದಿನಗಳ ಕಾಲ ಬಿಜೆಪಿ ಮತ್ತು ಜೆಡಿಎಸ್ ನಡೆಸಿದ ‘ಮೈಸೂರು ಚಲೋ’ ಪಾದಯಾತ್ರೆಗೆ ಬೃಹತ್‌ ಸಮಾವೇಶದೊಂದಿಗೆ ತೆರೆ ಬಿದ್ದಿದ್ದು, ಮುಖ್ಯಮಂತ್ರಿಗಳು ರಾಜೀನಾಮೆ ನೀಡುವವರೆಗೆ ಹೋರಾಟದ ಕಾವು ಮುಂದುವರೆಸುವ ಪಣವನ್ನು ಎರಡೂ ಪಕ್ಷಗಳ ನಾಯಕರು ತೊಟ್ಟಿದ್ದಾರೆ.

ಶನಿವಾರ ಸಿದ್ದರಾಮಯ್ಯ ಅವರ ತವರು ಮೈಸೂರಿನಲ್ಲಿ ಬೃಹತ್‌ ಸಮಾವೇಶದ ಮೂಲಕ ಠೇಂಕರಿಸಿದ ಮಿತ್ರ ಪಕ್ಷಗಳ ಘಟಾನುಘಟಿ ನಾಯಕರು, ಮುಖ್ಯಮಂತ್ರಿ ರಾಜೀನಾಮೆ ನೀಡುವವರೆಗೆ ಹೋರಾಟ ನಡೆಸಲು ಸಹಸ್ರಾರು ಕಾರ್ಯಕರ್ತರ ಸಮ್ಮುಖದಲ್ಲಿ ಪಣ ತೊಟ್ಟರು.

ಇದೇ ವೇಳೆ ಸಮಾವೇಶದಲ್ಲಿ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ‘5000 ನಿವೇಶನಗಳನ್ನು ನುಂಗಿದ ಆ 14 ನಿವೇಶನಗಳು’ ಎಂಬ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಸಮಾರಂಭದಲ್ಲಿ ಕೇಂದ್ರ ಸಚಿವರಾದ ಎಚ್‌.ಡಿ.ಕುಮಾರಸ್ವಾಮಿ, ಪ್ರಹ್ಲಾದ್‌ ಜೋಶಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸೇರಿದಂತೆ ಮಿತ್ರಪಕ್ಷಗಳ ಇತರೆ ನಾಯಕರು ಸರ್ಕಾರ ವಿರುದ್ಧ ಟೀಕಾಪ್ರಹಾರ ನಡೆಸಿದರು.

ರಣಕಹಳೆ:

ಮುಖ್ಯಮಂತ್ರಿಗಳ ರಾಜೀನಾಮೆ ಜತೆಗೆ ರಾಜ್ಯ ಕಾಂಗ್ರೆಸ್‌ ಸರ್ಕಾರದ ಭ್ರಷ್ಟಾಚಾರ ವಿರುದ್ಧ ಬಿಜೆಪಿ-ಜೆಡಿಎಸ್‌ ರಣಕಹಳೆ ಮೊಳಗಿಸಿ ಆರಂಭಿಸಿದ ಮೈಸೂರು ಚಲೋ ಪಾದಯಾತ್ರೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮುಕ್ತಾಯಗೊಂಡು, ಮಹಾರಾಜ ಕಾಲೇಜಿನಲ್ಲಿ ಬೃಹತ್‌ ಸಮಾರೋಪ ಸಮಾರಂಭ ನಡೆಸಲಾಯಿತು. ಆದರೂ ಮುಖ್ಯಮಂತ್ರಿಗಳ ತಲೆದಂಡವಾಗುವವರೆಗೆ ದೋಸ್ತಿ ಪಕ್ಷಗಳು ವಿರಮಿಸುವುದಿಲ್ಲ ಎಂಬ ಸಂದೇಶವನ್ನು ಒಗ್ಗಟ್ಟಾಗಿ ಸಾರಿದವು. ಈ ಮೂಲಕ ಕಾಂಗ್ರೆಸ್‌ ಸರ್ಕಾರವನ್ನು ಕಿತ್ತೊಗೆಯಲು ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್‌ ತೊಡೆ ತಟ್ಟಿದವು. ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವವರೆಗೆ ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದು ಘೋಷಣೆ ಮಾಡಿದವು.

ಅಲ್ಲದೇ, ಬಿಜೆಪಿ-ಜೆಡಿಎಸ್ ಸಮಾವೇಶಕ್ಕೂ ಮುನ್ನಾ ದಿನ ಆಡಳಿತರೂಢ ಕಾಂಗ್ರೆಸ್‌ ನಡೆಸಿದ ಜನಾಂದೋಲನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನೀಡಿದ ಪ್ರತಿ ಹೇಳಿಕೆಗೂ ದೋಸ್ತಿ ಪಕ್ಷದ ನಾಯಕರು ತಿರುಗೇಟು ನೀಡಿದರು.

ಹಿಂದುಳಿದ ವರ್ಗದವರಾಗಿರುವ ಕಾರಣ ಪ್ರತಿಪಕ್ಷಗಳು ತಮ್ಮನ್ನು ಗುರಿಯಾಗಿಸಿಕೊಂಡು ಟೀಕೆ ಮಾಡುತ್ತಿವೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಮುಖ್ಯಮಂತ್ರಿಗಳು ಹಿಂದುಳಿದ ವರ್ಗ ಎಂಬುದನ್ನು ತಮ್ಮ ರಕ್ಷಣೆಗಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ವಾಲ್ಮೀಕಿ ನಿಗಮದ ಹಗರಣ ಮತ್ತು ಮುಡಾ ಹಗರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಿ ದಲಿತರ ಹಣವನ್ನು, ಜನ ಸಾಮಾನ್ಯರಿಗೆ ಸಿಗಬೇಕಾದ ನಿವೇಶನಗಳನ್ನು ಲಪಟಾಯಿಸಿದವರಿಗೆ ಶಿಕ್ಷೆ ಆಗುವವರೆಗೂ ಹೋರಾಟ ನಿರಂತರವಾಗಿರಲಿದೆ. ಕಾಂಗ್ರೆಸ್‌ ಸರ್ಕಾರದ ಎಲ್ಲ ಹಗರಣಗಳ ಕೇಂದ್ರ ಬಿಂದು ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಭ್ರಷ್ಟಾಚಾರದ ನೈತಿಕತೆ ಹೊತ್ತು ರಾಜೀನಾಮೆ ನೀಡಬೇಕು ಎಂಬ ಒತ್ತಾಯ ಮಾಡಲಾಯಿತು. ಈ ನಿಟ್ಟಿನಲ್ಲಿ ಪ್ರತಿಪಕ್ಷದ ಮುಂದಿನ ಹಂತದ ಹೋರಾಟದ ರೂಪುರೇಷೆಯನ್ನು ಸಿದ್ಧಗೊಳಿಸಲಾಗುವುದು ಎಂದು ಘೋಷಿಸಲಾಯಿತು.

ಇಡೀ ಸಮಾರಂಭವು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ವಿರುದ್ಧ ಟೀಕಾಪ್ರಹಾರಕ್ಕೆ ಸಾಕ್ಷಿಯಾಯಿತು.

ಬಿಜೆಪಿ-ಜೆಡಿಎಸ್‌ ನಡೆಸಿದ ಪಾದಯಾತ್ರೆ ಚುನಾವಣೆಗಾಗಿ ನಡೆಸಿದ ಪಾದಯಾತ್ರೆಯಲ್ಲ, ಬದಲಾಗಿ ಜನತೆಯಲ್ಲಿ ಕಾಂಗ್ರೆಸ್‌ ಸರ್ಕಾರದ ಭ್ರಷ್ಟಾಚಾರದ ಕುರಿತು ಜಾಗೃತಿ ಮೂಡಿಸುವುದಾಗಿತ್ತು ಎಂದು ಮುಖಂಡರು ಹೇಳಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ರಾಧಾ ಮೋಹನ್‌ದಾಸ್‌ ಅಗರ್‌ವಾಲ್‌, ಜೆಡಿಎಸ್‌ ಯುವಘಟಕ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ, ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌, ಬಿಜೆಪಿ ಮುಖಂಡರಾದ ಸಿ.ಟಿ.ರವಿ, ಪ್ರತಾಪ್‌ಸಿಂಹ ಸೇರಿದಂತೆ ಮಿತ್ರಪಕ್ಷಗಳ ನಾಯಕರು ಉಪಸ್ಥಿತರಿದ್ದರು.

Share this article