ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಈಗಾಗಲೇ ಕಾವು ಆರಂಭ : ರೇಸಿನಲ್ಲಿ ಯತ್ನಾಳ ಮತ್ತು ವಿಜಯೇಂದ್ರ

KannadaprabhaNewsNetwork |  
Published : Jan 19, 2025, 02:16 AM ISTUpdated : Jan 19, 2025, 04:11 AM IST
BY vijayendraa

ಸಾರಾಂಶ

ಬಿಜೆಪಿ ಕರ್ನಾಟಕದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಈಗಾಗಲೇ ಕಾವು ಆರಂಭವಾಗಿದ್ದು, ಈ ರೇಸಿನಲ್ಲಿ ಬಸನಗೌಡ ಪಾಟೀಲ ಯತ್ನಾಳ ಮತ್ತು ಹಾಲಿ ಅಧ್ಯಕ್ಷ ಬಿ ವೈ ವಿಜಯೇಂದ್ರ ಇದ್ದಾರೆ.

 ವಿಜಯಪುರ : ‘ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದರೆ ನಾವು ರೆಡಿ. ನಮ್ಮ ಗುಂಪಿನ ಪರ ಒಬ್ಬರನ್ನು ಅಭ್ಯರ್ಥಿ ಮಾಡಲು ಈಗಾಗಲೇ ನಿರ್ಣಯ ಮಾಡಿದ್ದೇವೆ’ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ತೊಡಿ ತಟ್ಟಿರುವ ಬಂಡಾಯ ಗುಂಪಿನ ನಾಯಕ, ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.

ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲಾಗುವುದು ಎಂಬ ಸುದ್ದಿ ದೆಹಲಿಯಿಂದ ಹೊರಬಿದ್ದಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಾನು ನಿಲ್ಲುತ್ತೀನೋ ಅಥವಾ ಯಾರು ಸ್ಪರ್ಧೆ ಮಾಡುತ್ತಾರೋ ನೋಡೋಣ. ಆದರೆ, ಕಲುಷಿತ ವ್ಯಕ್ತಿಗಳಿಂದ ಬಿಜೆಪಿಯನ್ನು ದೂರವಿಡಲು ನಮ್ಮ ತಂಡ ನಿರ್ಣಯಿಸಿದೆ’ ಎಂದರು.

ವಿಜಯೇಂದ್ರಗೆ ಕಿಡಿ:

ಶಾಸಕ ರಮೇಶ್‌ ಜಾರಕಿಹೊಳಿ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಎಚ್ಚರಿಕೆ ನೀಡಿರುವ ಕುರಿತಂತೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಯತ್ನಾಳ್‌, ‘ರಮೇಶ್ ಜಾರಕಿಹೊಳಿ 17ಶಾಸಕರನ್ನು ಕರೆದುಕೊಂಡು ಬರದಿದ್ದರೆ ಯಡಿಯೂರಪ್ಪ ಮುಖ್ಯಮಂತ್ರಿ ಆಗುತ್ತಲೇ ಇರಲಿಲ್ಲ. ಯಡಿಯೂರಪ್ಪ ಸಿಎಂ ಆಗಲು ಮುಖ್ಯವಾದ ಕಾರಣವೇ ರಮೇಶ್ ಜಾರಕಿಹೊಳಿ’ ಎಂದು ತಿರುಗೇಟು ನೀಡಿದರು.

‘ರಮೇಶ್‌ ಜಾರಕಿಹೊಳಿ ಸಚಿವರಾಗಿ ಉತ್ತಮ ಕೆಲಸ ಮಾಡಿದ್ದರು. ಅವರನ್ನು ತೆಗುದುಹಾಕಿದ್ದು ಯಾರು, ಇದರಲ್ಲಿ ನಿಮ್ಮ (ವಿಜಯೇಂದ್ರ) ಪಾಲು ಎಷ್ಟಿದೆ ಎಂಬುದು ಗೊತ್ತು. ರಮೇಶ್‌ ಜಾರಕಿಹೊಳಿ ಪರಿಶಿಷ್ಟ ಜನಾಂಗದ ನಾಯಕರಾಗಿದ್ದು, ಅವರ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ’ ಎಂಬ ಎಚ್ಚರಿಕೆಯನ್ನು ರವಾನಿಸಿದರು.

ದುಬೈ ಪ್ರವಾಸ ಸಿದ್ದು ಪ್ಲಾನ್:

ಇನ್ನು ಸಚಿವ ಸತೀಶ್‌ ಜಾರಕಿಹೊಳಿ ವಿದೇಶ ಪ್ರವಾಸದ ಬಗ್ಗೆ ಪ್ರತಿಕ್ರಿಯಿಸಿ, ಸಚಿವ ಸತೀಶ ಸಿಎಂ ಸಿದ್ದರಾಮಯ್ಯ ಪರ ವ್ಯಕ್ತಿ. ಇದರ ಹಿಂದೆ ಸಿದ್ದರಾಮಯ್ಯನವರೇ ಇರಬಹುದೆಂಬ ಶಂಕೆ ಇದೆ. ಕಳೆದ ವರ್ಷವೇ ಸತೀಶ ಮತ್ತು ಬೆಂಬಲಿಗರು ದುಬೈಗೆ ಹೋಗುವ ಪ್ಲಾನ್ ಇತ್ತು. ಅದೆಲ್ಲ ಸಿದ್ದರಾಮಯ್ಯ ನಿರ್ದೇಶನದಂತೆ ನಡೆಯುತ್ತದೆ. ಕಾಂಗ್ರೆಸ್‌ನಲ್ಲಿ ಗುಂಪು ರಾಜಕೀಯ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಎಚ್ಚರಿಕೆ ಕೊಟ್ಟರೂ ಕೇರ್ ಮಾಡುತ್ತಿಲ್ಲ ಎಂದು ತಿಳಿಸಿದರು.

ಕಾಂಗ್ರೆಸ್‌ ಸರ್ಕಾರ ಹಣವನ್ನೆಲ್ಲ ಗ್ಯಾರಂಟಿ ಯೋಜನೆಗಳಿಗೆ ಹಾಕಿದೆ. ಅಂಬೇಡ್ಕರ್ ಬಗ್ಗೆ ಗೌರವ ತೋರಿಸುವ ಫೋಟೋ ಮತ್ತು ಸಂವಿಧಾನ ಪ್ರತಿ ಹಿಡಿಯುವ ಅವರಿಗೆ ನಾಚಿಕೆಯಾಗಬೇಕು. ಎಲ್ಲ ನಿಗಮ ಮಂಡಳಿಗಳಲ್ಲಿ ಅವ್ಯವಹಾರ ನಡೆದಿದೆ. ಕಾಂಗ್ರೆಸ್ ಪಕ್ಷ ಎಸ್ಸಿ, ಎಸ್ಟಿ ಸಮಾಜಗಳ ವಿರೋಧಿ ಎಂದು ಆಕ್ಷೇಪಿಸಿದರು.

--ವಿಜಯೇಂದ್ರ ವಿರುದ್ಧ ಮತ್ತೆ ರಮೇಶ್ ಯರ್‍ರಾಬಿರ್‍ರಿ ವಾಗ್ದಾಳಿ

 ಗೋಕಾಕ : ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ತೊಡೆತಟ್ಟಿ ನಿಂತಿರುವ ಬಂಡಾಯ ಶಾಸಕ ರಮೇಶ ಜಾರಕಿಹೊಳಿ, ‘ವಿಜಯೇಂದ್ರ, ನೀನು ಇನ್ನೂ ಬಚ್ಚಾ...ರಾಜ್ಯಾಧ್ಯಕ್ಷನಾಗಲು ನೀನು ಯೋಗ್ಯನಲ್ಲ’ ಎಂದು ವಾಗ್ದಾಳಿ ನಡೆಸಿದ್ದಾರೆ. ಅಲ್ಲದೆ, ‘ನಾವು ಕಾಂಗ್ರೆಸ್‌ ಬಿಟ್ಟು ಬಂದಿದ್ದೇ ಯಡಿಯೂರಪ್ಪ ಅವರನ್ನು ಸಿಎಂ ಮಾಡಲು. ಆದರೆ ಈಗ ಅವರು ವಿಜಯೇಂದ್ರ ಬೆನ್ನು ಹತ್ತಿ ಹಾಳಾಗುತ್ತಿದ್ದಾರೆ. ಅವರು ವಿಜಯೇಂದ್ರ ಬದಲಿಸಲು ಅವಕಾಶ ಮಾಡಕೊಡಬೇಕು’ ಎಂದಿದ್ದಾರೆ,.

ಬೆಳಗಾವಿ ಜಿಲ್ಲೆ ಗೋಕಾಕ ಮತಕ್ಷೇತ್ರದ ಅಂಕಲಗಿ ಗ್ರಾಮದಲ್ಲಿ ಶನಿವಾರ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದ ಅವರು, ‘ರಮೇಶ ಜಾರಕಿಹೊಳಿ ನಾಲಗೆ ಬಿಗಿ ಹಿಡಿದು ಮಾತಾಡಲಿ’ ಎಂದ ವಿಜಯೇಂದ್ರಗೆ ಬಹಿರಂಗ ವೇದಿಕೆಯಲ್ಲಿ ತಿರುಗೇಟು ನೀಡಿದರು.‘ನಾನು ಪಕ್ಷಕ್ಕೆ ಬಂದು 3 ವರ್ಷ ಆಯ್ತು ಎಂದು ವಿಜಯೇಂದ್ರ ಹೇಳಿದ್ದಾರೆ. ಆದರೆ, ನಾನು ಬಿಜೆಪಿಗೆ ಬಂದಿದ್ದು ಯಡಿಯೂರಪ್ಪ ಅವರನ್ನು ಸಿಎಂ ಮಾಡಲು. ಈಗ ಬಹುಸಂಖ್ಯಾತರ ನಾಯಕರಾಗಿ ಬಸನಗೌಡ ಯತ್ನಾಳ ಇದ್ದು, ಅವರನ್ನು ಒಪ್ಪಿಕೊಂಡಿದ್ದೇವೆ. ಲಿಂಗಾಯತರಲ್ಲಿ ಇನ್ನೂ ಸಾಕಷ್ಟು ನಾಯಕರಿದ್ದಾರೆ. ವಿಜಯೇಂದ್ರ ಸಣ್ಣ ಹುಡುಗ, ಅಧ್ಯಕ್ಷ ಸ್ಥಾನ ನೀಗೊಲ್ಲ. ಹೀಗಾಗಿ, ಅಧ್ಯಕ್ಷ ಸ್ಥಾನ ಬಿಟ್ಟು ಬೇರೆಯವರಿಗೆ ಅವಕಾಶ ಕೊಡಲಿ. ಪಕ್ಷದ ವಿಚಾರ ಬಂದಾಗ ಒಂದಾಗಿ ಭಿನ್ನಾಭಿಪ್ರಾಯ ಬದಿಗೊತ್ತಿ ಪಕ್ಷ ಸಂಘಟನೆ ಮಾಡುತ್ತೇವೆ. 2028ಕ್ಕೆ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ. ಆದರೆ, ಹೈಕಮಾಂಡ್ ವಿಜಯೇಂದ್ರ ಅವರನ್ನು ಮುಂದುವರಿಸಿದರೆ ಪಕ್ಷದ ನಿರ್ಣಯವನ್ನು ನಾನು ಸ್ವಾಗತ ಮಾಡುತ್ತೇನೆ’ ಎಂದು ಹೇಳಿದರು.

ಒಬ್ಬನೇ ಬರುವೆ- ವಿಜಯೇಂದ್ರಗೆ ಸಡ್ಡು:‘ರಮೇಶ ಜಾರಕಿಹೊಳಿ ಎಚ್ಚರಿಕೆಯಿಂದ ಮಾತನಾಡಲಿ, ರಾಜ್ಯದಲ್ಲಿ ತಿರುಗಾಡಲು ಬಿಡುವುದಿಲ್ಲ’ ಎಂದು ವಿಜಯೇಂದ್ರ ಹೇಳಿದ್ದಾರೆ. ನಾನು ವಿಜಯೇಂದ್ರ ಅವರ ಸವಾಲು ಸ್ವೀಕರಿಸುವೆ. ಅವರೇ ದಿನಾಂಕ ಫಿಕ್ಸ್ ಮಾಡಲಿ, ಶಿಕಾರಿಪುರಕ್ಕೆ ಬರುತ್ತೇನೆ. ಅವರ ಮನೆಯಿಂದಲೇ ಪ್ರವಾಸ ಆರಂಭಿಸುತ್ತೇನೆ. ನನ್ನ ಜತೆಗೆ ಬೆಂಬಲಿಗರು ಬರಲ್ಲ, ಪೊಲೀಸರು, ಗನ್‌ ಮ್ಯಾನ್‌ ಕರೆದುಕೊಂಡು ಬರಲ್ಲ. ನಾನೊಬ್ಬನೇ ಬರ್ತೀನಿ. ಅವರನ್ನು ಎಲ್ಲಿ ಬೇಕಾದರೂ ಹೆದರಿಸುವ ಶಕ್ತಿ ನನಗಿದೆ. ಆದರೆ, ನಾನು ಹಾಗೆ ಮಾಡುವುದಿಲ್ಲ’ ಎಂದು ಹೇಳಿದರು.ಯಡಿಯೂರಪ್ಪನವರೇ, ಸಹಕಾರ ಕೊಡಿ:ಯಡಿಯೂರಪ್ಪನವರ ಬಗ್ಗೆ ಈಗಲೂ ನನಗೆ ಕಳಕಳಿ ಇದೆ. 

ನಿಮಗೆ ಕೈಮುಗಿದು ಮನವಿ ಮಾಡ್ತೀನಿ. ನೀವು ನಮ್ಮ ನಾಯಕರು. ಆದರೆ, ವಿಜಯೇಂದ್ರನ ಬೆನ್ನು ಹತ್ತಿ ಹಾಳಾಗುತ್ತಿದ್ದೀರಿ. ವಿಫಲ ರಾಜ್ಯಾಧ್ಯಕ್ಷರನ್ನು ಬೆಂಬಲಿಸುವುದನ್ನು ಬಿಟ್ಟು, ಒಳ್ಳೆಯ ರಾಜ್ಯಾಧ್ಯಕ್ಷರನ್ನು ಮಾಡಲು ಸಹಕಾರ ಕೊಡಿ. ಮುಂದಿನ ಚುನಾವಣೆಯಲ್ಲಿ 136 ಸೀಟು ಗೆದ್ದು, ರಾಜ್ಯಕ್ಕೆ ಒಳ್ಳೆಯ ಮುಖ್ಯಮಂತ್ರಿಯನ್ನು ಕೊಡೋಣ. ನಿಮಗೆ ವಯಸ್ಸಾಗಿದೆ, ನೀವು ಇನ್ನು ಅಧ್ಯಕ್ಷರಾಗಲು ಸಾಧ್ಯವಿಲ್ಲ, ಮುಖ್ಯಮಂತ್ರಿಯಾಗಲೂ ಸಾಧ್ಯವಿಲ್ಲ. ನಮಗೆ ಮಾರ್ಗದರ್ಶನ ಮಾಡಿ ಎಂದರು.

ಬಿಎಸ್‌ವೈ 10 ಪಟ್ಟು ಲಾಭ ಪಡೆದಿದ್ದಾರೆ:ಯಡಿಯೂರಪ್ಪನವರೇ, ಪದೇ ಪದೇ ನಾನು ಸೈಕಲ್‌ ಮೇಲೆ ಸುತ್ತಾಡಿದ್ದೇನೆ ಎಂದು ಹೇಳುವುದನ್ನು ನಿಲ್ಲಿಸಿ. ಪಕ್ಷದಿಂದ ಅದರ ಹತ್ತು ಪಟ್ಟು ಲಾಭ ಪಡೆದಿದ್ದೀರಿ. ಎಷ್ಟು ಸಲ ಹೇಳಿದ್ದನ್ನೇ ಹೇಳ್ತೀರಿ. ಇದನ್ನು ನೀವು ಹೇಳಬೇಡಿ. ನಿಮಗೆ ಅವಮಾನ ಆಗುತ್ತೆ. ವಾಜಪೇಯಿ, ಆಡ್ವಾಣಿ ದೇಶದ ಮೂಲೆ, ಮೂಲೆ ತಿರುಗಿ ಸಂಘಟನೆ ಮಾಡಿದ್ದಾರೆ. ಪ್ರಧಾನಿ ಮೋದಿಯವರು ಸಹ ಕುಟುಂಬ ತ್ಯಾಗ ಮಾಡಿ ಪಕ್ಷ ಸಂಘಟನೆಗೆ ದುಡಿಯುತ್ತಿದ್ದಾರೆ. ಆರ್‌ಎಸ್‌ಎಸ್‌ ಕಾರ್ಯಕರ್ತರು, ಲಕ್ಷಾಂತರ ಬಿಜೆಪಿ ಕಾರ್ಯಕರ್ತರು ಪಕ್ಷ ಸಂಘಟನೆಗೆ ದುಡಿದಿದ್ದಾರೆ. ಇಂತಹ ಎಷ್ಟೋ ಜನರಿಗೆ ಇನ್ನೂ ಸೈಕಲ್‌ ತೆಗೆದುಕೊಳ್ಳಲೂ ಸಹ ಆಗಿಲ್ಲ’ ಎಂದು ಮಾರ್ಮಿಕವಾಗಿ ಹೇಳಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಅಧಿವೇಶನ ಮುಗಿದ ಬಳಿಕ ಡಿಕೆಶಿಗೆ ಶುಭಸುದ್ದಿ : ಇಕ್ಬಾಲ್
ಬೆಳಗಾವೀಲೂ ‘ಕೈ’ ಡಿನ್ನರ್‌ ಸಭೆಗೆ ಬಿವೈವಿ ಕಿಡಿ