ಕುತೂಹಲ ಮೂಡಿಸಿದ ನಡೆ - ದಳ ಬಿಡದಿ ಪಾದಯಾತ್ರೆಯಿಂದ ದೂರವುಳಿದ ಬಿಜೆಪಿ ರಾಜ್ಯಾಧ್ಯಕ್ಷ

Published : Aug 10, 2026, 05:25 AM IST
BY Vijayendra

ಸಾರಾಂಶ

ಬಿಡದಿ ಟೌನ್‌ಶಿಪ್ ಯೋಜನೆ ವಿರೋಧಿಸಿ ಜೆಡಿಎಸ್‌ ಹಮ್ಮಿಕೊಂಡಿರುವ ಪಾದಯಾತ್ರೆ ಉದ್ಘಾಟನೆಯಿಂದ ಮಿತ್ರ ಪಕ್ಷ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಅಂತರ ಕಾಪಾಡಿಕೊಂಡಿರುವುದು ತೀವ್ರ ಕುತೂಹಲ ಮೂಡಿಸಿದೆ.

ಬೆಂಗಳೂರು : ಬಿಡದಿ ಟೌನ್‌ಶಿಪ್ ಯೋಜನೆ ವಿರೋಧಿಸಿ ಜೆಡಿಎಸ್‌ ಹಮ್ಮಿಕೊಂಡಿರುವ ಪಾದಯಾತ್ರೆ ಉದ್ಘಾಟನೆಯಿಂದ ಮಿತ್ರ ಪಕ್ಷ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಅಂತರ ಕಾಪಾಡಿಕೊಂಡಿರುವುದು ತೀವ್ರ ಕುತೂಹಲ ಮೂಡಿಸಿದೆ.

ಶನಿವಾರ ನಡೆದಿದ್ದ ಉಭಯ ಪಕ್ಷಗಳ ನಾಯಕರ ಸಮನ್ವಯ ಸಭೆಗೆ ಗೈರು ಹಾಜರಾಗಿದ್ದ ವಿಜಯೇಂದ್ರ ಭಾನುವಾರದ ಉದ್ಘಾಟನಾ ಕಾರ್ಯಕ್ರಮದಿಂದ ಉದ್ದೇಶಪೂರ್ವಕವಾಗಿಯೇ ದೂರ ಉಳಿದರು ಎಂಬ ಮಾತು ಕೇಳಿಬಂದಿದೆ.

ಅದಕ್ಕೂ ಮೊದಲು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರೊಂದಿಗೆ ಮಾತುಕತೆ ನಡೆಸುವುದಕ್ಕೂ ವಿಜಯೇಂದ್ರ ಅವರು ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರೊಂದಿಗೆ ದೆಹಲಿಗೆ ತೆರಳಿರಲಿಲ್ಲ ಎನ್ನುವುದೂ ಗಮನಾರ್ಹ ಸಂಗತಿ.

ಮೊದಲು ಘೋಷಿಸಿದ್ದು ವಿಜಯೇಂದ್ರ:

ಬಿಡದಿ ಟೌನ್‌ಶಿಪ್‌ ಯೋಜನೆ ವಿರೋಧಿಸಿ ಬಿಡದಿಯಿಂದ ಬೆಂಗಳೂರಿನವರೆಗೆ ಪಾದಯಾತ್ರೆ ನಡೆಸುವ ಬಗ್ಗೆ ವಿಜಯೇಂದ್ರ ಅವರೇ ಮೊದಲಿಗೆ ಘೋಷಣೆ ಮಾಡಿದ್ದರು. ಆ ವೇಳೆ ಜೆಡಿಎಸ್ ನಾಯಕರೊಂದಿಗೆ ಚರ್ಚೆಯನ್ನೂ ನಡೆಸದೆ ಏಕಾಏಕಿ ಪ್ರಕಟಿಸಿದ್ದರು. ಪರಿಣಾಮ ಜೆಡಿಎಸ್ ನಾಯಕರು ಅಸಮಾಧಾನಗೊಂಡು ತಮ್ಮ ಪಕ್ಷದಿಂದ ಪಾದಯಾತ್ರೆ ನಡೆಸುವ ಬಗ್ಗೆ ವೇಳಾಪಟ್ಟಿ ಸಹಿತ ಘೋಷಣೆ ಮಾಡಿದರು.

ವಿಜಯೇಂದ್ರ ಅವರು ನಗರದ ಫ್ರೀಡಂ ಪಾರ್ಕ್‌ನಲ್ಲಿ ಪಾದಯಾತ್ರೆ ಬಗ್ಗೆ ಘೋಷಣೆ ಮಾಡುವ ಮೊದಲು ಜೆಡಿಎಸ್ ನಾಯಕರೊಂದಿಗೆ ಚರ್ಚಿಸಿದ್ದರೆ ಭಿನ್ನಾಭಿಪ್ರಾಯ ಮೂಡುತ್ತಿರಲಿಲ್ಲವೇನೋ?. ಆದರೆ, ತಮ್ಮ ಕರ್ಮ ಭೂಮಿಯಾದ ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಬಿಜೆಪಿ ಸವಾರಿ ಮಾಡುವುದನ್ನು ಸಹಿಸುವುದಿಲ್ಲ ಎಂಬ ಸಂದೇಶ ರವಾನಿಸುವ ಸಲುವಾಗಿ ಜೆಡಿಎಸ್ ನಾಯಕರು ದಿನಾಂಕ ಸಹಿತ ಪಾದಯಾತ್ರೆ ಘೋಷಿಸಿ ಸಿದ್ಧತೆಯನ್ನೂ ಆರಂಭಿಸಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ಮುಜುಗರ ಉಂಟು ಮಾಡಿತು ಎನ್ನಲಾಗಿದೆ.

ಮುಜುಗರದಿಂದ ತಪ್ಪಿಸಿಕೊಳ್ಳಲು ಈ ಕ್ರಮ:

ಈ ಮುಜುಗರದಿಂದ ತಪ್ಪಿಸಿಕೊಳ್ಳುವ ಸಲುವಾಗಿಯೇ ವಿಜಯೇಂದ್ರ ಅವರು ಕಳೆದ ವಾರ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಮಾತುಕತೆ ನಡೆಸಲು ದೆಹಲಿಗೆ ತೆರಳಲಿಲ್ಲ. ಶನಿವಾರ ಪಾದಯಾತ್ರೆ ಕುರಿತು ಉಭಯ ಪಕ್ಷಗಳ ನಾಯಕರನ್ನು ಒಳಗೊಂಡ ಸಮನ್ವಯ ಸಭೆಗೆಯಿಂದ ದೂರ ಉಳಿದರು. ಅಂತಿಮವಾಗಿ ಪಾದಯಾತ್ರೆಯ ಉದ್ಘಾಟನೆಗೂ ತೆರಳದೇ ಪಕ್ಷದ ಕಾರ್ಯಕ್ರಮದ ನೆಪ ಹೇಳಿ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳ ಪ್ರವಾಸಕ್ಕೆ ತೆರಳಿದ್ದು ಜೆಡಿಎಸ್‌ ಪಾಳೆಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಎನ್‌ಡಿಎ ಒಕ್ಕೂಟದ ಸದಸ್ಯ ಪಕ್ಷವಾಗಿರುವ ಜೆಡಿಎಸ್‌ ಜತೆಗೆ ‘ಮಿತ್ರತ್ವ’ ನಿಭಾಯಿಸುವಲ್ಲಿ ರಾಜ್ಯ ಬಿಜೆಪಿ ನಾಯಕರು ಹಿಂದೆ ಬೀಳುತ್ತಿದ್ದಾರೆ ಎಂಬ ದೂರು ಪಕ್ಷದ ಹೈಕಮಾಂಡ್‌ ಮಟ್ಟದಲ್ಲೂ ಚರ್ಚೆಗೆ ಕಾರಣವಾಗಿತ್ತು. ಇದರ ನಡುವೆಯೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಬಿಡದಿ ಯೋಜನೆ ವಿರೋಧಿಸಿ ಜೆಡಿಎಸ್ ಹಮ್ಮಿಕೊಂಡಿರುವ ಪಾದಯಾತ್ರೆ ಉದ್ಘಾಟನಾ ಕಾರ್ಯಕ್ರಮದಿಂದ ದೂರ ಉಳಿದಿದ್ದು, ಮುಂಬರುವ ದಿನಗಳಲ್ಲಿ ಉಭಯ ಪಕ್ಷಗಳ ನಡುವಿನ ಬಿರುಕಿಗೆ ಕಾರಣವಾಗಬಹುದು ಎಂಬ ಪಿಸುಮಾತು ಜೆಡಿಎಸ್ ಪಾಳೆಯದಿಂದ ಕೇಳಿಬರುತ್ತಿದೆ.

ಬಿಡದಿ ಟೌನ್‌ಶಿಪ್‌ ವಿರುದ್ಧ ಬಿಡದಿಯಿಂದ ಬೆಂಗಳೂರಿಗೆ ಪಾದಯಾತ್ರೆ ನಡೆಸುವ ಬಗ್ಗೆ ಮೊದಲಿಗೆ ಘೋಷಣೆ ಮಾಡಿದ್ದ ವಿಜಯೇಂದ್ರ

ಆದರೆ ತಮ್ಮ ಬಳಿ ಈ ಬಗ್ಗೆ ಚರ್ಚಿಸದೇ ಏಕಾಏಕಿ ಬಿಜೆಪಿ ನಾಯಕರಿಂದ ಪಾದಯಾತ್ರೆ ಘೋಷಣೆ ಬಗ್ಗೆ ಜೆಡಿಎಸ್‌ನಲ್ಲಿ ಅಸಮಾಧಾನ

ಇದರ ಪರಿಣಾಮ 3 ದಿನ ಪಾದಯಾತ್ರೆ ನಡೆಸುವುದಾಗಿ ದಿನಾಂಕ ಸಹಿತ ಘೋಷಣೆ ಮಾಡಿ ಅಚ್ಚರಿ ಮೂಡಿಸಿದ್ದ ಜೆಡಿಎಸ್‌ ನಾಯಕರು

ಈ ಮೂಲಕ ತಮ್ಮ ಕರ್ಮಭೂಮಿಯಲ್ಲಿ ಬಿಜೆಪಿ ಸವಾರಿಯನ್ನು ತಾವು ಇಷ್ಟ ಪಡುವುದಿಲ್ಲ ಎಂಬ ಸಂದೇಶ ರವಾನಿಸಿದ್ದ ದಳಪತಿಗಳು

ಜೆಡಿಎಸ್‌ ನಾಯಕರ ನಡೆಯಿಂದ ವಿಜಯೇಂದ್ರಗೆ ಮುಜುಗರ. ಹೀಗಾಗಿ ಪಾದಯಾತ್ರೆ ಕುರಿತ ಶನಿವಾರದ ಸಮನ್ವಯ ಸಭೆಗೆ ಗೈರು

ಬಳಿಕ ಭಾನುವಾರದ ಪಾದಯಾತ್ರೆಯಿಂದಲೂ ದೂರ. ಪಕ್ಷದ ಕಾರ್ಯಕ್ರಮ ನೆಪ ಹೇಳಿ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳ ಪ್ರವಾಸ

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ವಿಶ್ವದರ್ಜೆಯ ಎಐ ಸಿಟಿಯಾಗಿ ಬಿಡದಿ ಅಭಿವೃದ್ಧಿ: ಡಿ.ಕೆ.ಶಿವಕುಮಾರ್‌
ಡಿಕೆ ಮೋಸ ಮಾಡ್ತಿದ್ದಾರೆ, ಮರಳಾಗಬೇಡಿ : ಕೇಂದ್ರ ಸಚಿವ ಎಚ್‌ಡಿಕೆ