ಬಿಜೆಪಿ ಭಿನ್ನಪಡೆಯ ರಾಜ್ಯಾಧ್ಯಕ್ಷ ಅಭ್ಯರ್ಥಿ ದೆಹಲಿಯಲ್ಲಿ ಘೋಷಣೆ? - ಕೇಂದ್ರ ಸಚಿವರು, ಸಂಸದರ ಜತೆ ಚರ್ಚಿಸಿ ನಿರ್ಧಾರ

ಸಾರಾಂಶ

ರಾಜ್ಯಾಧ್ಯಕ್ಷ ಸ್ಥಾನಕ್ಕೆ ತಮ್ಮ ಅಭ್ಯರ್ಥಿ ಕಣಕ್ಕಿಳಿಸುವ ಸಂಬಂಧ ಶೀಘ್ರ ದೆಹಲಿಗೆ ತೆರಳಿ ಸಂಸದರು, ಕೇಂದ್ರ ಸಚಿವರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಬಣದ ನಾಯಕರು ತೀರ್ಮಾನಿಸಿದ್ದಾರೆ.

ಬೆಂಗಳೂರು : ರಾಜ್ಯಾಧ್ಯಕ್ಷ ಸ್ಥಾನಕ್ಕೆ ತಮ್ಮ ಅಭ್ಯರ್ಥಿ ಕಣಕ್ಕಿಳಿಸುವ ಸಂಬಂಧ ಶೀಘ್ರ ದೆಹಲಿಗೆ ತೆರಳಿ ಸಂಸದರು, ಕೇಂದ್ರ ಸಚಿವರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಬಣದ ನಾಯಕರು ತೀರ್ಮಾನಿಸಿದ್ದಾರೆ.

ಬಹುತೇಕ ಎರಡು ಅಥವಾ ಮೂರು ದಿನಗಳಲ್ಲಿ ಯತ್ನಾಳ್ ಬಣದ ನಾಯಕರು ದೆಹಲಿಗೆ ತೆರಳುವ ನಿರೀಕ್ಷೆಯಿದೆ. ಅಲ್ಲೇ ಅಭ್ಯರ್ಥಿ ಹೆಸರು ಘೋಷಿಸುವ ಚಿಂತನೆ ನಡೆಸಿದ್ದಾರೆ.

ಶುಕ್ರವಾರ ನಗರದಲ್ಲಿ ಮಾಜಿ ಸಚಿವ ಕುಮಾರ್ ಬಂಗಾರಪ್ಪ ನಿವಾಸದಲ್ಲಿ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಯತ್ನಾಳ್, ಮಾಡು ಇಲ್ಲವೇ ಮಡಿ ಹೋರಾಟ ಇದು. ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಘೋಷಿಸಿದರು.

ದೆಹಲಿಗೆ ತೆರಳಿ ಸಾಮಾಜಿಕ ನ್ಯಾಯ ಆಧಾರದ ಮೇಲೆ ರಾಜ್ಯಾಧ್ಯಕ್ಷ ಸೇರಿ ರಾಜ್ಯ ಪದಾಧಿಕಾರಿಗಳ ಆಯ್ಕೆ ಆಗಬೇಕು ಎಂಬುದರ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ. ಅಲ್ಲಿ ಸಂಸದರು ಹಾಗೂ ಕೇಂದ್ರ ಸಚಿವರನ್ನು ಭೇಟಿ ಮಾಡುತ್ತೇವೆ. ದೆಹಲಿಯಲ್ಲಿಯೇ ನಮ್ಮ ಅಭ್ಯರ್ಥಿ ಘೋಷಣೆಯನ್ನೂ ಮಾಡುತ್ತೇವೆ ಎಂದು ತಿಳಿಸಿದರು.

ಜಿಲ್ಲಾಧ್ಯಕ್ಷರ ನೇಮಕ ಪ್ರಕ್ರಿಯೆ ಕೇವಲ ನಾಮ್‌ಕೇವಾಸ್ತೆ ಮಾಡಿದ್ದಾರೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಏಕಪಕ್ಷೀಯವಾಗಿ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಬೇಕು ಎಂಬ ಉದ್ದೇಶದಿಂದ ವ್ಯವಸ್ಥಿತವಾಗಿ ಮಾಡಿದ ಕ್ರಮ ಇದು. ಇದಕ್ಕೆ ನಮ್ಮ ಸಂಪೂರ್ಣ ವಿರೋಧವಿದೆ. ಒಂದು ರಾತ್ರಿಯಲ್ಲಿ ಎಲ್ಲ ನೇಮಕ ಪ್ರಕ್ರಿಯೆ ಮಾಡಿ ಮುಗಿಸಲಾಗಿದೆ ಎಂದು ಹರಿಹಾಯ್ದರು.

ಹಿರಿಯರಿಂದಲೂ ವಿರೋಧ:

ಇದುವರೆಗೆ ಅನೇಕ ಹಿರಿಯ ನಾಯಕರು ತಟಸ್ಥರಾಗಿದ್ದರು. ಆದರೆ, ಜಿಲ್ಲಾಧ್ಯಕ್ಷರ ನೇಮಕ ಬಳಿಕ ಅಸಮಾಧಾನಗೊಂಡಿದ್ದಾರೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಪತ್ರ ಬರೆದು ದೂರು ನೀಡಿದ್ದಾರೆ. ಈ ಬೆಳವಣಿಗೆ ಹಿನ್ನೆಲೆಯಲ್ಲಿಯೇ ಸಂಸದ ಡಾ.ಕೆ.ಸುಧಾಕರ್ ಅವರು ಪತ್ರಿಕಾಗೋಷ್ಠಿ ನಡೆಸಿ ಬಹಿರಂಗವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ. ಪಕ್ಷದ ವರಿಷ್ಠರಿಗೆ ಈಗ ನಿಧಾನವಾಗಿ ವಿಜಯೇಂದ್ರ ಕಾರ್ಯವೈಖರಿ ಬಗ್ಗೆ ಗೊತ್ತಾಗುತ್ತಿದೆ ಎಂದು ಯತ್ನಾಳ್ ಹೇಳಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಯತ್ನಾಳ್, ಪಕ್ಷದ ರಾಜ್ಯಾಧ್ಯಕ್ಷರಾದವರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡಬೇಕಿತ್ತು. ಆದರೆ, ಮಾಡಲಿಲ್ಲ. ನಮ್ಮ ಹೋರಾಟ ಯಾರನ್ನೋ ರಾಜ್ಯಾಧ್ಯಕ್ಷರನ್ನಾಗಿ ಮಾಡಬೇಕು ಎಂಬುದಕ್ಕಾಗಿ ಅಲ್ಲ ಎಂದು ಸ್ಪಷ್ಟಪಡಿಸಿದರು.

ಸಭೆಯಲ್ಲಿ ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪ, ಜಿ.ಎಂ.ಸಿದ್ದೇಶ್ವರ್‌, ಬಿ.ಪಿ.ಹರೀಶ್, ಚಂದ್ರಪ್ಪ, ಬಿ.ವಿ.ನಾಯಕ್‌ ಮೊದಲಾದವರು ಉಪಸ್ಥಿತರಿದ್ದರು.

ನಮಗೆ ಅನೇಕರ ಬೆಂಬಲ ಇದೆ

ಪಕ್ಷದ ಅನೇಕರ ಬೆಂಬಲ ನಮಗಿದೆ. ನಮ್ಮ ಶಕ್ತಿ ಹೆಚ್ಚಿದೆ. ಎಲ್ಲವನ್ನೂ ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ ಎಂದು ಶಾಸಕ ಯತ್ನಾಳ್ ಅವರು ಹೇಳಿದ್ದಾರೆ.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಬೊಮ್ಮಾಯಿ, ಅಶೋಕ್ ನಮ್ಮ ಬೆಂಬಲಕ್ಕೆ ಇದ್ದಾರೆಯೋ ಇಲ್ಲವೋ ಎಂಬುದನ್ನು ನಾನು ಹೇಳುವುದಿಲ್ಲ. ಸುಧಾಕರ್ ನಮ್ಮ ಜತೆಗಿದ್ದಾರೆ. ವಿಶ್ವನಾಥ್ ಕೂಡ ನಮ್ಮ ಜತೆಗಿದ್ದಾರೆ. ವಿಶ್ವನಾಥ್ ಅವರ ನಿಷ್ಠೆ ಯಡಿಯೂರಪ್ಪ ಅವರಿಗೇ ಹೊರತು ಅವರ ಪುತ್ರ ವಿಜಯೇಂದ್ರ ಅವರಿಗೆ ಅಲ್ಲ ಎಂದರು.

ಯಡಿಯೂರಪ್ಪ ಬಿಟ್ಟರೆ ಬಿಜೆಪಿಯಿಲ್ಲ ಎಂಬ ವಾತಾವರಣ ಸೃಷ್ಟಿಸಲಾಗಿತ್ತು. ಈಗ ಆ ರೀತಿ ಇಲ್ಲ. ಯಡಿಯೂರಪ್ಪ ಕುಟುಂಬ ಬಿಟ್ಟರೂ ರಾಜ್ಯದಲ್ಲಿ ಬಿಜೆಪಿ ಕಟ್ಟಬಹುದು ಎಂಬ ಶಕ್ತಿ ಇದೆ. ಆ ಕಾಲ ಹೋಯಿತು. ಅದೆಲ್ಲ ಹಳೆಯ ಕಥೆ.

-ಬಸನಗೌಡ ಪಾಟೀಲ ಯತ್ನಾಳ್, ಬಿಜೆಪಿ ಶಾಸಕ

ದೆಹಲಿಯಲ್ಲಿ ನಡ್ಡಾ ಜತೆ ಲಿಂಬಾವಳಿ ಮಾತುಕತೆ

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಬಿರುಸಿನ ಚಟುವಟಿಕೆಗಳು ನಡೆದಿರುವ ಮಧ್ಯೆಯೇ ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರು ದಿಢೀರ್‌ ದೆಹಲಿಗೆ ತೆರಳಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿರುವುದು ಕುತೂಹಲ ಮೂಡಿಸಿದೆ. ಶುಕ್ರವಾರ ಇತ್ತ ಬೆಂಗಳೂರಿನಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಬಣದ ನಾಯಕರು ಸಭೆ ಮಾಡುತ್ತಿದ್ದರೆ ಅತ್ತ ಲಿಂಬಾವಳಿ ಅವರು ದೆಹಲಿ ತಲುಪಿ ನಡ್ಡಾ ಅವರೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಿದರು.

Share this article