ನಮ್ಮ ‘ಗ್ಯಾರಂಟಿ’ ಪದವನ್ನೇ ಬಿಜೆಪಿ ಕದ್ದಿದೆ: ಸಿಎಂ ಸಿದ್ದರಾಮಯ್ಯ ಕಿಡಿ

KannadaprabhaNewsNetwork | Updated : Feb 18 2024, 07:49 AM IST

ಸಾರಾಂಶ

ಕಾಂಗ್ರೆಸ್‌ನ ‘ಗ್ಯಾರಂಟಿ’ ಪದವನ್ನು ಬಿಜೆಪಿಯವರು ಕದ್ದು ಈಗ ‘ಮೋದಿ ಗ್ಯಾರಂಟಿ’ ಅಂತಿದ್ದಾರೆ  ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಾ ಪ್ರಹಾರ ನಡೆಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಕಾಂಗ್ರೆಸ್‌ನ ‘ಗ್ಯಾರಂಟಿ’ ಪದವನ್ನು ಬಿಜೆಪಿಯವರು ಕದ್ದು ಈಗ ‘ಮೋದಿ ಗ್ಯಾರಂಟಿ’ ಅಂತಿದ್ದಾರೆ. ನಮ್ಮ ಕಾರ್ಯಕರ್ತರು ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಮನೆ ಮನೆಗೆ ತಲುಪಿಸದೇ ಇದ್ದರೆ ಬಿಜೆಪಿಯವರು ನಮ್ಮ ಗ್ಯಾರಂಟಿ ಯೋಜನೆಗಳನ್ನು ತಾವೇ ಮಾಡಿದ್ದು ಅಂತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಾ ಪ್ರಹಾರ ನಡೆಸಿದ್ದಾರೆ.

ನಗರದ ಅಡ್ಯಾರಿನ ಸಹ್ಯಾದ್ರಿ ಮೈದಾನದಲ್ಲಿ ಶನಿವಾರ ರಾಜ್ಯಮಟ್ಟದ ಕಾಂಗ್ರೆಸ್‌ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು.

ಹಿಂದೆ ಬಿಜೆಪಿಯವರು ನಮ್ಮ ಗ್ಯಾರಂಟಿ ಯೋಜನೆಗಳು ಜಾರಿ ಆಗಲ್ಲ ಎನ್ನುತ್ತಿದ್ದರು. ಈಗ ನಮ್ಮ ಗ್ಯಾರಂಟಿ ಪದವನ್ನು ಕದ್ದು ಮೋದಿ ಗ್ಯಾರಂಟಿ ಎನ್ನುತ್ತಿದ್ದಾರೆ. 

ಕಾಂಗ್ರೆಸ್‌ನ ಗ್ಯಾರಂಟಿಗಳಿಂದ ರಾಜ್ಯ ದಿವಾಳಿಯಾಗುತ್ತದೆ ಎಂದು ಸ್ವತಃ ನರೇಂದ್ರ ಮೋದಿ ಅವರೇ ಹೇಳಿದ್ದರು. ಅವರು ಹೇಳಿದಂತೆ ರಾಜ್ಯ ದಿವಾಳಿ ಆಗಿರುತ್ತಿದ್ದರೆ 3.71 ಲಕ್ಷ ಕೋಟಿ ರು.ಗಳ ಬಜೆಟ್‌ ಮಂಡಿಸಲು ಆಗುತ್ತಿತ್ತಾ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ರಾಜ್ಯ ಈಗ ಆರ್ಥಿಕವಾಗಿ ಸುಭದ್ರವಾಗಿದೆ. 

ಬಿಜೆಪಿ, ಮೋದಿ ಯಾಕೆ ಇಷ್ಟೊಂದು ಸುಳ್ಳು ಹೇಳುತ್ತಿದ್ದಾರೆಂದರೆ ಅವರಲ್ಲಿ ಬೇರೆ ಯಾವ ಬಂಡವಾಳವೇ ಇಲ್ಲ ಎಂದು ಹರಿಹಾಯ್ದರು.

ಮೋದಿ, ಬೊಮ್ಮಾಯಿಗೆ ಸಾಧ್ಯವೇ?
ಗ್ಯಾರಂಟಿ ಯೋಜನೆಗಳಿಗಾಗಿಯೇ ಈ ಬಜೆಟ್‌ನಲ್ಲಿ 52 ಸಾವಿರ ಕೋಟಿ ರು. ಮೀಸಲಿಟ್ಟಿದ್ದೇನೆ. ಮೋದಿ, ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರಿಗೆ ಇಂಥ ಯೋಜನೆಯನ್ನು ಯಾವತ್ತಾದರೂ ಮಾಡಲು ಸಾಧ್ಯವಾಗಿತ್ತಾ? ಇದರಿಂದ ಮೈ ಉರಿ ತಡೆದುಕೊಳ್ಳಲಾಗದೆ ಮೊದಲೇ ಪ್ಲ್ಯಾನ್‌ ಮಾಡಿ ಬಜೆಟ್ ಮಂಡನೆ ವೇಳೆ ಭಿತ್ತಿಪತ್ರಗಳನ್ನು ಹಿಡಿದು ಪ್ರತಿಭಟನೆ ಮಾಡಿದ್ದಾರೆ ಎಂದು ಆರೋಪಿಸಿದರು.

ಕನ್ನಡಿಗರಿಗೆ ದ್ರೋಹ: ತೆರಿಗೆ ಸಂಗ್ರಹದಲ್ಲಿ ದೇಶದಲ್ಲೇ 2ನೇ ದೊಡ್ಡ ರಾಜ್ಯವಾಗಿ 4.30 ಲಕ್ಷ ಕೋಟಿ ರು. ತೆರಿಗೆ ಸಂಗ್ರಹಿಸಿ ಕೇಂದ್ರಕ್ಕೆ ನೀಡುತ್ತಿದ್ದರೂ ನಮ್ಮ ಪಾಲಿನ 50,257 ಕೋಟಿ ರು. ಕೊಟ್ಟಿಲ್ಲ. 

ಕರ್ನಾಟಕಕ್ಕೆ ಮೋದಿ ಅನ್ಯಾಯ ಮಾಡುತ್ತಿದ್ದಾರೆ. ಇದನ್ನು ಹೇಳಿದರೆ ಬಿಜೆಪಿಯವರಿಗೆ ಯಾಕೆ ಮೈಉರಿ? ರಾಜ್ಯದ 7 ಕೋಟಿ ಕನ್ನಡಿಗರ ಹಿತರಕ್ಷಣೆಯ ಬದ್ಧತೆ ನಿಮ್ಮಲ್ಲಿ ಇದ್ದಿದ್ದರೆ ದೆಹಲಿಯಲ್ಲಿ ನಡೆದ ನಮ್ಮ ಚಳವಳಿಯಲ್ಲಿ ಭಾಗವಹಿಸಬೇಕಿತ್ತು. 

ಕೇಂದ್ರ ಸರ್ಕಾರದಿಂದ ಕನ್ನಡಿಗರಿಗೆ ಅನ್ಯಾಯ ಆಗಿದ್ದಷ್ಟೇ ಅಲ್ಲ, ಇಡೀ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಆಗಿದೆ ಎಂದು ಸಿದ್ದರಾಮಯ್ಯ ದೂರಿದರು.

ನಿರ್ಮಲಾ ಅನ್ಯಾಯ ಮಾಡಿದ್ದಾರೆ: 15ನೇ ಹಣಕಾಸು ಆಯೋಗದ ಶಿಫಾರಸಿನಂತೆ ರಾಜ್ಯಕ್ಕೆ 5,495 ಕೋಟಿ ರು. ಅನುದಾನ, ಬೆಂಗಳೂರು ಅಭಿವೃದ್ಧಿಗೆ ವಿಶೇಷ ಅನುದಾನ ಸೇರಿ 11,495 ಕೋಟಿ ರು. ಬರಬೇಕಿತ್ತು. 

ಆದರೆ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಈ ಹಣ ಕೊಡಲಾಗದು ಎಂದು ತಿರಸ್ಕಾರ ಮಾಡಿದ್ದಾರೆ. ರಾಜ್ಯದಿಂದಲೇ ಗೆದ್ದು ಅಧಿಕಾರ ಪಡೆದವರು ರಾಜ್ಯಕ್ಕೆ ಅನ್ಯಾಯ ಮಾಡಿದ್ದಾರೆ, ಇದು ನ್ಯಾಯವೇ? ಎಂದು ಸಿದ್ದರಾಮಯ್ಯ ಕಿಡಿಕಾರಿದರು.

ಎಲ್ಲಿದೆ ಸಬ್‌ಕಾ ಸಾಥ್‌?
ಸಬ್‌ ಕಾ ಸಾಥ್‌, ಸಬ್‌ಕಾ ವಿಕಾಸ್‌ ಎಂದು ಮೋದಿ ಹೇಳಿದರೆ, ಟೋಪಿ, ಬುರ್ಖಾ ಹಾಕಿದವರು ಆಫೀಸ್‌ಗೇ ಬರಬೇಡಿ ಎಂದು ಬಿಜೆಪಿ ಶಾಸಕ ಬಸವರಾಜ ಯತ್ನಾಳ್‌ ಹೇಳುತ್ತಾರೆ. ಬಿಜೆಪಿಯವರು ಹೇಳಿದಂತೆ ಯಾವತ್ತಾದರೂ ನಡೆದುಕೊಂಡಿದ್ದಾರಾ? ಎಂದು ಇದೇ ವೇಳೆ ಕಾಲೆಳೆದರು.

ಧನಿಕರ ಪರ ಸರ್ಕಾರ: ಕಾರ್ಪೊರೆಟ್‌ ಕುಳಗಳಿಗೆ, ಬಂಡವಾಳಶಾಹಿಗಳಿಗೆ ಮನಮೋಹನ್‌ ಸಿಂಗ್‌ ಸರ್ಕಾರದ ಕಾಲದಲ್ಲಿ ಶೇ.30 ತೆರಿಗೆ ವಿಧಿಸಲಾಗುತ್ತಿತ್ತು. ಅದನ್ನು ಮೋದಿ ಸರ್ಕಾರ ಶೇ.22.5ಕ್ಕೆ ಇಳಿಸಿದೆ. ಆದರೆ ಬಡವರ ಮೇಲಿನ ತೆರಿಗೆ ಹೆಚ್ಚಿಸಿದ್ದಾರೆ. 

ಪೆಟ್ರೋಲ್‌, ಡೀಸೆಲ್‌, ಗ್ಯಾಸ್, ಆಹಾರ ಪದಾರ್ಥಗಳ ಬೆಲೆ ಗಗನಕ್ಕೇರಿದೆ. ಬಿಜೆಪಿ ಸರ್ಕಾರ ಕೇವಲ ಕಾರ್ಪೊರೆಟ್‌ ಧನಿಕರ ಪರವಾಗಿದ್ದಾರೆಯೇ ಹೊರತು ಬಡವರ ಪರ ಅಲ್ಲ ಎಂದು ಸಿದ್ದರಾಮಯ್ಯ ಟೀಕಿಸಿದರು.

ಬಿಜೆಪಿಯವರನ್ನು ಯಾವತ್ತೂ ನಂಬಬೇಡಿ. ಅವರು ಅಧಿಕಾರಕ್ಕೆ ಬಂದಾಗ ನುಡಿದಂತೆ ನಡೆಯಲ್ಲ. 10 ವರ್ಷ ಹಿಂದೆ ಮೋದಿ ನೀಡಿದ ಯಾವ ಪ್ರಮುಖ ಭರವಸೆಯನ್ನು ಈಡೇರಿಸಿದ್ದಾರೆ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಕೇವಲ ಕೋಮುವಾದ, ಧರ್ಮ, ಜಾತಿಗಳ ನಡುವೆ ಬೆಂಕಿ ಹಚ್ಚೋದು, ಭಾವನಾತ್ಮಕ- ಧಾರ್ಮಿಕ ವಿಚಾರಗಳನ್ನು ಇಟ್ಟುಕೊಂಡು ಅಧಿಕಾರ ನಡೆಸುತ್ತಿದ್ದಾರೆ.ಆದರೆ ನಾವು ನುಡಿದಂತೆ ನಡೆದಿದ್ದೇವೆ. 

ಎಲ್ಲ ಐದೂ ಗ್ಯಾರಂಟಿ ಭರವಸೆ ಈಡೇರಿಸಿದ್ದೇವೆ. 155 ಕೋಟಿ ಮಹಿಳೆಯರು ಈವರೆಗೆ ಉಚಿತವಾಗಿ ಸರ್ಕಾರಿ ಬಸ್ಸುಗಳಲ್ಲಿ ಪ್ರಯಾಣ ಮಾಡಿದ್ದಾರೆ. 1.20 ಕೋಟಿ ಕುಟುಂಬಗಳಿಗೆ 5 ಕೆಜಿ ಅಕ್ಕಿಯ ಹಣ ನೀಡುತ್ತಿದ್ದೇವೆ. 

1.17 ಕೋಟಿ ಮಹಿಳೆಯರಿಗೆ 2 ಸಾವಿರ ರು. ಗೃಹಲಕ್ಷ್ಮೀ ಹಣ ತಲುಪುತ್ತಿದೆ. ಈ ವರ್ಷ 36 ಸಾವಿರ ಕೋಟಿ ರು. ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲದೆ ನೇರವಾಗಿ ಫಲಾನುಭವಿಗಳ ಕೈ ತಲುಪಿದೆ. ಬಿಜೆಪಿಯವರಿಗೆ ಯಾವತ್ತಾದರೂ ಇಂಥ ಕೆಲಸ ಮಾಡಲು ಸಾಧ್ಯವಾಗಿದೆಯಾ ಎಂದು ಹರಿಹಾಯ್ದರು.

Share this article