-ಸಿಟಿಗೆ ಬಳಸಿ-
ಬೆಂಗಳೂರು ನಗರಾಭಿವೃದ್ಧಿ ಖಾತೆಯ ಹೊಣೆಯನ್ನೂ ಹೊತ್ತಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಬ್ರ್ಯಾಂಡ್ ಬೆಂಗಳೂರು ಘೋಷಣೆಗೆ ಬಿಜೆಪಿಯ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಪ್ರತಿಪಕ್ಷದ ನಾಯಕ ಆರ್.ಅಶೋಕ್ ತಿರುಗೇಟು ನೀಡಿದ್ದಾರೆ.
‘ಬೆಂಗಳೂರಿನಲ್ಲಿ ಮಳೆ ಆರಂಭವಾಗುವ ಮೊದಲೇ ರಾಜಕಾಲುವೆ ಸ್ವಚ್ಚಗೊಳಿಸುವ ಕೆಲಸ ಮಾಡಲು ಬಿಬಿಎಂಪಿಗೆ ಹಣ ನೀಡದೇ ಬ್ರ್ಯಾಂಡ್ ಬೆಂಗಳೂರು ಎಂದರೆ ಪ್ರಯೋಜನವಿಲ್ಲ’ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದರೆ, ‘ಬ್ರ್ಯಾಂಡ್ ಬದಲು ಬ್ಯಾಂಡ್ ಬೆಂಗಳೂರು ಆಗಿದೆ’ ಎಂದು ಅಶೋಕ್ ಲೇವಡಿ ಮಾಡಿದ್ದಾರೆ.ಬುಧವಾರ ಸುದ್ದಿಗಾರರೊಂದಿಗೆ ಪ್ರತ್ಯೇಕವಾಗಿ ಮಾತನಾಡಿದ ಬೊಮ್ಮಾಯಿ, ಬೆಂಗಳೂರಿನಲ್ಲಿ ಮಳೆಯಿಂದ ಹಾನಿಯಾಗುತ್ತಿದೆ. ಈ ಬಗ್ಗೆ ಅನೇಕ ವರದಿಗಳು ಕೂಡ ಇವೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಸುಮಾರು 800 ಕೋಟಿ ರೂ. ಖರ್ಚು ಮಾಡಿ ರಾಜಕಾಲುವೆ ಸರ್ವೇ ಮಾಡಿಸಿ ಕೆಲಸ ಪ್ರಾರಂಭ ಮಾಡಿದ್ದೇವೆ. ಆ ಕೆಲಸವನ್ನು ಈಗಿನ ಸರ್ಕಾರ ಸಮರ್ಪಕವಾಗಿ ಮಾಡುತ್ತಿಲ್ಲ ಎಂದು ಕಿಡಿಕಾರಿದರು.
ಬ್ರ್ಯಾಂಡ್ ಅಲ್ಲ, ಬ್ಯಾಂಡ್ ಬೆಂಗಳೂರು- ಅಶೋಕ್
ಅಶೋಕ್ ಅವರು ಮಾತನಾಡಿ, ಬೆಂಗಳೂರಿನ ಬೆಳ್ಳಂದೂರು, ಮಹದೇವಪುರ ಮೊದಲಾದ ಕಡೆ ಮಳೆಯಿಂದ ಹಾನಿಯಾಗಿದೆ. ಇಂತಹ ಸಮಯದಲ್ಲೂ ಬ್ರ್ಯಾಂಡ್ ಬೆಂಗಳೂರು ಎನ್ನುತ್ತಿದ್ದಾರೆ. ಆದರೆ ಕೇವಲ ಸದ್ದು ಕೇಳಿಬರುತ್ತಿದ್ದು, ಬ್ರ್ಯಾಂಡ್ ಬದಲು ಬ್ಯಾಂಡ್ ಬೆಂಗಳೂರು ಆಗಿದೆ. ನಿಯಂತ್ರಣ ಕೊಠಡಿ ತೆರೆದಿದ್ದಾರೆಯೇ ಹೊರತು ಯಾವ ಕೆಲಸವೂ ಆಗಿಲ್ಲ. ಗುತ್ತಿಗೆದಾರರಿಗೆ ಬಿಲ್ ಬಾಕಿ ಇದೆ. ಒಂದೋ ಬ್ರ್ಯಾಂಡ್ ಬೆಂಗಳೂರು ಘೋಷಣೆಯನ್ನು ವಾಪಸ್ ಪಡೆಯಲಿ, ಇಲ್ಲವಾದರೆ ಏನು ಮಾಡುತ್ತೇವೆಂದು ಸರಿಯಾದ ಮಾಹಿತಿ ನೀಡಲಿ ಎಂದು ಆಗ್ರಹಿಸಿದರು.