ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಸರ್ಕಾರದಿಂದ ಬಂಪರ್‌ ಕೊಡುಗೆ-- 200 ಕೋಟಿ ರು. ಅಭಿವೃದ್ಧಿ ಯೋಜನೆಗಳಿಗೆ ಡಿಸಿಎಂ ಚಾಲನೆ

Published : Sep 22, 2024, 07:48 AM IST
dk shivakumar

ಸಾರಾಂಶ

ಶೀಘ್ರದಲ್ಲೇ ಉಪ ಚುನಾವಣೆಗೆ ಸಾಕ್ಷಿಯಾಗಲಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ರಾಜ್ಯ ಸರ್ಕಾರ ಮತ್ತೊಮ್ಮೆ ಬಂಪರ್‌ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಹೊರಟಿದೆ.

ಚನ್ನಪಟ್ಟಣ : ಶೀಘ್ರದಲ್ಲೇ ಉಪ ಚುನಾವಣೆಗೆ ಸಾಕ್ಷಿಯಾಗಲಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ರಾಜ್ಯ ಸರ್ಕಾರ ಮತ್ತೊಮ್ಮೆ ಬಂಪರ್‌ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಹೊರಟಿದೆ. ಮೂರು ತಿಂಗಳ ಹಿಂದಷ್ಟೇ 500 ಕೋಟಿ ರು. ಯೋಜನೆಗಳನ್ನು ಘೋಷಿಸಿದ್ದ ಸರ್ಕಾರ, ಇದೀಗ 200 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶನಿವಾರ ಚಾಲನೆ ನೀಡಿದೆ.

ಈ ಉಪ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ನಗರದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ, ಗುದ್ದಲಿಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈಗಾಗಲೇ ಕ್ಷೇತ್ರಕ್ಕೆ ವಿಶೇಷ ಅನುದಾನ ತಂದು ಪ್ರತಿ ವಾರ್ಡ್ ನಲ್ಲಿ 1 ಕೋಟಿ ರು. ವೆಚ್ಚದ ಯೋಜನೆಗಳನ್ನು ನಡೆಸಲಾಗುತ್ತಿದೆ. ಇದೀಗ ಮತ್ತೆ 200 ಕೋಟಿ ಅನುದಾನದ ಯೋಜನೆಗಳಿಗೆ ಗುದ್ದಲಿ ಪೂಜೆ ಮಾಡಿದ್ದೇವೆ. ಚನ್ನಪಟ್ಟಣದಲ್ಲಿ ಅಭಿವೃದ್ಧಿ ದೀಪ ಹಚ್ಚಿದ್ದೇವೆ. ಈ ದೀಪ ನಿಮ್ಮ ದಾರಿ, ಮನೆ, ಬದುಕು ಬೆಳಗಲಿದೆ. ಕೊಟ್ಟ ಮಾತಿನಂತೆ ಚನ್ನಪಟ್ಟಣವನ್ನು ಅಭಿವೃದ್ಧಿ ಪುಟಕ್ಕೆ ಸೇರಿಸಿ ಮುನ್ನುಡಿ ಬರೆಯುತ್ತಿದ್ದೇವೆ. ಆಟದ ಮೈದಾನ, ವಿವಿಧ ಕಟ್ಟಡಗಳ ಶಂಕುಸ್ಥಾಪನೆ ಮಾಡಿದ್ದೇವೆ. ಎಲ್ಲಾ ವರ್ಗದ ಬಡವರಿಗೂ ನಿವೇಶನ ನೀಡಲಾಗುತ್ತಿದೆ. ಕಾಂಗ್ರೆಸ್ ಎಂದರೆ ಬಡವರು, ಕಾರ್ಮಿಕರು, ರೈತರು, ಶ್ರಮಿಕರು ಸೇರಿ ಎಲ್ಲಾ ವರ್ಗದ ಜನರ ಸರ್ಕಾರ ಎಂದರು.

ಏನೇನು ಯೋಜನೆ?:

ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯಿಂದ ನಗರದ ತಟ್ಟೆಕೆರೆಯ ಕುಡಿಯುವ ನೀರಿನ ಕಟ್ಟೆ ಬಳಿ ಸುಮಾರು 9 ಕೋಟಿ ರು. ವೆಚ್ಚದಲ್ಲಿ ಕ್ರೀಡಾಂಗಣ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿಪೂಜೆ, ಲೋಕೋಪಯೋಗಿ ಇಲಾಖೆಯಿಂದ ಪೆಟ್ಟಾ ಶಾಲೆ ಬಳಿ 5 ಕೋಟಿ ರು.ವೆಚ್ಚದಲ್ಲಿ ಆಟದ ಮೈದಾನದ ಅಭಿವೃದ್ಧಿ ಕಾಮಗಾರಿ ಹಾಗೂ ಮದೀನಾ ಚೌಕ್ ನಲ್ಲಿ ಅಲ್ಪಸಂಖ್ಯಾತರ 14 ವಾರ್ಡ್ ಗಳಲ್ಲಿ ರಸ್ತೆ ಅಭಿವೃದ್ಧಿಗೆ ಸುಮಾರು 16 ಕೋಟಿ ರು. ವೆಚ್ಚದ ಕಾಮಗಾರಿಗೆ ಗುದ್ದಲಿಪೂಜೆ, ಮಂಗಳವಾರಪೇಟೆಯಲ್ಲಿ ಎಸ್‌ಎಫ್‌ಸಿ ವಿಶೇಷ ಅನುದಾನದಲ್ಲಿ ವಾರ್ಡ್‌ಗೆ ತಲಾ 1 ಕೋಟಿಯಂತೆ 31 ವಾರ್ಡ್‌ಗಳಲ್ಲಿ 31 ೧ ಕೋಟಿ ರು. ವೆಚ್ಚದಲ್ಲಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿ ಸೇರಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.

 ವಸತಿ ರಹಿತರಿಗೆ 954 ನಿವೇಶನಗಳ ಹಂಚಿಕೆ 

ಡಿ.ಕೆ.ಶಿವಕುಮಾರ್ ಅವರು ಸಚಿವರಾದ ಜಮೀರ್ ಅಹಮದ್ ಖಾನ್ ಹಾಗೂ ರಹೀಂ ಖಾನ್ ಜೊತೆಗೂಡಿ ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ನಿವೇಶನ ರಹಿತರಿಗೆ ಶನಿವಾರ 954 ನಿವೇಶನಗಳನ್ನು ಹಂಚಿಕೆ ಮಾಡಿದರು.

ಪಟ್ಟಣ ಪ್ರದೇಶದ ವಸತಿರಹಿತರಿಗೆ 528, ಪಟ್ಟು ಗ್ರಾಮದಲ್ಲಿ 200, ಕೂಡ್ಲೂರು-150, ವೈ.ಟಿ.ಹಳ್ಳಿಯ ವಸತಿ ರಹಿತರಿಗೆ 76 ಸೇರಿ ಒಟ್ಟು 954 ನಿವೇಶನಗಳನ್ನು ನಗರ ಆಶ್ರಯ ಸಮಿತಿ ಮತ್ತು ರಾಜೀವ್‌ ಗಾಂಧಿ ವಸತಿ ನಿಗಮದ ಮೂಲಕ ಹಂಚಿದರು.

ಕುಮಾರಣ್ಣನ ಆಡಳಿತ ಸ್ವಾರ್ಥಕ್ಕೆ, ನನ್ನ ಆಡಳಿತ ತಾಲೂಕು ಹಾಗೂ ಜನರಿಗಾಗಿ. ನನ್ನ ಆಡಳಿತವೇ ಬೇರೆ, ಕುಮಾರಣ್ಣನ ಆಡಳಿತವೇ ಬೇರೆ. ಮೂರು ತಿಂಗಳಲ್ಲಿ ಸಚಿವರು, ಅಧಿಕಾರಿಗಳು ನಿಮ್ಮ ಬಳಿ ಬಂದು ಏನು ಬೇಕು ಎಂದು ಕೇಳುತ್ತಿದ್ದಾರೆ. ಆದರೆ, ಹಳೆ ಶಾಸಕರು ನಿಮ್ಮನ್ನು ಬಿಟ್ಟು ಹೋಗಿದ್ದಾರೆ. ಅವರಿಗೂ ಚನ್ನಪಟ್ಟಣಕ್ಕೂ ಸಂಬಂಧವಿಲ್ಲ.

- ಡಿ.ಕೆ.ಶಿವಕುಮಾರ್‌, ಡಿಸಿಎಂ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ರಾಜಕೀಯವಾಗಿ ಗೂಗ್ಲಿ ಹಾಕ್ಬೇಕು, ಇಲ್ಲದಿದ್ರೆ ಯಶಸ್ಸು ಸಿಗಲ್ಲ: ಸತೀಶ್‌
ಎನ್‌ಜಿಇಎಫ್‌ನ 65 ಎಕರೆಯಲ್ಲಿ ವೃಕ್ಷೋದ್ಯಾನ ಅಭಿವೃದ್ಧಿ: ಎಂ.ಬಿ. ಪಾಟೀಲ್‌