ರಾಜ್ಯ ಸರ್ಕಾರ ಇದ್ದೂ ಸತ್ತಂತೆ - ಜನರನ್ನು ಸಂಕಷ್ಟಕ್ಕೆ ದೂಡುತ್ತಿದೆ : ವಿಜಯೇಂದ್ರ

ಸಾರಾಂಶ

ಅಹಿಂದ ಹೆಸರೇಳಿಕೊಂಡು ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ಹಿಂದುಳಿದವರು ಮತ್ತು ದಲಿತರನ್ನು ಮರೆತು, ಕೇವಲ ಅಲ್ಪಸಂಖ್ಯಾತರ ನಾಯಕರಾಗಿ ಉಳಿದಿದ್ದಾರೆ.

 ಮೈಸೂರು : ಅಹಿಂದ ಹೆಸರೇಳಿಕೊಂಡು ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ಹಿಂದುಳಿದವರು ಮತ್ತು ದಲಿತರನ್ನು ಮರೆತು, ಕೇವಲ ಅಲ್ಪಸಂಖ್ಯಾತರ ನಾಯಕರಾಗಿ ಉಳಿದಿದ್ದಾರೆ. ಕಾಂಗ್ರೆಸ್ ಹೈಕಮಾಂಡ್‌ಗೆ ಸಿದ್ದರಾಮಯ್ಯ ಸರ್ಕಾರ ಈಗ ಎಟಿಎಂ ಆಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಿಸಿದ್ದಾರೆ.

ನಗರದಲ್ಲಿ ಸೋಮವಾರ ರಾಜ್ಯ ಬಿಜೆಪಿ ಆಯೋಜಿಸಿದ್ದ ಜನಾಕ್ರೋಶ ಯಾತ್ರೆಯಲ್ಲಿ ಮಾತನಾಡಿ, ಕಾಂಗ್ರೆಸ್‌ ಪಕ್ಷ ಚುನಾವಣೆ ಬಂದಾಗ ಹೋರಾಟ ಮಾಡುವ ನಾಟಕ ಮಾಡುತ್ತದೆ. ಚುನಾವಣೆಗೂ ಮುನ್ನ ಮೇಕೆದಾಟು ಪಾದಯಾತ್ರೆ ಮಾಡಿ, ಅಧಿಕಾರಕ್ಕೆ ಬಂದ ಕೂಡಲೇ ಯೋಜನೆ ಕೈಗೆತ್ತಿಕೊಳ್ಳುವುದಾಗಿ ಹೇಳಿದ್ದ ಕಾಂಗ್ರೆಸ್‌ ನಾಯಕರು ಈಗ ಮೌನವಾಗಿದ್ದಾರೆ. ಆದರೆ, ಬಿಜೆಪಿ ಇಂತಹ ನಾಟಕ ಮಾಡುವುದಿಲ್ಲ ಎಂದರು.

ಕಾಂಗ್ರೆಸ್‌ನವರು ಜನಪರ ಆಡಳಿತ ಕೊಡುವ ಬದಲಿಗೆ ಬೆಲೆ ಏರಿಸಿ ಜನರನ್ನು ಸಂಕಷ್ಟಕ್ಕೆ ತಳ್ಳಿದ್ದಾರೆ. ಸಿದ್ದರಾಮಯ್ಯ ಎಷ್ಟು ಬಜೆಟ್ ಮಂಡಿಸಿದ್ದಾರೆ ಎನ್ನುವುದು ಮುಖ್ಯವಲ್ಲ. ನಾಡಿನ ಆರೂವರೆ ಕೋಟಿ ಜನರಿಗೆ ಏನು ಕೊಡುಗೆ ನೀಡಿದ್ದಾರೆ ಎಂಬುದು ಮುಖ್ಯ ಎಂದರು.

ಕಾಂಗ್ರೆಸ್ ಸರ್ಕಾರ ಜನರ ಪಾಲಿಗೆ ಬದುಕಿದ್ದೂ ಸತ್ತಂತೆ ಆಗಿದೆ. ಹಾಲು, ಡೀಸೆಲ್, ವಿದ್ಯುತ್ ಮೊದಲಾದ ವಸ್ತುಗಳ ಬೆಲೆ ಹೆಚ್ಚಿಸಿದ್ದರಿಂದ ಜನರು ಕಣ್ಣೀರು ಹಾಕುವ ಸ್ಥಿತಿ ಬಂದಿದೆ. ಮುಸ್ಲಿಮರಿಗೆ ಶೇ. 4ರಷ್ಟು ಗುತ್ತಿಗೆಯಲ್ಲಿ ಮೀಸಲಾತಿ ಕಲ್ಪಿಸಿರುವ ಸಿದ್ದರಾಮಯ್ಯ ಅವರಿಗೆ ಹಿಂದೂಗಳಲ್ಲಿ ಬಡವರು ಇರುವುದು ಗೊತ್ತಿಲ್ಲವೇ? ಎಂದು ಅವರು ಪ್ರಶ್ನಿಸಿದರು.

2 ವರ್ಷದಿಂದ ಸಿದ್ದರಾಮಯ್ಯ ಅವರ ಆಡಳಿತ ಹಾದಿ ತಪ್ಪಿದೆ. ವಿಧಾನಸೌಧದಲ್ಲಿ ಕುಳಿತು ಮಜಾ ಮಾಡುವ ಆಡಳಿತ ನೀಡುತ್ತ, ಜನರ ಸಮಸ್ಯೆ ಬದಿಗೊತ್ತಿದ್ದಾರೆ. ರಾಹುಲ್, ಪ್ರಿಯಾಂಕ ಗಾಂಧಿ ಅವರ ಮೆಚ್ಚುಗೆ ಗಳಿಸಲು ಬಂಡೀಪುರದಲ್ಲಿ ರಾತ್ರಿ ಸಂಚಾರಕ್ಕೆ ಅವಕಾಶ ಮಾಡಿಕೊಡುವ ಕೆಲಸ ನಡೆದಿದೆ. ಇದಕ್ಕೆ ಎಂದಿಗೂ ಅವಕಾಶ ಕೊಡಲ್ಲ ಎಂದು ಅವರು ಎಚ್ಚರಿಸಿದರು. 

Share this article