ಬೆಂಗಳೂರು : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಪಿಕಪ್ ಅಥವಾ ಡ್ರಾಪ್ ಮಾಡಲು 8 ನಿಮಿಷಕ್ಕೂ ಹೆಚ್ಚು ಸಮಯ ತೆಗೆದುಕೊಂಡರೆ 150 ರು. ಶುಲ್ಕ ವಿಧಿಸುವ ಕ್ರಮವನ್ನು ಖಂಡಿಸಿ ನೂರಾರು ಕ್ಯಾಬ್ ಚಾಲಕರು ಮಂಗಳವಾರ ಬಳ್ಳಾರಿ ರಸ್ತೆಯ ಸಾದಹಳ್ಳಿ ಟೋಲ್‌ಗೇಟ್‌ನಲ್ಲಿ ಪ್ರತಿಭಟನೆ ನಡೆಸಿದರು.
ಕರ್ನಾಟಕ ಚಾಲಕರ ಒಕ್ಕೂಟದ ನೇತೃತ್ವದಲ್ಲಿ ನಡೆದ ಪ್ರತಿಭಟನೆ ವೇಳೆ ರಸ್ತೆಯಲ್ಲಿ ಕೆಲ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ರಸ್ತೆ ತಡೆ ಪ್ರಯತ್ನವನ್ನು ವಿಫಲಗೊಳಿಸಿದ ಪೊಲೀಸರು, ನೂರಾರು ಚಾಲಕರನ್ನು ವಶಕ್ಕೆ ಪಡೆದುಕೊಂಡರು.
ಪ್ರತಿಭಟನೆ ವೇಳೆ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಜಿ. ನಾರಾಯಣಸ್ವಾಮಿ, ಬಿಐಎಎಲ್‌ನವರ ಕ್ರಮದಿಂದ 30 ಸಾವಿರ ಬಡ ಕ್ಯಾಬ್ ಚಾಲಕರಿಗೆ ತೊಂದರೆ ಆಗುತ್ತಿದೆ. 8 ನಿಮಿಷಕ್ಕಿಂತ ಹೆಚ್ಚು ಅವಧಿಗೆ ಕಾರು ನಿಲ್ಲಿಸಲಾಗಿದೆ ಎಂಬ ನೆಪ ಹೇಳಿ ಚಾಲಕರಿಗೆ ಶುಲ್ಕ ವಿಧಿಸಲಾಗುತ್ತಿದೆ. ಇದು ಶುಲ್ಕ ವಿಧಿಸಲು ಗುತ್ತಿಗೆ ಪಡೆದಿರುವ ಖಾಸಗಿ ಕಂಪನಿಯವರಿಗೆ ಅನುಕೂಲ ಮಾಡಲು ಮಾಡಿರುವ ಕುತಂತ್ರ ಎಂದು ಆರೋಪಿಸಿದರು.
ವಿಮಾನ ನಿಲ್ದಾಣದ ಟರ್ಮಿನಲ್ 1 ಮತ್ತು ಟರ್ಮಿನಲ್ 2ರಲ್ಲಿ ಈ ಮೊದಲು ಕ್ಯಾಬ್‌ಗಳ ನಿಲುಗಡೆಗೆ ಅವಕಾಶ ಇದ್ದ ಜಾಗದಲ್ಲೇ ಮತ್ತೆ ಅವಕಾಶ ನೀಡಬೇಕು. ಪಾರ್ಕಿಂಗ್ ಸ್ಥಳ ಬದಲಾವಣೆ ಮಾಡಿರುವುದರಿಂದ ಪ್ರಯಾಣಿಕರನ್ನು ಪಿಕಪ್ ಮತ್ತು ಡ್ರಾಪ್ ಮಾಡಲು ತೊಂದರೆ ಆಗುತ್ತಿದೆ. ಅಲ್ಲದೇ ಪ್ರಯಾಣಿಕರು 1ರಿಂದ ಒಂದೂವರೆ ಕಿ.ಮೀ ದೂರದವರೆಗೆ ನಡೆದು ಹೋಗಬೇಕಿರುವ ಕಾರಣ ತೊಂದರೆ ಅನುಭವಿಸುತ್ತಿದ್ದಾರೆ ಎಂದು ನಾರಾಯಣಸ್ವಾಮಿ ಹೇಳಿದರು.
ಬಿಐಎಎಲ್‌ನವರು ಕೂಡಲೇ ಶುಲ್ಕವನ್ನು ಹಿಂಪಡೆಯಬೇಕು. ಇಲ್ಲದಿದ್ದರೆ ಪ್ರತಿಭಟನೆಯನ್ನು ಮುಂದಿನ ದಿನಗಳಲ್ಲಿ ಮತ್ತೆ ಮಾಡುತ್ತೇವೆ ಎಂದು ನಾರಾಯಣಸ್ವಾಮಿ ಹೇಳಿದರು.
ಟರ್ಮಿನಲ್ 1ರಲ್ಲಿ ಆಗಮಿಸಿದ ಬಳಿಕ ಟ್ಯಾಕ್ಸಿ ಹಿಡಿಯಲು ಬಹಳಷ್ಟು ತೊಂದರೆ ಆಗುತ್ತಿದೆ. ಅದರಲ್ಲೂ ಹೆಚ್ಚು ಬ್ಯಾಗ್ ಇರುವವರು, ಪುಟ್ಟ ಮಕ್ಕಳು ಮತ್ತು ವಯಸ್ಸಾದವರಿಗೆ ಕಷ್ಟವಾಗುತ್ತಿದೆ. ಸಮಸ್ಯೆಗಳಿಗೆ ಪರಿಹಾರ ಸೂಚಿಸುವುದನ್ನು ಬಿಟ್ಟು ಹೊಸ ಸಮಸ್ಯೆಯನ್ನು ಬಿಐಎಎಲ್ ಸೃಷ್ಟಿಸಿದೆ ಎಂದು ಗೌತಮ್ ಪ್ರಧಾನ್ ಎಂಬುವರು ಜಾಲತಾಣ ಎಕ್ಸ್‌ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.