ಮಾರ್ಚ್ ಅಂತ್ಯಕ್ಕಲ್ಲ, ಏಪ್ರಿಲ್‌ ಬಳಿಕವಷ್ಟೇ ಸಂಪುಟ ವಿಸ್ತರಣೆ - ಮೇಲ್ಮನೆ 4 ಸ್ಥಾನ ಭರ್ತಿಯೂ ಏಪ್ರಿಲಲ್ಲೇ

ಸಾರಾಂಶ

ರಾಜ್ಯದಲ್ಲಿ ಮಾರ್ಚ್ ಅಂತ್ಯಕ್ಕೆ ಸಚಿವ ಸಂಪುಟ ವಿಸ್ತರಣೆ ನಡೆಯಲಿದೆ ಎಂಬ ವದಂತಿ ಹಬ್ಬಿದೆ. ಆದರೆ, ಕಾಂಗ್ರೆಸ್‌ನ ಉನ್ನತ ಮೂಲಗಳ ಪ್ರಕಾರ ಸಂಪುಟ ವಿಸ್ತರಣೆ ಪ್ರಕ್ರಿಯೆ ಏಪ್ರಿಲ್‌ ನಂತರವೇ ನಡೆಯಲಿದೆ.

 ಬೆಂಗಳೂರು : ರಾಜ್ಯದಲ್ಲಿ ಮಾರ್ಚ್ ಅಂತ್ಯಕ್ಕೆ ಸಚಿವ ಸಂಪುಟ ವಿಸ್ತರಣೆ ನಡೆಯಲಿದೆ ಎಂಬ ವದಂತಿ ಹಬ್ಬಿದೆ. ಆದರೆ, ಕಾಂಗ್ರೆಸ್‌ನ ಉನ್ನತ ಮೂಲಗಳ ಪ್ರಕಾರ ಸಂಪುಟ ವಿಸ್ತರಣೆ ಪ್ರಕ್ರಿಯೆ ಏಪ್ರಿಲ್‌ ನಂತರವೇ ನಡೆಯಲಿದೆ. ಸಚಿವ ಸಂಪುಟ ವಿಸ್ತರಣೆ ಕುರಿತು ಈಗಾಗಲೇ ಪ್ರಕ್ರಿಯೆ ಆರಂಭವಾಗಿದೆ. ಸಂಪುಟಕ್ಕೆ ಸೇರುವ ಸಂಭವನೀಯರ ಪಟ್ಟಿ ಬಗ್ಗೆ ಹೈಕಮಾಂಡ್‌ ಜತೆ ಚರ್ಚಿಸಿದ್ದು, ಮಾರ್ಚ್‌ ಅಂತ್ಯಕ್ಕೆ ಸಂಪುಟ ವಿಸ್ತರಣೆ ನಡೆಯಲಿದೆ ಎಂದು ವದಂತಿ ದಟ್ಟವಾಗಿ ಹಬ್ಬಿತ್ತು.

ಆದರೆ ಕಾಂಗ್ರೆಸ್‌ ಉನ್ನತ ಮೂಲಗಳ ಪ್ರಕಾರ, ಸಂಪುಟ ವಿಸ್ತರಣೆಯ ಯಾವುದೇ ಪ್ರಕ್ರಿಯೆ ಶುರುವಾಗಿಲ್ಲ. ಏಪ್ರಿಲ್‌ ನಂತರ ಈ ಬಗ್ಗೆ ಪ್ರಕ್ರಿಯೆ ನಡೆಯಲಿದ್ದು, ಬಳಿಕವಷ್ಟೇ ಸಂಪುಟ ವಿಸ್ತರಣೆ ನಡೆಯಲಿದೆ ಎಂದು ತಿಳಿದುಬಂದಿದೆ. ಏಪ್ರಿಲ್‌ನಲ್ಲೇ ಎಂಎಲ್‌ಸಿ ನಾಮ ನಿರ್ದೇಶನ:

ಇನ್ನು ಖಾಲಿಯಾಗಿರುವ ನಾಲ್ಕು ವಿಧಾನಪರಿಷತ್‌ ಸದಸ್ಯ ಸ್ಥಾನಗಳಿಗೆ ನಾಮನಿರ್ದೇಶನ ಪ್ರಕ್ರಿಯೆಯೂ ಏಪ್ರಿಲ್‌ನಲ್ಲೇ ಆರಂಭವಾಗಲಿದೆ. ಯು.ಬಿ.ವೆಂಕಟೇಶ್‌, ಪ್ರಕಾಶ್‌ ರಾಥೋಡ್‌, ಸಿ.ಪಿ.ಯೋಗೇಶ್ವರ್‌, ತಿಪ್ಪೇಸ್ವಾಮಿ ಅವರಿಂದ ನಾಲ್ಕು ಸ್ಥಾನಗಳು ತೆರವಾಗಿವೆ. ಈ ಕ್ಷೇತ್ರಗಳಿಗೆ ಯಾರನ್ನು ನಾಮ ನಿರ್ದೇಶನ ಮಾಡಬೇಕು ಎಂಬ ಬಗ್ಗೆಯೂ ಏಪ್ರಿಲ್‌ನಲ್ಲೇ ಪ್ರಕ್ರಿಯೆ ಶುರುವಾಗಲಿದೆ ಎಂದು ಮೂಲಗಳು ತಿಳಿಸಿವೆ.

Share this article