ಸಿಎಂಗೆ ಹೈಕಮಾಂಡ್‌ ದಿಢೀರ್‌ ಬುಲಾವ್‌ । ಇಂದು ಸಿದ್ದು ದಿಲ್ಲಿಗೆ । ಸಂಪುಟಕ್ಕೆ ಮೇಜರ್‌ ಸರ್ಜರಿ?

KannadaprabhaNewsNetwork |  
Published : Jun 11, 2025, 05:05 AM IST
ಸಿದ್ದರಾಮಯ್ಯ | Kannada Prabha

ಸಾರಾಂಶ

ದಿಢೀರ್ ಬೆಳವಣಿಗೆಯಲ್ಲಿ ಕಾಂಗ್ರೆಸ್ ಹೈಕಮಾಂಡ್‌ ರಾಜ್ಯ ಸರ್ಕಾರದ ಇಮೇಜ್‌ ವೃದ್ಧಿಸಲು ಸಚಿವ ಸಂಪುಟ ಪುನಾರಚನೆಗೆ ಸೂಚನೆ ನೀಡುವ ದಿಸೆಯಲ್ಲಿ ಚಿಂತನೆ ನಡೆಸಿದ್ದು, ಈ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆ 11ಕ್ಕೆ ದೆಹಲಿಯಲ್ಲಿ ರಾಜ್ಯ ನಾಯಕರೊಂದಿಗೆ ಖುದ್ದು ವರಿಷ್ಠ ರಾಹುಲ್‌ ಗಾಂಧಿ ಚರ್ಚೆ ನಡೆಸಲಿದ್ದಾರೆ.

- ಸರ್ಕಾರದ ಇಮೇಜ್‌ ವೃದ್ಧಿಗೆ ದೆಹಲಿ ನಾಯಕರಿಂದ ಸಂಪುಟ ಪುನಾರಚನೆ ಚಿಂತನೆ

- ಸಿದ್ದು, ಡಿಕೆಶಿ ಜತೆ ಇಂದು ಖರ್ಗೆ, ರಾಹುಲ್‌, ವೇಣು, ಸುರ್ಜೇವಾಲಾ ಮಹತ್ವದ ಚರ್ಚೆ

- 8-10 ನಿಷ್ಕ್ರಿಯ, ಕೆಲ ಹಿರಿಯ ಮಂತ್ರಿಗಳಿಗೆ ಕೊಕ್‌? ಸ್ಪೀಕರ್‌, ಸಭಾಪತಿ ಬದಲಾವಣೆ?

ಏನೇನು ಚರ್ಚೆ ನಡೆಯಬಹುದು?- 8ರಿಂದ 10 ಸಚಿವರ ಕಾರ್ಯವೈಖರಿ ಬಗ್ಗೆ ದೆಹಲಿ ನಾಯಕರಿಗೆ ಯಾವುದೇ ಸಮಾಧಾನ ಇಲ್ಲ

- ಈ ಸಚಿವರು ಉತ್ತಮ ಆಡಳಿತದ ಬಗ್ಗೆ ಲಕ್ಷ್ಯ ಕೊಡುತ್ತಿಲ್ಲ. ಭ್ರಷ್ಟಾಚಾರ ತಡೆಗೂ ಕ್ರಮ ವಹಿಸಿಲ್ಲ

- ಈ ಮಂತ್ರಿಗಳ ವಿಶೇಷಾಧಿಕಾರಿಗಳು, ಆಪ್ತರ ವಿರುದ್ಧವೇ ಭ್ರಷ್ಟಾಚಾರ ಕುರಿತು ಗಂಭೀರ ದೂರು

- 8-10 ಸಚಿವರು ವಿಧಾನಸೌಧದತ್ತಲೂ ತಲೆ ಹಾಕುತ್ತಿಲ್ಲ ಎಂಬ ಆರೋಪ ವರಿಷ್ಠರಿಗೆ ಮುಟ್ಟಿದೆ

- ಅಂತಹ ಸಚಿವರನ್ನು ಸಂಪುಟದಿಂದ ಕೈಬಿಟ್ಟು ಉತ್ಸಾಹಿ ಶಾಸಕರಿಗೆ ಅವಕಾಶ ನೀಡಲು ಒಲವು- ಇದೇ ವೇಳೆ ಕೆಲ ಹಿರಿಯ ಸಚಿವರನ್ನು ಕೈಬಿಟ್ಟು, ಪಕ್ಷದ ಕೆಲಸಕ್ಕೆ ನಿಯೋಜಿಸಲೂ ಚಿಂತನೆ

- ಸ್ಪೀಕರ್‌, ಸಭಾಪತಿ ಬದಲಾವಣೆ ಜತೆಗೆ ಕೆಲ ಎಂಎಲ್ಸಿಗಳಿಗೆ ಸಚಿವ ಸ್ಥಾನ ನೀಡಲು ಆಲೋಚನೆ

- ಆಖೈರುಗೊಂಡ ಬಳಿಕವೂ ತಡೆ ನೀಡಲಾಗಿರುವ ಎಂಎಲ್ಸಿಗಳ ಪಟ್ಟಿ ಬಗ್ಗೆ ಮತ್ತೊಮ್ಮೆ ಚರ್ಚೆ

---ಕನ್ನಡಪ್ರಭ ವಾರ್ತೆ ಬೆಂಗಳೂರು

ದಿಢೀರ್ ಬೆಳವಣಿಗೆಯಲ್ಲಿ ಕಾಂಗ್ರೆಸ್ ಹೈಕಮಾಂಡ್‌ ರಾಜ್ಯ ಸರ್ಕಾರದ ಇಮೇಜ್‌ ವೃದ್ಧಿಸಲು ಸಚಿವ ಸಂಪುಟ ಪುನಾರಚನೆಗೆ ಸೂಚನೆ ನೀಡುವ ದಿಸೆಯಲ್ಲಿ ಚಿಂತನೆ ನಡೆಸಿದ್ದು, ಈ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆ 11ಕ್ಕೆ ದೆಹಲಿಯಲ್ಲಿ ರಾಜ್ಯ ನಾಯಕರೊಂದಿಗೆ ಖುದ್ದು ವರಿಷ್ಠ ರಾಹುಲ್‌ ಗಾಂಧಿ ಚರ್ಚೆ ನಡೆಸಲಿದ್ದಾರೆ.

ದೆಹಲಿಯಲ್ಲಿ ನಡೆಯಲಿರುವ ಈ ಸಭೆಗೆ ಆಗಮಿಸುವಂತೆ ಹೈಕಮಾಂಡ್‌ ರಾಜ್ಯ ನಾಯಕತ್ವಕ್ಕೆ ಬುಲಾವ್‌ ನೀಡಿದೆ. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ದೆಹಲಿಗೆ ತೆರಳಲಿದ್ದು, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಈಗಾಗಲೇ ದೆಹಲಿಯಲ್ಲಿ ಇದ್ದಾರೆ. ಈ ನಾಯಕರೊಂದಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವರಿಷ್ಠರಾದ ರಾಹುಲ್ ಗಾಂಧಿ, ಕೆ.ಸಿ. ವೇಣುಗೋಪಾಲ್ ಹಾಗೂ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್ ಸುರ್ಜೇವಾಲಾ ಅವರು ಚರ್ಚೆ ನಡೆಸಲಿದ್ದಾರೆ.

8 ರಿಂದ 10 ಸಚಿವರಿಗೆ ಕೊಕ್?:

ಈ ಸಭೆಯಲ್ಲಿ ಮುಖ್ಯಮಂತ್ರಿ ಸಚಿವ ಸಂಪುಟ ಪುನಾರಚನೆ ಬಗ್ಗೆ ಚರ್ಚೆ ನಡೆಯಲಿದೆ ಎಂದು ಮೂಲಗಳು ಹೇಳಿವೆ. ಕಾಂಗ್ರೆಸ್‌ ವಲಯದಲ್ಲಿ ಹಾಲಿ ನಡೆದಿರುವ ಚರ್ಚೆಗಳ ಪ್ರಕಾರ, ರಾಜ್ಯ ಸರ್ಕಾರದ ಎಂಟರಿಂದ ಹತ್ತು ಮಂದಿ ಹಿರಿಯ ಸಚಿವರುಗಳ ಕಾರ್ಯವೈಖರಿ ಬಗ್ಗೆ ಹೈಕಮಾಂಡ್‌ ತೀವ್ರ ಅಸಮಾಧಾನ ಹೊಂದಿದೆ. ಅವರೆಲ್ಲರನ್ನೂ ಸಂಪುಟದಿಂದ ಕೈಬಿಟ್ಟು ಉತ್ಸಾಹಿ ಶಾಸಕರುಗಳಿಗೆ ಅವಕಾಶ ನೀಡುವ ಆಲೋಚನೆ ಹೊಂದಿದೆ.

ಹಾಲಿ ಸಚಿವ ಸಂಪುಟದ 8 ರಿಂದ 10 ಸಚಿವರು ಉತ್ತಮ ಆಡಳಿತ ನೀಡುವ ಬಗ್ಗೆ ಗಮನ ಕೊಡುತ್ತಿಲ್ಲ. ಅಲ್ಲದೆ, ಭ್ರಷ್ಟಾಚಾರ ತಡೆಗೂ ಕ್ರಮ ಕೈಗೊಂಡಿಲ್ಲ. ವಿಶೇಷವಾಗಿ ಸಚಿವರ ವಿಶೇಷಾಧಿಕಾರಿಗಳು ಹಾಗೂ ಆಪ್ತರೇ ಇಂತಹ ಕೃತ್ಯಗಳಲ್ಲಿ ತೊಡಗಿಕೊಂಡಿರುವ ಬಗ್ಗೆ ಕಾಂಗ್ರೆಸ್‌ ಕಾರ್ಯಕರ್ತರಿಂದಲೇ ಆರೋಪಗಳಿದ್ದರೂ ಆ ಬಗ್ಗೆ ಕ್ರಮ ಕೈಗೊಳ್ಳುತ್ತಿಲ್ಲ. ಅಷ್ಟೇ ಏಕೆ, ಈ ಸಚಿವರು ವಿಧಾನಸೌಧದತ್ತ ತಲೆಹಾಕುತ್ತಿಲ್ಲ ಎಂಬ ವರದಿಗಳು ಹೈಕಮಾಂಡ್‌ ಮುಟ್ಟಿವೆ.

ಅಲ್ಲದೆ, ಸಂಪುಟದ ಕೆಲ ಹಿರಿಯ ಸಚಿವರಿಗೂ ಕೊಕ್‌ ನೀಡಿ, ಪಕ್ಷದ ಕೆಲಸದಲ್ಲಿ ತೊಡಗಿಕೊಳ್ಳುವಂತೆ ಮಾಡುವ ಇರಾದೆಯೂ ಹೈಕಮಾಂಡ್‌ಗೆ ಇದೆ ಎನ್ನಲಾಗಿದೆ.

ಸ್ಪೀಕರ್‌-ಸಭಾಪತಿ ಬದಲಾವಣೆ? ಸಂಪುಟ ಪುನಾರಚನೆ ವೇಳೆ ವಿಧಾನಸಭೆ ಸಭಾಧ್ಯಕ್ಷ ಹಾಗೂ ವಿಧಾನ ಪರಿಷತ್‌ ಸಭಾಪತಿ ಸ್ಥಾನಗಳಿಗೂ ಬದಲಾವಣೆ ತರುವ ಸಾಧ್ಯತೆ ಇದೆ. ಜೊತೆಗೆ ವಿಧಾನ ಪರಿಷತ್‌ನ ಪಕ್ಷದ ಕೆಲ ಹಿರಿಯ ಸದಸ್ಯರನ್ನೂ ಸಂಪುಟಕ್ಕೆ ತೆಗೆದುಕೊಳ್ಳುವ ಆಲೋಚನೆ ಇದೆ ಎಂದು ಹೇಳಲಾಗುತ್ತಿದೆ.

ಇನ್ನು, ವಿಧಾನ ಪರಿಷತ್‌ನ ನಾಲ್ಕು ಸ್ಥಾನಗಳಿಗೆ ಹೈಕಮಾಂಡ್‌ ಅಂತಿಮಗೊಳಿಸಿದ ಪಟ್ಟಿಯನ್ನೇ ಪ್ರಕಟಿಸಿದರೂ ಪಕ್ಷದಲ್ಲೇ ತೀವ್ರ ಆಕ್ಷೇಪ, ಅಸಮಾಧಾನ ಉಂಟಾಗಿರುವುದರಿಂದ ತಡೆಹಿಡಿಯಲಾಗಿದೆ. ಈ ಬಗ್ಗೆಯೂ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವರೊಂದಿಗೆ ಹೈಕಮಾಂಡ್‌ ನಾಯಕರು ಚರ್ಚಿಸಲಿದ್ದು, ಅಸಮಾಧಾನ ಸರಿಪಡಿಸುವ ಪ್ರಯತ್ನ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.

===ಕಾರ್ಯಕರ್ತರ ಆಕ್ಷೇಪ: ಪರಿಷತ್‌ಸ್ಥಾನದ ಅಭ್ಯರ್ಥಿಗಳ ಪಟ್ಟಿಗೆ ತಡೆ

==ತಾನೇ ಫೈನಲ್‌ ಮಾಡಿದ್ದ ಪಟ್ಟಿಗೆ ಹೈಕಮಾಂಡ್‌ ಬ್ರೇಕ್‌ನಾಲ್ವರ ಪಟ್ಟಿ ರಾಜ್ಯಪಾಲರಿಗೆ ರವಾನೆಗೂ ಮುನ್ನ ತಡೆ

===ಪಟ್ಟಿಗೆ ಬಿತ್ತು ಕಡೆ ಹಂತದಲ್ಲಿ ಬ್ರೇಕ್‌

ವಿಧಾನಸಭೆಯಿಂದ ಪರಿಷತ್‌ಗೆ ನಾಮನಿರ್ದೇಶನ ಮಾಡುವ ಸ್ಥಾನಗಳಿಗೆ ನಾಲ್ವರ ಹೆಸರು ಅಂತಿಮಗೊಳಿಸಿದ್ದ ಕಾಂಗ್ರೆಸ್‌ ಹೈಕಮಾಂಡ್‌ದಿನೇಶ್‌ ಅಮೀನ್‌ಮಟ್ಟು, ಆರತಿ ಕೃಷ್ಣ, ರಮೇಶ್‌ ಬಾಬು, ಡಿ.ಜಿ.ಸಾಗರ್‌ ಹೆಸರು ಅಂತಿಮಗೊಳಿಸಿ ರಾಜ್ಯಪಾಲರಿಗೆ ರವಾನಿಸಲು ಸಿದ್ಧತೆ

ಆದರೆ ನಾಲ್ವರ ಪೈಕಿ ಒಂದು ಸ್ಥಾನವನ್ನೂ ಪಕ್ಷದ ಕಾರ್ಯಕರ್ತರಿಗೆ ನೀಡಿಲ್ಲ ಎಂದು ಭಾರೀ ಆಕ್ಷೇಪ ಕೇಳಿಬಂದ ಹಿನ್ನೆಲೆಯಲ್ಲಿ ಪಟ್ಟಿಗೆ ತಡೆಮಂಗಳವಾರ ದೆಹಲಿಯಲ್ಲಿ ಹೈಕಮಾಂಡ್‌ ಜೊತೆ ಸಿಎಂ ಸಿದ್ದು, ಡಿಸಿಎಂ ಡಿಕೆಶಿ ನಡೆಸುವ ಸಭೆಯಲ್ಲಿ ಪಟ್ಟಿ ಬಗ್ಗೆ ವಿಸ್ತೃತ ಚರ್ಚೆ ಸಂಭವ

==ಕನ್ನಡಪ್ರಭ ವಾರ್ತೆ ಬೆಂಗಳೂರುಕಾಂಗ್ರೆಸ್‌ ರಾಜ್ಯ ನಾಯಕರು, ಕಾರ್ಯಕರ್ತರಿಂದ ತೀವ್ರ ಆಕ್ಷೇಪಣೆ ಕೇಳಿ ಬಂದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಹೈಕಮಾಂಡ್‌ ತಾನೇ ಅಂತಿಮಗೊಳಿಸಿ ಕಳುಹಿಸಿದ್ದ ವಿಧಾನಪರಿಷತ್‌ನ 4 ನಾಮನಿರ್ದೇಶಿತ ಸ್ಥಾನಗಳ ಅಭ್ಯರ್ಥಿಗಳ ಪಟ್ಟಿಗೆ ತಡೆ ನೀಡಿದೆ.

ವಿಧಾನಪರಿಷತ್ತಿನಲ್ಲಿ ಖಾಲಿ ಇರುವ ನಾಲ್ಕು ಸ್ಥಾನಗಳಿಗೆ ರಾಜ್ಯ ನಾಯಕತ್ವ ಶಿಫಾರಸು ಮಾಡಿದ ಪಟ್ಟಿಯಲ್ಲಿ ದಿನೇಶ್‌ ಅಮಿನ್‌ಮಟ್ಟು, ಆರತಿ ಕೃಷ್ಣ, ರಮೇಶ್‌ ಬಾಬು ಹಾಗೂ ಡಿ.ಜಿ.ಸಾಗರ್‌ ಅವರ ಹೆಸರುಗಳನ್ನು ಹೈಕಮಾಂಡ್‌ ಕಳೆದ ವಾರ ಅಂತಿಮಗೊಳಿಸಿತ್ತು. ಈ ಪಟ್ಟಿಯನ್ನು ರಾಜಭವನಕ್ಕೆ ಕಳುಹಿಸಲು ರಾಜ್ಯ ಸರ್ಕಾರ ಸಜ್ಜಾಗಿತ್ತು.ಈ ನಡುವೆ ಹೈಕಮಾಂಡ್‌ ಅಂತಿಮಗೊಳಿಸಿದ್ದ ಪಟ್ಟಿಯಲ್ಲಿ ರಾಜ್ಯ ನಾಯಕರ ಶಿಫಾರಸುಗಳಿಗೆ ಮನ್ನಣೆ ದೊರಕಿರಲಿಲ್ಲ. ಅಲ್ಲದೆ, ಪಕ್ಷದ ಕಾರ್ಯಕರ್ತರಿಗೂ ಅವಕಾಶ ದೊರಕಿಲ್ಲ ಎಂದು ಕಾರ್ಯಕರ್ತರು ಹಾಗೂ ನಾಯಕರಿಂದ ತೀವ್ರ ಆಕ್ಷೇಪಣೆ ಕೇಳಿ ಬಂತು. ರಾಜ್ಯದ ಪ್ರಭಾವಿ ನಾಯಕರು ಹೈಕಮಾಂಡ್‌ ನ ಈ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಹೈಕಮಾಂಡ್‌ ತಾನೇ ಒಪ್ಪಿಗೆ ನೀಡಿದ್ದ ಪಟ್ಟಿಗೆ ಇದೀಗ ತಡೆ ನೀಡಿದೆ.

ಇಂದು ಚರ್ಚೆ: ಮೂಲಗಳ ಪ್ರಕಾರ ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ದೆಹಲಿಯಲ್ಲಿ ಹೈಕಮಾಂಡ್‌ ಮಹತ್ವದ ಸಭೆಯೊಂದನ್ನು ನಡೆಸಲಿದ್ದು, ಈ ವೇಳೆ ವಿಧಾನಪರಿಷತ್‌ ನಾಮನಿರ್ದೇಶನ ವಿಚಾರವೂ ಚರ್ಚೆಗೆ ಬರಲಿದೆ ಎಂದು ಮೂಲಗಳು ಹೇಳಿವೆ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಬಾಕಿ ಲಕ್ಷ್ಮಿ ಶನಿವಾರದೊಳಗೆ ಮಹಿಳೆಯರ ಬ್ಯಾಂಕ್‌ ಖಾತೆಗೆ
ರಾಜಣ್ಣ ಸಿಎಂಗಷ್ಟೇ ಅಲ್ಲ, ನನಗೂ ಪರಮಾಪ್ತ: ಡಿಕೆಶಿ