;Resize=(412,232))
ಬೆಂಗಳೂರು : ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಸಂಬಂಧ ತೀವ್ರ ಪೈಪೋಟಿ ನಡುವೆಯೇ ಕಾಂಗ್ರೆಸ್ ನಾಯಕತ್ವ ಬಹುತೇಕ ಅಭ್ಯರ್ಥಿಗಳ ಹೆಸರು ಅಖೈರುಗೊಳಿಸಿದೆ. ಆದರೆ, ಉಭಯ ಕ್ಷೇತ್ರಗಳಲ್ಲಿ ಅದರಲ್ಲೂ ವಿಶೇಷವಾಗಿ ದಾವಣಗೆರೆ ಕ್ಷೇತ್ರದಲ್ಲಿ ಭಾರಿ ಬಂಡಾಯ ಉಂಟಾಗುವ ಸಾಧ್ಯತೆ ಗೋಚರಿಸಿರುವುದರಿಂದ ಕಾಂಗ್ರೆಸ್ ಹೈಕಮಾಂಡ್ ಮಧ್ಯಸ್ಥಿಕೆ ಅನಿವಾರ್ಯವಾಗಿದೆ.
ಮೂಲಗಳ ಪ್ರಕಾರ, ದಾವಣಗೆರೆ ದಕ್ಷಿಣಕ್ಕೆ ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗ ಹಾಗೂ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಪುತ್ರ ಸಮರ್ಥಗೆ ಟಿಕೆಟ್ ನೀಡುವ ಬಗ್ಗೆ ನಾಯಕತ್ವ ಬಹುತೇಕ ಒಮ್ಮತಕ್ಕೆ ಬಂದಿದೆ. ಆದರೆ ಅಲ್ಪಸಂಖ್ಯಾತ ನಾಯಕರಿಂದ ಅತೀವ ಒತ್ತಡ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಅಖಿಲ ಭಾರತ ಯುವ ಕಾಂಗ್ರೆಸ್ ಕಾರ್ಯದರ್ಶಿ ಖಾಲಿದ್ ಸೈಫುಲ್ಲಾ ಅವರ ಹೆಸರನ್ನೂ ಸೇರಿಸಿ ವರಿಷ್ಠರಿಗೆ ಕಳುಹಿಸಲಾಗಿದೆ. ಇನ್ನು ಬಾಗಲಕೋಟೆ ಕ್ಷೇತ್ರದಲ್ಲಿ ಮೇಟಿ ಅವರ ಕಿರಿಯ ಪುತ್ರ ಉಮೇಶ್ ಹೆಸರು ಅಂತಿಮಗೊಳಿಸಲಾಗಿದೆ ಎನ್ನಲಾಗಿದೆ. ಆದಾಗ್ಯೂ ಅವರ ಸಹೋದರ ಮಲ್ಲಿಕಾರ್ಜುನ ಮೇಟಿ ಅವರ ಹೆಸರನ್ನೂ ಹೈಕಮಾಂಡ್‌ಗೆ ರವಾನಿಸಲಾಗಿದೆ.
ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಸರಣಿ ಸಭೆ ನಡೆಸಿದ ರಾಜ್ಯ ನಾಯಕರು ಈ ಹೆಸರು ಅಂತಿಮಗೊಳಿಸಿದ್ದಾರೆ. ಆದರೂ, ಪೈಪೋಟಿ ತೀವ್ರವಿರುವುದರಿಂದ ಹಾಗೂ ಮುಸ್ಲಿಂ ನಾಯಕರು ಒಗ್ಗಟ್ಟಾಗಿ ದಾವಣಗೆರೆ ಕ್ಷೇತ್ರಕ್ಕೆ ಅಲ್ಪಸಂಖ್ಯಾತರಿಗೇ ಟಿಕೆಟ್ ನೀಡಬೇಕು ಎಂದು ಪಟ್ಟು ಹಿಡಿದಿರುವುದರಿಂದ ಅಂತಿಮ ತೀರ್ಮಾನ ಹೈಕಮಾಂಡ್ ಹೆಗಲಿಗೆ ಬಿದ್ದಿದೆ.
ಇದಕ್ಕೆ ಮುಖ್ಯ ಕಾರಣ- ದಾವಣಗೆರೆ ಕ್ಷೇತ್ರದಲ್ಲಿ ಸಮರ್ಥ್ ಆಯ್ಕೆ ಬಗ್ಗೆ ತೀವ್ರ ಬಂಡಾಯ ಸಾಧ್ಯತೆ ಗೋಚರಿಸಿದೆ. ವಿಶೇಷವಾಗಿ ದಿ. ಶಾಮನೂರು ಶಿವಶಂಕರಪ್ಪ ಅವರು ಭರವಸೆ ನೀಡಿದ್ದಂತೆ ಅವರ ನಂತರ ಮುಸ್ಲಿಮರಿಗೆ ಈ ಕ್ಷೇತ್ರದಲ್ಲಿ ಟಿಕೆಟ್ ದೊರೆಯಬೇಕು. ಉಪ ಚುನಾವಣೆಗೆ ನೀಡದಿದ್ದರೆ, ಮುಂದಿನ ಸಾರ್ವತ್ರಿಕ ಚುನಾವಣೆಗಾದರೂ ಟಿಕೆಟ್ ನೀಡುವ ಭರವಸೆಯನ್ನು ಈಗಲೇ ಹೈಕಮಾಂಡ್ ನೀಡಬೇಕು ಎಂದು ರಾಜ್ಯದ ಬಹುತೇಕ ಅಲ್ಪಸಂಖ್ಯಾತ ನಾಯಕರು ಒಗ್ಗೂಡಿ ಆಗ್ರಹಿಸಿದ್ದಾರೆ.
ಸಚಿವ ಜಮೀರ್ ಅಹ್ಮದ್ ನೇತೃತ್ವದಲ್ಲಿ ಬಹುತೇಕ ಮುಸ್ಲಿಂ ನಾಯಕರು ದಾವಣಗೆರೆ ದಕ್ಷಿಣ ಕ್ಷೇತ್ರದ ಟಿಕೆಟ್ ಅನ್ನು ಅಲ್ಪಸಂಖ್ಯಾತರಿಗೆ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ. ಹೀಗೆ ಪಟ್ಟು ಹಿಡಿದ ಮುಸ್ಲಿಂ ನಾಯಕರ ಮನವೊಲಿಕೆಗಾಗಿ ಶುಕ್ರವಾರ ದಿನವಿಡೀ ಸರಣಿ ಸಭೆ ನಡೆಯಿತು. ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಿ ಉಭಯ ಕ್ಷೇತ್ರಗಳಿಗೆ ತಲಾ ಒಂಟಿ ಹೆಸರನ್ನು ಅಂತಿಮಗೊಳಿಸಲು ಕಾಂಗ್ರೆಸ್ ನಾಯಕರು ತೀವ್ರ ಪ್ರಯತ್ನ ನಡೆಸಿದರು.
ಆದರೆ, ಮುಸ್ಲಿಂ ನಾಯಕರು ಪಟ್ಟು ಸಡಿಲಿಸಲಿಲ್ಲ. ಮುಸ್ಲಿಂ ಸಮುದಾಯದ ಎಂಎಲ್ಸಿ ಅಬ್ದುಲ್ ಜಬ್ಬಾರ್ ಸಾಬ್, ಸೈಯದ್ ಸೈಫುಲ್ಲಾ, ಖಾಲಿದ್ ಸೈಫುಲ್ಲಾ ಅವರ ಪೈಕಿ ಒಬ್ಬರ ಹೆಸರನ್ನು ಪರಿಗಣಿಸಲೇಬೇಕು ಎಂದು ಆಗ್ರಹಿಸಿದರು ಎನ್ನಲಾಗಿದೆ.
ಮುಸ್ಲಿಂ ನಾಯಕರ ಬಿಗಿಪಟ್ಟಿಗೆ ಮಣಿಯಬೇಕಾದ ಕಾಂಗ್ರೆಸ್ ನಾಯಕತ್ವವು ಮುಸ್ಲಿಂ ಆಕಾಂಕ್ಷಿಗಳ ಹೆಸರನ್ನು ನೀಡುವಂತೆ ನಾಯಕರಿಗೆ ಸೂಚಿಸಿದ್ದು, ದಾವಣಗೆರೆ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪ್ಯಾನೆಲ್ (ಎರಡು ಹೆಸರುಗಳ ಪಟ್ಟಿ) ಅನ್ನು ಹೈಕಮಾಂಡ್‌ಗೆ ಕಳುಹಿಸುವುದಾಗಿ ತಿಳಿಸಿದರು ಎನ್ನಲಾಗಿದೆ.
ಬೆಂಗಳೂರಿಗೆ ಆಗಮಿಸಿರುವ ಎಐಸಿಸಿ ಕಾರ್ಯದರ್ಶಿಯೂ ಆದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರ ನೇತೃತ್ವದ ನಿಯೋಗ ಶುಕ್ರವಾರ ಮೊದಲು ಖಾಸಗಿ ಹೋಟೆಲ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ಸಭೆ ನಡೆಸಿ ಅಭ್ಯರ್ಥಿಗಳ ಅಂತಿಮಗೊಳಿಸುವಲ್ಲಿ ಒಂದು ತೀರ್ಮಾನಕ್ಕೆ ಬಂದಿತು. ನಂತರ ಕ್ವೀನ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಆಯಾ ಜಿಲ್ಲಾ ಉಸ್ತುವಾರಿ ಸಚಿವರು, ಚುನಾವಣಾ ಉಸ್ತುವಾರಿ ನಾಯಕರೊಂದಿಗೆ ನಡೆದ ಸಭೆಯಲ್ಲಿ ಸುದೀರ್ಘ ಚರ್ಚೆಯ ಬಳಿಕ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಿದ್ದಾರೆ.
ಇನ್ನು, ಬಾಗಲಕೋಟೆ ಕ್ಷೇತ್ರಕ್ಕೆ ಎಚ್.ವೈ. ಮೇಟಿ ಅವರ ಮಕ್ಕಳಾದ ಮಲ್ಲಿಕಾರ್ಜುನ, ಉಮೇಶ್, ಬಾಯಕ್ಕ, ಮಹಾದೇವಿ ಅವರ ನಡುವೆಯೇ ಪೈಪೋಟಿ ನಡೆದಿತ್ತು. ಅಂತಿಮವಾಗಿ ಹೈಕಮಾಂಡ್ ನಿಯೋಗ ಮತ್ತು ಪಕ್ಷದ ನಾಯಕತ್ವ ಕ್ಷೇತ್ರದ ಆಂತರಿಕ ಸಮೀಕ್ಷೆ ಅನುಸಾರ ಉಮೇಶ್ ಅವರಿಗೆ ಟಿಕೆಟ್ ನೀಡಲು ನಿರ್ಧರಿಸಿದೆ ಎನ್ನಲಾಗಿದೆ. ಪಕ್ಷದ ತೀರ್ಮಾನಕ್ಕೆ ತಲೆಬಾಗಿ ಗೆಲುವಿಗಾಗಿ ಇತರೆ ಆಕಾಂಕ್ಷಿಗಳೆಲ್ಲರೂ ಒಟ್ಟಾಗಿ ದುಡಿಯಬೇಕೆಂದು ಸೂಚಿಸಲಾಗಿದೆ.
ಸಭೆಯಲ್ಲಿ ಎಐಸಿಸಿ ಕಾರ್ಯದರ್ಶಿಗಳಾದ ಅಭಿಷೇಕ್ ದತ್, ಗೋಪಿನಾಥ್ ಪಳನಿಸ್ವಾಮಿ, ಸಚಿವರಾದ ಈಶ್ವರ್ ಖಂಡ್ರೆ, ಮಧು ಬಂಗಾರಪ್ಪ, ಆರ್. ಬಿ. ತಿಮ್ಮಾಪುರ, ಕೆಪಿಸಿಸಿ ಕಾರ್ಯಾಧ್ಯಕ್ಷ, ರಾಜ್ಯಸಭೆ ಸದಸ್ಯ ಜಿ.ಸಿ. ಚಂದ್ರಶೇಖರ್ ಮತ್ತಿತರರು ಇದ್ದರು.
ದಾವಣಗೆರೆ ಟಿಕೆಟ್ ಘೋಷಣೆ ಮುನ್ನವೇ ಇಬ್ಬರ ನಾಮಪತ್ರ
ದಾವಣಗೆರೆ: ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ ಆಗುವ ಮುನ್ನವೇ ದಿ. ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗ, ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅವರ ಪುತ್ರ ಎಂ.ಸರ್ಮಥ್ ಶಾಮನೂರು ಅವರು ನಾಮಪತ್ರ ಸಲ್ಲಿಸಿದ್ದಾರೆ. ಇನ್ನೊಬ್ಬ ಆಕಾಂಕ್ಷಿ ಸಾದಿಕ್ ಪೈಲ್ವಾನ್ ಅವರೂ ಉಮೇದುವಾರಿಕೆ ಸಲ್ಲಿಸಿದ್ದಾರೆ.
- ಟಿಕೆಟ್ ಮೇಲೆ ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗ ಸಮರ್ಥ್ ಕಣ್ಣು
- ಆದರೆ ಅಲ್ಪಸಂಖ್ಯಾತರಿಂದ ಇದಕ್ಕೆ ವಿರೋಧ, ಮುಸ್ಲಿಮರಿಗೇ ಟಿಕೆಟ್‌ಗೆ ಪಟ್ಟು
- ಹೀಗಾಗಿ ಸಮರ್ಥ್ ಜತೆ ಖಾಲಿದ್ ಸೈಫುಲ್ಲಾ ಹೆಸರೂ ವರಿಷ್ಠರಿಗೆ ರವಾನೆ
ಬಾಗಲಕೋಟೆ ಸಮಸ್ಯೆ ಏಕೆ?
- ದಿವಂಗತ ಎಚ್.ವೈ. ಮೇಟಿ ಅವರ 4 ಮಕ್ಕಳಾದ ಮಧ್ಯೆ ಟಿಕೆಟ್‌ಗೆ ಪೈಪೋಟಿ
- ಮಲ್ಲಿಕಾರ್ಜುನ, ಉಮೇಶ್, ಬಾಯಕ್ಕ, ಮಹಾದೇವಿ ಅವರ ನಡುವೆ ಜಟಾಪಟಿ
- ಆಂತರಿಕ ಸಮೀಕ್ಷೆ ಅನುಸಾರ ಉಮೇಶ್ ಅವರಿಗೆ ಟಿಕೆಟ್ ನೀಡಲು ನಿರ್ಧಾರ?