ಚಿಕ್ಕಬಳ್ಳಾಪುರ : ಬಿಜೆಪಿಗೆ ಕ್ಷೇತ್ರ ಉಳಿಸಿಕೊಳ್ಳುವ ಸವಾಲು

KannadaprabhaNewsNetwork | Updated : Apr 01 2024, 07:44 AM IST

ಸಾರಾಂಶ

ಹಲವು ಹತ್ತು ಕಾರಣಗಳಿಗೆ 2019ರ ಲೋಕಸಭಾ ಚುನಾವಣೆ ದಾಖಲೆ ಬರೆದಿದೆ. ‌ಕಾಂಗ್ರೆಸ್ ಮತ್ತು ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಡಾ.ಎಂ.ವೀರಪ್ಪ ಮೊಯಿಲಿ ವಿರುದ್ಧ ಜಯಭೇರಿ ಬಾರಿಸಿದ್ದ ಬಿಜೆಪಿ ಅಭ್ಯರ್ಥಿ ಬಿ.ಎನ್.ಬಚ್ಚೇಗೌಡ ಇತ್ತೀಚೆಗೆ ರಾಜೀನಾಮೆ ನೀಡಿದ್ದಾರೆ.

  ಚಿಕ್ಕಬಳ್ಳಾಪುರ :  2019 ರ ಲೋಕಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರದ ಎಲ್ಲ ವಿಧಾನ ಸಭಾ ಕ್ಷೇತ್ರಗಳಲ್ಲಿ ಪ್ರಥಮ ಬಾರಿ ಮುನ್ನಡೆ ಸಾಧಿಸುವ ಮೂಲಕ ಬಿಜೆಪಿ ಅಭ್ಯರ್ಥಿ ಬಿ.ಎನ್.ಬಚ್ಚೇಗೌಡ ಐತಿಹಾಸಿಕ ದಾಖಲೆ ನಿರ್ಮಿಸಿದ್ದರು.

ಲೋಕಸಭಾ ಕ್ಷೇತ್ರದಲ್ಲಿ ಎರಡನೇ ಬಾರಿಗೆ ಒಕ್ಕಲಿಗ ಸಮುದಾಯದ ಅಭ್ಯರ್ಥಿ ಗೆಲುವು ಕಂಡರು. ಆದರೆ ಕಾಂಗ್ರೆಸ್‌ನ ಪ್ರಭಾವಿ ನಾಯಕರಾಗಿದ್ದ ಡಾ.ಎಂ. ವೀರಪ್ಪ ಮೊಯ್ಲಿ ಹ್ಯಾಟ್ರಿಕ್ ಗೆಲುವಿನ ಕನಸು ನುಚ್ಚು ನೂರಾಯಿತು ಆಗ ಕಾಂಗ್ರೆಸ್‌- ಜೆಡಿಎಸ್‌ ಮೈತ್ರಿ

ಹಲವು ಹತ್ತು ಕಾರಣಗಳಿಗೆ 2019ರ ಲೋಕಸಭಾ ಚುನಾವಣೆ ದಾಖಲೆ ಬರೆದಿದೆ. ‌ಕಾಂಗ್ರೆಸ್ ಮತ್ತು ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಡಾ.ಎಂ.ವೀರಪ್ಪ ಮೊಯಿಲಿ ವಿರುದ್ಧ ಬಿಜೆಪಿ ಅಭ್ಯರ್ಥಿ ಬಿ.ಎನ್.ಬಚ್ಚೇಗೌಡ ಜಯಭೇರಿ ಬಾರಿಸಿದರು. ಆದರೆ ಈಗ ಸಂಸದ ಬಚ್ಚೇಗೌಡರು ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.

ಅವರ ಪುತ್ರ ಶರತ್ ಬಚ್ಚೇಗೌಡ ಹೊಸಕೋಟೆ ಕಾಂಗ್ರೆಸ್ ಶಾಸಕ ಮತ್ತು ಪುತ್ರ ಶರತ್ ಬಚ್ಚೇಗೌಡರಿಗೆ ಹೆಣ್ಣು ಕೊಟ್ಟ ಮಾವ ಹಾಗು ಬೀಗರಾಗಿರುವ ಗೌರಿಬಿದನೂರಿನ ಪಕ್ಷೇತರ ಶಾಸಕ ಕೆ.ಹೆಚ್.ಪುಟ್ಟಸ್ವಾಮಿಗೌಡರು ಇದೇ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಶಾಸಕರಾಗಿದ್ದಾರೆ. 2019ರ ಚುನಾವಣೆ ಸಮಯದಲ್ಲಿ ಕಾಂಗ್ರೆಸ್‌ ಶಾಸಕರಾಗಿದ್ದ ಡಾ.ಕೆ.ಸುಧಾಕರ್ ಈಗ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಶಾಸಕ ವಿಶ್ವನಾಥ್‌ ಉಸ್ತುವಾರಿ

2019ರ ಚುನಾವಣಾ ಸಮಯದಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಯಲಹಂಕದಲ್ಲಿ ಮಾತ್ರ ಬಿಜೆಪಿ ಶಾಸಕರು ಇದ್ದರು. ಉಳಿದಂತೆ ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಹೊಸಕೋಟೆ, ಬಾಗೇಪಲ್ಲಿ, ಗೌರಿಬಿದನೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರು ಹಾಗೂ ದೇವನಹಳ್ಳಿ ಮತ್ತು ನೆಲಮಂಗಲದಲ್ಲಿ ಜೆಡಿಎಸ್ ಶಾಸಕರು ಇದ್ದರು. ಆಗ ಯಲಹಂಕ ಶಾಸಕ ಎಸ್‌.ಆರ್.ವಿಶ್ವನಾಥ್ ಬಿಜೆಪಿ ಉಸ್ತುವಾರಿ ವಹಿಸಿಕೊಂಡಿದ್ದರು. 2019ರಲ್ಲಿ ಪಡೆದ ಮತಗಳು:

ವಿಧಾನ ಸಭೆ ಕ್ಷೇತ್ರವಾರು ಮತಗಳಿಕೆಯಲ್ಲಿ ಬೆಂಗಳೂರು ನಗರ ಜಿಲ್ಲೆಯ ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ದಾಖಲೆಯ ಮತಗಳನ್ನು ನೀಡಿತ್ತು. ಅಲ್ಲಿ ಬಿಜೆಪಿ 1,50,906 ಮತ್ತು ಕಾಂಗ್ರೆಸ್ 75,631 ಮತಗಳನ್ನು ಪಡೆದು, ಬಿಜೆಪಿಯು 75,275 ಮತಗಳ ಅಂತರವನ್ನು ನೀಡಿತ್ತು. ಗೌರಿಬಿದನೂರು ವಿಧಾನಸಭಾ ಕ್ಷೇತ್ರದಲ್ಲಿ 1,60,382 ಮತಗಳಲ್ಲಿ ಬಿಜೆಪಿ 78,056 ಮತ್ತು ಕಾಂಗ್ರೆಸ್ 73,894 ಮತಗಳನ್ನು ಪಡೆದು ಬಿಜೆಪಿಗೆ ಕೇವಲ 4,162 ಮತಗಳ ಮುನ್ನಡೆ ದೊರೆತಿತ್ತು. ಈ ಕ್ಷೇತ್ರದಲ್ಲಿ ಬಿಜೆಪಿಯು ಕಡಿಮೆ ಪ್ರಮಾಣದ ಮತಗಳ ಮುನ್ನಡೆ ಸಾದಿಸಿತ್ತು.

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ 94,962 ಮತ್ತು ಕಾಂಗ್ರೆಸ್ 59,995 ಮತಗಳನ್ನು ಪಡೆದು ಬಿಜೆಪಿಯು 34,967 ಮತಗಳ ಮುನ್ನಡೆ ಪಡೆಯಿತು. ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ 69,387 ಮತ್ತು ಕಾಂಗ್ರೆಸ್ 63,556 ಮತಗಳನ್ನು ಪಡೆದು ಬಿಜೆಪಿಯು 5,831 ಮತಗಳ ಮುನ್ನಡೆ, ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ 87,967 ಮತ್ತು ಕಾಂಗ್ರೆಸ್ 67,403 ಮತಗಳನ್ನು ಪಡೆದಿದ್ದವು.

ನೆಲಮಂಗಲ ಕ್ಷೇತ್ರದಲ್ಲಿ ಬಿಜೆಪಿ

ನೆಲಮಂಗಲ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ 83,529 ಮತ್ತು ಕಾಂಗ್ರೆಸ್ 63,983 ಮತಗಳನ್ನು ಪಡೆದು ಬಿಜೆಪಿಯು 19,546 ಮತಗಳ ಮುನ್ನಡೆ,ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ 83,966 ಮತ್ತು ಕಾಂಗ್ರೆಸ್ 73,382 ಮತಗಳನ್ನು ಪಡೆದು ಬಿಜೆಪಿಯು 10,584 ಮತಗಳ ಮುನ್ನಡೆ ಮತ್ತು ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ 95,702 ಮತ್ತು ಕಾಂಗ್ರೆಸ್ 85,552 ಮತಗಳನ್ನು ಪಡೆದು ಬಿಜೆಪಿಯು 10,150 ಮತಗಳ ಮುನ್ನಡೆ, ಸಾಧಿಸಿತ್ತು 

Share this article